ಇದು ಬಲು ತೀಟೆ ಅಥವಾ ಹೈಪರ್ ಆ್ಯಕ್ಟೀವಾಗಿದ್ದ ಹುಡುಗಿಯೊಬ್ಬಳು ಕಲಿಯುತ್ತಿದ್ದ ಶಾಲೆಯಿಂದ ಹೊರಹಾಕಲ್ಪಟ್ಟು ನಂತರ ಸಹಜ ಕಲಿಕೆಯ ಶಾಲೆಗೆ ಸೇರಿ ಯಶಸ್ವೀ ಮಹಿಳೆಯಾದ ಕತೆಯಾದರೂ, ಇದು ತೊಮೊಯೆ ಎಂಬ ಶಾಲೆಯು ಮಕ್ಕಳೊಡನೆ ಜೀವ ತಳೆದಿದ್ದ ಕತೆ. ಸೊಸಾಕು ಕೊಬಾಯಾಶಿ ಎಂಬ ಶಿಕ್ಷಣ ತಜ್ಞ ಸಹಜ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆದ ಅಮರಕತೆ.
ಹೌದು, ಒಂದು ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ, ಅದು ವ್ಯಕ್ತಿಗತವಾಗಿಯಾದರೂ ಅಥವಾ ಸಾಮಾಜಿಕವಾಗಿಯಾದರೂ, ಕುಟುಂಬ, ಶಿಕ್ಷಕರು ಮತ್ತು ಕಲಿಕೆಯ ಕೇಂದ್ರ; ಎಲ್ಲವೂ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇವರಲ್ಲಿ ಯಾರೂ ಮಕ್ಕಳ ಬಗ್ಗೆ ಅಲಕ್ಷ್ಯ ಮಾಡಬಾರದು ಎಂದು ತೊತ್ತೊ-ಚಾನ್ ಧ್ವನಿಸುತ್ತದೆ.
ತಾಯಿ
ತನ್ನ ಪುಟ್ಟ ಮಗಳು ತೊತ್ತೊ-ಚಾನ್ ಶಾಲೆಯಲ್ಲಿ ಡೆಸ್ಕನ್ನು ಪದೇಪದೇ ತೆಗೆದು ಮುಚ್ಚುತ್ತಾಗಲಾಟೆ ಮಾಡುವುದನ್ನು ಉಪಾಧ್ಯಾಯಿನಿ ದೂರಿನ ಪಟ್ಟಿಯಲ್ಲಿಟ್ಟರೂ ತಾಯಿ ಅದರ ಹಿಂದಿನ ಕಾರಣ, ಕುತೂಹಲ ಮತ್ತು ಅದರ ಪರಿಣಾಮವನ್ನು ಯೋಚಿಸುತ್ತಾಳೆ. ತಮ್ಮ ಮನೆಯಲ್ಲಿದ್ದ ಮೇಜಿನಲ್ಲಿ ಎಳೆಯುವ ಡ್ರಾಯರ್ ಇದ್ದು, ಶಾಲೆಯಲ್ಲಿ ಡೆಸ್ಕಿನ ಡಬ್ಬಿಯ ಮುಚ್ಚಳದಂತೆ ತೆಗೆದುಹಾಕುವುದಕ್ಕೆ ಅವಳಿಗೆ ಸಂತೋಷ ಎಂದು ತಿಳಿಯುತ್ತಾಳೆ. ಅದರ ಬಗ್ಗೆ ಉಪಾಧ್ಯಾಯರಿಗೂ ಹೇಳುವುದಿಲ್ಲ. ತನ್ನ ಮಗುವಿಗೂ ಹೇಳುವುದಿಲ್ಲ. ತೊತ್ತೋ ಗುಬ್ಬಚ್ಚಿಯ ಬಳಿ ಮಾತಾಡುವುದು, ಕಿಟಕಿಯ ಬಳಿ ನಿಂತುಕೊಂಡು ಸ್ಟ್ರೀಟ್ ಬ್ಯಾಂಡ್‍ರವರನ್ನು ಕರೆದು ಸಂಗೀತವಾದ್ಯಗಳನ್ನು ನುಡಿಸುವಂತೆ ಮಾಡುವುದೇ ಮೊದಲಾದ ಎಲ್ಲಾ ಆರೋಪಗಳ ಪಟ್ಟಿಯು “ನಿಮ್ಮ ಮಗಳನ್ನು ಶಾಲೆಯಿಂದ ಹೊರ ಹಾಕಲಾಗಿದೆ” ಎಂದು ಉಪಾಧ್ಯಾಯಿನಿ ತಾಯಿಗೆ ಹೇಳುವಂತಾಯಿತು. ಶಾಲೆಯಿಂದ ಹೊರಹಾಕುವುದನ್ನು ಸ್ವೀಕರಿಸಿದ ತಾಯಿ, ಅವಳ ಮಗಳ ಮೇಲಿನ ಆರೋಪಗಳ ಪಟ್ಟಿಯನ್ನು ಸ್ವೀಕರಿಸುವುದಿಲ್ಲ. ಬದಲಿಗೆ ನನ್ನ ಮಗಳು ಇವರಿಗರ್ಥವಾಗಲಿಲ್ಲ ಎಂದೇ ಬೇರೆ ಶಾಲೆಗೆ ಹೊರಳುತ್ತಾಳೆ. ಆದರೆ ಮಗಳಿಗೆ ನೀನು ಶಾಲೆಯಿಂದ ಹೊರದೂಡಲ್ಪಟ್ಟವಳೆಂದು ಹೇಳುವುದೇ ಇಲ್ಲ. ಹೇಳುತ್ತಾಳೆ, ತೊತ್ತೋಗೆ ಇಪ್ಪತ್ತನೇ ವರ್ಷದ ಹುಟ್ಟುಹಬ್ಬದಲ್ಲಿ. ಸಣ್ಣ ಮಗುವಿನ ಮೃದು ಮನಸ್ಸಿಗೆ ನೀನು ತಿರಸ್ಕೃತೆ ಎಂಬ ಭಾವಉಂಟಾಗದಿರುವಂತೆ ನೋಡಿಕೊಂಡತಾಯಿ ಅವರು.
ತೊಮೊಯೆ
ತೊಮೊಯೆ ಶಾಲೆಯ ಹೆಸರು. ನಿಸರ್ಗದ ಒಡಲಲ್ಲಿ ಆ ಶಾಲೆ ಮಕ್ಕಳಿಗೆ ಮಡಿಲನ್ನೊದಗಿಸಿತ್ತು. ಇನ್ನು ತರಗತಿಗಳೋ ರೈಲಿನ ಡಬ್ಬಿಗಳು. ಮಕ್ಕಳ ಆಯ್ಕೆಯ ವಿಷಯಗಳು ಅವರ ಕಲಿಕೆಗೆ. ಅವರವರ ಕಲಿಕೆ ಅವರಿಗೆ ಬಿಟ್ಟದ್ದು.ಉಪಾಧ್ಯಾಯರ ಸಹಾಯ ಬೇಕಾದಾಗ ಅವರೊದಗುತ್ತಾರೆ. ಮಧ್ಯಾಹ್ನ ಎಲ್ಲರೂ ಕಲೆತು ಊಟ ಮಾಡಿದ ಮೇಲೆ ತರಗತಿಗಳೆಂದು ಕರೆಸಿಕೊಳ್ಳುವ ರೈಲಿನ ಬೋಗಿಗಳಿಗೆ ಹೋಗುವಷ್ಟಿಲ್ಲ. ಹೊರಗೆ ನಿಸರ್ಗದಲ್ಲಿ ಮಿಕ್ಕೆಲ್ಲಾ ಸಹಜ ಕಲಿಕೆ. ನಿರ್ಬಂಧಿಸುವರಿಲ್ಲ, ತಾಕೀತು ಮಾಡುವವರಿಲ್ಲ, ಕಲಿಸುವಿಕೆ, ಕಲಿಯುವಿಕೆ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಎಲ್ಲವೂ ಸಹಜ.
ತೊತ್ತೊ ತನ್ನ ಮುನ್ನುಡಿಯಲ್ಲಿ ಹೇಳುವ ಮಾತು ನಿಜ. “ಈಗ ತೊಮೊಯೆದಂತಹ ಶಾಲೆಗಳಿದ್ದಿದ್ದರೆ ಇಂದು ಕಂಡುಬರುತ್ತಿರುವ ಕ್ರೌರ್ಯ ಎಷ್ಟೋ ಕಡಿಮೆಯಾಗುತ್ತಿತ್ತು.”
ಕೊಬಾಯಾಶಿ
ಸೊಸಾಕು ಕೊಬಾಯಾಶಿಯೇ ತೊತ್ತೊ-ಚಾನ್ ಪುಸ್ತಕದ ನಾಯಕ. ತೊಮೊಯೆ ಶಾಲೆಯ ಅಡಿಪಾಯ. ಅವರ ಶಿಕ್ಷಣ ನೀತಿಯೇ ಮಕ್ಕಳಿಗೆ ಉಸಿರಾಡಲು ತಂಗಾಳಿಯನ್ನು ನೀಡುತ್ತಿದ್ದದ್ದು. ಇಡೀ ಪುಸ್ತಕ ಹೇಳುವುದು ಕೊಬಾಯಾಶಿಯವರ ಸಹಜ ಕಲಿಕೆಯ ಪದ್ಧತಿ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿಸಾಧಿಸಿದ ಯಶಸ್ಸನ್ನು. ಎಲ್ಲಾ ಮಕ್ಕಳೂ ಸ್ವಾಭಾವಿಕವಾಗಿ ಉತ್ತಮರೇ. ಪರಿಸರ ಮತ್ತುದೊಡ್ಡವರ ಬೇಡದೇ ಇರುವ ಪ್ರಭಾವದಿಂದ ಹಾಳಾಗುತ್ತದೆ ಎಂಬುದು ಅವರ ತಿಳಿವಳಿಕೆ. ಮಕ್ಕಳು ತಮ್ಮ ಸಹಜ ಸ್ವಭಾವದಂತೆ ಕಲಿತುಕೊಂಡು ಹೋಗಲು, ಪ್ರಕೃತಿಯಿಂದ ತಿಳಿವಳಿಕೆ ಪಡೆಯಲು ಸಹಕರಿಸುವುದನ್ನು ತಮ್ಮ ಹೊಣೆಯಾಗಿಸಿಕೊಂಡಿದ್ದರು.
ಅವರ ಶಾಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಎಲ್ಲರೂ ಗ್ರೂಪ್ ಪೋಟೋ ತೆಗೆಸಿಕೊಳ್ಳುವಾಗ ಕೊಬಾಯಾಶಿ ಅಲ್ಲಿಕಾಣುವ ಇತರ ಮಕ್ಕಳನ್ನೆಲ್ಲಾ ಕರೆದು ಪೋಟೋಗೆ ನಿಲ್ಲಿಸಿಕೊಳ್ಳುತ್ತಿದ್ದರು. ಔಪಚಾರಿಕವಾದ ಪದವೀಧರರ ಚಿತ್ರಗಳಿಗಿಂತ ಮಕ್ಕಳ ಜೀವಂತ ಚಿತ್ರಗಳನ್ನು ನೋಡುವ ಪ್ರೀತಿ ಅವರದು.
ಮೊದಲ ದಿನ ತೊತ್ತೊ ಶಾಲೆಗೆ ಸೇರಲು ಬಂದಾಗ ಕೊಬಾಯಾಶಿ ಮಗುವಿಗೆ ಪ್ರಶ್ನೆಗಳನ್ನು ಕೇಳದೇ ಅವಳೇ ಅವಳಿಷ್ಟದ್ದನ್ನೆಲ್ಲಾ ಹೇಳಲು ಬಿಡುತ್ತಾರೆ. ಇದೇ ಅವರಿಗೆ ಮಗುವಿನ ಪ್ರೀತಿ ಪಡೆಯಲು ಸಾಧ್ಯವಾಗುವುದು. ಅವಳು ಹೇಳಿದ್ದನ್ನೆಲ್ಲಾ ಕೇಳಿ, “ನೀನು ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ”ಎಂದಾಗ ಅವಳು ಅನುಭವಿಸುವ ವಾತ್ಸಲ್ಯ ಅನುಪಮವಾದದ್ದು.
ಅವರು ಪದೇಪದೇ ಹೇಳುತ್ತಿರುತ್ತಾರೆ, “ನೀನು ನಿಜವಾಗಿ ಒಳ್ಳೆಯ ಹುಡುಗಿ”ಅಂತ. ಇದನ್ನು ಕೇಳಿ ಕೇಳಿಯೇ ತೊತ್ತೋ ಆತ್ಮವಿಶ್ವಾಸವನ್ನು ಮತ್ತು ತನ್ನ ಬಗ್ಗೆ ಧನಾತ್ಮಕ ಧೋರಣೆಯನ್ನು ಹೊಂದಲು ಸಾಧ್ಯವಾಗಿದ್ದು. ಇಲ್ಲವಾಗಿದ್ದರೆ ಕೆಟ್ಟ ಹುಡುಗಿ ಎಂಬ ಕೀಳರಿಮೆಯಲ್ಲಿ ತನ್ನ ವ್ಯಕ್ತಿತ್ವವನ್ನು ತಾನೇ ನಾಶ ಮಾಡಿಕೊಳ್ಳುತ್ತಿದ್ದಳೇನೋ ಎಂದು ತಾನೇ ಹೇಳಿಕೊಳ್ಳುತ್ತಾರೆ. ಮುಂದೆ ತೊಮೊಯೆ ಯುದ್ಧದಲ್ಲಿ ನಾಶವಾದಾಗ ಸಂಕಟವಾಗುತ್ತದೆ.
ಇಡೀ ಪುಸ್ತಕವು ನವಿರಾದ ಹಾಸ್ಯ ಮತ್ತು ಗಂಭೀರದಲ್ಲಿ ವಿಚಾರಗಳನ್ನು ತೆರೆದಿಡುತ್ತದೆ. ನಗಿಸುತ್ತದೆ, ಚಿಂತಿಸುವಂತೆ ಮಾಡುತ್ತದೆ. ಮಕ್ಕಳ ವಿಕಾಸಕ್ಕೆ ಪೂರಕವಾದ ಕಲಿಕೆಯ ಕ್ರಮವನ್ನು ಅರಿವಿಗೆಟಕಿಸುತ್ತದೆ.
ಮಕ್ಕಳನ್ನು ಪ್ರೀತಿಸುವವರು ಈ ಪುಸ್ತಕದ ಓದನ್ನು ತಪ್ಪಿಸಿಕೊಂಡರೆ ಒಂದು ಕೊರತೆಯೆಂದೇ ನನ್ನ ಭಾವನೆ. ಇದನ್ನು ಕನ್ನಡಕ್ಕೆ ವಿ ಗಾಯತ್ರಿಯವರು ತಂದಿದ್ದು, ನ್ಯಾಷನಲ್ ಬುಕ್‍ಟ್ರಸ್ಟ್ ಪ್ರಕಟಿಸಿದ್ದಾರೆ.


