ನಮ್ಮ ಬಿಳೇಮನಿ ಡೋನಾಲ್ಡಪ್ಪ ಟ್ರಂಪಣ್ಣನವರ್ ಅವರು ಮನ್ನೆ ಇಲ್ಲಿಗೆ ಬಂದು ಹೋಗ್ಯಾರ. ಅವರ ಜೊತಿಗೆ ’ಕಂಬದ ಮ್ಯಾಲಿನಾ ಗೊಂಬಿಯೇ ನಂಬಲೇನ ನಿನ್ನ ಮಾತನ್ನ’ ಅನಕೊತ ಅವರ ಮ್ಯಾಲಿನಾನೂ ಬಂದಿದ್ರು. ಅವರ ಅಳಿಯ ಮಗಳೂ ಬಂದಿದ್ರು, ಇಂಡಿಯಾದಾಗಿನ ಐದು ಟ್ರಂಪು ಹೊಟೆಲು ಹೆಂಗ ನಡದಾವು, ಅದರ ಮುನೀಮರು ಸಮಾ ಲೆಕ್ಕಾ ಇಟ್ಟಾರೋ ಇಲ್ಲೋ ಅಂತ ನೋಡಲಿಕ್ಕೆ, ಅವರು ಕೊಡೋ ಡಾಲರು ಕಾಸಿಗೆ ಇಲ್ಲಿ ಕೆಲಸ ಮಾಡೋ ಮೆದು ಸರಕು (ಸಾಫ್ಟವೇರ್) ಕೂಲಿಗಳು ಸಮಾ ದುಡಿಲಿಕ್ಕೆ ಹತ್ಯಾವೋ ಇಲ್ಲೋ ಅಂತ, ಒಮ್ಮೆ ತೆಕ್ಕಿಗೆ ಹಾಕಿಕೊಂಡ ಅಣ್ತಮ್ಮಾ ಅಂತ ಕರದ ಇಲ್ಲಿನ ರಾಜಕಾರಣಿಗಳು ತಮ್ಮ ಆಣತಿಗೆ ತಕ್ಕಂಗ ಕೆಲಸ ಮಾಡಲಿಕ್ಕೆ ಹತ್ಯಾರೋ ಇಲ್ಲೋ ಅಂತೆಲ್ಲಾ ನೋಡಲಿಕ್ಕೆ, ಅಲ್ಲಿಂದಾ ಅಧಿಕಾರಿಗಳೂ ಬಂದಿದ್ದರು.
ಆ ಮನಷ್ಯ, (ಅವರ ಬಗ್ಗೆ ಈ ಶಬ್ದ ಉಪಯೋಗಿಸೋದು ಕೆಲವರಿಗೆ ಸರಿ ಕಾಣಂಗಿಲ್ಲ, ಇರ್ಲಿ) ಇಲ್ಲಿ ಬಂದು, ನಮ್ಮ ಪ್ರಧಾನಿನ ಹಗ್ಗು ಮಾಡಿ, ಇದು ಬರೀ ನಮ್ಮಿಬ್ಬರ ಹಗ್ಗಲ್ಲಾ, ಇದು ವಿಶ್ವದ ಅತಿದೊಡ್ಡ ಹಾಗೂ ವಿಶ್ವದ ಹಳೆಯ ಪ್ರಜಾಪ್ರಭುತ್ವಗಳ ಸ್ನೇಹದ ಪ್ರತೀಕ. ಅಮೆರಿಕಾಗೆ ಪ್ರಿಯವಾದ ದೇಶ ಭಾರತ. ಅಮೆರಿಕಾ ಯಾವಾಗಲೂ ಭಾರತಕ್ಕೆ ನಂಬಿಕಸ್ತ ಸ್ನೇಹಿತನಾಗಿ, ನಿಷ್ಠಾವಂತನಾಗಿ ಇರುತ್ತದೆ.. ಅಂತೆಲ್ಲಾ ಭಾಷಣ ಮಾಡಿದರು.
ಬರೇ ಮೂವತ್ತಾರು ತಾಸು ಇಲ್ಲಿ ಇದ್ದು, ಸುಮಾರು ನೂರು ಕೋಟಿ ರೂಪಾಯಿ ಬಡವರ ರೊಕ್ಕ ಖರ್ಚು ಮಾಡಿ ವಾಪಸು ಹೋದರು. ಹೋದ ಕೆಲವೇ ದಿನಕ್ಕ ಅಫಘಾನಿಸ್ತಾನದ ತಾಲಿಬಾನಿನ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡರು.
ಆ ಅಣುಕು ಯುದ್ಧದ ಹಿನ್ನೆಲೆ ಏನು?
ಕಳೆದ 20 ವರ್ಷದ ತಾಲಿಬಾನು ಜೊತೆ ಯುದ್ಧ ಸುಮಾರು 2,500 ಅಮೆರಿಕನ್ ಸೈನಿಕರನ್ನ ಬಲಿ ತೊಗೊಂಡದ. ಅಲ್ ಕೈದಾದವರು ಅಮೆರಿಕಾದ ಮ್ಯಾಲೆ 2001 ರಾಗ ಭಯೋತ್ಪಾದಕ ದಾಳಿ ಮಾಡಿದಾಗ ಮೂರು ಸಾವಿರಕ್ಕ ನಾಕು ಜನ ಕಮ್ಮಿ (2,996) ಅಮೆರಿಕಾ ಹಾಗೂ ಇತರ ದೇಶದ ಜನ ಬಲಿ ಆಗಿದ್ದರು. ಅವರಿಗೆ ತಾಲಿಬಾನಿನವರು ಬೆಂಬಲ ಕೊಟ್ಟಾರ ಅಂತ ಹೇಳಿ ಅಮೇರಿಕಾದವರು ಇವರ ಮ್ಯಾಲೆ ಮುಗಿಬಿದ್ದರು. ಅಮೆರಿಕದ ನಾಲ್ಕು ವಿಮಾನಗಳನ್ನು ಹೈಜಾಕು ಮಾಡಿದ 19 ಜನರೊಳಗ 15 ಜನ ಸೌದಿ ಅರೇಬಿಯಾದವರು ಇದ್ದರು. ಆದರ ಅಮೆರಿಕದವರ ತೈಲ ರಾಜಕಾರಣದಿಂದ ಸೌದಿ ಮ್ಯಾಲೆ ಯಾವ ವಿಚಾರಣೆನೂ ಆಗಲಿಲ್ಲ. ಅಫಘಾನಿಸ್ತಾನದಾಗ ಭಾರತವೂ ಸೇರಿದಂತೆ ಸುಮಾರು 15 ದೇಶಗಳ ಶಾಂತಿಸ್ಥಾಪನಾ ಪಡೆ ಹೋಗಿ ಮುಕ್ಕಾಂ ಹೂಡಿತು. ಅಲ್ಲಿ ಚುನಾವಣೆ ಆಗಿ ಹಾಮಿದ ಕರಝಾಯಿ ಅಧಿಕಾರಕ್ಕೆ ಬಂದರು. ಅವರು ತಮ್ಮ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕೆ ಆಗಲಿಲ್ಲ ಅಂತ ಹೇಳಿ ಅವರನ್ನು ಸುಪರ್ ಪಾವರುಗಳು ಕೈಹಿಡೀಲಿಲ್ಲ. ಯುದ್ಧ ನಡೀತಲೇ ಇತ್ತು. ಅದರಾಗ ಅನೇಕ ನಾಗರಿಕರು ಸತ್ತು ಹೋದರು. ಇದು ಯಾರ ಅಂತರಾತ್ಮವನ್ನೂ ಕಲುಕಲಿಲ್ಲ.
ಕಡಿಕೆ ಅಮೆರಿಕಾದಾಗ ನಮ್ಮ ಹುಡುಗರು – ಹುಡುಗಿಯರು ಅಫಘಾನಿಸ್ತಾನದಾಗ ಸಾಯಲಿಕ್ಕೆ ಹತ್ಯಾರ. ಇದು ತಪ್ಪು ಅವರನ್ನು ವಾಪಸ ಕರಿಸಿಕೋರಿ ಅಂತ ಆಂದೋಲನ ಸುರು ಆತು. ಟ್ರಂಪಣ್ಣನವರು ಅದಕ್ಕೊಂದು ಅಧ್ಯಯನ ಸಮಿತಿ ರಚಿಸಿದರು. ಅವರ ಶಿಫಾರಸಿನ ಪ್ರಕಾರ ಈ ಒಪ್ಪಂದಕ್ಕ ಸಹಿ ಮಾಡಲಾಯಿತು.
ಆ ಶಾಂತಿ ಒಪ್ಪಂದದೊಳಗ ಏನದ?
ಈ ಒಪ್ಪಂದ ಜಾರಿಯಾದ ಒಂದು ವರ್ಷದೊಳಗ ಅಫಘಾನಿಸ್ತಾನದಾಗ ಭಯೋತ್ಪಾದನಾ ವಿರೋಧಿ ಪಡೆಯ ಎಲ್ಲಾ ಅಮೇರಿಕಾ ಸೈನಿಕರು ವಾಪಸು ಹೋಗಬೇಕು.
ಆ ಮ್ಯಾಲಿನ 14 ತಿಂಗಳೊಳಗ ಎಲ್ಲಾ ಸೈನಿಕರು ವಾಪಸು ಆಗಬೇಕು. ಅಫಘಾನಿಸ್ತಾನ ಹಾಗೂ ಸುತ್ತಲಿನ ದೇಶದೊಳಗ ಇರೋ ಅಮೆರಿಕಾ ಸೈನಿಕ ಶಿಬಿರಗಳನ್ನು ಮುಚ್ಚಬೇಕು.
ಒಂದು ವರ್ಷದೊಳಗ ಐದು ಸಾವಿರ ಅಮೆರಿಕಾ, ಅಫಘಾನಿಸ್ತಾನ ಹಾಗೂ ಇತರ ದೇಶದ ಜೈಲಿನೊಳಗ ಇರೋ ತಾಲಿಬಾನಿ ಸೈನಿಕರು, ಶಂಕಿತ ಭಯೋತ್ಪಾದಕರ ಬಿಡುಗಡೆ ಆಗಬೇಕು. ಮುಂದಿನ ವರ್ಷದೊಳಗ ಎಲ್ಲಾ ತಾಲಿಬಾನಿ ಕೈದಿಗಳ ಬಿಡುಗಡೆ ಆಗಬೇಕು ಇತ್ಯಾದಿ, ಇತ್ಯಾದಿ.
ಇವುಗಳ ಬದಲಾಗಿ ಆ ದೇಶ ಅಮೆರಿಕಾಗೆ ಏನು ಕೊಡತದ? ʻಅಫಘಾನಿಸ್ತಾನದ ನೆಲದಲ್ಲಿ ಅಮೆರಿಕಾದ ಸುರಕ್ಷೆಗೆ ಭಂಗ ಬರೋ ಯಾವುದೇ ಕೆಲಸಕ್ಕೆ ಆಸ್ಪದ ಕೊಡೋದಿಲ್ಲʼ ಅನ್ನೋ ಭರವಸೆ. ಈ ಭರವಸೆಯನ್ನು ಕಾನೂನುಪ್ರಕಾರ ಜಾರಿ ಮಾಡೋರು ಯಾರು? ಯಾರೂ ಇಲ್ಲ. ಯಾಕಂದರ ಅಫಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಇರೋ ತಾಲಿಬಾನಿನ ಸರಕಾರವನ್ನು ಅಮೆರಿಕಾ ಮಾನ್ಯ ಮಾಡೋದಿಲ್ಲ. ʻʻತಾಲಿಬಾನು ಸರಕಾರವನ್ನು ಅಮೆರಿಕಾ ಮಾನ್ಯ ಮಾಡುವುದಿಲ್ಲವಾದ್ದರಿಂದ ಅದನ್ನು ತಾಲಿಬಾನ ಸಂಘಟನೆ ಎಂದು ಪರಿಗಣಿಸುತ್ತದೆ. ಇದರ ಜೊತೆ ಅಮೆರಿಕಾ ಒಪ್ಪಂದ ಮಾಡಿಕೊಳ್ಳುತ್ತಿದೆʼʼ ಅಂತಲೇ ಆ ಒಪ್ಪಂದ ಸುರು ಆಗತದ.
ʻಜಾರಿ ಮಾಡಲಾಗದಂತ ಒಪ್ಪಂದವನ್ನು ಮಾಡಿಕೊಳ್ಳಬಾರದುʼ ಎನ್ನುವುದು ಕರಾರು ಕಾನೂನಿನ ಮೂಲ ಮಂತ್ರ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ರಾಷ್ಟ್ರ ಅಮೆರಿಕಾಕ್ಕೆ ಇದು ಗೊತ್ತಿರಲಿಕ್ಕಿಲ್ಲೇನು?
ಇದು ಯಾಕೆ ಹಾಸ್ಯಾಸ್ಪದ?
ಇದು ಹಾಸ್ಯಾಸ್ಪದ ಒಪ್ಪಂದ. ಇದು ಅಮೆರಿಕಾಕ್ಕೆ ಆದ ಅತಿದೊಡ್ಡ ಅವಮಾನ ಅಂತ ಅಮೆರಿಕಾದ ಪತ್ರಿಕೆಗಳು ಟೀಕೆ ಮಾಡ್ಯಾವು. ಟೈಮ್ ಮ್ಯಾಗಜೀನ್ ಅಂತೂ ಯುದ್ಧ ಸೋತು ಹೋದ ಟ್ರಂಪ್ ಅವರು ಮುಖ ಮುಚ್ಚಿಕೊಳ್ಳಲಾಗದೇ ಮಾಡಿದ ಒಪ್ಪಂದ. ಇದು ಅಮೆರಿಕಾದ ಸಾರ್ವಭೌಮತೆಗೆ ಮಾಡಿದ ಹಾನಿ ಅಂತ ಅಗ್ರಲೇಖನ ಬರೀತು. ವಿಯೆಟ್ನಾಂನ ಸೋಲಿನ ನಂತರ ಇದು ಅಮೆರಿಕಾದ ಅತಿದೊಡ್ಡ ಸೋಲು. ಇದು ಒಪ್ಪಂದ ಅಲ್ಲ. ಪಲಾಯನ. ದೇಶಕ್ಕಾಗಿ ಜೀವಕೊಟ್ಟ ಸೈನಿಕರ ಅವಮಾನ ಅಂತೆಲ್ಲಾ ಟೀಕಿಸಿತು.
ಇದು ಭಾರತಕ್ಕೆ ಯಾಕೆ ಅಪಾಯಕಾರಿ?
ಈಗ ಅಜಿತ ದೋವಾಲ ಅಂತ ಒಬ್ಬರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂತ ಇದ್ದಾರ. ಅವರು ಅಟಲ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಗೃಹ ಇಲಾಖೆಯ ದೊಡ್ಡ ಹುದ್ದೆಯೊಳಗ ಇದ್ದರು. ಭಾರತೀಯ ವಿಮಾನವನ್ನು ಹರಕತ್ ಉಲ್ ಮುಜಾಹಿದೀನ್ ಭಯೋತ್ಪಾದಕರು 1999 ರಲ್ಲಿ ಅಪಹರಿಸಿರು. ಅದನ್ನ ತೊಗೊಂಡು ಹೋಗಿ ಅಫಘಾನಿಸ್ತಾನದಾಗ ಇಳಿಸಿದರು. ಅಲ್ಲೆ ಅವರಿಗೆ ಸಿರಿಯಾ ದೇಶದ ಭಯೋತ್ಪಾದಕರ ಬೆಂಬಲ ಇತ್ತು. ಅಪಹರಣಕಾರರು ಭಯೋತ್ಪಾದನೆ ಆರೋಪದ ಮ್ಯಾಲೆ ಬಂಧನದೊಳಗಿದ್ದ ಮಜೂರ ಅಸದ, ಸಯೀದ ಶೇಖ ಹಾಗೂ ಅಹಮದ ಜರಗರ ಅವರನ್ನ ಬಿಡುಗಡೆ ಮಾಡೋ ಶರತ್ತು ಹಾಕಿದರು. ನಮ್ಮ ಗೂಢಚಾರಿ ಅಜಿತ ದೋವಾಲ ಅವರು ಈ ಮೂರು ಜನರನ್ನ ನಾಜೂಕಾಗಿ ಕರಕೊಂಡು ಹೋಗಿ ಕಂದಹಾರದಾಗ ಬಿಟ್ಟು ಬಂದರು. ಆ ಮಜೂರ ಅಸದ ಅವರು ಈಗ ಪಾಕಿಸ್ತಾನದಾಗ ರಾಜಕೀಯ ಪಕ್ಷ ಹುಟ್ಟು ಹಾಕ್ಯಾರ. ಅವರನ್ನು ಹಳೆ ಅಪರಾಧಗಳ ಆಧಾರದ ಮ್ಯಾಲೆ ನಮಗ ಬಿಟ್ಟು ಕೊಡ್ರಿ ಅಂತ ಭಾರತದವರೇನೂ ಪಾಕಿಸ್ತಾನವನ್ನು ಕೇಳಿಲ್ಲ. ಕಳೆದ ಆರು ವರ್ಷದಾಗೂ ಕೇಳಿಲ್ಲ.
ನಾಳೆ ಟ್ರಂಪಣ್ಣನವರ ಹರಕತ್ತಿನಿಂದ ಬಿಡುಗಡೆ ಆಗಲಿರುವ ತಾಲಿಬಾನಿ ಕೈದಿಗಳ ಪೈಕಿ ಅಫಘಾನಿಸ್ತಾನ, ಸಿರಿಯಾದವರೂ ಸೇರಿದಂತೆ ಅನೇಕ ದೇಶದ ಭಯೋತ್ಪಾದಕರು ಇದ್ದಾರ. ಅವರನ್ನ ಹೊರಗ ಬಿಟ್ಟರ ಅವರು ಭಾರತವೂ ಸೇರಿದಂತೆ ಅನೇಕ ದೇಶಗಳಿಗೆ ಅಪಾಯ ಉಂಟುಮಾಡೋ ಸಾಧ್ಯತೆ ಅದ. ʻಅವರನ್ನು ಬಿಡಬ್ಯಾಡರಿ, ಅವರು ನಮಗೆ ಅಪಾಯಕಾರಿʼ ಅಂತ ಇವತ್ತಿನವರೆಗೂ ಟ್ರಂಪಿನವರ ಅತ್ಯಂತ ಜಿಗರಿ ದೋಸ್ತರಾದ ನಮ್ಮ ಪ್ರಧಾನಿಯಾಗಲಿ, ಅದೇ ಕೆಲಸ ಮಾಡಬೇಕಾಗಿರುವ ವಿದೇಶ ಮಂತ್ರಿ ಜಯಶಂಕರ ಅವರಾಗಲಿ, ರಕ್ಷಣಾ ಮಂತ್ರಿ, ಗೃಹ ಮಂತ್ರಿ ಅಥವಾ ಇನ್ನು ಯಾವುದೇ ಅಧಿಕಾರಿ ಒಂದು ಮಾತು ಹೇಳಿಲ್ಲ. ಅವರು ಖಾಸಗಿಯಾಗಿ ಹೇಳಿದ್ದರ ನಮಗ ಗೊತ್ತಿಲ್ಲ.
ಅದು ಬ್ಯಾರೆ ವಿಷಯ. ಆದರ ಇದರಾಗ ನಾವು ಕಲಿಯೋವಂಥಾ ಒಂದು ಪಾಠ ಅದ. ಭಾರತ ಉಪಖಂಡದ ಆಸುಪಾಸಿನ ದೇಶಗಳೆಲ್ಲರಿಗೂ ಯುದ್ಧ ಸಾಮಗ್ರಿ ಮಾರಾಟ ಮಾಡಿ ಮಜಾ ನೋಡುವ, ಭಾರತಕ್ಕೂ, ಅದರ ನೆರೆಹೊರೆಯ ಚೀನಾ- ಪಾಕಿಸ್ತಾನಕ್ಕೂ ಮದ್ದುಗುಂಡು- ವಿಮಾನ- ಹೆಲಿಕಾಪ್ಟರ್ ಮಾಡಿ, ಯುದ್ಧ ತಯಾರಿ ಮಾಡಿಸಿ, ಜಗಳ ಮಾಡಲಿಕ್ಕೆ ಅನುವು ಮಾಡಿಕೊಡೋ ಅಮೆರಿಕಾ ತಾನು ಮಾತ್ರ ತನ್ನ ಘನಘೋರ ವೈರಿ ಜೊತೆ ಶಾಂತಿಒಪ್ಪಂದ ಮಾಡಿಕೋತದ. ಇದನ್ನು, ನಮ್ಮ ನಾಯಕರು, ನಮ್ಮ ಅಧಿಕಾರಿಗಳು, ಚಿಂತಕರು, ಮಾಧ್ಯಮದವರು, ಎಲ್ಲಾದಕ್ಕೂ ಕಣ್ಣಮುಚಿಗಂಡು ಚಪ್ಪಾಳೆ ಹೊಡೆಯೋರು, ಹಾಗೂ ಈ ದೇಶದ ನಾಗರಿಕರು ತಿಳಕೋಬೇಕು.


