ಕೊರೋನಾ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ರಾಜ್ಯ ಸರ್ಕಾರದ ಪರವಾನಗಿ ಹೊಂದಿದ್ದಾಗ್ಯೂ ಮಂಗಳೂರು ವ್ಯಾಪಾರಿಗಳನ್ನು ಅಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ಒಕ್ಕಲೆಬ್ಬಿಸಿದ್ದಾರೆ. ಅಲ್ಲದೆ, ಹಣ್ಣು ತರಕಾರಿಗಳನ್ನು ಒತ್ತಾಯಪೂರ್ವಕವಾಗಿ ಕಸದ ಲಾರಿಗೆ ತುಂಬುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಜೀವನೋಪಾಯ ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿರುವ ಬೀದಿಬದಿ ವ್ಯಾಪಾರಸ್ಥರಿಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಎಪ್ರಿಲ್ 7 ರಂದು ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಸೂಚಿಸಿತ್ತು.

ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ಪಡೆದಿರುವ ಬೀದಿಬದಿ ವ್ಯಾಪರಸ್ಥರಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸ್ಥಳೀಯ ಸಂಸ್ಥೆಗಳು ವ್ಯಾಪಾರಕ್ಕೆ ಅನುವು ಮಾಡಿಕೊಟ್ಟೆದೆ. ಆದರೆ ಮಂಗಳೂರಿನ ಮಹಾನಗರ ಪಾಲಿಕೆ ರಾಜ್ಯ ಸರ್ಕಾರದ ಸೂಚನೆ ಬಂದು ಒಂದು ವಾರವೆ ಕಳೆದರೂ, ವ್ಯಾಪಾರಕ್ಕೆ ಪಾಸ್ ಪಡೆದಿರುವ ವ್ಯಾಪಾರಿಗಳ ಸರಕುಗಳನ್ನು ವಶಪಡಿಸಿದ್ದಲ್ಲದೆ ಅದನ್ನು ಕಸದ ಡಬ್ಬಿಗೆ ಹಾಕಿ ನಾಶಪಡಿಸಿದ್ದಾರೆ ಎಂದು ಬೀದಿಬದಿ ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಭಾರತದಾದ್ಯಂತ ಲಾಕ್‌ಡೌನ್ ಘೋಷಿದಂದಿನಿಂದ ದೇಶದ ಹಲವಾರು ಜನರು ಉದ್ಯೋಗ ಕಳೆದುಕೊಂಡು ತಮ್ಮ ಊರಿಗೆ ಕಾಲ್ನಡಿಗೆಯಲ್ಲೆ ಹೊರಟು ದಾರಿಯಲ್ಲೆ ಸಾವಿಗೀಡಾದ ಘಟನೆಗಳು ಈಗಾಗಲೇ ಹಸಿಹಸಿಯಾಗಿದೆ. ದೇಶದಾದ್ಯಂತ ಇರುವ ಅಸಂಘಟಿತ ಕಾರ್ಮಿಕರು ಇನ್ನೂ ಪ್ರಶ್ನಾರ್ಥಕವಾಗಿ ಆಡಳಿತದ ಕಡೆಗೆ ನೋಡುತ್ತಿದ್ದಾರೆ. ಹೀಗಿರುವಾಗ ಆಡಳಿತ ಇಷ್ಟು ಕ್ರೂರಿಯಾಗಬಾರದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನಲ್ಲಿ ನಿನ್ನೆ (ಮಂಗಳವಾರ) ನಗರದ ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ಬೀದಿಬದಿ ವ್ಯಾಪರಸ್ಥರ ಮೇಲೆ ದಾಳಿ ಮಾಡಿದ ಮಹಾನಗರ ಪಾಲಿಕೆ ಮಾರಾಟಕ್ಕೆ ಇಟ್ಟಿದ್ದ ಸರಕುಗಳನ್ನು ಕಾರ್ಪೋರೇಶನ್ ಕಸದ ಗಾಡಿಗೆ ತುಂಬಿ ಅಮಾನವೀಯತೆ ಮೆರೆದಿದ್ದಾರೆ. ವ್ಯಾಪಾರಸ್ಥರು ವ್ಯಾಪಾರಿ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರವನ್ನು ಹೊಂದಿದ್ದರೂ ವಸ್ತುಗಳನ್ನು ಕಸವೆತ್ತುವ ಲಾರಿಗೆ ತುಂಬಿ ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಬೀದಿಬದಿ ವ್ಯಾಪಾರಸ್ಥರನ್ನು ನಾನುಗೌರಿ.ಕಾಮ್ ಮಾತನಾಡಿಸಿದಾಗ, “ಕೊರೊನಾ ಬರುತ್ತದೆಯೆಂದು ಲಾಕ್‌ಡೌನ್ ಮಾಡಲಾಗಿದೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕೊರೊನ ಬರುವುದಕ್ಕಿಂತಲೂ ಮುಂಚೆಯೆ ನಾವು ಹಸಿವಿನಿಂದ ಸಾಯುತ್ತೇವೆ. ಮನೆಗೆ ಹಾಲು ಕೊಳ್ಳಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ವಸ್ತುಗಳನ್ನು ಮಾತ್ರವಲ್ಲದೆ ತಕ್ಕಡಿ ಹಾಗೂ ಇತರ ವಸ್ತುಗಳನ್ನೂ ಸಹ ಪಾಲಿಕೆ ವಶಪಡಿಸಿಕೊಂಡಿದೆ. ಆಹಾರ ವಸ್ತುಗಳನ್ನು ಪೊಲೀಸರ ರಕ್ಷಣೆಯಲ್ಲಿ ಪಾಲಿಕೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಸವನ್ನು ತುಂಬುವಂತೆ ತುಂಬಿ ನಾಶಪಡಿಸಲಾಗಿದೆ” ಎಂದು ಸ್ಥಳೀಯ ವ್ಯಾಪಾರಿ ಸಲೀಂ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾದ ಸಂತೋಷ್ ಕುಮಾರ್ “ಬೀದಿಬದಿ ವ್ಯಾಪಾರಸ್ಥರಿಗೆ ಈಗಾಗಲೇ ಗುರುತಿನ ಚೀಟಿಯನ್ನು ನೀಡಿ ಸರ್ಕಾರದಿಂದ ಆದೇಶ ಬರುವವರೆಗೂ ಕಾಯಲು ಹೇಳಿದ್ದೆವು. 60 ವಾರ್ಡಿಗೆ ಬೀದಿಬದಿ ವ್ಯಾಪಾರಿಗಳನ್ನು ವ್ಯಾಪಾರಕ್ಕೆ ನೇಮಿಸುವ ಬಗ್ಗೆ ಕೂಡಾ ಚಿಂತಿಸಲಾಗಿತ್ತು. ಸದ್ಯಕ್ಕೆ ಜಿಲ್ಲಾಡಳಿತ ಬೀದಿಬದಿ ವ್ಯಾಪಾರವನ್ನು ತಡೆ ಹಿಡಿದಿದೆ. ಅದಲ್ಲದೆ ಗುರುತಿನ ಚೀಟಿ ಇರದಿರುವವರು ಕಾನೂನು ಮೀರಿ ವ್ಯಾಪರ ಮಾಡುತ್ತಿರುವುದರಿಂದ ಅದನ್ನು ತೆರವು ಗೊಳಿಸುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಕೇಳಿ ಕೊಂಡಿದ್ದೇವೆ” ಎಂದರಲ್ಲದೇ “ಆಹಾರವನ್ನು ಕಸದ ಬುಟ್ಟಿಗೆ ಎಸೆದ ಘಟನೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ” ಎಂದಿದ್ದಾರೆ.

(ಬೀದಿಬದಿ ವ್ಯಾಪಾರಿಗಳಿಗೆ ಅನುವು ಮಾಡುವಂತೆ ಸೂಚಿಸಿದ ಅಧಿಸೂಚನೆ)

ಒಟ್ಟಾರೆ ಬೀದಿಬದಿಯ ವ್ಯಾಪಾರಿಗಳಿಗೆ ಅಧಿಕಾರಿಗಳು ಕಿರುಕುಳ ಕೊಟ್ಟಿರುವುದು ನಿಜಕ್ಕೂ ದುರಾದೃಷ್ಟಕರ. ಈ ಕುರಿತು ರಾಜ್ಯ ಸರ್ಕಾರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳೂ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂಬುದೆ ಎಲ್ಲರ ಆಶಯ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಬೀದಿ ಬದಿಯ ವ್ಯಾಪಾರಿಗಳ ಮೇಲಿನ ಈ ದೌರ್ಜನ್ಯ ಕಂಡನಾರ್ಹ. ಲಾಕ್ ಡೌನ್ ನೆಪದಲ್ಲಿ ಬಡವರ ಬದುಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ.

LEAVE A REPLY

Please enter your comment!
Please enter your name here