ಒಂದೆಡೆ ಕೊರೋನಾ ಬೆದರಿಕೆಯ ಸುದ್ದಿ ಎಲ್ಲೆಡೆ ಓಡಾಡುತ್ತಿದ್ದರೆ ಮತ್ತೊಂದೆಡೆ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಬೆಚ್ಚಿಬಿದ್ದಿದೆ. 2008ರಿಂದ ಆರಂಭವಾಗಿ ಕಳೆದ ಒಂದು ದಶಕದಿಂದ ಕಾಂಗ್ರೆಸ್ ಪಕ್ಷವನ್ನು ಮಾರಣಾಂತಿಕವಾಗಿ ಕಾಡುತ್ತಿರುವ ಏಕೈಕ ವೈರಸ್ ಎಂದರೆ ಆಪರೇಷನ್ ಕಮಲ. ಕರ್ನಾಟಕದಿಂದ ಆರಂಭವಾದ ಈ ವೈರಸ್ ಇದೀಗ ಮಧ್ಯಪ್ರದೇಶ ರಾಜಕಾರಣವನ್ನೂ ಆಕ್ರಮಿಸಿಕೊಂಡಿರುವುದು ದುರದೃಷ್ಟಕರ.
ಮಧ್ಯಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಬಹುಮತದ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ, ಪ್ರಸ್ತುತ ಈ ಸರ್ಕಾರವನ್ನು ಬೀಳಿಸುವಲ್ಲಿ ಬಿಜೆಪಿ ನಾಯಕರು ಬಹುತೇಕ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‍ನ ಸ್ಥಳೀಯ ಮತ್ತು ಪ್ರಬಲ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ಶಾಸಕರು ಮತ್ತು ಸಚಿವರು ಕಾಂಗ್ರೆಸ್‍ಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಸಿಂಧಿಯಾ ಸೇರಿದಂತೆ ಅನೇಕರು ಈಗಾಗಲೇ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ಅಲ್ಲಿಗೆ ಕಮಲ್‍ನಾಥ್ ಸರ್ಕಾರ ಬೀಳುವುದು ಬಹುತೇಕ ಖಚಿತವಾದಂತಾಗಿದೆ.
ಹಾಗೆ ನೋಡಿದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಕೈ ಹಾಕುತ್ತಿರುವುದು ಇದೇ ಮೊದಲೇನಲ್ಲ. 2018, ನವೆಂಬರ್ 28ರಂದು ಚುನಾವಣಾ ಫಲಿತಾಂಶ ಹೊರಬಿದ್ದ ಸಂದರ್ಭದಿಂದಲೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿತ್ತು.
230 ಸ್ಥಾನಗಳ ಬಲಾಬಲ ಹೊಂದಿರುವ ಮಧ್ಯಪ್ರದೇಶದ ಚುನಾವಣೆಯಲ್ಲಿ ಬಹುಮತದ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 116. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಎರಡನೇ ದೊಡ್ಡ ಪಕ್ಷವಾದ ಬಿಜೆಪಿ 109 ಸ್ಥಾನಗಳನ್ನು ಗಳಿಸಿತ್ತು. ಈ ನಡುವೆ 4 ಜನ ಸ್ವತಂತ್ರ ಅಭ್ಯರ್ಥಿಗಳು ಹಾಗೂ ಇಬ್ಬರು ಬಿಎಸ್ಪಿ ಶಾಸಕರ ಬಲ ಪಡೆದು ಕಾಂಗ್ರೆಸ್ ಸರ್ಕಾರ ರಚನೆ ಮಾಡುವಲ್ಲಿ ಸಫಲವಾದರೆ, ಸರ್ಕಾರ ರಚನೆಗೆ ಕೇವಲ 7 ಸ್ಥಾನ ಮಾತ್ರ ಕೊರತೆ ಇದ್ದ ಬಿಜೆಪಿ ಸತತ ಒಂದೂವರೆ ವರ್ಷದಿಂದ ಆಪರೇಷನ್ ಕಮಲವನ್ನು ಮಾಡುತ್ತಲೇ ಇದೆ. ಆದರೆ, ಅದು ಫಲ ನೀಡಿರುವುದು ಈಗಲೇ.
ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿರುವುದು ಇಂದು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಕೈನಲ್ಲಿದ್ದ ಕೆಲವೇ ಕೆಲವು ರಾಜ್ಯಗಳನ್ನೂ ಬಿಜೆಪಿ ಹಿಂಬಾಗಿಲಿನ ಮೂಲಕ ಕಸಿದುಕೊಳ್ಳುತ್ತಿದೆ. ಆದರೆ, ಆಪರೇಷನ್ ಕಮಲ ನಡೆಯುತ್ತಿರುವುದು ಇದೇ ಮೊದಲು. ಅಸಲಿಗೆ ಈ ಕೆಟ್ಟ ವೈರಸ್‍ನ ಬೇರು ಆಳವಾಗಿ ಬೇರೂರಿದ್ದೆ ಕರ್ನಾಟಕದಲ್ಲಿ ಮತ್ತು ಈ ಕೆಟ್ಟ ಸಂಪ್ರದಾಯದ ಪಿತಾಮಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಬಿಎಸ್ವೈ; ಆಪರೇಷನ್ ಕಮಲದ ಪಿತಾಮಹ
ಅದು 2008ರ ಸಮಯ. ಚುನಾವಣೆಯಲ್ಲಿ 110 ಸ್ಥಾನಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೈಯಲ್ಲಿ ಸರ್ಕಾರ ರಚಿಸಲು ಬೇಕಾದಷ್ಟು ಮ್ಯಾಜಿಕ್ ನಂಬರ್ ಇರಲಿಲ್ಲ. ಇದೇ ಸಂದರ್ಭದಲ್ಲಿ ಬಿಜೆಪಿ ಅನ್ಯ ಪಕ್ಷದ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುವ ತಂತ್ರಕ್ಕೆ ಮೊದಲ ಬಾರಿಗೆ ಮೊರೆ ಹೋದದ್ದು.
ಪರಿಣಾಮ ಆ ದಿನಗಳ ಮಟ್ಟಿಗೆ ರಾಜ್ಯ ರಾಜಕೀಯದಲ್ಲಿ ಆರ್ಥಿಕವಾಗಿ ಬಲಿಷ್ಠರೆನಿಸಿಕೊಂಡಿದ್ದ ರೆಡ್ಡಿ ಬ್ರದರ್ಸ್ ಅಖಾಡಕ್ಕೆ ಪ್ರವೇಶಿಸಿದ್ದರು. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡರು. ಪರಿಣಾಮ ಜೆಡಿಎಸ್‍ನಿಂದ ಬಾಲಚಂದ್ರ ಜಾರಕಿಹೊಳಿ, ಎಂ.ಸಿ.ಅಶ್ವತ್ಥ್, ಉಮೇಶ್ ಕತ್ತಿ, ಕರಡಿ ಸಂಗಣ್ಣ, ಶಿವನಗೌಡ ನಾಯ್ಕ್ ಹಾಗೂ ಕಾಂಗ್ರೆಸ್‍ನಿಂದ ವಿ.ಸೋಮಣ್ಣ, ಜಗ್ಗೇಶ್, ಆನಂದ ಆಸ್ನೋಟಿಕರ್ ಮತ್ತು ಜೆ.ನರಸಿಂಹ ಸ್ವಾಮಿಯನ್ನು ಬಿಜೆಪಿ ಕಡೆಗೆ ಸೆಳೆಯಲಾಯಿತು.
2008ರಲ್ಲಿ ರಾಜ್ಯವನ್ನು ಕಾಡಿದ್ದ ಈ ಆಪರೇಷನ್ ಕಮಲ ಮತ್ತೆ 2019ರಲ್ಲಿ ರಾಜ್ಯಕ್ಕೆ ವಕ್ಕರಿಸಿತ್ತು. ಆಪರೇಷನ್ ಕಮಲದ ಸಹಾಯದಿಂದ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದದ್ದು ಮತ್ತು ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದು ಇಂದು ಇತಿಹಾಸ.
2014ರಿಂದೀಚೆಗೆ ಸಾಲು ಸಾಲು ಆಪರೇಷನ್ ಕಮಲ
ರಾಜ್ಯದಲ್ಲಿ ಆಪರೇಷನ್ 2008ರಲ್ಲಿ ಯಶಸ್ವಿಯಾಗಿದ್ದರೂ ಸಹ ಆನಂತರ ಬಿಜೆಪಿ ಈ ಅಸ್ತ್ರವನ್ನು ಅಧಿಕವಾಗಿ ಬೇರೆ ಯಾವ ರಾಜ್ಯದ ಮೇಲೂ ಯಶಸ್ವಿಯಾಗಿ ಪ್ರಯೋಗ ಮಾಡಲು ಮುಂದಾಗಿರಲಿಲ್ಲ. ಆದರೆ, ಈ ಆಪರೇಷನ್ ಕಮಲದ ಹಾವಳಿ ಹೆಚ್ಚಾದದ್ದೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ.
2016ರಲ್ಲಿ ಉತ್ತರಾಖಂಡ, ಅರುಣಾಚಲ ಪ್ರದೇಶ, 2017ರಲ್ಲಿ ಮಣಿಪುರ-ತ್ರಿಪುರ ಮತ್ತು ಗೋವಾದಲ್ಲಿ ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ಈ ಎಲ್ಲಾ ರಾಜ್ಯದಲ್ಲೂ ಅಧಿಕಾರ ಹಿಡಿದದ್ದು ಸಹ ಹಿಂಬಾಗಿಲಿನ ಮೂಲಕವೇ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಶ್ವಿಮ ಬಂಗಾಳದಲ್ಲೂ ಆಪರೇಷನ್ ನಡೆಸಿದ್ದ ಬಿಜೆಪಿ ಟಿಎಂಸಿ ಸಂಸದರನ್ನು ಸೆಳೆದು ತಮ್ಮ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿತ್ತು. ಇನ್ನೂ 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ನಂತರವೂ ಅಧಿಕಾರದ ಹಪಾಹಪಿಯಿಂದ ಎನ್‍ಸಿಪಿ ಪಕ್ಷದ ಅಜಿತ್ ಪವಾರ್ ಜೊತೆಗೂಡಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ದೇವೇಂದ್ರ ಫಡ್ನವೀಸ್ ಮತ್ತೊಂದು ಅವಧಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು ಹಾಗೂ ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲದ ಪ್ರಯತ್ನ ವಿಫಲವಾಗಿ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದನ್ನು ಭಾಗಶಃ ಯಾರೂ ಮರೆತಿರಲಿಕ್ಕಿಲ್ಲ.
ರಾಜ್ಯಸಭೆ ಚುನಾವಣೆಯಲ್ಲೂ ನಡೆದಿತ್ತು ಆಪರೇಷನ್ ಕಮಲ:
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮಾತ್ರವಲ್ಲ, ರಾಜ್ಯಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಆಪರೇಷನ್ ಕಮಲ ನಡೆಸಿದ ಸಾಕಷ್ಟು ಉದಾಹರಣೆ ಇದೆ.
2017ರಲ್ಲಿ ಗುಜರಾತ್‍ನಲ್ಲಿ ಖಾಲಿಯಾಗಿದ್ದ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಎಐಸಿಸಿ ಪ್ರಭಾವಿ ಮುಖಂಡ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಸೆಯಾಗಿದ್ದರೆ, ಶತಾಯಗತಾಯ ಅವರನ್ನು ಸೋಲಿಸಲೇಬೇಕು ಎಂದು ಬಿಜೆಪಿ ಪಣತೊಟ್ಟಿತ್ತು. ಪರಿಣಾಮ ಕಾಂಗ್ರೆಸ್ ಶಾಸಕರ ಖರೀದಿಗೆ ಮುಂದಾಗಿತ್ತು.
ಹಾಗಾಗಿ ಗುಜರಾತ್‍ನ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷದ ಖರೀದಿಯ ಜಾಲಕ್ಕೆ ಸಿಲುಕದಿರಲಿ ಎಂದು ಎಲ್ಲರನ್ನೂ ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಕರ್ನಾಟಕಕ್ಕೆ ಕರೆತಂದಿದ್ದರು. ಅಲ್ಲದೆ, ಬೆಂಗಳೂರು ಹೊರವಲಯದ ರೆಸಾರ್ಟ್‍ನಲ್ಲಿ ಬಿಗಿ ಭದ್ರತೆಯ ನಡುವೆ ಉಳಿಸಿಕೊಂಡಿದ್ದರು. ಡಿಕೆಶಿ ಸಹಾಯದಿಂದ ಕೊನೆಗೂ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಕಾಂಗ್ರೆಸ್ ಸಫಲವಾಗಿತ್ತು.
ಈಗ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಈಗಾಗಲೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಕಾಂಗ್ರೆಸ್ಸಿಗೆ ರಾಜೀನಾಮೆಯನ್ನೂ ನೀಡಿಯಾಗಿದೆ. ಮಧ್ಯಪ್ರದೇಶದಿಂದಲೇ ಅವರನ್ನು ರಾಜ್ಯಸಭೆಗೆ ಕಳಿಸಲಾಗುವುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಮಂಗಳವಾರ ಸಂಜೆಯ ಒಳಗಾಗಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಕೆಟ್ಟ ಸಂಪ್ರದಾಯಕ್ಕೆ ಸಾಥ್ ಕೊಟ್ಟಿತಾ ಸುಪ್ರೀಂ?
2019ರಲ್ಲಿ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದ ಸುಮಾರು 17 ಜನ ಮೈತ್ರಿ ಪಕ್ಷದ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದ್ದರು. ಈ ಮೂಲಕ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಅಧಿಕಾರಕ್ಕೇರಲು ಕಾರಣರಾಗಿದ್ದರು. ಆದರೆ, ಹೀಗೆ ರಾಜೀನಾಮೆ ನೀಡಿದ್ದ ಎಲ್ಲಾ ಶಾಸಕರನ್ನೂ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಪಕ್ಷಾಂತರ ಕಾಯ್ದೆ ಶೆಡ್ಯೂಲ್ 10ರ ಪ್ರಕಾರ ಅನರ್ಹಗೊಳಿಸಿ ಆದೇಶಿಸಿದ್ದರು. ಈ ಅವಧಿ ಮುಗಿಯುವವರೆಗೂ ಸ್ಪರ್ಧಿಸುವಂತಿಲ್ಲ ಎಂಬುದು ಸ್ಪೀಕರ್ ತೀರ್ಪಿನ ಭಾಗವಾಗಿತ್ತು.
ಆದರೆ, ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸ್ಪೀಕರ್ ಅವರ ಅಧಿಕಾರವನ್ನು ಎತ್ತಿಹಿಡಿದಿತ್ತಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಶಾಸಕರಿಗೂ ಅವಕಾಶ ಕಲ್ಪಿಸಿಕೊಟ್ಟಿತ್ತು. ಶಾಸಕರು ಅನರ್ಹರು ಹೌದು. ಆದರೆ, ಚುನಾವಣೆಯಲ್ಲೂ ಸ್ಪರ್ಧಿಸಬಹುದು ಎಂಬ ಕೋರ್ಟ್ ತೀರ್ಪು ಅನೇಕರಲ್ಲಿ ಗೊಂದಲ ಹುಟ್ಟಿಸಿತ್ತು.
ನಂತರ ನಡೆದ ಉಪ ಚುನಾವಣೆಯಲ್ಲಿ 12 ಜನ ಅನರ್ಹ ಶಾಸಕರು ಗೆದ್ದು ಬಂದು ಮಂತ್ರಿಯಾದರು. ಈ ಮೂಲಕ ಪಕ್ಷಾಂತರ ಮಾಡಿಯೂ ಅದನ್ನೂ ದಕ್ಕಿಸಿಕೊಳ್ಳಬಹುದು ಎಂಬುದಕ್ಕೆ ಇಡೀ ರಾಷ್ಟ್ರಕ್ಕೆ ಕರ್ನಾಟಕದ ಶಾಸಕರು ಮಾದರಿಯಾದರು. ಈ ಮಾದರಿ ಇದೀಗ ಎಲ್ಲೆಡೆ ಪ್ರಯೋಗಕ್ಕೊಳಪಡುತ್ತಿದೆಯಷ್ಟೆ.


