Homeಅಂಕಣಗಳುಕರೋನಾಕ್ಕೆ ಕೊನೆಯಿದ್ದೀತು, ಆದರೆ ಈ ಮುಸ್ಲಿಮ್ ದ್ವೇಷಕ್ಕೆ ಮದ್ದೇನು?

ಕರೋನಾಕ್ಕೆ ಕೊನೆಯಿದ್ದೀತು, ಆದರೆ ಈ ಮುಸ್ಲಿಮ್ ದ್ವೇಷಕ್ಕೆ ಮದ್ದೇನು?

- Advertisement -
- Advertisement -

ತಬ್ಲೀಘೀ ಜಮಾಅತ್ ಸಂಘಟನೆಯ ಹೆಸರನ್ನು ಮುಸಲ್ಮಾನ ಸಮುದಾಯದ ಆಚೆಗೆ ಮೊನ್ನೆ ಮೊನ್ನೆಯ ತನಕ ಕೇಳಿದವರ ಸಂಖ್ಯೆ ಅತಿ ವಿರಳ. ತಬ್ಲೀಘೀ ಜಮಾಅತ್ ನ ಅಕ್ಷರಶಃ ಅರ್ಥ ಧರ್ಮಪ್ರಸಾರ. ಇದೊಂದು ಸುನ್ನಿ ಮುಸಲ್ಮಾನ ಮಿಶನರಿ ಆಂದೋಲನ. ಸಾಮಾನ್ಯ ಮುಸಲ್ಮಾನರನ್ನು ತಲುಪಿ ಅವರ ಧರ್ಮಶ್ರದ್ಧೆಯನ್ನು ಮರುಜಾಗೃತಗೊಳಿಸುವುದು ಇದರ ಉದ್ದೇಶ. ರೂಢಿ ಆಚಾರಗಳು, ದಿರಿಸು, ಹಾಗೂ ವ್ಯಕ್ತಿಗತ ನಡವಳಿಕೆಯ ಮೇಲೆ ಒತ್ತು ನೀಡಲಾಗುತ್ತದೆ. ಆ ಆಂದೋಲನವನ್ನು ಹರಿಯಾಣದ ಮೇವಾಟ್ ಎಂಬಲ್ಲಿ 1927ರಲ್ಲಿ ಹುಟ್ಟಿ ಹಾಕಿದ್ದು ಧಾರ್ಮಿಕ ವಿದ್ವಾಂಸ ಮೌಲಾನಾ ಮಹಮ್ಮದ್ ಇಲ್ಯಾಸ್ ಖಾಂದಾಲಾ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಮೇವಾಟ್ ನ ಮುಸಲ್ಮಾನ ರೈತರು ಬಹುತೇಕ ಹಿಂದೂ ರೂಢಿ ಆಚಾರಗಳನ್ನು ಪಾಲಿಸುತ್ತಿದ್ದರು. ಅವರನ್ನು ಪುನಃ ಇಸ್ಲಾಮ್ ತೆಕ್ಕೆಗೆ ಕರೆತಂದು ಇಸ್ಲಾಮ್ ನ ಸುವರ್ಣಯುಗ (ಖಿಲಾಫತ್) ಸ್ಥಾಪಿಸುವ ಗುರಿಯೊಂದಿಗೆ ಶುರುವಾದ ಚಳವಳಿಯಿದು. ವೇಗವಾಗಿ ಬೆಳೆಯಿತು. 150 ದೇಶಗಳಲ್ಲಿ ಸುಮಾರು ಎಂಟು ಕೋಟಿ ಅನುಯಾಯಿಗಳುಂಟು. ಸಾಮಾನ್ಯವಾಗಿ ರಾಜಕೀಯೇತರ ಮತ್ತು ಶಾಂತಿಪ್ರಿಯ ಆಂದೋಲನ. ಮತಾಂತರದ ಉದ್ದೇಶವಿಲ್ಲದ್ದು.

ದಕ್ಷಿಣ ದೆಹಲಿಯ ಮರ್ಕಾಝ್ ನಿಜಾಮುದ್ದೀನ್ ತಬ್ಲೀಘೀ ಜಮಾಅತ್ ನ ಪ್ರಧಾನ ಕೇಂದ್ರ. ಆರು ಅಂತಸ್ತುಗಳ ಕಟ್ಟಡ. ಇದೇ ಮಾರ್ಚ್ 13ರಿಂದ 15ರ ನಡುವೆ ಅಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಮ್ಮೇಳನವೊಂದಕ್ಕೆ ನಾಲ್ಕು ಸಾವಿರ ಮಂದಿ ಸೇರಿದ್ದರು. ದೇಶದ ನಾನಾ ರಾಜ್ಯಗಳಿಂದ ಮಾತ್ರವಲ್ಲದೆ ಬಾಂಗ್ಲಾದೇಶ, ಇಂಡೋನೇಶ್ಯಾ, ಮಲೇಶಿಯಾ, ಸಿಂಗಪುರ ಮುಂತಾದ ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ನಿಜಾಮುದ್ದೀನ್ ಸೋಂಕಿನ ಮೂಲ ಈ ವಿದೇಶೀಯರೇ ಎಂದು ಶಂಕಿಸಲಾಗಿದೆ.

ಸಮ್ಮೇಳನ ಮತ್ತು ಹಿಂದು ಮುಂದಿನ ದಿನಗಳಲ್ಲಿ (ಮಾ.10-24) ಒಟ್ಟು ಆರೇಳು ಸಾವಿರ ಮಂದಿಯಾದರೂ ಈ ಕೇಂದ್ರವನ್ನ ಹೊಕ್ಕು ಬಳಸಿರುವ ಅಂದಾಜಿದೆ. ಸಮ್ಮೇಳನ ಮುಗಿದ ನಂತರ ಇನ್ನೂ ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದ 2346 ಮಂದಿಯನ್ನು ಇದೇ ಏಪ್ರಿಲ್ ಒಂದರಂದು ಖಾಲಿ ಮಾಡಿಸಿ ಆಸ್ಪತ್ರೆಗಳು ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಈ ಮೊದಲು ಇಲ್ಲಿಂದ ನಾನಾ ರಾಜ್ಯಗಳಿಗೆ ತೆರಳಿದವರು ತಮಗೆ ಅರಿವಿಲ್ಲದೆಯೇ ಕರೋನಾ ಸೋಂಕನ್ನು ಹೊತ್ತೊಯ್ದಿದ್ದರು.

ನಿಜಾಮುದ್ದೀನ್ ಪೊಲೀಸ್ ಠಾಣೆಯ ಮೂಗಿನಡಿಯಲ್ಲೇ ಈ ಸಮ್ಮೇಳನವನ್ನು ನಡೆಯಗೊಟ್ಟ ಸರ್ಕಾರಿ ಆಡಳಿತವೂ ಈ ಪ್ರಕರಣದ ದೋಷವನ್ನು ಹೊರಲೇಬೇಕು. ಆದರೆ ಸೋಂಕಿನ ದಿನಗಳಲ್ಲಿ ಇಷ್ಟು ದೊಡ್ಡ ಸಮ್ಮೇಳನವನ್ನು ತಬ್ಲೀಘೀ ಸೂತ್ರಧಾರರು ಮುಂದೂಡದೆ ನಡೆಸಿದ್ದು ಹೊಣೆಗೇಡಿತನ ಮಾತ್ರವಲ್ಲದೆ ಕ್ರಿಮಿನಲ್ ಕೃತ್ಯವೂ ಹೌದು.

‘ಸಾಮಾಜಿಕ ದೂರ’ ಕಾಯ್ದುಕೊಳ್ಳಬೇಕೆಂಬ ಕಟ್ಟಳೆಯನ್ನು ಲೇವಡಿ ಮಾಡಿದ ತಬ್ಲೀಘಿ ಮುಖ್ಯಸ್ಥರ ನಡವಳಿಕೆ ಖಂಡನೀಯ.
ತಬ್ಲೀಘೀ ಜಮಾಅತ್ ಇಡೀ ಮುಸಲ್ಮಾನ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯೇನೂ ಅಲ್ಲ. ಆದರೆ ತನ್ನ ತೀವ್ರ ಉಡಾಫೆಯ ಮತ್ತು ಬೇಜವಾಬ್ದಾರಿ ವ್ಯವಹಾರದಿಂದಾಗಿ ಇಡೀ ಮುಸಲ್ಮಾನ ಸಮುದಾಯವನ್ನು ಬಹುಸಂಖ್ಯಾತ ಕೋಮುವಾದಿಗಳ ದ್ವೇಷದ ದಳ್ಳುರಿಗೆ ತಳ್ಳಿದೆ. ಸಿಎಎ ಮತ್ತು ಎನ್.ಆರ್.ಸಿ. ವಿವಾದ ಹಿನ್ನೆಲೆಗೆ ಸರಿದ ನಂತರ ಹಿಂದು-ಮುಸ್ಲಿಮ್ ಮತ್ತು ಭಾರತ-ಪಾಕಿಸ್ತಾನದ ಕಿಚ್ಚನ್ನು ಹೊತ್ತಿಸಿ ಬೇಳೆ ಬೇಯಿಸುವವರು ನಿರುದ್ಯೋಗಿಗಳೂ, ಹತಾಶರೂ ಆಗಿಬಿಟ್ಟಿದ್ದರು. ಕರೋನ ವೈರಸ್ ಮಹಾಮಾರಿಯಲ್ಲಿ ಕೋಮುವಾದವನ್ನು ನುಗ್ಗಿಸುವ ಬಗೆ ಕಾಣದೆ ಕಂಗೆಟ್ಟಿದ್ದರು. ಹೀಗೆ ಹಸಿದು ಕಾದು ಕುಳಿತಿದ್ದ ರಣಹದ್ದುಗಳಿಗೆ ಹಸಿಮಾಂಸವನ್ನಾಗಿ ಅಮಾಯಕ ಮುಸ್ಲಿಮ್ ಸಮುದಾಯವನ್ನು ಉಣಬಡಿಸಿದೆ ತಬ್ಲೀಘೀ ಜಮಾಅತ್.

ವಿಶೇಷವಾಗಿ ಕಳೆದ ಐದಾರು ವರ್ಷಗಳಿಂದ ಹಿಂದೂ ಕಟ್ಟರ್ ವಾದಿಗಳ ದ್ವೇಷದ ಕಾವಲಿಯಲ್ಲಿ ಬೇಯತೊಡಗಿದ್ದ ಸಮುದಾಯವನ್ನು ಕರೋನಾ ಕಳಂಕದ ಬೆಂಕಿಗೆ ಎಸೆದಿದೆ. ದೇಶಾದ್ಯಂತ ತಲೆ ಎತ್ತಿ ನಿಂತಿರುವ ಮತಾಂಧ ಫೇಕ್ ನ್ಯೂಸ್ ಫ್ಯಾಕ್ಟರಿಗಳು ದಿನ ಬೆಳಗಾಗುವುದರೊಳಗೆ ಸಕ್ರಿಯವಾಗಿವೆ. ಹಳೆಯ ಮತ್ತು ಸಂಬಂಧವೇ ಇಲ್ಲದ ನಾನಾ ವಿಡಿಯೋಗಳನ್ನು ಬಳಸಿ ಮುಸಲ್ಮಾನರ ವಿರುದ್ದ ಸುಳ್ಳು ಸುದ್ದಿಗಳ ಪ್ರವಾಹವನ್ನೇ ಹರಿಯಬಿಟ್ಟಿವೆ. ಆಳುವವರ ಕಾಲು ನೆಕ್ಕಿ ಕುಂಯ್ಗುಡುವ ಟೀವಿ ಸುದ್ದಿ ಮಾಧ್ಯಮಗಳಂತೂ ತಬ್ಲೀಘಿ ಅವಿವೇಕದ ಹಿನ್ನೆಲೆಯಲ್ಲಿ ಹಗಲಿರುಳು ಮುಸ್ಲಿಮ್ ದ್ವೇಷವನ್ನು ಕಾರತೊಡಗಿವೆ. ಗೋರಕ್ಷಣೆಯ ಹೆಸರಿನಲ್ಲಿ ಮುಸಲ್ಮಾನರನ್ನು ರಸ್ತೆ ರಸ್ತೆಗಳಲ್ಲಿ ಹಾಡುಹಗಲೇ ಜಜ್ಜಿ ಕೊಂದ ನಂತರ, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡ ನಂತರ, ಸಿಎಎ-ಎನ್ನಾರ್ಸಿ ತಂದು ಅವರ ನಾಗರಿಕತೆಯನ್ನು ಕಸಿಯುವ ಕಾರ್ಯಸೂಚಿಗೆ ವೇಗ ದೊರೆತ ನಂತರ, ದಿಲ್ಲಿ ಕೋಮು ಗಲಭೆಗಳಲ್ಲಿ ಅವರಿಗೆ ‘ಗುಜರಾತ್ ಮಾದರಿಯ ಪಾಠ ಕಲಿಸಿದ’ ನಂತರ ಕರೋನಾ ಕಾಲಿಟ್ಟಿತ್ತು. ಹಠಾತ್ತನೆ ಮುಸ್ಲಿಮ್ ದ್ವೇಷದ ಕಾರ್ಯಕ್ರಮಕ್ಕೆ ತಾತ್ಕಾಲಿಕ ತೆರೆ ಬಿದ್ದಿತ್ತು.

ಹಿಂದು-ಮುಸ್ಲಿಮ್ ದ್ವೇಷದಿಂದಲೇ ತಮ್ಮ ಅಸ್ತಿತ್ವ ಕಟ್ಟಿಕೊಂಡಿರುವವರು ಚಡಪಡಿಸಿದ್ದರು. ಅವರ ಪಾಲಿನ ವರವಾಗಿ ಬಂದದ್ದು ತಬ್ಲೀಘೀ ಪ್ರಕರಣ. ಮೂರನೆಯ ದರ್ಜೆಯ ಪ್ರಜೆಗಳಂತೆ ಬಿದ್ದಿರಬೇಕೆಂಬ ಇಂಗಿತವನ್ನು ಮುಸಲ್ಮಾನರಿಗೆ ಬಗೆಬಗೆಯಾಗಿ ರವಾನಿಸುತ್ತ ಬಂದಿರುವ ಆಳುವ ವರ್ಗ ತಬ್ಲೀಘೀ ಪ್ರಕರಣವನ್ನು ಕರೋನಾ ಭಯೋತ್ಪಾದನೆ, ಕರೋನಾ ಜಿಹಾದ್ ಎಂದೆಲ್ಲ ವಿಷ ಕಾರಿದೆ. ಕರೋನಾ ಜಾತಿ ಧರ್ಮಗಳನ್ನು ನೋಡಿ ಅಂಟುವ ರೋಗವಲ್ಲ ಎಂಬ ವಿವೇಕದ ಒಂದು ಮಾತನ್ನು ದೇಶ ನಡೆಸುವವರು ಆಡಿಲ್ಲ. ಆಡುವ ಮನಸ್ಥಿತಿಯೂ ಅವರದಲ್ಲ.

ಈ ಎಲ್ಲ ವಿಷದ ಬಿತ್ತನೆ, ಫೇಕ್ ನ್ಯೂಸ್ ಹಾಗೂ ಟೀವಿ ಛಾನೆಲ್ಲುಗಳ ದ್ವೇಷ ಪ್ರಸಾರದ ಪರಿಣಾಮವಾಗಿ ಸಾಮಾನ್ಯ ಮುಸಲ್ಮಾನರ ಬದುಕು ದುರ್ಭರವಾಗತೊಡಗಿದೆ. ಮುಸಲ್ಮಾನ ದ್ವೇಷ ಹಳ್ಳಿ ಹಳ್ಳಿಗಳನ್ನು ಪ್ರವೇಶಿಸತೊಡಗಿದೆ. ಅವರ ಬಹಿಷ್ಕಾರದ ಘಟನೆಗಳು ಕೇಳಿಬರುತ್ತಿವೆ. ಬೆಂಗಳೂರಿನ ಪದ್ಮನಾಭನಗರ ಬಡಾವಣೆಯಲ್ಲಿ ಸೊಪ್ಪು ಮಾರಲು ಬಂದ ಮುಸಲ್ಮಾನನ್ನು ಓಡಿಸಲಾಗಿದೆ.

ಅಂದಿನ ಅನ್ನವನ್ನು ಅಂದೇ ದುಡಿದು ಉಣ್ಣಬೇಕಿರುವ ದೇಶದ ಕೋಟ್ಯಂತರ ಅಸಂಘಟಿತ ಕಾರ್ಮಿಕರು ಲಾಕ್ ಡೌನ್ ನಿಂದ ಕಂಗೆಟ್ಟಿದ್ದಾರೆ. ಇದೇ ವರ್ಗಕ್ಕೆ ಸೇರಿರುವ ಮುಸಲ್ಮಾನ ನಿರ್ಗತಿಕರು ಲಾಕ್ ಡೌನ್ ಗಾಯದ ಮೇಲೆ ಕೋಮುದ್ವೇಷದ ಬರೆಯನ್ನೂ ಎಳೆಸಿಕೊಳ್ಳುವ ದುಪ್ಪಟ್ಟು ಸಂಕಟಕ್ಕೆ ಗುರಿಯಾಗಿದ್ದಾರೆ.

ನಿಜಾಮುದ್ದೀನ್ ಮರ್ಕಾಝ್ ಗೆ ಮುನ್ನ ಫೆಬ್ರವರಿಯಲ್ಲಿ ಮಲೇಷಿಯಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ತಬ್ಲೀಘೀ ಸಮ್ಮೇಳನದಲ್ಲಿ 16 ಸಾವಿರ ಮಂದಿ ಭಾಗವಹಿಸಿದ್ದರು. ನೆರೆಹೊರೆಯ ಥಾಯ್ಲೆಂಡ್ ಮತ್ತು ಬ್ರೂನೇ ದೇಶಗಳಿಗೆ ಕರೋನಾ ಹಬ್ಬಿತ್ತು. ಪಾಕಿಸ್ತಾನದ ಲಾಹೋರಿನಲ್ಲಿ ಒಂದೂವರೆ ಲಕ್ಷ ಮಂದಿಯ ಮಾರ್ಚ್ ಸಮ್ಮೇಳನವನ್ನು ಕಡೆಯ ನಿಮಿಷಗಳಲ್ಲಿ ರದ್ದು ಮಾಡಲಾಗಿತ್ತು. ಆದರೆ ಆ ಹೊತ್ತಿಗಾಗಲೆ ದೂರ ದೇಶಗಳಿಂದ ಪ್ರತಿನಿಧಿಗಳು ಇಳಿದುಬಿಟ್ಟಿದ್ದರು. ಕರೋನಾ ಸೋಂಕನ್ನು ಕೆಣಕಿದ್ದರು.

ಮಾರ್ಚ್ 20ರ ಹೊತ್ತಿಗೆ ಪವಿತ್ರ ಮೆಕ್ಕಾ ಮತ್ತು ಮದೀನಾದಲ್ಲಿ ಜನಸಂದಣಿಯ ಪ್ರಾರ್ಥನೆಗಳನ್ನು ಸೌದಿ ಅರೇಬಿಯಾ ನಿಲ್ಲಿಸಿಬಿಟ್ಟಿದೆ. ಇಸ್ಲಾಮಿಕ್ ಗಣರಾಜ್ಯ ಇರಾನ್ ಸೇರಿದಂತೆ ಅರಬ್ ಜಗತ್ತಿನ ಎಲ್ಲೆಡೆ ಮಸೀದಿಗಳು ಮತ್ತಿತರೆ ಪವಿತ್ರ ಸ್ಥಾನಗಳಲ್ಲಿ ಸಾಮಾಜಿಕ ದೂರದ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇಮಾಮ್ ಸೈಯದ್ ಅಹ್ಮದ್ ಬುಖಾರಿ, ಇಮಾಮ್ ಮುಫ್ತಿ ಮುಕರ್ರಮ್ ಅಹ್ಮದ್ ಹಾಗೂ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹಾಗೂ ದೇವೋಬಂದ್ ದಾರುಲ್ ಉಲೂಮ್ ನ ಫತ್ವಾ ಮಾತ್ರವಲ್ಲದೆ ಅನೇಕ ಮಸೀದಿಗಳು ಗುಂಪು ಪ್ರಾರ್ಥನೆಗಳು ಕರೋನಾ ಸೋಂಕಿಗೆ ದಾರಿ ಮಾಡುತ್ತವೆ ಎಂದು ಸಾರಿ ಆಗಿದೆ. ಆದರೂ ಕೆಲವೆಡೆ ಇಂತಹ ಪ್ರಾರ್ಥನೆಗಳು ನಡೆಯುತ್ತಿವೆ. ಸಾಂಕ್ರಾಮಿಕ ರೋಗಗಳು ಮತ್ತು ಮಹಾಮಾರಿಗಳ ವಿಪತ್ತು ಎರಗಿದಾಗ ಯಾರೂ ಮತ್ತೊಬ್ಬರ ಮನೆಗೆ ಹೋಗಕೂಡದು ಮತ್ತು ಯಾರನ್ನೂ ತಮ್ಮ ಮನೆಗೆ ಕರೆಯಬಾರದು ಎಂದು ಪ್ರವಾದಿ ಮಹಮ್ಮದರು ಹೇಳಿದ್ದಾರೆ. ಭಾರೀ ಮಳೆ ಸುರಿಯುತ್ತಿದ್ದ ಒಂದು ದಿನ ಪ್ರಾರ್ಥನೆಯ ಹೊತ್ತು ಸಮೀಪಿಸಿದಾಗ ನಿಮ್ಮ ಮನೆಗಳಲ್ಲೇ ಪ್ರಾರ್ಥಿಸಿ ಎಂದು ಪ್ರವಾದಿ ಹೇಳಿದ್ದರು. ಒಂಟೆಗಳಿಗೆ ಮಾರಣಾಂತಿಕ ಸಾಂಕ್ರಾಮಿಕ ಜಾಡ್ಯ ತಗುಲಿದಾಗ ಸೋಂಕಿತ ಒಂಟೆಗಳನ್ನು ಆರೋಗ್ಯವಂತ ಒಂಟೆಗಳಿಂದ ದೂರ ಇಡುವಂತೆಯೂ ಸೂಚಿಸಿದ್ದರಂತೆ. ಹೀಗಿರುವಾಗ ಮಸೀದಿಗಳಲ್ಲಿ ಪ್ರಾರ್ಥಿಸುವುದನ್ನು ನಿರ್ಬಂಧಿಸಿರುವ ಸರ್ಕಾರ ಮುಸಲ್ಮಾನ ಸಮುದಾಯದ ಒಗ್ಗಟ್ಟನ್ನು ಮುರಿಯತೊಡಗಿದೆ ಎಂಬ ಧರ್ಮಗುರುಗಳ ಮಾತುಗಳು ಅಸಂಬದ್ಧ. ಸಾಮಾನ್ಯ ಅಮಾಯಕ ಮುಸ್ಲಿಮರನ್ನು ಕಾವಲಿಯಿಂದ ಕೆಂಡಕ್ಕೆ ತಳ್ಳುವ ಈ ಕೃತ್ಯ ನಿಲ್ಲಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...