ಕಳೆದ ತಿಂಗಳು ಆಸ್ಟ್ರೇಲಿಯಾ ಜಾರಿಗೆ ತಂದಂತೆಯೇ, 16 ವರ್ಷದೊಳಗಿನ ಮಕ್ಕಳಿಗಾಗಿ ಸರ್ಕಾರವು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಯೋಜಿಸುತ್ತಿದೆ ಎಂದು ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಬಹಿರಂಗಪಡಿಸಿದ್ದಾರೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯ ಸಂದರ್ಭದಲ್ಲಿ ಬ್ಲೂಮ್‌ಬರ್ಗ್ ಜೊತೆ ಮಾತನಾಡಿದ ಆಂಧ್ರ ಸರ್ಕಾರದ ಐಟಿ ಸಚಿವರು, ನಿರ್ದಿಷ್ಟ ವಯಸ್ಸಿನೊಳಗಿನ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಅವರು ಎದುರಾಗುವ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ, ಬಲವಾದ ಕಾನೂನು ಚೌಕಟ್ಟು ಈ ಸಮಯದ ಅಗತ್ಯವಾಗಿದೆ ಎಂದು ಹೇಳಿದರು.
“ನಿರ್ದಿಷ್ಟ ವಯಸ್ಸಿನೊಳಗಿನ ಯುವಜನರು ಅಂತಹ ವೇದಿಕೆಗಳಲ್ಲಿ ಇರಬಾರದು, ಏಕೆಂದರೆ ಅವರು ಒಡ್ಡಿಕೊಳ್ಳುವ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಹೀಗಾಗಿ, ಬಲವಾದ ಕಾನೂನು ಚೌಕಟ್ಟು ಬೇಕಾಗಬಹುದು” ಎಂದು ಲೋಕೇಶ್ ಪ್ರತಿಪಾದಿಸಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಆಸ್ರ್ಟೇಲಿಯಾದ ಆಂಥೋನಿ ಆಲ್ಬನೀಸ್ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಟಿಕ್‌ಟಾಕ್, ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಸುವುದನ್ನು ನಿಷೇಧಿಸಿತು. ನಿಷೇಧದ ಅಡಿಯಲ್ಲಿ, ಮಕ್ಕಳು ಹೊಸ ಖಾತೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಸ್ತಿತ್ವದಲ್ಲಿರುವ ಪ್ರೊಫೈಲ್‌ಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.
ಆಂಧ್ರಪ್ರದೇಶದ ಸ್ಥಳೀಯ ಮಾಧ್ಯಮಗಳು ಸರ್ಕಾರವು ಅಂತಹ ಕ್ರಮವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ವರದಿ ಮಾಡಿದೆ. ನಿಯಮ ಜಾರಿಗೆ ಬಂದರೆ, ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ನಿರ್ಬಂಧಗಳನ್ನು ತಂದ ಭಾರತದ ಮೊದಲ ರಾಜ್ಯ ಆಂಧ್ರವಾಗಲಿದೆ.
ಲೋಕೇಶ್ ಅವರನ್ನು ಬೆಂಬಲಿಸಿ, ಟಿಡಿಪಿ ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿ, ಹಿಂದಿನ ವೈಎಸ್ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ, ಮಹಿಳೆಯರ ವಿರುದ್ಧ ಕ್ರೂರ ಮತ್ತು ಅವಹೇಳನಕಾರಿ ದಾಳಿಗಳನ್ನು ನಡೆಸಲು ಸಾಮಾಜಿಕ ಮಾಧ್ಯಮವನ್ನು ಸ್ಪಷ್ಟವಾಗಿ ದುರುಪಯೋಗಪಡಿಸಿಕೊಳ್ಳಲಾಗಿತ್ತು ಎಂದು ಒತ್ತಿ ಹೇಳಿದರು.
“ಒಂದು ನಿರ್ದಿಷ್ಟ ವಯಸ್ಸಿನೊಳಗಿನ ಮಕ್ಕಳು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿರುವ ನಕಾರಾತ್ಮಕ ಮತ್ತು ಹಾನಿಕಾರಕ ವಿಷಯವನ್ನು ಗ್ರಹಿಸುವಷ್ಟು ಭಾವನಾತ್ಮಕವಾಗಿ ಪ್ರಬುದ್ಧರಾಗಿಲ್ಲ. ಅದಕ್ಕಾಗಿಯೇ ಆಂಧ್ರ ಸರ್ಕಾರ ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡುತ್ತಿದೆ. ಆಸ್ಟ್ರೇಲಿಯಾದ 16 ವರ್ಷದೊಳಗಿನ ಸಾಮಾಜಿಕ ಮಾಧ್ಯಮ ಕಾನೂನನ್ನು ಪರಿಶೀಲಿಸುತ್ತಿದೆ” ಎಂದು ರೆಡ್ಡಿ ಹೇಳಿದರು.
ಆದರೆ, ಇದನ್ನು ಸರ್ಕಾರದ ಮೇಲ್ವಿಚಾರಣೆ ಎಂದು ನೋಡಬಾರದು. ವಿಷಕಾರಿ ವಿಷಯ ಮತ್ತು ಆನ್‌ಲೈನ್ ನಕಾರಾತ್ಮಕತೆಯಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ವರ್ಷ, ಮದ್ರಾಸ್ ಹೈಕೋರ್ಟ್ ಆಸ್ಟ್ರೇಲಿಯಾದಂತಹ ಕಾನೂನನ್ನು ಅಂಗೀಕರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಕೇಂದ್ರಕ್ಕೆ ಸೂಚಿಸಿತು.


