Homeಮುಖಪುಟಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ

- Advertisement -
- Advertisement -

ಅಪ್ರತಿಮ ನೀರಾವರಿ ತಜ್ಞ ಹಾಗೂ ಅತಿ ದೂರದೃಷ್ಟಿಯ ರಾಜಕಾರಣಿ ರಮೇಶ ಜಾರಕಿಹೊಳಿ ಅವರು ಮೊನ್ನೆ ಮಹದಾಯಿ ನದಿ ಹುಟ್ಟುವ ಕಣಕುಂಬಿ ಜಂಗಲ್ಲಿಗೆ ಹೋಗಿದ್ದರು. ಅಲ್ಲಿ ಹೋದಮ್ಯಾಲೆ ರೈತರು ಆಯೋಜಿಸಿದ ಸಭೆಗೆ ಹೋಗಲು ಒಲ್ಲೆ ಅಂದರು. ಸಭೆ ಕಟ್ಟಿ ಹತ್ತಿದವರು ಇಳದರು. ನಾನು ಬರಬಾರದಾಗಿತ್ತು. ಬಂದಿದ್ದು ತಪ್ಪು. ಈ ವಿವಾದ ಸುಪ್ರೀಂ ಕೋರ್ಟಿನ್ಯಾಗ ಅದ. ನಾನು ಇಲ್ಲಿ ಇವತ್ತು ಬಂದದ್ದು ಗೋವಾದವರಿಗೆ ಗೊತ್ತಾದರ ಅವರು ತಕರಾರು ಮಾಡತಾರ. ಆಗ ರಾಜ್ಯದ ಹಿತಾಸಕ್ತಿಗೆ ಕುಂದು ಆಗಬಹುದು. ಇದನ್ನ ಟೀವಿಯೊಳಗ ತೋರಿಸಬ್ಯಾಡ್ರಿ. ದಯವಿಟ್ಟು ತೋರಿಸಬ್ಯಾಡ್ರಿ, ಅಂತ ಅವಲತ್ತು ಕೊಂಡರು.

ಇಷ್ಟು ಶಾಣ್ಯಾ ಮನುಷ್ಯ ಅಷ್ಟು ದೊಡ್ಡ ತಪ್ಪು ಹೆಂಗ ಮಾಡಿದಾ? ಅಷ್ಟಾಗಿಯೂ ಆ ವಿವಾದ ಏನು?

ಭಾರತದೊಳಗ ಎರಡು ರೀತಿ ನದಿ ಅದಾವು. ಕೆಲವು ಬಲಗಡೆ ಹರಿದು ಬಂಗಾಳ ಕೊಲ್ಲಿಯೊಳಗ ಕೂಡತಾವು. ಇನ್ನು ಕೆಲವು ಎಡಗಡೆ ಹರಕೊಂಡು ಹೋಗಿ ಅರಬ್ಬೀ ಸಮುದ್ರದೊಳಗ ಸೇರತಾವು ಕರಾವಳಿ ಮಂದಿ ಅವಕ್ಕ ಪಶ್ಚಿಮವಾಹಿನಿ ಅಂತಾರ. ಮಜಾ ಅಂದರ ಆದರ ತಮ್ಮೂರಾಗ ಹರಿಯುವ ನದಿಗಳಿಗೆ ಅವರು ಪೂರ್ವವಾಹಿನಿ ಅನ್ನಂಗಿಲ್ಲ.

ಮಹದಾಯಿ ಅಥವಾ ಮ್ಹಾದೇಯಿ ಅಥವಾ ಮಾಂಡೋವಿ ಅನ್ನೋದು ಪಶ್ಚಿಮಘಟ್ಟದೊಳಗ ಹುಟ್ಟಿ ಎಡಗಡೆ ಹರದು ಮೀರಾಮಾರ ಅನ್ನೋ ಗೋವಾದ ಪ್ರದೇಶದಾಗ ಅರಬ್ಬೀ ಸಮುದ್ರಕ್ಕೆ ಸೇರೋ ಪಶ್ಚಿಮ ವಾಹಿನಿ. ಸುಮಾರು 90 ಕಿಲೋಮಿಟರ್ ಹರಿಯುವ ಇದು ದೇಶದ ಅತಿ ಸಣ್ಣ ನದಿಗಳಲ್ಲಿ ಒಂದು. ಅದರಾಗ ಹರಿಯೋ ನೀರಿನ ಪ್ರಮಾಣ ಸುಮಾರು 175 ಟಿಎಂಸಿ ಫೀಟು ನೀರು ಅಂದರ ಸುಮಾರು 4.81 ಲಕ್ಷ ಕೋಟಿ ಲೀಟರು ನೀರು ಇರಬಹುದು ಅಂತ ಕೇಂದ್ರ ನದಿ ನೀರು ಮಂಡಳಿ ಅಂದಾಜು. ಅದರಾಗ ಗೋವಾ 122 ಟಿಎಂಸಿ, ಕರ್ನಾಟಕ 34 ಹಾಗೂ ಮಹಾರಾಷ್ಟ್ರ 6.5 ಟಿಎಂಸಿ ನೀರು ಕೇಳಿದ್ದವು. ಮಹದಾಯಿ ಮಂಡಳಿ ಕರ್ನಾಟಕ 13, ಗೋವಾ 24 ಹಾಗೂ ಮಹಾರಾಷ್ಟ್ರ 1.3 ಟಿಎಂಸಿ ನೀರು ತೊಗೋಬಹುದು ಅಂತ ಹೇಳೇದ.

ಆದರ ಕರ್ನಾಟಕ ತಯಾರಿಸಿರುವ ಯೋಜನೆಗಳಿಂದ ಅರಣ್ಯ ಹಾಗೂ ಪರಿಸರ ನಾಶ ಆಗತದ, ವನ್ಯಜೀವಿಗಳಿಗೆ ನೀರು ಸಿಗೋದಿಲ್ಲ, ನದಿಪಾತ್ರದೊಳಗ ನೀರು ಕಮ್ಮಿ ಆಗತದ, ಗೋವಾದ ಜೀವ ದ್ರವ್ಯವಾದ ಮೀನುಗಾರಿಕೆ ಬಂದ್ ಆಗತದ ಅಂತೆಲ್ಲಾ ಹೇಳಿ ಗೋವಾದವರು ಸುಪ್ರೀಂಕೋರ್ಟಿಗೆ ಹೋಗ್ಯಾರ. ಅಲ್ಲಿನ ಪರಿಸರವಾದಿಗಳು, ಸಂಘಟನೆಗಳು ಸಹಿತ ಆಂದೋಲನ ನಡಿಸ್ಯಾವ.

ಕಾವೇರಿ, ಕೃಷ್ಣ ಹಾಗೂ ಗೋದಾವರಿಗೂ, ಮಹದಾಯಿಗೂ ಏನು ವ್ಯತ್ಯಾಸ ಅಂದರ ಮೊದಲಿನ ಮೂರರಾಗ ನದಿ ನೀರು ಹಂಚಿಕೆಯ ಪ್ರಮಾಣದ ಬಗ್ಗೆ ವಿವಾದ ಇದ್ದರ, ಮಹದಾಯಿಯೊಳಗ ಪರಿಸರ ಕಾಳಜಿಯಿಂದ ಈ ಯೋಜನೆ ಆಗಲೇಬಾರದು ಅನ್ನೋ ವಿವಾದ ಅದ.

ಗೋವಾದವರು ಮಾಡಿರುವ ಆರೋಪಗಳಲ್ಲಿ ಮುಖ್ಯವಾದವು ಇವು- ಮೊದಲನೇಯದು ಕಳಸಾ ಹಾಗೂ ಬಂಡೋರಿ ನಾಲಾಗಳು ಮಹದಾಯಿ ನದಿಗೆ ಸೇರೋಗಿಂತಾ ಮುಂಚೇನ ಅವುಗಳಿಂದ ನೀರನ್ನ ಹೀರಿಕೊಂಡು ನದಿಯನ್ನ ಬರಡಾಗಿಸಲಾಗತದ. ಇದು ಅವೈಜ್ಞಾನಿಕ. ಎರಡನೆಯದು ಈ ಯೋಜನೆಗಳಲ್ಲಿ ಭೂಮಿಯ ಒಳಗ ಸುರಂಗ ಕೊರದು ನೀರು ಹರಸತಾರ. ಇದರಿಂದ ಅರಣ್ಯ ನಾಶ ಆಗತದ. ಮೂರನೆಯದು ಮಹದಾಯಿ ಜಲವಿದ್ಯುತ್ ಯೋಜನೆಯೊಳಗ ಪಶ್ಚಿಮಘಟ್ಟದ ಗುಡ್ಡದ ನೆತ್ತಿಯ ಮ್ಯಾಲೆ ಅಣೆಕಟ್ಟು ಕಟ್ಟಿ ನೀರು ಸಂಗ್ರಹ ಮಾಡತಾರ. ಇದರಿಂದ ಅಣೆಕಟ್ಟಿಗೂ ಅಪಾಯ, ಸುತ್ತಲಿನ ಕಾಡು, ಜೀವಜಾಲ, ಪಕ್ಷಿಗಳಿಗೂ ಅಪಾಯ.

ಹೀಗೆಲ್ಲಾ ಮಾಡಿದರ ನದಿ ಕೆಲವು ವರ್ಷಗಳ ನಂತರ ಬತ್ತಿ ಹೋಗತಾವು. ನೀವು ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕಟ್ಟಿದ ಅಣೆಕಟ್ಟುಗಳು ಇದರಿಂದ ಖಾಲಿ ಹೊಡೀತಾವು. ಹತ್ತು ಹನ್ನೆರಡು ವರ್ಷಗಳ ಬಳಿಕ ಜನ ನೀರು ಕೇಳಿದರ ಏನು ಹೇಳತೀರಿ ಅನ್ನೋ ಪ್ರಶ್ನೆಗೆ ಯಾರ ಹತ್ತರನೂ ಉತ್ತರ ಇಲ್ಲ.

ಇವು ಯಾವುಕ್ಕೂ ಕರ್ನಾಟಕ ಸರಕಾರ ಇಲ್ಲಿಯವರೆಗೂ ಸರಿಯಾದ ಉತ್ತರ ಕೊಟ್ಟಿಲ್ಲ. ಹಿಂದೆ ಈ ಇಲಾಖೆ ಹೊಂದಿದ ಸಚಿವರೂ ಹಾಗೂ ಈಗ ಇದನ್ನು ಜಿದ್ದಿನಿಂದ ಪಡೆದುಕೊಂಡ ರಮೇಶ ಸಾಹುಕಾರ ಅವರಾಗಲೀ ಯಾರೂ ಪರಿಸರವಾದಿಗಳ ಆತಂಕಗಳಿಗೆ ಪರಿಹಾರ ಕೊಟ್ಟಿಲ್ಲ. ಪರಿಸರವಾದಿಗಳನ್ನು ಪರಿಸರವ್ಯಾಧಿಗಳು ಅಂತ ಒಬ್ಬ ರಾಜಕೀಯ ಪಂಡಿತರು ಕರದಾರ. ಅವರಿಗೆ ನೆಲದ ಕೆಳಗ ಇರುವ ಜೀವ ಜಂತುಗಳು ಕಾಣತಾವೆ, ನೆಲದ ಮೇಲೆ ಇರೋ ಜನ ಕಾಣಂಗಿಲ್ಲ ಅಂತ ಹಿರಿಯ ರಾಜಕಾರಣಿಯೊಬ್ಬರು ಹೇಳ್ಯಾರ. ಒಟ್ಟಿನ್ಯಾಗ ಇಂತಹ ಮೌಲಿಕ ಪ್ರಶ್ನೆಗಳನ್ನ ಚಾಪೆ ಕೆಳಗ ತೂರಿಸಿ ನೆಲ ಸ್ವಚ್ಛ ಮಾಡುವ ಕೆಲಸ ನಡದದ.

ಇನ್ನು ಅಡವಿಯೊಳಗ ಮಾಡುವ ಯೋಜನೆಗಳಿಗೆ ಅವಶ್ಯಕವಾಗಿ ಬೇಕಾದ ಪರಿಸರ ಇಲಾಖೆ ಅನುಮತಿಯನ್ನು ಈ ಯೋಜನೆಗೆ ತೊಗೊಂಡಿಲ್ಲ. ಇದು ಕುಡಿಯುವ ನೀರು ಯೋಜನೆ. ಇದಕ್ಕ ಅದು ಬೇಕಾಗಿಲ್ಲ ಅಂತ ಕೇಳಿದವರ ಬಾಯಿ ಮುಚ್ಚಿಸೋ ಪ್ರಯತ್ನ ನಡದದ. ಇದು ಕುಡಿಯೋ ನೀರು ಯೋಜನೆ ಆಗಿದ್ದರ ಹುಬ್ಬಳ್ಳಿ- ಧಾರವಾಡ- ಗದಗ- ನರಗುಂದದ ಜನಾ ಹೋರಾಟ ಮಾಡಬೇಕಾಗಿತ್ತಲ್ಲಾ, ಆದರ ಯೋಜನೆ ಕನಾಲು ಹಾಸಿ ಹೋಗೋ ಜಮೀನಿನ ಪಕ್ಕದ ರೈತರು ಹೋರಾಟ ಮಾಡಲಿಕ್ಕೆ ಹತ್ಯಾರ. ಅದಕ್ಕೇನು ಮಾಡೋದು ಅಂತ ಕೇಳಿದರ ಅದಕ್ಕ ಉತ್ತರ ಇಲ್ಲ. ನೀರು ಕನಾಲಿನೊಳಗ ಹರದುಹೋಗೋವಾಗ ಅದನ್ನ ರೈತರು ಪಂಪು ಸೆಟ್ಟ ಹಚ್ಚಿ ಎಳಕೊಳ್ಳೋದು ಸಹಜ. ಅದನ್ನೇನೂ ಮಾಡಲಿಕ್ಕೆ ಆಗಂಗಿಲ್ಲ ಅನ್ನೋ ಅಸಹಾಯಕ ಪ್ರತಿಕ್ರಿಯೆ ಬರತದ.

ವಿವಾದ ಬಗೆಹರಿಸೋ ಜವಾಬುದಾರಿ ಇರೋ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಲ ಕರ್ನಾಟಕಕ್ಕ 13, ಗೋವಾಕ್ಕ 24 ಹಾಗೂ ಮಹಾರಾಷ್ಟ್ರಕ್ಕ 1.3 ಟಿಎಂಸಿ ನೀರು ಬಳಸಬಹುದು ಅಂತ ಹೇಳೇದ. ಹಂಗಂತ ಇದು ಯೋಜನೆಗಳಿಗೆ ಅನುಮತಿ ಕೊಟ್ಟಂಗಲ್ಲ. ಎಲ್ಲಾ ಅನುಮತಿ ಸಿಕ್ಕ ಮ್ಯಾಲೆ ನೀವು ಇದರಗಿಂತ ಹೆಚ್ಚು ನೀರು ಖರ್ಚು ಮಾಡಬಾರದು ಅಂತ ಹೇಳಿದಂಗ ಅಷ್ಟ. ಅಡವಿಯೊಳಗ ಯಾವುದೇ ಗೈರು- ಅರಣ್ಯ ಯೋಜನೆ ಮಾಡಿದರೂ ಸಹ ಅದಕ್ಕ ಮೂರು ಅನುಮತಿ ಬೇಕಾಗತಾವು- ಅರಣ್ಯ, ವನ್ಯಜೀವಿ ಹಾಗೂ ಪರಿಸರ. ಜಲ ವಿದ್ಯುತ್ ಯೋಜನೆ ಸಹಿತ ಈ ಮೂರು ಅನುಮತಿ ಇರಲಾರದೇ ಆರಂಭ ಮಾಡಲಿಕ್ಕೆ ಬರಂಗಿಲ್ಲ. ನಮ್ಮ ತಥಾಕಥಿತ ʻಕುಡಿಯುವ ನೀರಿನʼ ಯೋಜನೆಗೆ ಸಹಿತ ಅರಣ್ಯ ಹಾಗೂ ಪರಿಸರ ಅನುಮತಿ ಸಿಗಬೇಕು. ಮೊನ್ನೆಯಷ್ಟೇ ಕೇಂದ್ರ ವನ್ಯಜೀವಿ ಮಂಡಳಿ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವನ್ಯಜೀವಿ ಅನುಮತಿ ನಿರಾಕರಿಸೇದ. ಇದು ನಮಗೆ ನೆನಪಿರಲಿ.

ಕೇಂದ್ರ ಸರಕಾರದ ಪ್ರಕಾರ ನಾಲ್ಕನೇ ದರ್ಜೆ ಅರಣ್ಯ ಹೊಂದಿರುವ ಭೂತರಾಮನಹಟ್ಟಿ ಪ್ರದೇಶದೊಳಗ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಅಂತ ಕೇಂದ್ರ ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಟ್ಟದ. ಈಗ ಇರುವ ಕಚೇರಿಗಳನ್ನು ಧ್ವಂಸ ಮಾಡರಿ ಅಂತ ಡೆಡಲೈನು ಹಾಕೇದ. ಅಂಥಾದರಾಗ ಜಲವಿದ್ಯುತ್ ಯೋಜನೆ, ಅದರಿಂದ ಅರಣ್ಯ ಮುಳುಗಡೆ, ವನ್ಯಜೀವಿ ಹಾನಿ, ಪರಿಸರ ನಾಶ ಇವಕ್ಕೆಲ್ಲಾ ಕೇಂದ್ರ ಒಪ್ಪಬಹುದೇ? ಸಾಧ್ಯನ ಇಲ್ಲಾ ಅನ್ನೋರು ಕೆಲವರು. ಅನುಮತಿ ಯಾಕೋ ಅದರ ಹಂಗ್ಯಾಕೋ, ಮೋದಿ ಅವರಿದ್ದರೆ ಸಾಕುʼ ಅಂತ ಇನ್ನ ಕೆಲವರು. ಯಾವಾವ ನಾಯಕರಿಗೆ ದೇವರು ಏನೇನು ಬುದ್ಧಿ ಕೊಡತಾನೋ ಹೇಳಲಿಕ್ಕೆ ಬರಂಗಿಲ್ಲ.

ಇನ್ನು ಈ ಮೂರು ಯೋಜನೆಗಳನ್ನ ವಿರೋಧ ಮಾಡತಾ ಇರೋ ಗೋವಾ ಏನು ಭಾಳ ಸಾಚಾ ಅಂತ ತಿಳಕೋಬ್ಯಾಡ್ರಿ. ಅವರು ತಮಗ ಉಳಿಯೋ 70 ಕಿಲೋಮಿಟರ್ ನದಿ ಪಾತ್ರದಾಗ 53 ಯೋಜನೆಗಳನ್ನ ಮಾಡಲಿಕ್ಕೆ ತಯಾರಿ ನಡಸೇದ. ಅದರಾಗ ಎರಡು ಜಲವಿದ್ಯುತ್ ಯೋಜನೆಗಳು. ಅವು ಸಹ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದೊಳಗ ಬರೋವಂಥಾವು. ಕರ್ನಾಟಕದವರು ಜಲವಿದ್ಯುತ್ ಯೋಜನೆ ಮಾಡಿದರ ತಪ್ಪು, ನಾವು ಮಾಡಿದರ ಸರಿ ಅನ್ನೋ ಮನೋಭಾವ ಅವರದು.

ಪರಿಸರ ಅನ್ನೋದು ಯಾವ ಜಿಲ್ಲೆ- ರಾಜ್ಯ- ದೇಶದ ಗಡಿಗೆ ಸೀಮಿತವಾದದ್ದಲ್ಲ. ಅದು ಇಡೀ ಭೂಮಂಡಲಕ್ಕ ಮತ್ತು ಇಡೀ ವಿಶ್ವದ ಜನ- ಪ್ರಾಣಿ- ಪಕ್ಷಿ- ಕೀಟ- ಗಿಡ- ಜಲ- ಇತರ ಕ್ರಿಮಿಗಳ ಸುರಕ್ಷೆಗೆ ಸಂಬಂಧಿಸಿದ್ದು. ಇದನ್ನು ಹಾಳು ಮಾಡಿದರೆ ಎಲ್ಲರ ಸರ್ವನಾಶ ಖಂಡಿತ.

ʻʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ ಅಂತ ಜೇನುಹುಳು ಪ್ರೇಮಿ ನಟ ಮಾರ್ಗನ್ ಫ್ರೀಮನ್ ಹೇಳಿದ್ದು ಎಲ್ಲರಿಗೂ ನೆನಪರಲಿ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...