Homeಮುಖಪುಟಮಾಧ್ಯಮ ಲೋಕಕ್ಕೆ ಬೀಸುತ್ತಿರುವ ಕೊರೊನಾ ಬಿರುಗಾಳಿ

ಮಾಧ್ಯಮ ಲೋಕಕ್ಕೆ ಬೀಸುತ್ತಿರುವ ಕೊರೊನಾ ಬಿರುಗಾಳಿ

- Advertisement -
- Advertisement -

ಕರೋನಾ ವೈರಸ್ ಜಗತ್ತಿಗೆ ತಂದೊಡ್ಡಿದ ಆತಂಕ ಅಂತಿಂತಹುದಲ್ಲ. ಇದು ವೈರಸ್ ಸೃಷ್ಟಿಸಿದ ಆತಂಕವೋ, ಇಲ್ಲ ಕೃತಕವಾಗಿ ಮಾನವ ನಿರ್ಮಿತ ಕರ್ಮಕಾಂಡವೋ ಗೊತ್ತಿಲ್ಲ. ಒಂದಂತೂ ಸತ್ಯ. ಯಾರೇ ಸೃಷ್ಟಿ ಮಾಡಿದ್ದರು ಕೂಡಾ ಸಂಪೂರ್ಣ ಮಾನವ ಕುಲ ಸಂಕಷ್ಟದಲ್ಲಿ ಸಿಲುಕಿದೆ.. ವೈರಸ್ ಎಷ್ಟು ವೇಗವಾಗಿ ಜನರ ಜೀವವನ್ನು ಆಪೋಶನ ತೆಗೆದುಕೊಳ್ಳುತ್ತಿದೆಯೋ, ಅದಕ್ಕಿಂತ ವೇಗವಾಗಿ ಕೆಟ್ಟಿರುವ ಆರ್ಥಿಕ ವ್ಯವಸ್ಥೆಯ ಕಬಂಧ ಬಾಹುವಿನಲ್ಲಿ ಸಾಮಾನ್ಯ ಜನರ ಬದುಕನ್ನು ಸೆಳೆದುಕೊಳ್ಳುತ್ತಿದೆ..

ಸಮಾಜದ ಎಲ್ಲ ಕ್ಷೇತ್ರದ ಜನ ಕರೋನಾ, ಕರೋನಾ ಎಂದು ಜಪಿಸುವಂತೆ ಮಾದಿರುವ ಈ ಮಹಾಮಾಯ ಹೊಡೆತಕ್ಕೆ ಸಿಲುಕಿ ನರಳದ ಘಟಕಗಳಿಲ್ಲ.. ಇದಕ್ಕೆ ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ. ಇವತ್ತಿನ ಸ್ಥಿತಿ ಎಂತಹ ಮಟ್ಟಕ್ಕೆ ತಲುಪಿದೆಯೆಂದರೆ ಕೇವಲ ಮಾಧ್ಯಮ ಲೋಕದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಎಲ್ಲ ಕ್ಷೇತ್ರಗಳಲ್ಲೂ ಯಾವ ಹೊತ್ತಿನಲ್ಲಿ ಯಾರು ಬಾಗಿಲು ಹಾಕುತ್ತಾರೋ, ಯಾರು ಕೆಲಸ ಕಳೆದುಕೊಳ್ಳುತ್ತಾರೋ, ಯಾರ ಮನೆಯ ಒಲೆಯ ಕಿಚ್ಚು ಆರಿ ಹೋಗುತ್ತದೋ… ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಇದು ಮನುಕುಲದ ಪಾಲಿಗೆನೇ ಅತ್ಯಂತ ಆತಂಕದ ಕ್ಷಣ.

ಇದು ಕೇವಲ ತಮಾಷೆಯ ವಿಷಯವಲ್ಲ. ಕೊರೊನಾದಿಂದಾಗಿ ಜಾಗತಿಕ ನೆಲೆಯಲ್ಲಿ ಹಲವು ಉದ್ಯಮಗಳು ತಳ ಹಿಡಿಯುವುದಂತೂ ಖಚಿತತವಾಗಿ ಬಿಟ್ಟಿದೆ. ಆ ಪೈಕಿ ಆಟೊಮೊಬೈಲ್, ಏವಿಯೇಷನ್‍ನಂತೆಯೇ ಮಾಧ್ಯಮ ಕೂಡ ಒಂದಾಗಿದೆ. ಜಗತ್ತಿನೆಲ್ಲೆಡೆ ಎಲ್ಲ ಮಾಧ್ಯಮ ಸಂಸ್ಥೆಗಳೂ ಜಾಹೀರಾತು ರೆವಿನ್ಯೂ ಇಲ್ಲದೇ ಸೋತು-ಸೊರಗಿ ಹೋಗಿವೆ. ಆ ಪೈಕಿ ಹಲವು ಸಂಸ್ಥೆಗಳು ಮುಚ್ಚಿ ಹೋದರೂ ಹೋಗಬಹುದು.

ಉಳಿದೆಲ್ಲ ಉದ್ಯಮಗಳ ಮೇಲೆ ಆದಂತೆಯೇ ಕೊರೊನಾ ಲಾಕ್‍ಡೌನ್ ಪರಿಣಾಮ ಪತ್ರಿಕೋದ್ಯಮದ ಮೇಲೂ ಆಗಿ ಹೋಗಿದೆ. ಆಡಳಿತ ಮಂಡಳಿಗಳು ಅಪಾರ ಮಟ್ಟದ ನಷ್ಟ ಅನುಭವಿಸುತ್ತಿವೆ. ಪರಿಣಾಮ ಕೊರೊನಾ ಪೂರ್ವ ಮತ್ತು ಕೊರೊನಾ ನಂತರದ ಮಾಧ್ಯಮ ಲೋಕಕ್ಕೆ ಹೋಲಿಸಿದರೆ ಅಪಾರ ವ್ಯತ್ಯಾಸಗಳು ಕಾಣಲಿವೆ.

ಒಂದು ಅಂದಾಜಿನ ಪ್ರಕಾರ ಕೊರೊನೋತ್ತರದಲ್ಲಿ ಮಾಧ್ಯಮ ಲೋಕದಲ್ಲಿರುವ ಶೇಕಡಾ 30-40ರಷ್ಟು ಪತ್ರಕರ್ತರು ಅವರ ಕೆಲಸ ಕಳೆದುಕೊಳ್ಳಲಿದ್ದಾರೆ. ತಂತ್ರಜ್ಞಾನ ಅಳವಡಿಕೆ, ಬದಲಾದ ವೃತ್ತಿಲೋಕದ ಸಂಸ್ಕೃತಿ, ಕಾಸ್ಟ್ ಕಟ್ಟಿಂಗ್… ಕಾರಣ ಬೇರೆ, ಬೇರೆ. ಕೆಲಸ ಹೋಗುವುದಂತೂ ಗ್ಯಾರಂಟಿ. ಇದು ಜಾಗತಿಕವಾದ ವಿದ್ಯಮಾನವಾಗಿರಲಿದೆ ಎಂಬುದೂ ಗ್ಯಾರಂಟಿ.

ಇದಕ್ಕೆ ಸಣ್ಣ ಅಥವಾ ದೊಡ್ಡ ಸಂಸ್ಥೆಯೆಂಬ ಬೇದಭಾವವಿಲ್ಲ; ಇದರ ಹೊಡೆತಕ್ಕೆ ದೇಶದ ನಂಬರ್ ಒನ್ ಇಂಗ್ಲಿಷ್ ಪತ್ರಿಕೆ ಟೈಂಸ್ ಆಫ್ ಇಂಡಿಯಾ ಕೂಡಾ ಹೊರತಾಗಿಲ್ಲ. ಅದು ತನ್ನ ಭಾನುವಾರದ ಪುರವಣಿಯ ಇಡೀ ತಂಡವನ್ನೇ ಕೆಲಸದಿಂದ ತೆಗೆದುಹಾಕಿದೆ. ಆ ಪುರವಣಿಯ ಸಂಪಾದಕಿ 24 ವರ್ಷಗಳ ಕಾಲ ಆ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು ಎನ್ನುವ ಮಾಹಿತಿಯನ್ನೂ ಇಲ್ಲಿ ಕೊಡಬೇಕು.

ಈ ಲಾಕ್‍ಡೌನ್, ಸೀಲ್‍ಡೌನ್, ಸ್ಮಾರ್ಟ್ ಲಾಕ್‍ಡೌನ್, ಸೂಪರ್ ಸ್ಮಾರ್ಟ್ ಲಾಕ್‍ಡೌನ್…. ಆಗುವುದಕ್ಕಿಂತ ಮೊದಲೇ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೇ ಕನಿಷ್ಠ ಮೂವತ್ತು ಹಿರಿಯ ಪತ್ರಕರ್ತರನ್ನು ಮನೆಗೆ ಕಳುಹಿಸಲು ತೀರ್ಮಾನ ಮಾಡಿತ್ತು. ಅದೂ ಅತ್ಯಂತ ಹಳೆಯ ಮತ್ತು ಸಂಪ್ರದಾಯದ ನೆಲೆಯಲ್ಲಿ ಗಟ್ಟಿಯಾಗಿದ್ದ ಸಂಸ್ಥೆ. ಒಂದು ಕಾಲದಲ್ಲಿ ಆ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿದರೆ ಬದುಕೇ ಬೆಳಗಿ ಹೋಯಿತು ಎಂಬ ಭಾವನೆ ಇತ್ತು. ಅಂತಹ ಸಂಸ್ಥೆಯೇ ಇಂದು ಬೇಡವೆಂದವರನ್ನೆಲ್ಲಾ ಹೊರಗೆ ಹಾಕುತ್ತಿದೆ. ಪರಿಸ್ಥಿತಿ ಆ ಹಂತ ತಲುಪಿರುವಾಗ ಬೇರೆ ಸಂಸ್ಥೆಗಳ ಉದ್ಯೋಗಿಗಳ ಪಾಡೇನು?

ಪತ್ರಿಕೆಯ ಈ ಸಂಚಿಕೆ ಅಂತಿಮಗೊಳ್ಳುತ್ತಿರುವ ಹೊತ್ತಿನಲ್ಲಿ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕೆಲಸ ಕಳೆದುಕೊಳ್ಳುತ್ತಿರುವ

ಮಾಧ್ಯಮ ಸಂಸ್ಥೆಗಳ ನೌಕರರ ವಿವರ ಹೀಗಿದೆ.

1. ಇಂಡಿಯನ್ ಎಕ್ಸ್‍ಪ್ರೆಸ್ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ಸಿಬ್ಬಂದಿ ವೇತನ ಕಡಿತವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಇಂಡಿಯನ್ ಎಕ್ಸ್‍ಪ್ರೆಸ್ HR ಪತ್ರದ ಸಾರಾಂಶ ಹೀಗಿದೆ.

ಮೊದಲ ಹೆಜ್ಜೆಯಾಗಿ, ನಾವೆಲ್ಲರೂ ಇಂದಿನಿಂದ ತಾತ್ಕಾಲಿಕ ವೇತನ ಕಡಿತವನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವೆಲ್ಲರೂ ನನ್ನೊಂದಿಗಿದ್ದೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಮುಖ್ಯ ಸಂಪಾದಕ ರಾಜ್ ಕಮಲ ಜಾ ಮತ್ತು ವರ್ಗೀಸ್ ಅವರು ಶೇ.100ರಷ್ಟು ವೇತನ ಪಡೆಯದಿರಲು ನಿರ್ಧರಿಸಿದ್ದಾರೆ. ಅಧ್ಯಕ್ಷರು ಮತ್ತು ಅನಂತ್ ಕೂಡ ಶೇ.100ರಷ್ಟು ವೇತನ ಕಡಿತವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ಸುಧಾರಿಸದಿದ್ದರೆ ನನಗೆ ಬೇರೆ ಆಯ್ಕೆ ಇರುವುದಿಲ್ಲ. ಆದರೆ ಹೆಚ್ಚಿನ ತ್ಯಾಗ ಮಾಡಲು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ.

2. ಔಟ್‍ಲುಕ್ ಮುದ್ರಣ ಪ್ರಕಟಣೆಯನ್ನು ನಿಲ್ಲಿಸಿದೆ.

3. ನ್ಯೂಸ್‍ನೇಷನ್ ಇಂಗ್ಲಿಷ್ ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ 16 ಉದ್ಯೋಗಿಗಳನ್ನು ಕಡಿತಗೊಳಿಸಿದೆ.

4. ಕ್ವಿಂಟ್ ತಂಡದ ಅರ್ಧದಷ್ಟು ಜನರು ವೇತನವಿಲ್ಲದೆ ರಜೆ ಹೋಗಲು ಕೇಳಿಕೊಳ್ಳಲಾಗಿದೆ. ಜೊತೆಗೆ ಕ್ವಿಂಟ್ ತನ್ನ ಟೆಕ್ ಮತ್ತು ಆಟೋ ವಿಭಾಗವನ್ನು ಮುಚ್ಚಿದೆ

5. ಇಂಡಿಯಾ ಟುಡೆ 46 ವರದಿಗಾರರು, 6 ಕ್ಯಾಮೆರಾಮೆನ್ ಮತ್ತು 17 ಕಾರ್ಯಕ್ರಮ ನಿರ್ಮಾಪಕರನ್ನು ಮನೆಗೆ ಕಳುಹಿಸಿದೆ..

6. ಅಮರ್ ಉಜಲಾದಲ್ಲಿ 50% ಸಂಬಳ ಕಡಿತ ಮಾಡಿದೆ..

7. ಪಿಟಿಐ 60% ವೇತನವನ್ನು ಮಾತ್ರ ಬಿಡುಗಡೆ ಮಾಡಿದೆ?

8. ನಯೀ ದುನಿಯಾ (ಉರ್ದು) ಮತ್ತು ಸ್ಟಾರ್ ಆಫ್ ಮೈಸೂರು ಪ್ರಕಟಣೆಯನ್ನು ಸ್ಥಗಿತಗೊಳಿಸಿದೆ.

9. ಬಿಸಿನೆಸ್ ಸ್ಟ್ಯಾಂಡರ್ಡ್ ಎಚ್‍ಆರ್‍ನಿಂದ ಪ್ರತಿಯೊಬ್ಬ ಉದ್ಯೋಗಿಗೂ ಮೇಲ್ ಹೊಗಿದೆ.. ಇಮೇಲ್ ಸಾರಾಂಶ ಹೀಗಿದೆ.. ಮೇ ತಿಂಗಳಿನಿಂದ ಸಂಬಳ ಕಡಿತವನ್ನು ಯೋಜಿಸಲಾಗಿದೆ. 10 ರಿಂದ 15 ಲಕ್ಷ ವಾರ್ಷಿಕ ವೇತನ ಪಡೆಯುತ್ತಿರುವವರಿಗೆ ಶೇ 10, ಹೆಚ್ಚಿನ ಸಂಬಳ ಪಡೆಯುತ್ತಿರುವವರಿಗೆ ಶೇ.30 ಸಂಬಳ ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಇದು ರಾಷ್ಟ್ರೀಯ ಸಂಸ್ಥೆಗಳ ಕಥೆಯಾದರೆ, ಕನ್ನಡ ಮಾಧ್ಯಮ ಲೋಕವನ್ನೇ ತೆಗೆದುಕೊಂಡರೆ, 8 ಸಾವಿರದಿಂದ 10 ಸಾವಿರ ಉದ್ಯೋಗಿಗಳು ಕೆಲಸ ಮಾಡಿತ್ತಿದ್ದಾರೆ. ಈ ಪೈಕಿ ಜೀವನ ಭದ್ರ ಮಾಡಿಕೊಂಡಿರುವವರ ಸಂಖ್ಯೆ ಎಷ್ಟಿರಬಹುದು. ಹೆಚ್ಚೆಂದರೆ ನೂರಿನ್ನೂರು ಜನರು. ಉಳಿದಂತೆ ಶೇ.95ರಷ್ಟು ಪತ್ರಕರ್ತರು ಈವತ್ತೂ ಹೋರಾಟದ ಹಾದಿಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹವರಿಗೆ ಒಂದು ತಿಂಗಳು ಸಂಬಳ ಬರದೇ ಹೋದರೆ ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ.

ಅದರಲ್ಲಂತೂ ಕೂಗು ಮಾರಿಗಳಾಗಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಪೈಕಿ ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರ ಸ್ಥಿತಿ ಹೇಳಿಕೊಳ್ಳುವ ಹಾಗಿಲ್ಲ. ಆರ್ಥಿಕ ಕುಸಿತದಿಂದ ಮೊದಲೇ ಏದುಸಿರುಬಿಡುತ್ತಿದ್ದ ಮಾಧ್ಯಮಗಳಿಗೆ ಕೊರೊನಾ ಬಿಕ್ಕಟ್ಟು ಕಡೆಯ ಮೊಳೆ ಹೊಡೆಯುತ್ತಿದೆಯೇ ಎಂಬ ಪರಿಸ್ಥಿತಿ ತಲೆದೋರಿದೆ. ಸಂಪೂರ್ಣ ಚಿತ್ರಣವು ತೆರೆದುಕೊಳ್ಳುವುದು ಇನ್ನೂ ಮೂರ್ನಾಲ್ಕು ತಿಂಗಳ ನಂತರವೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಚ್ಚು ಮೀಡಿಯಾ ಗೆ ಹೆಚ್ಚು ಒಡೆತ ಬೀಳಲಿದೆ. Online, social mediaಗಳ ಒಡೆತದಿಂದ ಮೊದಲೇ ಹಿನ್ನಡೆಯನ್ನು ಕಂಡಿದ್ದ ಅಚ್ಚು ಒಯ್ಯುಗೆ ಮತ್ತಶ್ಟು ಮುಗ್ಗರಿಸಲಿದೆ. ಹೊತ್ತಿಗೆ ತಕ್ಕಂತೆ ಬದಲಾಗುವುದೊಂದೇ ಉಳಿದಿರುವ ದಾರಿ.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...