Homeರಾಜಕೀಯಗೌಡರ ಜಾತಿ ಬುಡಕ್ಕೆ ಬಿಜೆಪಿ ಬಿಸಿನೀರು

ಗೌಡರ ಜಾತಿ ಬುಡಕ್ಕೆ ಬಿಜೆಪಿ ಬಿಸಿನೀರು

- Advertisement -
- Advertisement -

ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋದರೆ ಏನೆಲ್ಲಾ ಹೊಟ್ಟೆ ಸಂಕಟಗಳಾಗಬಹುದೊ ಅವೆಲ್ಲವೂ ಬಿಜೆಪಿ ನಾಯಕರ ಉದರದೊಳಗೆ ತಾಳ ಕುಟ್ಟುತ್ತಿವೆ. ಕಾರಣ ಸಿಂಪಲ್ಲು, ನೂರರ ಗಡಿ ದಾಟಿಯೂ ಅಧಿಕಾರವಿಲ್ಲದೆ ಕೂರುವುದೆಂದರೆ ರಾಜಕಾರಣದಲ್ಲಿ ಮದುವೆ ಮಾಡಿಕೊಂಡೂ ಪ್ರಸ್ಥವಿಲ್ಲದೆ ಪರಿತಪಿಸಿದಂತೆ!ತಮ್ಮ ಪಾಲಿನ ದಕ್ಷಿಣ ರಾಜ್ಯಗಳ ಹೆಬ್ಬಾಗಿಲಾಗಿದ್ದ ಕರ್ನಾಟಕದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿಯ ಅಮಿತ್ ಶಾ ಹೆಣೆದ ತಂತ್ರಗಳು ಒಂದೆರಡಲ್ಲ. ಜಾತಿ ಸಮೀಕರಣದಿಂದ ಧರ್ಮ ಕ್ರಿಮೀಕರಣದವರೆಗೆ, ಐಟಿ ರೇಡಿನಿಂದ ಹಣದ ಹೊಳೆಯವರೆಗೆ, ಅಭಿವ್ಯಕ್ತಿ ಹರಣದಿಂದ ಮೀಡಿಯಾಗಳ ಸಾರಾಸಗಟು ಖರೀದಿಯವರೆಗೆ ಏನೆಲ್ಲಾ ಮಾಡಿದರು ಅತ್ತ ದಡವೂ ಇಲ್ಲ, ಇತ್ತ ತೆಪ್ಪವೂ ಇಲ್ಲ ಎಂಬಂತ ತ್ರಿಶಂಕು ಸ್ಥಿತಿಯಷ್ಟೇ ಬಿಜೆಪಿ ಪಾಲಿಗೆ ಸಿಕ್ಕಿದ್ದು. ಈ ಫಲಿತಾಂಶ ಬಿಜೆಪಿಯನ್ನು ಅದೆಷ್ಟು ಹತಾಶೆಗೆ ತಳ್ಳಿತ್ತೆಂದರೆ ಯಡ್ಯೂರಪ್ಪರನ್ನು ತೀನ್ ದಿನ್ ಕಾ ಸುಲ್ತಾನ್ ಆಗಿಸಿದ ದೊಡ್ಡ ಹೈಡ್ರಾಮಾ ನಡೆಸಿತು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿತು, ಜನರೆದುರು ನಗೆಪಾಟಲಿಗೂ ಗುರಿಯಾಯ್ತು. ಸಾಲದ್ದಕ್ಕೆ, ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯನ್ನೇ ತಮಗಿಷ್ಟಬಂದಂತೆ ಪಳಗಿಸಲು ಹೋಗಿ ತನ್ನ ದುರಾಚಾರವನ್ನು ಮತ್ತೊಮ್ಮೆ ಬಯಲಾಗಿಸಿಕೊಂಡಿತು.
ಕರ್ನಾಟಕದ ಗದ್ದುಗೆಗಾಗಿ ಇಷ್ಟೆಲ್ಲಾ ಕರಾಳ ಕಸರತ್ತು ನಡೆಸಿದ್ದ ಬಿಜೆಪಿ ಈಗ ಸುಮ್ಮನೇ ಕೂರುತ್ತಾ? ಈ ಭಯ ಸೋತು ಗೆದ್ದು ಅಧಿಕಾರ ಉಳಿಸಿಕೊಳ್ಳುವಲ್ಲಿ ನಿಟ್ಟುಸಿರು ಬಿಟ್ಟ ಕಾಂಗ್ರೆಸನ್ನೇ ದಟ್ಟವಾಗಿ ಕಾಡುತ್ತಿದೆಯಾದರು, ಬಿಜೆಪಿಯ ತಾಲೀಮುಗಳನ್ನು ಗಮನಿಸಿದರೆ ಅದರ ಎಫೆಕ್ಟು ಕಾಂಗ್ರೆಸ್‍ಗಿಂತ ಜೆಡಿಎಸ್‍ಗೆ ದೊಡ್ಡ ಲುಕ್ಸಾನು ತರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹೌದು, ಫಲಿತಾಂಶದ ತರುವಾಯ ಬಿಜೆಪಿಯ ಕೆಕ್ಕರುಗಣ್ಣು ನೆಟ್ಟಿರೋದು ಜೆಡಿಎಸ್‍ನತ್ತ. ಜೆಡಿಎಸ್‍ನ ಜಾತಿ ಭದ್ರಕೋಟೆಯಾಗಿರುವ ಹಳೇ ಮೈಸೂರು ಜಿಲ್ಲೆಗಳೇ ಅದರ ಮುಂದಿನ ಟಾರ್ಗೆಟ್ಟು!
ದೇವೇಗೌಡರಂತ ಲೆಕ್ಕಾಚಾರಸ್ಥ ರಾಜಕಾರಣಿಯ ಕಬ್ಜಾದಲ್ಲಿರುವ ಹಳೇ ಮೈಸೂರಿನ ಮೇಲೆ ಧರ್ಮಕಾರಣದ ಬಿಜೆಪಿ ಹಿಡಿತ ಸಾಧಿಸೋದು ಅಷ್ಟು ಸುಲಭದ ಮಾತಲ್ಲ. ಅದು ಬಿಜೆಪಿಗೂ ಗೊತ್ತು, ಸಂಘ ಪರಿವಾರಕ್ಕೂ ಗೊತ್ತು. ಹಾಗಾಗಿ ಈ ಸಲ ಬಹಳ ಪ್ಲ್ಯಾನ್ ಮಾಡಿಕೊಂಡೇ ಸಂಘ ಪರಿವಾರದ ನಿರ್ದೇಶನದಂತೆ ಬಿಜೆಪಿ ಕಾರ್ಯಾಚರಣೆಗಿಳಿದಿದೆ. ಬಿಜೆಪಿಯನ್ನು ನೇರವಾಗಿ ಪ್ರತಿಷ್ಠಾಪಿಸುವ ಸಾಹಸಕ್ಕೆ ಕೈಹಾಕದೆ ಹೊಸ ಪೀಳಿಗೆಯ ಒಕ್ಕಲಿಗ ಯುವಕರ ಜಾತಿ ಮೋಹದ ಆಂತರ್ಯದಲ್ಲಿರುವ ಅಂಧಾಭಿಮಾನವನ್ನು ಧರ್ಮದತ್ತ ತಿರುಗಿಸಿ ಬಿಜೆಪಿಯ ಓಟುಗಳಾಗಿಸಲು ಸಜ್ಜಾಗಿದೆ.ಅದಕ್ಕೋಸ್ಕರ ಭಜರಂಗ ದಳ ಹಾಗೂ ತರೇವಾರಿ ಹಿಂದೂ ಸಂಘಟನೆಗಳ ಬ್ರ್ಯಾಂಚುಗಳನ್ನು ಈ ಭಾಗದಲ್ಲಿ ತೆರೆದು ಕೇಸರೀಕರಣದ ಅಫೀಮು ತಿನ್ನಿಸಲಾಗುತ್ತಿದೆ.ಇಲ್ಲದೇ ಹೋಗಿದ್ದರೆ, ತನಗೆ ಅಷ್ಟು ಹಿಡಿತವೇ ಇಲ್ಲದ ಮಂಡ್ಯದಲ್ಲಿ ಆರೆಸ್ಸೆಸ್‍ನ ದೊಡ್ಡ ಬಿಲ್ಡಿಂಗ್ ಎದ್ದು ನಿಲ್ಲುತ್ತಿರಲಿಲ್ಲ!
ಅಂದು ಡಾರ್ಲಿಂಗ್, ಇಂದು ಎನಿಮಿ!
ನೋ ಡೌಟ್, ಕರ್ನಾಟಕ ಚುನಾವಣಾ ರಂಗಕ್ಕೆ ಕಾಲಿರಿಸಿದಾಗ ಬಿಜೆಪಿಗೆ ಸಿದ್ದು ಮತ್ತು ಕಾಂಗ್ರೆಸ್ಸೇ ಪರಮ ಎದುರಾಳಿಗಳಾಗಿದ್ದರು.ಎಲೆಕ್ಷನ್ ಪ್ರಚಾರದುದ್ದಕ್ಕೂ ಜೆಡಿಎಸ್ಸನ್ನು ಬಿಜೆಪಿ ತನ್ನ ಮಿತ್ರಪಕ್ಷದಷ್ಟೇ ನಾಜೂಕಾಗಿ ಹ್ಯಾಂಡಲ್ ಮಾಡುತ್ತಾ ಬಂದಿತು.ಅದಕ್ಕೆ ಕಾರಣ, ಕಾಂಗ್ರೆಸನ್ನು ಅಧಿಕಾರದಿಂದ ದೂರವಿರಿಸಿದರೆ ನಾವೇ ಸರ್ಕಾರ ರಚನೆ ಮಾಡೋದು ಎನ್ನುವ ಬಿಜೆಪಿಯ ಮೋದಿ-ಶಾ ಜೋಡಿಯ ಲೆಕ್ಕಾಚಾರ.ತಮಗೆ ಸಿಂಪಲ್ ಮೆಜಾರಿಟಿ ಸಿಗದೆ ಹೋದರೂ, ಜೆಡಿಎಸ್ ಜೊತೆ ಸೇರಿಕೊಂಡು ಸರ್ಕಾರ ರಚಿಸಿಬಿಡಬಹುದು ಎಂಬ ವಿಶ್ವಾಸವೇ ಆ ಲೆಕ್ಕಾಚಾರದ ಹಕೀಕತ್ತು.ಸಿದ್ದು ಕಾರಣಕ್ಕೆ ಹೇಗೂ ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ತಾಕತ್ತೂ ಜೆಡಿಎಸ್‍ಗೆ ಬಾರದು. ಹಾಗಾಗಿ ಕಾಂಗ್ರೆಸ್ ಸೋತರೆ ಸರ್ಕಾರ ನಮ್ಮದೇ ಎಂಬ ಈ ಓವರ್ ಕಾನ್ಫಿಡೆನ್ಸ್‍ನಿಂದಲೇ ತಮ್ಮ ಪ್ರಚಾರದಲ್ಲಿ ಎಲ್ಲೂ ದೇವೇಗೌಡರ ಮೇಲೆ ದಾಳಿಗೆ ಬಿಜೆಪಿ ಮುಂದಾಗಲಿಲ್ಲ. ತಮ್ಮ ಅಭ್ಯರ್ಥಿಗಳು ಕಾಂಗ್ರೆಸ್ಸನ್ನು ಸೋಲಿಸಲಾರರು ಎಂಬ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಪೂರಕವಾಗುವಂತೆ ಬಿಜೆಪಿ ವರ್ತಿಸುತ್ತಾ ಬಂದದ್ದೂ ಇದೇ ಕಾರಣಕ್ಕೆ.ಕಾಂಗ್ರೆಸ್‍ಗೆ ಹೋಗಬಹುದಾದ ದಲಿತ ಓಟುಗಳನ್ನು ಛಿದ್ರ ಮಾಡಲು ಬಿಎಸ್‍ಪಿ-ಜೆಡಿಎಸ್ ನಡುವೆ ಬಿಜೆಪಿಯೇ ಮೈತ್ರಿ ಮಾಡಿಸಿದೆ; ಇದಕ್ಕೋಸ್ಕರ ಮಾಯಾವತಿಗೆ 600 ಕೋಟಿ ಸಂದಾಯವಾಗಿದೆ; ಕಾಂಗ್ರೆಸ್‍ನ ಮುಸ್ಲಿಂ ಮತಗಳನ್ನು ಇಬ್ಬಾಗಿಸಲು ಬಿಜೆಪಿಯೇ ಆಂದ್ರದ ಓವೈಸಿಯನ್ನು ಪುಸಲಾಯಿಸಿ ಜೆಡಿಎಸ್ ಪರ ವಕಾಲತ್ತು ವಹಿಸುವಂತೆ ಮಾಡಿದೆ ಎಂಬೆಲ್ಲ ಗುಮಾನಿಗಳು ಜನರ ನಡುವೆ ಹೊಗೆಯಾಡಲು ಬಿಜೆಪಿಯ ಅಂತಹ ವರ್ತನೆಯೇ ಕಾರಣವಾಗಿತ್ತು. ಜನರ ಗುಮಾನಿಗಳು ಒಂದುಕಡೆಗಿರಲಿ, ಕಾಂಗೈನ ದಿಲ್ಲಿ ಕೂಸು ರಾಹುಲ್ ಗಾಂಧಿಯೇ `ಜೆಡಿಎಸ್ ಪಾರ್ಟಿಯು ಬಿಜೆಪಿಯ ಬಿ ಟೀಂ’ ಎಂದು ಆರೋಪಿಸುವಷ್ಟರ ಮಟ್ಟಿಗೆ ಜೆಡಿಎಸ್-ಬಿಜೆಪಿ ನಡುವೆ ಕೆಮಿಸ್ಟ್ರಿ ವರ್ಕ್‍ಔಟ್ ಆಗಿತ್ತು.
ಮಂಡ್ಯ ಮತ್ತು ಮದ್ದೂರಿನಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದ ಪರಿಯೇ ಈ ಅಡ್ಜೆಸ್ಟ್‍ಮೆಂಟ್ ರಾಜಕಾರಣವನ್ನು ಬಿಚ್ಚಿಡುತ್ತದೆ. ಮದ್ದೂರಿನಲ್ಲಿ ಈ ಸಲ ಜೆಡಿಎಸ್ ತಮ್ಮಣ್ಣನ ಗೆಲುವು ಅಷ್ಟು ಸುಲಭವಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಲಕ್ಷ್ಮಣ್ ಕುಮಾರ್ ಎಂಬಾತ ಬಿಜೆಪಿ ಹುರಿಯಾಳಾಗುವ ನಿಟ್ಟಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದಲೇ ಓಡಾಡಿ ಒಂದಷ್ಟು ಪ್ರಭಾವ ಗಿಟ್ಟಿಸಿಕೊಂಡಿದ್ದ. ಬಿಜೆಪಿ ಆತನಿಗೇ ಟಿಕೆಟ್ ಕೊಟ್ಟಿದ್ದರೆ ಕಾಂಗ್ರೆಸ್‍ನ ಮಧು ಮಾದೇಗೌಡಗೆ ಲಾಭವಾಗುವ ಸಂಭವವಿತ್ತು. ಇದನ್ನು ಮನಗಂಡೇ ಕೊನೇ ಕ್ಷಣದಲ್ಲಿ ಲಕ್ಷ್ಮಣ್‍ಗೆ ಟಿಕೆಟ್ ತಪ್ಪಿಸಿ ಸತೀಶ್ ಎಂಬ ಡಮ್ಮಿ ಕ್ಯಾಂಡಿಡೇಟನ್ನು ಬಿಜೆಪಿ ಕಣಕ್ಕಿಳಿಸಿತು.ಇತ್ತ ಮಂಡ್ಯದಲ್ಲೂ ಆಗ್ರ್ಯಾನಿಕ್ ಕಂಪನಿಯ ಮಾಲಿಕ ಮಧುಚಂದ್ರ ಮತ್ತು ಚಂದಗಾಲು ಶಿವಣ್ಣ ಬಿಜೆಪಿ ಟಿಕೆಟ್‍ಗೆ ಪೈಪೋಟಿ ನಡೆಸಿದ್ದರು.ಇಬ್ಬರಲ್ಲಿ ಯಾರಿಗೇ ಕೊಟ್ಟರು ಗಣನೀಯ ಓಟು ಕಿತ್ತು ಕಾಂಗ್ರೆಸ್‍ಗೆ ಅನುಕೂಲ ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಟಿಕೆಟ್‍ಗೆ ಅರ್ಜಿಯನ್ನೇ ಹಾಕದ ಬಸವೇಗೌಡನನ್ನು ಅಭ್ಯರ್ಥಿ ಎಂದು ಘೋಷಿಸಿತು.ಕೊನೆಗೆ ಶಿವಣ್ಣ, ಎಸ್.ಎಂ.ಕೃಷ್ಣ ಮೂಲಕ ಹಠ ಹಿಡಿದು ಟಿಕೆಟ್ ತಂದರಾದರು ಅಷ್ಟರಲ್ಲಾಗಲೆ ಬಿಜೆಪಿಯ ಅಲ್ಪಸ್ವಲ್ಪ ಓಟುಗಳು ಛಿದ್ರವಾಗಿದ್ದವು.
ಬಿಜೆಪಿ, ಜೆಡಿಎಸ್ ಬಗ್ಗೆ ಇಷ್ಟೆಲ್ಲ ಸಾಫ್ಟ್ ಕಾರ್ನರ್ ಇರಿಸಿಕೊಂಡಿದ್ದರ ಕಾರಣ ಸ್ಪಷ್ಟ.ಜೆಡಿಎಸ್ ಪಕ್ಷ ತನ್ನ ಜೊತೆಗೇ ಮೈತ್ರಿ ಮಾಡಿಕೊಳ್ಳುತ್ತದೆನ್ನುವ ಅತಿವಿಶ್ವಾಸ. ಆದರೆ ಫಲಿತಾಂಶ ಬಂದಮೇಲೆ ಆದದ್ದೆಲ್ಲಾ ಉಲ್ಟಾ!104 ಸೀಟು ಗೆದ್ದ ಬಿಜೆಪಿ ಮೈತ್ರಿಯ ಆಲೋಚನೆ ಮಾಡುವ ಮೊದಲೇ ಅಧಿಕಾರ ಉಳಿಸಿಕೊಳ್ಳಲೇಬೇಕಿದ್ದ ಅನಿವಾರ್ಯತೆಯಲ್ಲಿದ್ದ 78 ಸ್ಥಾನದ ಕಾಂಗ್ರೆಸ್ಸು 38ರ ಜೆಡಿಎಸ್‍ಗೆ ಭರ್ಜರಿ ಆಫರ್ರನೇ ಕೊಟ್ಟಿತು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‍ಗೆ ತಕರಾರ್ಯಾವುದು ಇಲ್ಲದೆಹೋದರು ಸಹಾ ಅಲ್ಲಿ ಸಿಎಂ ಸ್ಥಾನ ಸಿಗುವ ಛಾನ್ಸು ಇರಲಿಲ್ಲ. ಆದರೆ ಕಾಂಗ್ರೆಸ್ ಅಂತಹ ಅವಕಾಶ ಮಾಡಿಕೊಡ್ತೀನಿ ಅಂದಾಗ ಕಣ್ಮುಚ್ಚಿ ಕೂರಲು ದೇವೇಗೌಡ್ರಾಗಲಿ, ಕುಮಾರಸ್ವಾಮಿಯಾಗಲಿ ಸನ್ಯಾಸ ಪರಂಪರೆಯವರೆ? ಸಿದ್ದು ಮೇಲಿನ ಮುನಿಸನ್ನೆಲ್ಲ ಪಕ್ಕಕ್ಕಿರಿಸಿ ಸೋನಿಯಾ-ರಾಹುಲ್ ಮಟ್ಟದಲ್ಲಿ ಮೈತ್ರಿ ಕುದುರಿಸಿಕೊಂಡರು.

ಗೆದ್ದುಸೋತ ಬಿಜೆಪಿ ಕಲಿತ ಪಾಠ
ಜೆಡಿಎಸ್‍ನ ಈ ನಡೆಯಿಂದ ಯಡ್ಯೂರಪ್ಪನ ಮಾತಂತಿರಲಿ, ಖುದ್ದು ಅಮಿತ್ ಶಾ-ಮೋದಿಯೇ ಥಂಡಾ ಹೊಡೆದುಹೋದರು. ಅದೇ ಹೊತ್ತಲ್ಲಿ, ಕರ್ನಾಟಕದಲ್ಲಿ ತಾವು ತಮ್ಮ ಕೇಸರಿ ಸಾಮ್ರಾಜ್ಯ ಸ್ಥಾಪಿಸಬೇಕೆಂದರೆ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಆಳವಾಗಿ ಬೇರುಬಿಟ್ಟಂತೆ ಹಳೇ ಮೈಸೂರು ಪ್ರಾಂತ್ಯದಲ್ಲೂ ಬೇರಿಳಿಸಬೇಕು, ಇಲ್ಲವಾದರೆ ತೊಂಬತ್ತು, ನೂರು ಸೀಟುಗಳ ಆಸುಪಾಸಿಗೆ ಬಂದು ಕೊಸರಾಡುವ ಈ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಸಿಗದು ಎಂಬುದೂ ಬಿಜೆಪಿಗೆ ಮನದಟ್ಟಾಗಿತ್ತು. ಹಾಗೆ ನೋಡಿದರೆ, ಎಲೆಕ್ಷನ್‍ಗು ಮೊದಲಿನಿಂದಲೇ ಸಂಘ ಪರಿವಾರ ಹಳೇ ಮೈಸೂರು ಭಾಗದಲ್ಲಿ ತನ್ನ ತಳವೂರಲು ಯತ್ನಗಳನ್ನು ನಡೆಸುತ್ತಲೇ ಬಂದಿತ್ತು. ಸಿದ್ದರಾಮಯ್ಯ ಸರ್ಕಾರದ ಅಹಿಂದ ಪಾಲಿಸಿಗಳ ಜೊತೆಗೆ ಸಿದ್ದು ದೇವೇಗೌಡರ ನೆಪದಲ್ಲಿ ಇಡಿ ಒಕ್ಕಲಿಗ ಜಾತಿಯ ಮೇಲೆ ಜಿದ್ದು ಸಾಧಿಸುತ್ತಿದ್ದಾರೆ ಎಂಬ ಮಿಥ್‍ಗಳನ್ನು ಪ್ರಚಾರಕ್ಕೆ ತಂದಿದ್ದ ಬಿಜೆಪಿಯ ಐಟಿ ವಿಂಗು, ವ್ಯಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸಿತ್ತು.ಮೇಲ್ನೋಟಕ್ಕೆ ತಲೆದೂಗುವಂತೆ ಮಾಡುತ್ತಿದ್ದ ಈ ಆರೋಪಗಳು ಒಕ್ಕಲಿಗರನ್ನು ಕಾಂಗ್ರೆಸ್‍ನ ವಿರುದ್ಧ ಎತ್ತಿಕಟ್ಟಿದ್ದವು.
ಜಾತಿಯ ದುರಭಿಮಾನವನ್ನು ಉದ್ದೀಪಿಸಿ, ಅದನ್ನೇ ಸೋಪಾನ ಮಾಡಿಕೊಂಡು ಧರ್ಮದ ಉನ್ಮಾದಕ್ಕೆ ಜಿಗಿಯುವುದು ಬಿಜೆಪಿಗೆ ಹೊಸದೇನೂ ಅಲ್ಲ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರನ್ನು, ಕರಾವಳಿ ಭಾಗದಲ್ಲಿ ಬಿಲ್ಲವ, ಭಂಟರು ಮತ್ತು ಮೊಗವೀರರನ್ನು ಅದು ತನ್ನ ಓಟ್‍ಬ್ಯಾಂಕ್ ಆಗಿಸಿಕೊಂಡಿದ್ದು ಇದೇ ರೀತಿಯಲ್ಲಿ. ಹೀಗೆ ಒಕ್ಕಲಿಗರ ಪ್ರಾಬಲ್ಯವಿರುವ ಈ ಭಾಗದಲ್ಲಿ ನೇರ ರಾಜಕೀಯ ರೂಪದಲ್ಲಿಅವತರಿಸದೆ ಧರ್ಮದ ಹೆಸರಿನಲ್ಲಿ ಪಸರಿಸಲು ಯೋಜನೆ ಹಾಕಿಕೊಂಡಿತ್ತು.ಸದ್ಯಕ್ಕಲ್ಲದಿದ್ದರು, ದೇವೇಗೌಡರ ನಂತರದ ದಿನಗಳಲ್ಲಿ ಒಕ್ಕಲಿಗರ ರಾಜಕೀಯ ಐಕ್ಯತೆ ಛಿದ್ರವಾಗಲಿದ್ದು, ಆಗ ಬಿಜೆಪಿಯಾಗಿ ಬೇರೂರಲು ಈ ಧಾರ್ಮಿಕ ಅಡಿಪಾಯ ನೆರವಾಗುತ್ತದೆ ಅನ್ನೋದು ಸಂಘ ಪರಿವಾರದ ಇರಾದೆ. ಹೇಗೂ ಎಲೆಕ್ಷನ್ ತರುವಾಯ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸ ಇದ್ದುದರಿಂದ ಈ ಧಾರ್ಮಿಕ ಉನ್ಮಾದೀಕರಣವನ್ನು ದಿಢೀರನೆ ಅನುಷ್ಟಾನಕ್ಕೆ ತರುವ ಧಾವಂತ ಅವರಿಗಿರಲಿಲ್ಲ.
ಅಶೋಕ್ ಹಿಂದೇಟು, ಸೀಟಿ ರವಿಗೆ ಸಾರಥ್ಯ?
ಆದರೆ ಯಾವಾಗ ದೇವೇಗೌಡರು ಕಾಂಗ್ರೆಸ್ ಜೊತೆ ಮಿಲಾಪಿ ಮಾಡಿಕೊಂಡರೊ ಆಗಿನಿಂದ ಬಿಜೆಪಿ ತನ್ನ ಹಳೇ ಮೈಸೂರು ಅಜೆಂಡಾವನ್ನು ಅಗ್ರೆಸ್ಸಿವಾಗಿ ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ.ದೇವೇಗೌಡರ ಕುಟುಂಬದ ಮೇಲೆ ನೇರ ದಾಳಿಗೆ ಮುಂದಾಗಿದೆ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಡ್ಯೂರಪ್ಪನವರು ಬರೆದುತಂದು ಓದಿದ ಭಾಷಣದಲ್ಲೇ ಕುಮಾರಸ್ವಾಮಿ ಮತ್ತು ದೇವೇಗೌಡರ ಮೇಲೆ ದಾಳಿ ನಡೆಸಿದ್ದರು.ಅಲ್ಲಿಂದಾಚೆಗು ಬಿಜೆಪಿಯ ಐಟಿ ವಿಭಾಗಗಳು ಅಪ್ಪ-ಮಗನ ಕಾಲೆಳೆಯುವಂತಹ ಪೋಸ್ಟರ್‍ಗಳನ್ನು, ಕಂಟೆಂಟ್‍ಗಳನ್ನು ನಿರಂತರವಾಗಿ ಹರಿಬಿಡುತ್ತಾ ಬಂತು.ಅವು ವೈಯಕ್ತಿಕ ನಿಂದನೆಗೂ ಮೀನಮೇಷ ಎಣಿಸಿರಲಿಲ್ಲ. ದೇವೇಗೌಡರು ಒಕ್ಕಲಿಗರಲ್ಲ, ಕುರುಬರು ಎಂಬ ಹಸಿಸುಳ್ಳಿಗೆ ಜೀವ ನೀಡಿ ಹರಿದಾಡಿಸಲಾಯ್ತು. ಅವರ ತಂದೆ ದೊಡ್ಡೇಗೌಡರು ಕುರುಬರು, ಅವರ ತಾಯಿ ಮಾತ್ರ ಒಕ್ಕಲಿಗರಷ್ಟೇ ಎಂಬುದು ಆ ಸುಳ್ಳಿನ ಒಟ್ಟಾರೆ ಹೂರಣವಾಗಿತ್ತು. ಹೀಗೆ ದೇವೇಗೌಡ ಕುಟುಂಬದ ಮೇಲೆ ದಾಳಿಯನ್ನು ತೀವ್ರಗೊಳಿಸುತ್ತಲೇ ಮಂದಗತಿಯಲ್ಲಿ ಸಾಗುತ್ತಿದ್ದ ಹಳೇ ಮೈಸೂರು ಮೇಲೆ ಹಿಡಿತ ಸಾಧಿಸುವ ಕಾರ್ಯಯೋಜನೆಗು ಚುರುಕು ಮುಟ್ಟಿಸಲಾಗಿದೆ.
ಈಗ ತನ್ನ ಕಾರ್ಯಯೋಜನೆಯನ್ನು ಕೊಂಚ ಬದಲಿಸಿಕೊಂಡಿರುವ ಬಿಜೆಪಿ, ದೇವೇಗೌಡರ ಜಾತಿ ರಾಜಕಾರಣದ ಮೇಲೆ ನೇರ ರಾಜಕೀಯ ಪ್ರಹಾರಕ್ಕೇ ಮುಂದಾಗಿದೆ.ಹಳೇ ಮೈಸೂರು ಜಿಲ್ಲೆಗಳಾದ ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಭಾವಿಯೆನಿಸಿದ ಒಕ್ಕಲಿಗ ನಾಯಕರುಗಳನ್ನು ತನ್ನತ್ತ ಸೆಳೆದುಕೊಳ್ಳುವುದರ ಜೊತೆಗೆ ಹಾಲಿ ತನ್ನ ತೆಕ್ಕೆಯಲ್ಲಿರುವ ಒಕ್ಕಲಿಗ ಲೀಡರುಗಳ ಮೂಲಕ ಇಲ್ಲಿ ಬೇರು ಬಿಡಲು ಯತ್ನಿಸುತ್ತಿದೆ.
ಇದರ ಭಾಗವಾಗಿ ಇತ್ತೀಚೆಗೆ ರಾಜ್ಯ ನಾಯಕರ ಜೊತೆ ಮಾತುಕಡೆ ನಡೆಸಿದ ಅಮಿತ್ ಶಾ ಈ ಹೊಣೆಯನ್ನು ಆರ್.ಅಶೋಕ್ ಹೆಗಲಿಗೇರಿಸಲು ತೀರ್ಮಾನಿಸಿದ್ದರು.ಆದರೆ ದೇವೇಗೌಡರ ಎದುರು ಅಖಾಡಕ್ಕಿಳಿಯುವ ಹುಮ್ಮಸ್ಸು ಸಾಲದೆ ಅಶೋಕ್ ಒಲ್ಲೆ ಅಂತ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಅಸಲಿಗೆ, ಒಕ್ಕಲಿಗರು ಯಾವತ್ತೂ ಅಶೋಕ್‍ರನ್ನು ಜಾತಿ ಲೀಡರ್ ಅಂತ ಪರಿಗಣಿಸಿದ್ದೇ ಇಲ್ಲ. ಅಶೋಕ್‍ಗೆ ಆ ಸಾಮಥ್ರ್ಯವೂ ಇಲ್ಲ. ರಿಯಲ್ ಎಸ್ಟೇಟ್ ರಾಜಿ ಪಂಚಾಯ್ತಿಕೆಯಲ್ಲಿ ಸೈ ಅನ್ನಿಸಿಕೊಂಡಿರುವ ಅಶೋಕ್‍ಗೆ ಬೆಂಗಳೂರಿನ ಇದೇ ಕಸುಬಿನ ಕಾರ್ಪೊರೇಟರ್ ಮತ್ತು ಒಂದಷ್ಟು ಎಂಎಲ್‍ಎಗಳ ಮೇಲೆ ಹಿಡಿತವಿದೆ ಅನ್ನೋದನ್ನ ಬಿಟ್ಟರೆ ಆತ ಮಾಸ್ ಲೀಡರಾಗಿಯೂ ಮಿಂಚಿದವರಲ್ಲ. ಸಂಘಟನೆಯಂತು ದೂರದ ಮಾತು. ಬಿಬಿಎಂಪಿ ಅಧಿಕಾರ ಹಿಡಿಯಲು ವಿಫಲವಾಗಿದ್ದಲ್ಲದೆ ಅಸೆಂಬ್ಲಿ ಎಲೆಕ್ಷನ್‍ನಲ್ಲೂ ಬೆಂಗಳೂರು ನಗರದಲ್ಲಿ ಅಷ್ಟೇನು ಎಂಎಲ್‍ಎಗಳನ್ನು ಗೆಲ್ಲಿಸಿಕೊಳ್ಳಲಾಗದ ಅಶೋಕ್‍ಗೆ ಪಕ್ಷ ಕೊಟ್ಟಿದ್ದ ಈ ಸವಾಲು ತನ್ನ ಸಾಮಥ್ರ್ಯಕ್ಕೆ ಮೀರಿದ್ದು ಅನ್ನಿಸಿರಬೇಕು.ಅದಕ್ಕೇ ಅಡ್ಡಡ್ಡ ತಲೆಯಾಡಿಸಿ ಬಂದಿದ್ದಾರೆ.ಈ ನಿರ್ಧಾರದಿಂದಾಗಿ ಅಶೋಕ್ ಬಿಜೆಪಿಯೊಳಗೆ ತಮ್ಮ ರಾಜಕೀಯವನ್ನು ಮಸುಕಾಗಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಈಗ ಆ ಹೊಣೆಯನ್ನು ಸೀಟಿ ರವಿ ಹೆಗಲಿಗೇರಿಸಲಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಲು ಆಯ್ಕೆಯಾಗಿರುವ ಮೂರನೇ ತಂಡದ ಪ್ರಧಾನ ಪಾತ್ರಧಾರಿ ರವಿಗೆ ವಹಿಸಿರುವ ಜಿಲ್ಲೆಗಳೆಲ್ಲ ಹಳೆ ಮೈಸೂರು ಜಿಲ್ಲೆಗಳೆ ಆಗಿವೆ. ಒಕ್ಕಲಿಗರ ಜಾತಿ ಕೋಟೆ ಮೇಲೆ ಹಿಡಿತ ಸಾಧಿಸಲು ರವಿಗೆ ಸಾಥ್ ನೀಡಲು ಸಿ.ಪಿ.ಯೋಗೀಶ್ವರ್, ಶೋಭಾ ಕರಂದ್ಲಾಜೆ, ತೇಜಸ್ವಿನಿ ರಮೇಶ್, ಸದಾನಂದ ಗೌಡರಂತಹ ಒಕ್ಕಲಿಗ ನಾಯಕರ ಜೊತೆಗೆ ಈ ಭಾಗದ ದಲಿತ ಲೀಡರೂ ಆದ ಬಿ.ಸೋಮಶೇಖರ್‍ರನ್ನೂ ಅಣಿ ಮಾಡಲಾಗಿದೆ ಅನ್ನೋದು ಲೇಟೆಸ್ಟ್ ವರ್ತಮಾನ. ಮೊನ್ನೆ ಮೋದಿ ಭೇಟಿ ಮಾಡಿಬಂದ ಮಾಜಿ ಸಚಿವ ಬಿ.ಸೋಮಶೇಖರ್ `ಒಂದು ಗಂಟೆ ಮೋದಿಯವರು ನನ್ನ ಬಳಿ ಗಂಭೀರ ಚರ್ಚೆ ನಡೆಸಿದರು’ ಅಂತ ಹೇಳಿಕೊಳ್ಳುತ್ತಿದ್ದಾರಲ್ಲ, ಆ ಚರ್ಚೆಯೆಲ್ಲ ನಡೆದಿರೋದು ಇದೇ ವಿಷಯದ ಸುತ್ತ. ಇಲ್ಲದೆ ಹೋಗಿದ್ದರೆ, ಕನಿಷ್ಠ ಪಕ್ಷ ಎಮ್ಮೆಲ್ಲೆಯೂ ಅಲ್ಲದ ಸೋಮಶೇಖರ್ ಜೊತೆ ಚರ್ಚಿಸಲು ಮೋದಿಯವರಿಗೇನಿರುತ್ತೆ!
ದೇವೇಗೌಡರ ಕುಟುಂಬದ ಮೇಲೆ ಸಣ್ಣಗೆ ಅಸಮಾಧಾನಗೊಂಡಿರುವ ಜೆಡಿಎಸ್ ನಾಯಕರನ್ನು ಬಿಜೆಪಿಗೆ ಕರೆತರುವುದು ಈ ಟೀಮಿನ ಮೊದಲ ಟಾಸ್ಕು. ಆ ಪಟ್ಟಿಯ ಮೊದಲನೇ ಕಂತಿನಲ್ಲಿ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಹೆಸರುಗಳಿವೆ. ಖಾತೆಯ ಕಾರಣಕ್ಕೆ ಜಿ.ಟಿ.ದೇವೇಗೌಡ ಮುನಿಸಿಕೊಂಡಿದ್ದರೆ, ತನಗೆ ಸಣ್ಣ ನೀರಾವರಿ ಖಾತೆಕೊಟ್ಟು ತಮ್ಮ ಬೀಗ ಡಿ.ಸಿ.ತಮ್ಮಣ್ಣನಿಗೆ ಭರಪೂರ ಸಾರಿಗೆ ಸಚಿವರನ್ನ ಮಾಡಿದ್ದಕ್ಕೆ ಸಿ.ಎಸ್.ಪುಟ್ಟರಾಜುಗೆ ಗೌಡರ ಮೇಲೆ ಸಿಟ್ಟಿದೆ. ಇನ್ನು ಹುಟ್ಟಾ ಬಿಜೆಪಿಗನಾದ ಸಾ.ರಾ.ಮಹೇಶ್‍ಗೆ ಮಂತ್ರಿಗಿರಿ ಸಿಕ್ಕಿದೆಯಾದರು ಭವಾನಿ ಮೇಡಂರ ಉಪಟಳದಿಂದ ಮೂಲ ಬಿಜೆಪಿ ಪಕ್ಷದತ್ತ ಮುಖ ಮಾಡುವ ಯೋಚನೆಯಲ್ಲಿದ್ದಾರೆ.ಇವರನ್ನೆಲ್ಲ ಪಕ್ಷಕ್ಕೆ ಕರೆತಂದು ಒಕ್ಕಲಿಗರ ಮೇಲಿನ ದೇವೇಗೌಡರ ಫ್ಯಾಮಿಲಿ ಹಿಡಿತ ಸಡಿಲಗೊಳಿಸುವುದು ಅಮಿತ್ ಶಾ ಸದ್ಯದ ಸ್ಟ್ರಾಟಜಿ.
ಬಿಜೆಪಿಯ ಈ ಹುನ್ನಾರದ ಸುಳಿವಿಡಿದೋ ಏನೊ, ಗೌಡರು ದಿಢೀರನೆ ತಮ್ಮ ಅಂದಕಾಲತ್ತಿಲ್ ವೈರಿ ಡಿಕೇಶಿ ಜೊತೆ ಉತ್ತಮ ನಂಟು ಬೆಳೆಸಿಕೊಳ್ಳುತ್ತಿದ್ದಾರೆ.ಅದಕ್ಕೇ ಇರಬಹುದೇನೊ, ಎಂದೂ ಒಕ್ಕಲಿಗ ಸಂಘದ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಳ್ಳದ ದೇವೇಗೌಡರು ಸಂಘದ ರಾಜಕಾರಣದಲ್ಲಿ ಬಂಡಾಯವೇರ್ಪಟ್ಟು ಹಾಲಿ ಅಧ್ಯಕ್ಷನನ್ನು ಪದಚ್ಯುತಿಗೊಳಿಸುವ ರಾದ್ಧಾಂತವಾದಾಗ ಮಧ್ಯಸ್ಥಿಕೆ ವಹಿಸುವ ಮನಸ್ಸು ಮಾಡಿದ್ದಾರೆ. ಡಿಕೇಶಿಯನ್ನೂ ಜೊತೆ ಕೂರಿಸಿಕೊಂಡು ಸಂಘದ ಪದಾಧಿಕಾರಿಗಳನ್ನೆಲ್ಲ ಕರೆದು ನಡೆಸಿದ ಸಂಧಾನ ಸಭೆಯಲ್ಲಿ ಅವರು ಹೇಳಿದ ಒಂದು ಮಾತು ಹೀಗಿದೆ, `ಇಷ್ಟುದಿನ ನಾವುಗಳೇ ಕಚ್ಚಾಡಿಕೊಂಡದ್ದು ಸಾಕು. ಇದು ಹೊರಗಿನವರಿಗೆ ಲಾಭ ಮಾಡಿಕೊಡುತ್ತೆ.ಈಗ ಮತ್ತೆ ಸಂಘಕ್ಕೆ ಚುನಾವಣೆಅಂತೆಲ್ಲ ರಾಡಿ ಮಾಡಿಕೊಳ್ಳೋದು ಬೇಡ. ನಾವೇ ನಾಯಕರು ಮಾತಾಡಿ ಒಬ್ಬರನ್ನು ಅಧ್ಯಕ್ಷರನ್ನ ಮಾಡ್ತೀವಿ!’.ದೇವೇಗೌಡರ ಮಾತಿಗೆ ಬೆಲೆಕೊಟ್ಟು ಮೊನ್ನೆ ನಡೆಯಬೇಕಿದ್ದ ಚುನಾವಣೆಯೇ ರದ್ದಾಗಿದೆ.ಒಕ್ಕಲಿಗರ ಜಾತಿ ಒಗ್ಗಟ್ಟಿನ ಮೇಲೆ ದಾಳಿ ಮಾಡಲು ಮುಂದಾಗಿರುವ ಬಿಜೆಪಿ ಕುರಿತು ದೇವೇಗೌಡರು ಈ ಆತಂಕ ಹೊರಹಾಕಿದರಾ? ಒಟ್ಟಿನಲ್ಲಿ ಯಾವ ದೇವೇಗೌಡರನ್ನು ಒಕ್ಕಲಿಗರು ತಮ್ಮ ಜನ್ಮಜಾತ ನಾಯಕ ಅಂತ ಒಪ್ಪಿಕೊಂಡಿದ್ದಾರೊ ಅವರ ವಿರುದ್ಧವೇ ಒಕ್ಕಲಿಗರನ್ನು ಎತ್ತಿಕಟ್ಟುವ ಸಾಹಸಕ್ಕೆ ಬಿಜೆಪಿ ಕೈಹಾಕಿರೋದು ಮಾತ್ರ ಕರ್ನಾಟಕ ರಾಜಕಾರಣವನ್ನು ರಂಗೇರಿಸಲಿದೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...