ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮಾಜಿ ಸಚಿವ ಕೃಷ್ಣಪ್ಪನವರ ಅಣ್ಣನ ಮಗಳಾದ ರೇವತಿಯವರ ವಿವಾಹವು ಇಂದು ಜರುಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಅಭಿಪ್ರಾಯಗಳು ಕೇಳಿಬಂದಿವೆ. ಒಂದಷ್ಟು ಜನರು ನವ ವಧು-ವರರಿಗೆ ಶುಭ ಹಾರೈಸಿದರೆ ಮತ್ತುಷ್ಟು ಜನ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮದುವೆ ಬೇಕಿತ್ತಾ? ಮುಂದೂಡದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಇಂದಿನ ಮದುವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಗುಂಪುಗೂಡಿದ್ದಾರೆ. ಎಲ್ಲಾ ಸಂಪ್ರದಾಯಗಳನ್ನು ಆಚರಿಸುವಾಗ ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಯಾರೂ ಕೂಡ ಮಾಸ್ಕ್ ಧರಿಸಿಲ್ಲ. ಎಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ.
ನಮ್ಮ ಎರಡು ಕುಟುಂಬಗಳನ್ನು ಹೊರತುಪಡಿಸಿ ಉಳಿದವರಾರು ಮದುವೆಯಲ್ಲಿ ಯಾವುದೇ ಅತಿಥಿಗಳು ಹಾಜರಾಗಿಲ್ಲ. ರಾಮನಗರದ ಬಳಿಯ ನಮ್ಮ ಸಂಬಂಧಿಕರ ಫಾರ್ಮ್‌ಹೌಸ್‌ನಲ್ಲಿ ವಿವಾಹ ಜರುಗಿದೆ. ವರ ಮತ್ತು ವಧು ಹೂವಿನ ಹಾರಗಳನ್ನು ಬದಲಿಸಿಕೊಂಡರು. ಉಳಿದಂತೆ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಲಾಗಿದೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಫೋಟೊಗಳಲ್ಲಿ ನಿಖಿಲ್ ತಾತ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರು ಆರ್ಶಿವಾದ ಮಾಡುತ್ತಿರುವ ಚಿತ್ರ, ಅರ್ಚಕ ಇರುವ ಚಿತ್ರಗಳು ಸೇರಿವೆ. ಒಂದೇ ಫೋಟೊದಲ್ಲಿ 8 ಜನರು ಬಹಳ ಹತ್ತಿರದಲ್ಲಿಯೇ ನಿಂತಿರುವುದು ಸಹ ಕಂಡುಬಂದಿದೆ.
ಈ ಮೊದಲು ಮದುವೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯನ್ನು ಬೆಂಗಳೂರನ್ನು ರೆಡ್‌ಝೋನ್ ಎಂದು ಘೋಷಿಸಿದ್ದರಿಂದ ವಿವಾಹಸ್ಥಳ ರಾಮನಗರಕ್ಕೆ ಬದಲಾಗಿತ್ತು. ಮದುವೆಯನ್ನು ಮುಂದೂಡುವಂತೆ ಹಲವಾರು ಸಲಹೆಗಳು ಕೇಳಿಬಂದರೂ ಅದಕ್ಕೆ ಎಚ್.ಡಿ ಕುಮಾರಸ್ವಾಮಿಯವರು ಒಪ್ಪಿರಲಿಲ್ಲ. ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ದಯವಿಟ್ಟು ಅಭಿಮಾನಿಗಳು ವಿವಾಹ ನಡೆಯುವ ಸ್ಥಳದಿಂದ ದೂರದಲ್ಲಿರಿ. ಪರಿಸ್ಥಿತಿ ತಿಳಿಯಾದ ಬಳಿಕ ದೊಡ್ಡ ಸಮಾರಂಭವನ್ನು ಆಯೋಜಿಸುತ್ತೇವೆ ಎಂದಿದ್ದಾರೆ.
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟವಾದ್ದರಿಂದ ಮನೆಯಲ್ಲಿ ಮದುವೆ ಮಾಡದೇ ಫಾರ್ಮ್‌ಹೌಸ್‌ನಲ್ಲಿ ಮಾಡುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮದುವೆಯಲ್ಲಿ ಪಾಲ್ಗೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ಮದುವೆಯೂ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವೈದ್ಯರುಗಳ ಜೊತೆಗಿನ ಸಮಾಲೋಚನೆಯೊಂದಿಗೆ ನಡೆಯುತ್ತಿದೆ. 60-70 ಜನರಷ್ಟೇ ಭಾಗವಹಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿವಾಹದ ಸಮಯದಲ್ಲಿ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಇದರಲ್ಲಿ ಎರಡು ಮಾತಿಲ್ಲ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಹೇಳಿದ್ದಾರೆ.
ನಾವು ಅಧಿಕಾರದ ಸ್ಥಾನದಲ್ಲಿರುವವರು ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಅಧಿಕಾರ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ ಎಂಬ ತಪ್ಪು ಸಂದೇಶ ಹೋಗುತ್ತದೆ. ಒಂದು ವೇಳೆ ಉಲ್ಲಂಘನೆ ಕಂಡುಬಂದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾನು ಪೊಲೀಸರು ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.



ನಡೆಯೇ ಬೇರೆ, ನುಡಿಯೇ ಬೇರೆ; ನುಡಿದಂತೆ ನಡೆಯಬೇಕಿಲ್ಲ, ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ, ದೊಡ್ಡ ಗೌಡರ ಕುಟುಂಬದವರು!?