Homeಅಂಕಣಗಳುಕನ್ನಡ ಪುಸ್ತಕಾಲಯದ ನಡೆದಾಡುವ ಪುಸ್ತಕ ಬಿ.ಆರ್ ತುಬಾಕಿ

ಕನ್ನಡ ಪುಸ್ತಕಾಲಯದ ನಡೆದಾಡುವ ಪುಸ್ತಕ ಬಿ.ಆರ್ ತುಬಾಕಿ

- Advertisement -
- Advertisement -

ಎಲೆಮರೆ-25

ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ 2002 ರಿಂದ ಈ ತನಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್ಸಿಗೆ ಪುಸ್ತಕಗಳನ್ನು ಹೊತ್ತು ತಂದು ಮಾರುವ ಆಪ್ತ ಸಂಗಾತಿಗಳ ಒಡನಾಟವಿದೆ. ಅವರುಗಳಲ್ಲಿ ಕೆಲವರು ವಿದ್ಯಾರ್ಥಿಸ್ನೇಹಿಗಳಾಗಿ ಬಹುಬೇಗ ಆಪ್ತರಾಗುತ್ತಾರೆ. ಅದರಲ್ಲಿ ಗುಲ್ಬರ್ಗಾ ಭಾಗದ ಪ್ರಭಾಕರ್ ಎನ್ನುವಾತ ವರ್ಣರಂಜಿತ ವ್ಯಕ್ತಿ. ಪುಸ್ತಕ ಖರೀದಿಗೆಂದು ಹೋದಾಗ ಇದನ್ನ ತಗಳ್ರಿ ಇದು ಬಾರಿ ಒಳ್ಳೇ ಪುಸ್ತಕ ಅಂತ ಆ ಪುಸ್ತಕದ ವಿಮರ್ಶೆ ಮಾಡುತ್ತಿದ್ದ. ಪ್ರಭಾಕರ್ ನಮಗೆ ಜಿಗರಿ ದೋಸ್ತ್ ಆಗಿದ್ದ. ಕ್ಯಾಂಪಸ್ಸಿಗೆ ಬಂದಾಗಲೆಲ್ಲಾ ಹಲವು ಬಾರಿ ನಮ್ಮ ರೂಮುಗಳಲ್ಲೆ ಉಳಿಯುತ್ತಿದ್ದ. ಆತನ ನಗು ಅರ್ದ ಊರಿಗೆ ಕೇಳಿಸುತ್ತಿತ್ತು. ರಾತ್ರಿಪೂರಾ ತಡೆರಹಿತ ಮಾತು ಮಾತು. ಈ ಕಾರಣಕ್ಕೆ ಆತನನ್ನು ರೂಮಲ್ಲಿ ಉಳಿಸಿಕೊಳ್ಳಲು ಭಯಪಡುತ್ತಿದ್ದೆವು. ಏನಾದರೂ ನೆಪಹೇಳಿ ಹೊರ ಹಾಕುವ ಉಪಾಯ ಮಾಡಿದರೂ, ಜಿಗಣಿಯಂತೆ ಅಂಟಿಕೊಂಡು ನಮ್ಮಲ್ಲೇ ಹೆಚ್ಚು ಉಳಿಯುತ್ತಿದ್ದ. ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಪ್ರಭಾಕರ್ ಹಟಾತ್ತನೆ ಹೃದಯಾಘಾತದಿಂದ ಇಲ್ಲವಾದರು. ಈ ಸುದ್ದಿ ಕೇಳಿ ಆತನ ದೊಡ್ಡ ನಗು, ಜೋರು ಮಾತು ಒಂದು ಕ್ಷಣ ಸ್ತಬ್ಧವಾದಂತಾಯಿತು. ನಾವು ಆತನನ್ನು ಪುಸ್ತಕ ಪ್ರಭಾಕರ ಅಂತಲೇ ಕರೆಯುತ್ತಿದ್ದೆವು. ಪ್ರಭಾಕರ್ ಗಾಢ ವಿಷಾದ ಉಳಿಸಿ ಹೊರಟುಹೋದರು.

ಮೊದಲಿನಿಂದಲೂ ನಮಗೆ ಆಪ್ತರಲ್ಲಿ ಕೊಪ್ಪಳದ ಪುಸ್ತಕದ ತುಬಾಕಿಯವರೂ ಒಬ್ಬರು. ಅವರು ಪ್ರಭಾಕರನಿಗೆ ವಿರುದ್ಧದ ಸ್ವಭಾವದವರು. ಪ್ರಭಾಕರ್ ಎತ್ತರದ ತೆಳ್ಳಗಿನ ವ್ಯಕ್ತಿಯಾಗಿದ್ದರೆ, ತುಬಾಕಿ ಕುಳ್ಳಗೆ ಚೂರು ದಪ್ಪನೆ ವ್ಯಕ್ತಿ. ಪ್ರಭಾಕರ್ ಮಾತಿನ ಸರದಾರನಾಗಿದ್ದರೆ, ತುಬಾಕಿ ಚುಟುಕು ಮಾತು, ಸಣ್ಣನೆಯ ದನಿ. ಮೆದುವಾಗಿ ಪುಸ್ತಕಗಳ ಮಹತ್ವ ಹೇಳುತ್ತಲೆ ಪುಸ್ತಕ ಓದುವ ಅಭಿರುಚಿ ಮೂಡಿಸುವವರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಕಾರಣ ಕ್ಯಾಂಪಸ್ಸಿಗೆ ಕೆಲವೊಮ್ಮೆ ಅವರ ತಮ್ಮನನ್ನು ಪುಸ್ತಕ ಹೊರಿಸಿ ಕಳಿಸುತ್ತಿದ್ದರು. ಇದೀಗ ಶಾಲಾ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಕಾರಣ ಪೂರ್ಣಪ್ರಮಾಣದ ಪುಸ್ತಕ ಸಂಗಾತಿಯಾಗಿ ಬದಲಾಗಿದ್ದಾರೆ.

ಬಿ.ಆರ್.ತುಬಾಕಿ ಅವರ ಪುಸ್ತಕ ಸಾಂಗತ್ಯದ ಪಯಣ ಕುತೂಹಲಕಾರಿಯಾಗಿದೆ. ಬಾಲಪ್ಪ ರಾಮಪ್ಪ ತುಬಾಕಿ ಅವರು ನಿಲೋಗಲ್ ಪಾಳೆಪಟ್ಟದಲ್ಲಿ ಇವರ ವಂಶಜರು ಸೈನಿಕರಾಗಿದ್ದು, ವಂಶದ ಹಿರಿಯ ಯುದ್ಧವೊಂದರಲ್ಲಿ ಮಡಿದ ಕಾರಣ ಒಂದಷ್ಟು ಹೊಲ ಸಿಕ್ಕು ಬದುಕು ಕಟ್ಟಿಕೊಂಡದ್ದಾಗಿಯೂ, ಈ ಹಿನ್ನೆಲೆಯಲ್ಲಿ ತಮ್ಮ ವಂಶಕ್ಕೆ ತುಬಾಕಿ ಎಂಬ ಹೆಸರು ಬಂದದ್ದಾಗಿಯೂ ಹೇಳುತ್ತಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಪುಟ್ಟ ಹಳ್ಳಿ ನಿಲೋಗಲ್‍ನ ಇವರು ಓದಿಗೆಂದು 1975 ರಲ್ಲಿ ರೋಣ ತಾಲೂಕಿನ ಹೊಳೆ ಆಲೂರಿನ ಖಾಸಗಿ ಪ್ರೌಢಶಾಲೆ ಸೇರುತ್ತಾರೆ. ಇಲ್ಲಿನ ಹಾಸ್ಟೆಲ್ ನಲ್ಲಿ ದಿನಕ್ಕೊಂದು ಪುಸ್ತಕ ಕೊಟ್ಟು ಆ ಪುಸ್ತಕದ ಬಗೆಗೆ ಒಂದು ಪುಟ ಬರೆಸುತ್ತಿದ್ದರು. ಈ ಬಗೆಯ ನಿರಂತರ ಚಟುವಟಿಕೆಯೇ ಪುಸ್ತಕದ ಓದು, ಗ್ರಹಿಕೆಗೆ ಬುನಾದಿಯಾಯಿತು. ಮುಂದೆ ಕಲ್ಮೇಶ್ವರ ಕಾಲೇಜಿನ ಲೈಬ್ರರಿಯಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಆನಂತರ ನಿಧಾನಕ್ಕೆ ಎಲ್.ಆರ್ ಅನಂತರಾಮಯ್ಯ ಅವರು ತರುತ್ತಿದ್ದ `ಗ್ರಂಥಲೋಕ’ ಸಾಹಿತ್ಯ ಪತ್ರಿಕೆ ಓದುತ್ತಾ, ಇದರಲ್ಲಿ ಹಾ.ಮ.ನಾಯಕರು ಪರಿಚಯಿಸುತ್ತಿದ್ದ ಪುಸ್ತಕಗಳನ್ನು ಹುಡುಕಿ ಓದತೊಡಗುತ್ತಾರೆ. ಈ ಓದಿನ ಗೀಳಿಗೆ ಅಂಟಿಕೊಂಡಂತೆ ಪ್ರಕಾಶಕರು, ಮುದ್ರಕರು, ಪುಸ್ತಕ ಮಾರಾಟಗಾರರು, ಮುಖ್ಯವಾಗಿ ಆಯಾ ಪುಸ್ತಕದ ಲೇಖಕರ ಪರಿಚಯದ ಒಡನಾಟ ತುಬಾಕಿಯವರಿಗೆ ಸಿಗತೊಡಗಿತು. ಕಾರಣ ತಾನು ಓದಿದ ಪುಸ್ತಕದ ಬಗ್ಗೆ ಆಯಾ ಪುಸ್ತಕದ ಲೇಖಕ/ಲೇಖಕಿಯರಿಗೆ ತನ್ನ ಅಭಿಪ್ರಾಯದ ಪತ್ರ ಬರೆಯುತ್ತಿದ್ದರು. ಹೀಗೆ ತುಬಾಕಿಯವರಲ್ಲಿ ಸಾಹಿತಿಗಳ ಪತ್ರ ಒಡನಾಟದ ಒಂದು ಭಂಡಾರವೆ ಇದೆ. ಇದೇ ಹೊತ್ತಿಗೆ ಲಂಕೇಶ್ ಪತ್ರಿಕೆ ಓದು ಶುರುವಾಯಿತು. ಇದು ತುಬಾಕಿಯವರ ಓದಿನ ಹಸಿವಿಗೆ ಮತ್ತೊಂದು ರೆಕ್ಕೆ ಮೂಡಿಸಿತು. ತೊಂಬತ್ತರ ದಶಕದಲ್ಲಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭವಾದಾಗ ಚಂದ್ರಶೇಖರ ಕಂಬಾರ ಒಳಗೊಂಡಂತೆ ಹತ್ತಾರು ವಿದ್ವಾಂಸರು ಸಂಪರ್ಕಕ್ಕೆ ಬಂದರು. ಈ ಹೊತ್ತಿಗಾಗಲೆ ಸರಿಸುಮಾರು ಐವತ್ತು ಸಾವಿರದಷ್ಟು ದೊಡ್ಡ ಗ್ರಂಥಬಂಡಾರವನ್ನೆ ಸಂಗ್ರಹಿಸಿದ್ದರು. 1992 ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪುಸ್ತಕಗಳು ತುಂಗಾಭದ್ರ ನದಿಯಲ್ಲಿ ಹರಿದು ಹೋದವು. ಆ ಸಂದರ್ಭದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ನೀಡಿದ್ದೇನೆ ಎಂದು ತುಬಾಕಿ ಹೇಳುತ್ತಾರೆ.

ಪುಸ್ತಕದ ಹಸಿವು ತುಬಾಕಿಯವರನ್ನು ನಾಡಿನ ಗಡಿ ದಾಟಿಸಿತು. ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಪಾ.ಶ.ಶ್ರೀನಿವಾಸ (ತಿರುಕ್ಕುರಳ್), ದೆಹಲಿ ವಿವಿಯ ವಿನೋದ ಬಾಯಿ, ಎನ್.ಬಿ.ಟಿಗೆ ಅಧ್ಯಕ್ಷರಾಗಿದ್ದ ಹಾ.ಮಾ.ನಾಯಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಶಾ.ಬಾಲುರಾವ್, ಕೇರಳದ ಆರ್.ರಾಮ್, ಮಧುರೈ ವಿವಿಯ ಪಿ.ಎಸ್.ಶ್ರೀನಿವಾಸ ಈ ಎಲ್ಲರ ಪರಿಚಯ ಬೇರೆ ಬೇರೆ ಭಾಷೆಯ ಅನುವಾದ ಕೃತಿಗಳ ಓದಿನ ರುಚಿ ಹತ್ತಿಸಿತು. ಹಾಗಾಗಿ ತುಬಾಕಿಯವರು ಕನ್ನಡ ಸಾಹಿತ್ಯದ ಗಡಿ ದಾಟಿ ಭಾರತೀಯ ಸಾಹಿತ್ಯ ಮತ್ತು ಲೇಖಕರ ವ್ಯಾಪ್ತಿಗೆ ತಮ್ಮನ್ನು ಹಿಗ್ಗಿಸಿಕೊಂಡರು. ಹೀಗಾಗಿ ಈ ಎಲ್ಲರ ಜತೆಗಿನ ಸ್ನೇಹ ಪುಸ್ತಕ ಓದು ಖರೀದಿಯನ್ನು ಮತ್ತಷ್ಟು ವಿಸ್ತರಿಸಿತು.

ಹೀಗೆ ಓದಲೆಂದು ಕೊಂಡ ಪುಸ್ತಕಗಳ ಸಂಖ್ಯೆ ಮನೆಯಲ್ಲಿ ಹೆಚ್ಚುತ್ತಾ ಹೋದವು. ಈ ಸಂದರ್ಭದಲ್ಲಿ ನವಕರ್ನಾಟಕದ ರಾಜಾರಾಂ ಅವರು, `ಅಲ್ಲಯ್ಯ ನೀನು ಓದಿದ ಪುಸ್ತಕಗಳನ್ನು ಏನು ಮಾಡುತ್ತಿ? ನೀಟಾಗಿ ಓದಿ ಅದೇ ಪುಸ್ತಕಗಳನ್ನು ಮಾರಾಟ ಮಾಡು, ಬೇಕಾದರೆ ನಮ್ಮ ನವಕರ್ನಾಟಕದ ಪುಸ್ತಕಗಳನ್ನು ಕೊಡುತ್ತೇವೆ’ ಎಂದು ಪ್ರೇರೇಪಿಸಿದರು. ಇದರಿಂದಾಗಿ ತುಬಾಕಿ ಪುಸ್ತಕಗಳ ಪ್ರಸಾರಕರಾಗಿ ಬದಲಾದರು. ಆಗ ರಾಜಾರಾಮರು ಸಾಹಿತ್ಯ ಸಮ್ಮೇಳನಗಳಿಗೆ ಮಳಿಗೆ ಬುಕ್ ಮಾಡುವಾದ ತುಬಾಕಿಯವರಿಗೊಂದು ಮಳಿಗೆ ಕಾಯ್ದಿರಿಸುತ್ತಿದ್ದರು. ಆ ಹೊತ್ತಿಗಾಗಲೆ ಬಹುತೇಕ ಪುಸ್ತಕ ಮುದ್ರಕರು, ಪ್ರಕಾಶಕರು ತುಬಾಕಿಯವರಿಗೆ ಪರಿಚಿತರಾಗಿದ್ದ ಕಾರಣ ಬರಿಗೈಲಿ ಸಮ್ಮೇಳನಕ್ಕೆ ಹೋಗಿ, ಎಲ್ಲಾ ಪ್ರಕಾಶಕರಿಂದ ಪುಸ್ತಕಗಳನ್ನು ಪಡೆದು ಸಮ್ಮೇಳನದಲ್ಲಿ ಮಾರಿ, ಪುಸ್ತಕದ ಮೊತ್ತವನ್ನು ಆಯಾ ಮುದ್ರಕರಿಗೆ ತಲುಪಿಸಿ ತಮ್ಮ ಪಾಲಿನ ಹಣವಿಟ್ಟುಕೊಂಡು ಮರಳುತ್ತಿದ್ದರು. ಇದು ತುಬಾಕಿಯವರನ್ನು ಪುಸ್ತಕದ ಸಾಂಗತ್ಯದ ಮತ್ತೊಂದು ಮಜಲಿಗೆ ಕೊಂಡೊಯ್ತು. ಪರಿಣಾಮವಾಗಿ 1998 ರ ಹೊತ್ತಿಗೆ ಕೊಪ್ಪಳದಲ್ಲಿ `ಕನ್ನಡ ಪುಸ್ತಕಾಲಯ’ವನ್ನು ತೆರೆದರು. ಮನೆಯಲ್ಲಿ ಓದಲೆಂದು ಗುಡ್ಡೆ ಹಾಕಿಕೊಂಡ ಪುಸ್ತಕಗಳೆಲ್ಲಾ ಕನ್ನಡ ಪುಸ್ತಕಾಲಯಕ್ಕೆ ಬಂದವು. ಹೈದರಾಬಾದ್ ಕರ್ನಾಟಕದಲ್ಲಿ ಗಮನಸೆಳೆಯ ಪುಸ್ತಕ ಮಳಿಗೆಗಳಲ್ಲಿ `ಕನ್ನಡ ಪುಸ್ತಕಾಲಯ’ಕ್ಕೆ ತನ್ನದೇ ಆದ ಮಹತ್ವವಿದೆ.

ಓದಿನ ಹಸಿವಿದ್ದ ಯಾರೇ ಆದರೂ, ಕನ್ನಡದ ಯಾವುದೇ ಪುಸ್ತಕವಾದರೂ ಅವರಿಗೆ ಒದಗಿಸುತ್ತಾರೆ. ಪುಸ್ತಕ ಓದಿನ ಮೂಲಕ ರೂಪಗೊಂಡ ಸಾಹಿತಿ ಸಂಶೋಧಕರ ನಂಟು ತುಬಾಕಿಯವರನ್ನು ಸಂಶೋಧನ ಸಹಾಯಕರನ್ನಾಗಿಯೂ ಬದಲಿಸಿತು. ಹುಲ್ಲೂರು ಶ್ರೀನಿವಾದ ಜೋಯಿಸರು, ವರದರಾಜ ರಾಯರು ಕೊಪ್ಪಳ ಭಾಗದ ಶಾಸನಾಧ್ಯಯನಕ್ಕೆ ಬಂದರೆ ಅವರಿಗೆ ತುಬಾಕಿ ಜೊತೆಗಾರರಾಗಿದ್ದರು. ಶಾಸನದ ಅಚ್ಚುತೆಗೆಯುವುದನ್ನು ಕಲಿತ ತುಬಾಕಿಯವರು ಈ ಬಾಗದ ಶಾಸನ ಅಧ್ಯಯನಕ್ಕೆ ತಮ್ಮದೇ ಆದ ಮಹತ್ವದ ನೆರವನ್ನು ವಿದ್ವಾಂಸರಿಗೆ ನೀಡಿದ್ದಾರೆ. ಹೀಗಾಗಿ ಎಂ.ಎಂ,ಕಲ್ಬುರ್ಗಿ, ದೇವರಕೊಂಡಾರೆಡ್ಡಿ, ಲಕ್ಷ್ಮಣ ತೆಲಗಾವಿ, ಕೃಷ್ಣಮೂರ್ತಿ, ಸೀತಾರಾಮ ಜಹಗೀರದಾರ, ಎಂ.ಜಿ.ಮಂಜುನಾಥ ಮೊದಲಾದವರು ತುಬಾಕಿಯವರ ನೆರವನ್ನು ನೆನೆಯುತ್ತಾರೆ.

ತುಬಾಕಿಯವರು ಕೇವಲ ಪುಸ್ತಕ ವ್ಯಾಪಾರಿಯಾಗಿದ್ದರೆ ಈ ಕಾಲಂ ನಲ್ಲಿ ಬರೆಯುವ ಅಗತ್ಯವಿರಲಿಲ್ಲ. ಆದರೆ ಕನ್ನಡದ ಬಹುಮುಖ್ಯ ಪಠ್ಯಗಳನ್ನು ಓದುತ್ತಾ, ಆ ಪಠ್ಯಗಳನ್ನು ಓದುಗರಿಗೆ ಪರಿಚಯಿಸಿ, ಅವರನ್ನು ಓದಿಗೆ ಆಹ್ವಾನಿಸಿ, ಓದಿನ ಅಭಿರುಚಿ ಮೂಡಿಸುತ್ತ ಕನ್ನಡದ ವೈಚಾರಿಕೆ ನೆಲೆಯನ್ನು ವಿಸ್ತರಿಸುತ್ತಿದ್ದಾರೆ. ಹೀಗಾಗಿ ತುಬಾಕಿಯವರ ಪುಸ್ತಕ ಪ್ರಸರಣದ ಕಾರ್ಯ ಕನ್ನಡದ ವಿವೇಕದ ಪ್ರಸರಣವೂ ಆಗಿದೆ. ತನ್ನ ಮಿತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿಯೋ, ನಗದು ಇಲ್ಲದೆಯೋ ಪುಸ್ತಕಗಳನ್ನು ಕೊಟ್ಟು ಓದಿಸುತ್ತಾರೆ. ಅಂತೆಯೇ ಸದಭಿರುಚಿಯ ಪುಸ್ತಕಗಳ ಸಂಗಾತಿಯಾಗಿ ಇಂದಿಗೂ ಪುಸ್ತಕ ಪ್ರಸರಣದಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...