ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟಿಸುತ್ತಿರುವ ಶಾಹೀನ್ ಬಾಗ್‌ನ ಮಹಿಳೆಯರು ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ವಜಾಹತ್ ಹಬೀಬುಲ್ಲಾ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು ಕೇಂದ್ರ ಸರ್ಕಾರ ತಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಯಾವುದೇ ಸಂವಾದ ನಡೆಸಿಲ್ಲ ಎಂದು ದೂರಿದ್ದಾರೆ. ಹಾಗಾಗಿ ಸಿಎಎ ವಿರೋಧಿ ಅರ್ಜಿಗಳನ್ನು ಉನ್ನತ ನ್ಯಾಯಾಲಯವು ಶೀಘ್ರವಾಗಿ ಆಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಶಾಹೀನ್ ಬಾಗ್ ಪ್ರತಿಭಟನಾಕಾರನ್ನು ತೆರವುಗೊಳಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮಧ್ಯಪ್ರವೇಶಿಸಿರುವ ಹಬೀಬುಲ್ಲಾ, ಪ್ರತಿಭಟನೆ ಹೆಚ್ಚಾಗಿ ಶಾಂತಿಯುತವಾಗಿದೆ ಮತ್ತು ಮಹಿಳೆಯರ ಪ್ರತಿಭಟನಾ ಸ್ಥಳವು ಅವರ ದೃಷ್ಟಿಕೋನವನ್ನು ನ್ಯಾಯಾಲಯದ ಮುಂದೆ ಇರಿಸಲು ವಿನಂತಿಸಿದೆ ಎಂದು ಕಳೆದ ವಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಉನ್ನತ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಾವು ದೇಶದ ಹೆಮ್ಮೆಯ ಪ್ರಜೆಗಳೆಂದು ಪುನರುಚ್ಚರಿಸಿದ ಮಹಿಳೆಯರು, ತಮ್ಮ ಕಳವಳ ಮತ್ತು ಅಭಿಪ್ರಾಯಗಳನ್ನು ಅಫಿಡವಿಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ರಾಷ್ಟ್ರ ವಿರೋಧಿ ಮತ್ತು ಪಾಕಿಸ್ತಾನಿಗಳೆಂದು ಹಣೆಪಟ್ಟಿ ಕಟ್ಟಿರುವುದಕ್ಕೆ ತೀವ್ರ ದುಃಖವನ್ನು ತೋಡಿಕೊಂಡಿದ್ದಾರೆ ಎಂದು ಹಬೀಬುಲ್ಲಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
“ಅವರು ದೇಶದ ಹೆಮ್ಮೆಯ ಪ್ರಜೆಗಳಾಗಿದ್ದರೂ ಸಹ ಅವರ ಬಗ್ಗೆ ವಿವಿಧ ರಾಜಕೀಯ ಭಾಷಣಗಳಲ್ಲಿ ಮತ್ತು ಮಾಧ್ಯಮಗಳ ಒಂದು ವಿಭಾಗವು ರಾಷ್ಟ್ರ ವಿರೋಧಿ / ಹೊರಗಿನವರು / ದೇಶದ್ರೋಹಿಗಳು / ಪಾಕಿಸ್ತಾನಿಗಳು ಎಂದು ಬಿಂಬಿಸಿರುವುದಕ್ಕೆ ತೀವ್ರವಾಗಿ ದುಃಖಿತರಾಗಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಎನ್‌ಆರ್‌ಸಿ ಮತ್ತು ಎನ್‌ಪಿಆರ್ “ಅವರ ಉಳಿವು ಮತ್ತು ಅಸ್ತಿತ್ವಕ್ಕೆ ಮರಣದಂಡನೆಯಾಗಿ ಪರಿಣಮಿಸಿದೆ.” ಹಾಗಾಗಿ ಮಹಿಳೆಯರು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಶಾಂತಿಯುತ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಗಾಗಿ ಅದೇ ನಿರ್ದಿಷ್ಟ ತಾಣವನ್ನು ಆರಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ “ಆ ರಸ್ತೆಯು ಶಾಹೀನ್ ಬಾಗ್ ಏರಿಯಾದ ಮಧ್ಯಭಾಗದಲ್ಲಿದ್ದು, ಇದು ಅವರಿಗೆ ಅಗತ್ಯವಾದ ಭದ್ರತೆಯನ್ನು ನೀಡುತ್ತದೆ. ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆದರೆ ಎದುರಾಗಬಹುದಾದ ಬೆದರಿಕೆ ಮತ್ತು ದಾಳಿಯ ಸಾಧ್ಯತೆಗಳು ಇಲ್ಲಿ ಗಣನೀಯವಾಗಿ ಕಡಿಮೆಯಿವೆ” ಎಂದು ಉತ್ತರಿಸಿದ್ದಾರೆ.
ಪ್ರತಿಭಟನೆಯೊಂದಿಗೆ ಸಂಪರ್ಕವಿಲ್ಲದ ರಸ್ತೆಗಳನ್ನು ಪೊಲೀಸರು ಅನಗತ್ಯವಾಗಿ ಬ್ಯಾರಿಕೇಡ್ ಹಾಡಿ ಬಂದ್ ಮಾಡುವ ಮೂಲಕ “ಪ್ರತಿಭಟನಾಕಾರರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ” ಆ ರಸ್ತೆಗಳನ್ನು ಪೊಲೀಸರು ನಿರ್ಬಂಧಸಿರುವುದರಿಂದಲೇ ಅಸ್ತವ್ಯಸ್ತ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಫಿಡವಿಟ್‌ನಲ್ಲಿ ಹಬೀಬುಲ್ಲಾ ಹೇಳಿದ್ದಾರೆ.
ಕಳೆದ ಸೋಮವಾರ, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಸಂಜಯ್ ಹೆಗ್ಡೆ ಮತ್ತು ವಕೀಲೆ ಸಾಧನಾ ರಾಮಚಂದ್ರನ್ ಅವರಿಗೆ ಪ್ರತಿಭಟನಾಕಾರರೊಂದಿಗೆ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಿದೆ.
ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದ್ದು, ಆದರೆ ಇಂತಹ ಪ್ರತಿಭಟನೆಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಅನಿರ್ದಿಷ್ಟ ಅವಧಿಯವರೆಗೆ ನಡೆಸಲಾಗುವುದಿಲ್ಲ ಎಂದು ತಿಳಿಸಿದೆ.


