ಮುಸ್ಲಿಂ ಬಾಂಧವರು ಕಟ್ಟಡಗಳ ಟೆರೇಸ್ ಮೇಲೆ ಒಟ್ಟಾಗಿ ನಮಾಜ್ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ. ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರವನ್ನು ಟ್ವೀಟ್ ಮಾಡಿ “ಇದು ಎಲ್ಲಿ ಎಂದು ಯಾರಿಗಾದರು ತಿಳಿದಿದೆಯೆ ?” ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್ ಅನ್ನು ಈವರೆಗೆ 6,000 ಬಾರಿ ರಿಟ್ವೀಟ್ ಮಾಡಲಾಗಿದೆ.

ಫೇಸ್‌ಬುಕ್ ನ ಹುಕ್ಕಾ ಔರ್ ಕಾಟ್ ಎಂಬ ಪೇಜ್ ನಲ್ಲಿ “ಇದು ಧರ್ಮ ಶ್ರದ್ಧೆ ಆಗಿರಬಹುದು ಆದರೆ ದೇಶದ್ರೋಹವಲ್ಲವೇ?” ಎಂಬ ಸಂದೇಶದೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಅನ್ನು ಸಹ ಈವರೆಗೆ 440 ಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದಾರೆ. ಆದರೆ, ಈ ಚಿತ್ರದ ಮೂಲದ ಬಗ್ಗೆಯೋ? ಅಥವಾ ಈ ಚಿತ್ರ ತೆಗೆಯಲಾದ ಸ್ಥಳದ ಬಗ್ಗೆಯೋ? ಎಲ್ಲೂ ಉಲ್ಲೇಖಿಸಿಲ್ಲ. ಆದರೂ, ಅದು ಭಾರತದ ಮುಸ್ಲಿಂ ಸಮುದಾಯವನ್ನು ಸೂಚಿಸುತ್ತಿದೆ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಕನ್ನಡದ ಕೆಲವು ಫೇಸ್‌ಬುಕ್ ಪೇಜ್‌ಗಳಲ್ಲೂ ಸಹ ಈ ಫೊಟೋವನ್ನು ಕನ್ನಡ ತಲೆ ಬರಹದ ಜೊತೆಗೆ ಹಂಚಿಕೊಳ್ಳಲಾಗಿದೆ. ನಮೋ ಮತ್ತು ಮೋದಿ ಕಿಂಗ್ ಡಮ್ ಎಂಬ ಫೇಸ್ ಬುಕ್ ಪೇಜ್‌ಗಳು “ಆರೋಗ್ಯ, ಸಮಾಜ ಹಾಗೂ ವೈಜ್ಞಾನಿಕತೆ ಬಗ್ಗೆ ಕೆಲವರಿಗೆ ಮನವರಿಕೆ ಮಾಡುವುದು, ಕತ್ತೆ ಮುಂದೆ ಕಿನ್ನರಿ ಬಾರಿಸಿದಂತೆ” ಎಂದು ಬರೆದುಕೊಂಡಿವೆ. ಈ ಫೇಸ್‌ಬುಕ್ ಪೇಜಿನ ಪೋಸ್ಟ್‌ಗಳನ್ನು ಕ್ರಮವಾಗಿ,2100 ಹಾಗೂ 2800 ಜನರು ಹಂಚಿಕೊಂಡಿದ್ದಾರೆ.
ಇದಲ್ಲದೆ ಇದೇ ಚಿತ್ರವನ್ನು ಇಟ್ಟುಕೊಂಡು ಬೇರೆ ಬೇರೆ ಸಂದೇಶಗಳೊಂದಿಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಯಬಿಡಲಾಗುತ್ತಿದೆ.

ಈ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸುವಂತೆ “ಆಲ್ಟ್ ನ್ಯೂಸ್” ಗೆ ಹಲವಾರು ದೂರುಗಳು ಬಂದುದರಿಂದ ಆಲ್ಟ್ ನ್ಯೂಸ್ ಈ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿ ಅದರ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ. ಆಲ್ಟ್ ನ್ಯೂಸ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿ ಇದನ್ನು ಈ ಹಿಂದೆ ಸೌದಿ ಅರೇಬಿಯಾ ಮತ್ತು ಕುವೈತ್‌ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋ ಎಂಬುದನ್ನು ಪತ್ತೆಹಚ್ಚಲಾಗಿದೆ. ಈ ದೇಶಗಳ ಅನೇಕ ವ್ಯಕ್ತಿಗಳು ಮಾಡಿದ ಟ್ವೀಟ್‌ಗಳನ್ನು ಆಲ್ಟ್ ನ್ಯೂಸ್ ಕಂಡುಕೊಂಡಿದೆ. ಆದರೆ ಸ್ಥಳವನ್ನು ಮಾತ್ರ ಕಂಡುಹಿಡಿಯಲು ಸಾಧ್ಯವಿಲ್ಲ.

ಚಿತ್ರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ “ಆಲ್ಟ್ ನ್ಯೂಸ್” ಮಸೀದಿ, ನೀರಿನ ಭಾಗ (ಬಹುಶಃ ಸಮುದ್ರ), ಹಿನ್ನಲೆಯಲ್ಲಿ ಗೋಚರಿಸುವ ದೋಣಿಯನ್ನು ಗೂಗಲಿನಲ್ಲಿ ಹುಡುಕಾಡಿದ “ಆಲ್ಟ್ ನ್ಯೂಸ್” ಅದು ದುಬೈ ಇರಬಹುದು ಎಂದು ಹೇಳಿದೆ.

ದುಬೈಯ ಕೊಲ್ಲಿಯ ಬಳಿ ಚಿತ್ರದ ಹಿನ್ನೆಲೆಯಲ್ಲಿ ಎತ್ತರದ ಕಟ್ಟಡವನ್ನು ಕಾಣಬಹುದು. ಯುಎಇಯ ದುಬೈ ಆರ್ಕಿಟೆಕ್ಚರಲ್ ಹೆರಿಟೇಜ್ ಇಲಾಖೆಯ ವೆಬ್ಸೈಟಿನಲ್ಲಿ ಗುಮ್ಮಟ ಮತ್ತು ಮಿನಾರಗಳ ರಚನೆಗಳು ಕಾಣಬಹುದಾಗಿದೆ. ಕೆಳಗೆ ತೋರಿಸಿದ ಹೋಲಿಕೆಯಂತೆ, ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ರಚನೆ ಮತ್ತು ಗೂಗಲ್‌ನಲ್ಲಿ ಲಭ್ಯವಿರುವ ವಾಸ್ತುಶಿಲ್ಪ ಹೆರಿಟೇಜ್ ಇಲಾಖೆಯ ಚಿತ್ರವನ್ನು ಗಮನಿಸಬಹುದಾಗಿದೆ.

ಇದಲ್ಲದೆ, ಈ ಕಟ್ಟಡಗಳ ಗೂಗಲ್ ಅರ್ಥ್ ವೀಕ್ಷಣೆಯಲ್ಲಿ ವೈರಲ್ ಚಿತ್ರದಲ್ಲಿ ಕಂಡುಬರುವ ಶೆಡ್ ಅಥವಾ ಕವರ್‌ಗಳನ್ನು ಕಾಣಬಹುದಾಗಿದೆ (ಶೆಡ್‌ಗಳನ್ನು ನೇರಳೆ ಪಟ್ಟೆಗಳಿಂದ ಹೈಲೈಟ್ ಮಾಡಲಾಗಿದೆ).

ಗೂಗಲ್ ಅರ್ಥ್‌ನ ಮತ್ತೊಂದು ಚಿತ್ರವು ಈ ಕಟ್ಟಡಗಳ ಮೇಲಿನ ನೋಟ ಮತ್ತು ಚಿತ್ರವನ್ನು ಚಿತ್ರೀಕರಿಸಿದ ಕೋನವನ್ನು ತೋರಿಸುತ್ತದೆ.

ಕೆಳಗಿನ ತೋರಿಸಿರುವ ಹೋಲಿಕೆಯಲ್ಲಿ, ಈ ಕಟ್ಟಡಗಳ ಹಿನ್ನೆಲೆಯಲ್ಲಿ ಕಂಡುಬರುವ ಶಾಪಿಂಗ್ ಮಾಲ್‌ಗೆ ಹೊಂದಾಣಿಕೆ ಮಾಡಲು ಮತ್ತು ಸ್ಥಳವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮೇಲಿನ ಎಡಭಾಗದಲ್ಲಿರುವ ಚಿತ್ರವು ಗೂಗಲ್ ಸ್ಟ್ರೀಟ್ ವ್ಯೂ ಆಗಿದ್ದರೆ ಬಲಭಾಗದಲ್ಲಿ ಶಾಪಿಂಗ್ ಮಾಲ್‌ನ ಗೂಗಲ್ ಅರ್ಥ್ ವೀಕ್ಷಣೆ ಇದೆ. ಕೆಳಭಾಗದಲ್ಲಿ ಇರುವ ಚಿತ್ರವು ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ಶಾಪಿಂಗ್ ಮಾಲ್ ಅನ್ನು ತೋರಿಸುತ್ತದೆ.

ಈ ಚಿತ್ರದ ಸ್ಥಳವನ್ನು ಸರಿಯಾಗಿ ಪರಿಶೀಲಿಸಬಹುದಾದರೂ, ಇದು ಇತ್ತೀಚಿನದೇ ಅಥವಾ ಹಳೆಯದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿದೆ.
ಒಟ್ಟಿನಲ್ಲಿ ದುಬೈಯ ಚಿತ್ರವನ್ನು ಮುಂದಿಟ್ಟು ಭಾರತದಲ್ಲಿ ಲಾಕ್‌ಡೌನ್ ಪ್ರೋಟೋಕಾಲ್ ಅನ್ನು ಮುಸ್ಲಿಮರು ಉಲ್ಲಂಘಿಸುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಮಾಡಿ ಕೋಮುದ್ವೇಷ ಹರಡುತ್ತಿರುವುದು ಆಲ್ಟ್‌ನ್ಯೂಸ್ ರಿಯಾಲಿಟಿ ಚೆಕ್‌ನಿಂದ ಬಯಲಾಗಿದೆ. ಆದರೆ, ಹೀಗೆ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸರ್ಕಾರ ಯಾವ ಕಾನೂನು ಕ್ರಮ ಜರುಗಿಸಲಿದೆ? ಎಂಬುದು ಮಾತ್ರ ಚಿದಂಬರ ರಹಸ್ಯ.



ಹೌದು, ಇದು ದುಬೈ ಕಟ್ಟಡಗಳೆ. ಶುಕ್ರವಾರ ಮಸೀದಿಯಲ್ಲಿ ಜಾಗ ಇಲ್ಲದೆ ಕಟ್ಟಡಗಳ ಮೇಲೆ ನಮಾಜ್ ಮಾಡುವ ದ್ರಶ್ಯಗಳು. ಎಲ್ಲ ಕಟ್ಟಡಗಳಿಗು AC ಅಳವಡಿಸಲಾಗಿದೆ.