Homeಅಂಕಣಗಳುಮುದ್ದೆ ರಫ್ತು ಮಾಡಿದ್ರೆ ಹೆಂಗೆ?

ಮುದ್ದೆ ರಫ್ತು ಮಾಡಿದ್ರೆ ಹೆಂಗೆ?

- Advertisement -
- Advertisement -

ಕರ್ನಾಟಕದಲ್ಲಿ ಚುನಾವಣೆ ಸಂಭವಿಸಲಿದೆ ಅಂದರೆ ಅಪ್ಪಳಿಸಲಿದೆ. ಈ ಹಿಂದಿನವೆಲ್ಲಾ ಚುನಾವಣೆಗಳಾದರೆ, ಈಗಿನದ್ದು ಸಮರ ಚುನಾವಣಾ ಸಾಮಗ್ರಿಗಳೊಡಗೂಡಿದ ಸಮರ. ಇಲ್ಲಿ ಬಳಕೆಯಾಗುವ ಎಲ್ಲ ಆಯುಧಗಳಿಗಿಂತಲೂ ಮತೀಯವಾದ ಆಯುಧ ಭಯಾನಕವಾದದ್ದು. ಮೂರು ಪಾರ್ಟಿಗಳೂ ಈ ಆಯುಧಗಳನ್ನು ಕೈಗೆತ್ತಿಕೊಂಡಿವೆ. ಕಾಂಗ್ರೆಸ್ ಪಾರ್ಟಿ ಅಹಿಂದ ಜಪ ಕಡಿಮೆ ಮಾಡಿ ಅಹಿಂದದ ಜೊತೆಗೆ ಲಿಂಗ ಸೇರಿಸಿಕೊಂಡಿದೆ. ಆದರೆ ಒಲ್ಲದ ಗಂಡನೊಡನೆ ಬಾಳುವೆ ಮಾಡಿದಂತೆ ವೀರಶೈವರೊಟ್ಟಿಗಿದ್ದ ಲಿಂಗಾಯತರು ತಮ್ಮಸ್ಥಾನದಿಂದ ಕೆಳಗಿಳಿದು ಅಹಿಂದರೊಟ್ಟಿಗೆ ನಿಲ್ಲುವುದು ಸಾಧ್ಯವೇ ಎಂದು ಸಮಾಜ ವಿಜ್ಞಾನಿಗಳು ಚರ್ಚೆ ಮಾಡುತ್ತಿರುವಾಗಲೇ, ಶಾ ಎಂಬ ಭಾರತದ ಶನಿ ಹೆದರಬೇಡಿ ಬೇರೆ ಧರ್ಮ ಮಾನ್ಯತೆ ಕೊಡುವುದಿಲ್ಲ ಎಂದುಬಿಟ್ಟಿದ್ದಾನಲ್ಲಾ.
ಈತನ ಅಜ್ಞಾನದ ಮುಸುಡಿಗೆ ಇಕ್ಕಿರುವ ಮಾತೆಮಾದೇವಿ ನಿನ್ನ ಬುದ್ಧಿ ದಾರಿದ್ರ್ಯಕ್ಕಿಷ್ಟು ಬೆಂಕಿಹಾಕ. ನೀನು ಮಾತ್ರ ಜೈನ ಧರ್ಮ ಪಡಕೊಂಡಿ, ನಮಗೆ ಲಿಂಗಧರ್ಮ ಬೇಡವೆ ಎಂದರಂತಲ್ಲಾ, ಥೂತ್ತೇರಿ!

*******

ಕರ್ನಾಟಕದ ಮತದಾರರ ಎದುರು ಮೂರು ಪಾರ್ಟಿಗಳು ತಮ್ಮತಮ್ಮ ಸಾಧನೆಗಳನ್ನು ಅನಾವರಣ ಮಾಡಿಕೊಳ್ಳುತ್ತಿವೆಯಲ್ಲಾ. ಆ ಪೈಕಿ ಕಾಂಗ್ರೆಸ್ ಈ ಐದು ವರ್ಷ ತಾನು ಮಾಡಿದ ಸಾಧನೆಗಳನ್ನು ಸಾರಲು ಹೆಣಗುತ್ತಿರುವಾಗ, ಅತ್ತ ಬಿಜೆಪಿ ಹೇಳಿಕೊಳ್ಳಲು ಏನೂ ಇಲ್ಲದ ಕಾರಣ ಸಿದ್ದು ಸರ್ಕಾರ ಶುದ್ಧ ಭ್ರಷ್ಟ ಸರ್ಕಾರ. ಅದರಲ್ಲೂ ನಂ. 1 ಭ್ರಷ್ಟ ಸರ್ಕಾರ ಎಂದು ಹೇಳುತ್ತಲೇ `ಶಾ’ರವರು ಸಿದ್ದು ಹೆಸರಿನ ಜಾಗಕ್ಕೆ ಎಡೂರಪ್ಪನನ್ನು ತಂದು ಕೂರಿಸಿದ್ದು ಕರ್ನಾಟಕವನ್ನೆ ನಗಿಸಿತಂತಲ್ಲಾ. ಇನ್ನು ಜೆಡಿಎಸ್‍ನಿಂದ ಇಂತಹ ಪ್ರಮಾದಗಳಿಲ್ಲವಿದ್ದರೂ ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಸಿರಾಮಯ್ಯನಂಥ ನೀಚನನ್ನು ನಾನು ಬೆಳೆಸಿ ಉಪಮುಖ್ಯಮಂತ್ರಿ ಮಾಡಿದ್ದೇ ತಪ್ಪು ಎಂದು ಹಲುಬಿದ್ದಾರಂತಲ್ಲಾ. ಆಗ ಅಲ್ಲೇ ಇದ್ದ ಅಡಗೂರಿನ ಬುಂಡೆಖ್ಯಾತ ಅಂದರೆ ಎಚ್. ವಿಶ್ವನಾಥ್ ನಾನು ಸಿದ್ದರಾಮಯ್ಯನ ಕೊರಳಿಗೆ ಹಗ್ಗಹಾಕಿ ಸೋನಿಯಾ ಮನೆಗೆ ಎಳೆದುಕೊಂಡು ಹೋಗಿದ್ದು ಈ ಶತಮಾನದಲ್ಲಿ ನಾನು ಮಾಡಿದ ಘೋರ ತಪ್ಪು ಎಂದರಂತಲ್ಲಾ ಥೂತ್ತೇರಿ.

*******

“ಸಿದ್ದುವನ್ನು ನಾನು ಬೆಳೆಸಿದೆ” ಎಂಬ ದೇವೇಗೌಡರ ಮಾತಿಗೆ ಸಾಕ್ಷಿಯೊದಗಿಸಿರುವ ಕೊಳ್ಳೇಗಾಲದ ಪ್ರಸಾದ ಎಂಬ ಸಿದ್ದು ಸೇವಕ. ಗೌಡರು ಹೇಳಿದ್ದು ನೂರಕ್ಕೆ ನೂರಮೂರು ಸತ್ಯ.
ಸಿದ್ದರಾಮನ ಹುಂಡಿಯಲ್ಲಿ, ಹರುಕಲು ಅಂಗಿ, ತೂತಾದ ಚೆಡ್ಡಿ, ಇಕ್ಕಿಕೊಂಡು ಎಣ್ಣೆಗಾಣದ ತಲೆ ಕೆದರಿಕೊಂಡು ಕುರಿ ಕಾಯುತ್ತಿದ್ದ ಸಿದ್ದುವನ್ನು ಹಿಡಿದು ತಂದ ದೇವೇಗೌಡರು, ರೇವಣ್ಣನಿಗಿಂತಲೂ ಹಿರಿಯವನೆಂದು ಸಾಕಿ ಎಲ್‍ಎಲ್‍ಬಿ ಮಾಡಿಸಿ, ಲಾಯರ್ ಮಾಡಿ, ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ, ಕನ್ನಡ ಅಭಿವೃದ್ಧಿ ಅಧ್ಯಕ್ಷನನ್ನಾಗಿ ಮಾಡಿ, ನಂತರ ಆಡುಕುರಿ ದನಗಳ ಮಂತ್ರಿ ಮಾಡಿ, ಆರಾಣೆ ಎಣಿಸಲು ಬಾರದಿದ್ದರೂ ಅರ್ಥಮಂತ್ರಿ ಮಾಡಿ, ಉಪಮುಖ್ಯಮಂತ್ರಿ ಮಾಡಿದ್ದೂ ಅಲ್ಲದೆ, ಚಾಮುಂಡೇಶ್ವರಿ ಚುನಾವಣೆಯಲ್ಲಿ ಕೇವಲ 274 ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಟ್ಟ ದೇವೇಗೌಡರು ಸಿದ್ದು ಪಾಲಿಗೆ ದೇವರಾಗಬೇಕಿತ್ತು. ಅದುಬಿಟ್ಟು ಕರ್ನಾಟಕವನ್ನು ಕಾಡುತ್ತಿರುವ ದೆವ್ವನಂತೆ ಪರಿಗಣಿಸಬಾರದಿತ್ತು. ಯಾರಾದರಾಗಲಿ ದೆವ್ವನನ್ನು ಆರಾಧಿಸಬೇಕೆ ಹೊರತು ಸಿಟ್ಟು ತರಿಸಬಾರದು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.

*******

ಸಿದ್ದು ಸರ್ಕಾರ ಮರಳಿ ಬಂದುದಾದರೆ ಕರುಣಿಸಿರುವ ಭಾಗ್ಯಗಳು ಮುಂದುವರಿಯುತ್ತವಂತೆ. ಅದೇ ಬಿಜೆಪಿ ಸರ್ಕಾರ ಬಂದರೆ ಹಿಂದಿನ ಸಾಧನೆಗಳು ಮುಂದುವರಿಯುತ್ತವಂತೆ! ಹಾಗೆಯೇ ಇಪ್ಪತ್ತೇ ತಿಂಗಳಿದ್ದು ಇಬ್ಬರು ಹೆಂಡಿರ ಮನೆ ಮರೆತು ಗ್ರಾಮ ವಾಸ್ತವ್ಯ ಮಾಡಿದ ಕುಮಾರಣ್ಣನ ಕೆಲಸಗಳೂ ಮುಂದುವರಿಯುತ್ತವಂತೆ. ಜೊತೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡ 25 ಗಂಟೆ ಅವಧಿಯಲ್ಲಿ ರೈತರ 51 ಸಾವಿರ ಕೋಟಿ ಸಾಲಮನ್ನ, ಗರ್ಭಿಣಿಯರು. ಗರ್ಭಿಣಿಯಾಗುವ ತಿಂಗಳಿನಿಂದಲೇ ಮಾಸಾಶನ ಮಾಡುತ್ತೇನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಮನೆಯಿಂದ ಈಚೆ ಬರದಂತಹ ಕೆಲಸ ಕೊಡುತ್ತೇನೆ. ಅಂದರೆ ಮನೆ ಕೈಗಾರಿಕೆಗಳು ಜಾರಿಯಾಗುತ್ತವೆ. ಮುಖ್ಯವಾಗಿ ನಮ್ಮ ತಂದೆಯವರಿಗೆ ಪ್ರಿಯವಾದ ಮುದ್ದೆ ತಯಾರಿಸುವಂತೆ ಮಾಡಿ. ಅದರ ಜೊತೆಗೆ ರೊಟ್ಟಿಯನ್ನು ತಯಾರಿಸಿ ಮಾರ್ಕೆಟಿಂಗ್ ವ್ಯವಸ್ಥೆ ಮಾಡುತ್ತೇನೆ. ಮುದ್ದೆ ಖರ್ಚಾಗದಿದ್ದರೆ ಬೃಹತ್ ಶೀತಲೀಕರಣ ನಿರ್ಮಿಸಿ ಕೆಡದಂತೆ ಸಂಗ್ರಹಿಸಿ ರಫ್ತು ಮಾಡುತ್ತೇವೆ ಎಂದು ಇನ್ನು ಹೇಳಿಲ್ಲವಂತಲ್ಲಾ, ಥೂತ್ತೇರಿ.

*******

ಹಸುವಿನಿಂದ ಬೇರೆಯಾದ ಕರುವಿನಂತೆ ಕರ್ನಾಟಕವನ್ನು ಸುತ್ತುತ್ತ. ಇವನಾರ್ವ ಇವನಾರ್ವ ಎನ್ನುತ್ತಿರುವ ರಾಹುಲ್ ಗಾಂಧಿಯನ್ನು ನೋಡಿ ಪಾಪ ಪಾಂಡು ಎಂದು ಆಡಿಕೊಂಡಿರುವ ಅಡುಕುರಿ ವಿಶ್ವನಾಥ್‍ನನ್ನು ನೋಡಿ, ಕೆರಳಿದ ಕಾಂಗೈಗಳೂ ಬುಂಡೆಕ್ಯಾತನೆಂದು ನಾಮಕರಣ ಮಾಡಿವೆಯಲ್ಲಾ. ಅಷ್ಟಕ್ಕೂ ಈ ಬುಂಡೆಕ್ಯಾತ ಮಗ ಅಯ್ಯು ಚಿತ್ರದ್ದು. ಆ ಚಿತ್ರದಲ್ಲಿ ಬುಂಡೇಕ್ಯಾತನ ಯಾರೆಂದು ಇತಿಹಾಸವನ್ನು ಕೆದಕಿದಾಗ ಬುಂಡೆಕ್ಯಾತ ಎಂಬ ಪಾತ್ರ ಬೂತಯ್ಯನ ಕೆಲಸವೇನೆಂದರೆ, ಭೂತಯ್ಯನ ಜೊತೆಗಿದ್ದೇ ವಿರೋಧಿಗಳಿಗೆ ಭೂತಯ್ಯನ ನಾಶ ಸಂಚನ್ನು ಹೇಳಿಕೊಡುವುದು. ನಾಯಕನ ಹಿಂದಿರುತ್ತಲೇ ಎದುರಾಳಿಗೆ ಕಣ್ಸನ್ನೆ ಮಾಡುವ ಈ ಪಾತ್ರಗಳಿಗೆ ದೊಡ್ಡ ಇತಿಹಾಸವೇ ಇದೆ. ಅದೇನಾದರಾಗಲಿ ದೇವೇಗೌಡರು ಟೀಕೆ ಮಾಡುವ ಯಾವ ಅವಕಾಶವನ್ನು ಕಳೆದುಕೊಳ್ಳದೇ ಟೀಕಿಸಿ ಚಪ್ಪಾಳೆ ಗಿಟ್ಟಿಸಿದ್ದ ವಿಶ್ವನಾಥ್, ಈಗ ದೇವೇಗೌಡರ ಹಿಂದೆ ಇದ್ದು,ಈ ಬುರುಡೆ ಅವರೇದ್ದೊ ಇವರದ್ದೊ ಎಂಬ ಅನುಮಾನ ಹುಟ್ಟಿಸುವಂತೆ ಹತ್ತಿರದಲ್ಲೇ ಇರುವುದು ಮೌಲ್ಯಗಳನ್ನು ಕುರಿತು ಚಿಂತಿಸುವವರ ಮನಕರಗಿಸುವಂತಿದೆಯಲ್ಲಾ ಥೂತ್ತೇರಿ!!!

– ಯಾಹೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...