ಕನ್ನಡ ಇಂಗ್ಲಿಷ್ ನಿಘಂಟು, 1894ರಲ್ಲಿ ಪ್ರಕಟವಾದ ಬಹಳ ವಿದ್ವತ್ಪೂರ್ಣ ಮಾತ್ರವಲ್ಲದೇ ಕನ್ನಡದ ಚಿರಸ್ಮರಣೀಯ ಕೃತಿಯಾಯ್ತು. ಜರ್ಮನಿಯ ಟ್ಯುಬಿಗನ್ ವಿಶ್ವವಿದ್ಯಾಲಯ ಕಿಟ್ಟೆಲ್ ರಿಗೆ ಗೌರವ ಡಾಕ್ಟರೇಟ್ ನೀಡಿತು. ಈ ಮೂಲಕ ಕನ್ನಡದ ಕೃತಿಯೊಂದಕ್ಕೆ ಸಂದ ಮೊಟ್ಟ ಮೊದಲ ಡಾಕ್ಟರೆಟ್ ಅದಾಯ್ತು.
ಧರ್ಮ ಪ್ರಚಾರ ಎಂಬ ಮುಖ್ಯ ಕಾರ್ಯಕ್ಕೆ ಪಾದ್ರಿಗಳು ಬಂದರೂ ಅವರು ಮಾಡುವಂತಹ ಉಪಕಾರ್ಯಗಳು ಬಹಳ ಮಹತ್ತರ ಕಾರ್ಯಗಳಾಗಿ ಪರಿಣಮಿಸುತ್ತವೆ. ಕಿಟ್ಟೆಲ್ಲರ ವಿಷಯದಲ್ಲೂ ಅದೇ ಆಗಿದ್ದು. ಕನ್ನಡದ ಬಗ್ಗೆ ಅಪಾರ ಅಭಿಮಾನ ಮತ್ತು ಆಸೆಯಿಂದ ಭಾಷೆ ಕಲಿತರೆಂದು ಕಿಟ್ಟೆಲ್ಲರ ಬಗ್ಗೆ ಪ್ರಶಂಸೆ ನೀಡುತ್ತಾರೆ. ಆದರೆ ಅವರಿಗೆ ಕನ್ನಡ ಕಲಿಕೆ ಅಭಿಮಾನವೋ, ಆಸೆಯೋ ಅಲ್ಲದೇ ಅನಿವಾರ್ಯವಾಗಿತ್ತು. ಮತಪ್ರಚಾರಕರು ತಾವು ಹೋದ ಪ್ರದೇಶದಲ್ಲಿ ನೆಲಸಿ, ಸ್ಥಳೀಯರೊಂದಿಗೆ ಸಂವಹನ ನಡೆಸಲೇ ಬೇಕಾದ ಕಾರಣದಿಂದ ಭಾಷೆಗಳನ್ನು ಕಲಿಯುತ್ತಿದ್ದರು. ಅಲ್ಲಿನ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಿನ್ನೆಲೆಗಳನ್ನು ತಿಳಿಯಲು ಭಾಷೆಯ ಕಲಿಕೆ ಮತ್ತು ಪುಸ್ತಕಗಳ ಓದು ಬೇಕಾಗಿರುವುದೇ. ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ವ್ಯಾವಹಾರಿಕವಾಗಿ ಭಾಷೆ ಕಲಿತು ಸುಮ್ಮನಿರುವ ಬದಲು ವಿದ್ವತ್ಪೂರ್ಣ ಗ್ರಂಥಗಳನ್ನು ಓದಿ, ಸಂಶೋಧನೆಗಳನ್ನು ಮಾಡಿ, ನಮ್ಮ ಭಾಷೆಯ ಬಗ್ಗೆ ನಮಗೇ ಹೆಚ್ಚಿನ ಅರಿವನ್ನು ಮೂಡಿಸುವಂತಹ ಕೆಲಸವೆಂದರೆ, ಅದು ಸಾಮಾನ್ಯವಲ್ಲದ ಅವರ ಆಸಕ್ತಿ ಮತ್ತು ಶಕ್ತಿ.
ಪಂಪನಿಂದ ಆರಂಭಗೊಂಡು, ಕೇಶೀರಾಜನ ಒಳಗೊಂಡು, ಕೊಳ್ಳೇಗಾಲದ ನಿಜಗುಣ ಶಿವಯೋಗಿಗಳನ್ನೂ ಸೇರಿದಂತೆ ನೂರಾರು ಕೃತಿಗಳನ್ನು, ಕೃತಿಕಾರರನ್ನು ಅಧ್ಯಯನ ಮಾಡಿ, ಸಂಶೋಧನೆ ನಡೆಸಿ, ಸಾಧಾರವಾಗಿ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆಯುವು ದೆಂದರೆ ಖಂಡಿತವಾಗಿ ನಾವು ಬಹು ಹೆಮ್ಮೆ ಮತ್ತು ಅಭಿಮಾನದಿಂದ ಅವರನ್ನು ಸ್ಮರಿಸಬೇಕಾಗುತ್ತದೆ.
ಒಂದು ವೇಳೆ ಅವರು ತಮ್ಮ 23ರ ಹರೆಯದಲ್ಲಿ 1854ರಲ್ಲಿ ಮಂಗಳೂರಿಗೆ ಬದಲು ಪೋರ್ ಬಂದರಿಗೆ ಹೋಗಿದ್ದರೆ ಗುಜರಾತಿ ಕಲಿಯುತ್ತಿದ್ದರು. ಈಗ ಕನ್ನಡಕ್ಕೆ ಅವರು ನೀಡಿರುವ ಕೊಡುಗೆಗಳೆಲ್ಲವೂ ಗುಜರಾತಿ ಭಾಷೆಗೆ ಸಿಕ್ಕುತ್ತಿತ್ತು. ಹಾಗಾಗಿ, ಅದೃಷ್ಟವನ್ನು ನಂಬದ ನಾನೂ (ಅದಕ್ಕೆ ಪರ್ಯಾಯ ಪದದ ಕೊರತೆಯಿಂದ) ಕಿಟ್ಟೆಲ್ ಕನ್ನಡನಾಡಿಗೆ ಬಂದಿದ್ದು ನಮ್ಮ ಅದೃಷ್ಟ, ಭಾಗ್ಯ ಎನ್ನುತ್ತೇನೆ. 1752 ಪುಟಗಳ ಆ ನಿಘಂಟು ಅಕ್ಷರಶಃ ಪುಟಪುಟವೂ ಸಂಶೋಧನೆ, ವಿದ್ವತ್ತು, ಪರಿಶ್ರಮ, ಆಸಕ್ತಿ ಮತ್ತು ಅಗತ್ಯದಿಂದ ಕೂಡಿವೆ.
ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾ, ವಿದ್ವಾಂಸರನ್ನು, ಶಿಕ್ಷಕರನ್ನು, ಸಂಶೋಧಕರನ್ನು ಮತ್ತು ಸಾಮಾನ್ಯ ಜನರನ್ನು ಮಾತಾಸಿಡಿ ಕೊಂಡು, ಅವರಿಂದ ಪದಗಳನ್ನು ಕಲಿತುಕೊಂಡು, ಅದನ್ನು ದಾಖಲಿಸಿ ಕೊಂಡು, ನಿಘಂಟಿಗೆ ಸೇರಿಸುವುದು ಮಾತ್ರವಲ್ಲದೇ ಪ್ರಾದೇಶಿಕ ಉಪಭಾಷೆ ಅಥವಾ ಆಡುನುಡಿಗಳನ್ನೂ (ಡಾಯ್ಲೆಕ್ಟ್) ಕೂಡಾ ಉಲ್ಲೇಖಿಸಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಹೆಸರು ಮತ್ತು ಖ್ಯಾತಿಯ ಮಟ್ಟಿಗಾದರೂ ಪರಿಚಯವಿರುವ ಪಂಪನಿರಲಿ, ಎಷ್ಟೋ ಸಂಶೋಧನಾ ವಿದ್ಯಾರ್ಥಿಗಳಿಗೂ ತಿಳಿಯದೇ ಇರುವಂತಹ ಹಲಾಯುಧನ ಅಭಿಧಾನ ರತ್ನಮಾಲ (ಕ್ರಿಸ್ತಶಕ 1000) ಕೂಡಾ ಇವರ ಅಧ್ಯಯನದ ಭಾಗವಾಗಿತ್ತು. ವಿಶೇಷವಾಗಿ ಭಾಷೆಯ ಕುರಿತಾದ ಆಸಕ್ತಿ ಅಷ್ಟು ಉನ್ನತವಾದದ್ದು. ಅಮರಕೋಶ (ಕ್ರಿ.ಶ. 1158), ಅರ್ಗಳನ ಚಂದ್ರಪ್ರಭ ಪುರಾಣ, ಲೀಲಾವತಿ ಪ್ರಬಂಧ, ನಾಗವರ್ಮನ ಕಾವ್ಯಾವಲೋಕನ ಮತ್ತು ಛಂದಸ್ಸು, ಕೇಶಿರಾಜನ ಶಬ್ಧಮಣಿ ದರ್ಪಣ, ಅಭಿನವ ಪಂಪನೆಂದು ಖ್ಯಾತನಾಗಿದ್ದ ನಾಗಚಂದ್ರನ ರಾಮಚಂದ್ರನ ಪುರಾಣ; ಹೀಗೇ ಅವರ ಅಧ್ಯಯನದ ಪಟ್ಟಿ ಸಾಗುತ್ತದೆ. ಈ ಹಿಂದೆ ಹೇಳಿದ್ದೆಲ್ಲಾ ಪ್ರಾಚೀನ ಕನ್ನಡ ಡಾಯ್ಲೆಕ್ಟ್ ಆದರೆ, ಮಧ್ಯಕಾಲದ ಕನ್ನಡದ ಆಡುನುಡಿಯನ್ನು ಗ್ರಹಿಸಲು ಸೋಮೇಶ್ವರ ಶತಕ (ಕ್ರಿ.ಶ. 1300) ದಿಂದ ಪ್ರಾರಂಭಿಸಿ, ಚಿದಾನಂದವಧೂತರ ಜ್ಞಾನಸಿಂಧು (ಕ್ರಿ.ಶ. 1820)ಗೆ, ಅಂದರೆ ಅವರ ಕಾಲದ ಗ್ರಂಥಗಳನ್ನು ಸಮೀಪಿಸುತ್ತಾರೆ.
ಕನ್ನಡದ ಗ್ರಂಥಗಳನ್ನು ಅಧ್ಯಯನ ಮಾಡುವುದು ಮಾತ್ರವಲ್ಲದೇ ಕನ್ನಡದ ಮೇಲೆ ಪ್ರಭಾವ ಬೀರಿರುವಂತಹ ಸಂಸ್ಕೃತ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಕೊಂಕಣಿ ಮತ್ತು ತುಳುವಿನ ಮೂಲಗಳನ್ನೂ ಅವಗಾಹನೆಗೆ ತೆಗೆದುಕೊಳ್ಳದೇ ಬಿಡುವುದಿಲ್ಲ. ಅತ್ಯಂತ ಶಾಸ್ತ್ರೀಯವಾಗಿ ಭಾಷೆಯ ವಿಷಯದಲ್ಲಿ ಕೆಲಸ ಮಾಡುವ ಮಾದರಿಯನ್ನು ಕೊಟ್ಟು ಉಪಕರಿಸಿದ್ದಾರೆ ಕಿಟ್ಟೆಲ್.
ಗ್ರಂಥಗಳಲ್ಲಿರುವ ಪದಗಳು ಮತ್ತು ಆಡು ನುಡಿಗಳಲ್ಲಿರುವ ಉಚ್ಚಾರಣೆಗಳನ್ನೂ ಕೂಡಾ ಗಮನದಲ್ಲಿಟ್ಟುಕೊಂಡು ಸೂಚನೆಗಳನ್ನು ಕೊಡುತ್ತಾರೆ. ಬಹಳ ಮುಖ್ಯವಾಗಿ ಪ್ರಾದೇಶಿಕ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗುರುತಿಸುವುದು. ಪದಗಳ ಅರ್ಥಗಳನ್ನು ಸ್ಪಷ್ಟೀಕರಿಸಲು ಸ್ಥಳೀಯ ನುಡಿಗಟ್ಟುಗಳನ್ನು, ಗಾದೆಗಳನ್ನು ಕೂಡಾ ಬಳಸುತ್ತಾರೆ. ಹಾಗೆಯೇ ಸ್ವಂತ ವ್ಯಾಕ್ಯಗಳಲ್ಲಿಯೂ ಕೂಡಾ ಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ. ಅವರ ಕನ್ನಡದ ಎಲ್ಲಾ ಓದೂ ನಿಘಂಟಿನ ರಚನೆಯಲ್ಲಿ ಕೆಲಸ ಮಾಡಿವೆ. ಅಗತ್ಯವಿರುವ ಕಡೆ ಕೃತಿಗಳಲ್ಲಿನ ಸಾಲುಗಳನ್ನು ತೆಗೆದು ಪದ ಬಳಕೆಯು ಹೇಗಾಗಿದೆ ಎಂಬುದನ್ನು ನಮಗೆ ತೋರಿಸುತ್ತಾರೆ.
ತಮ್ಮ ಅಧ್ಯಯನ, ಸುತ್ತಾಟ, ಮತ್ತು ಇತರ ಎಲ್ಲಾ ಕೆಲಸಗಳ ಜೊತೆಜೊತೆಗೇ ಈ ನಿಘಂಟನ್ನು ರಚಿಸುವಂತಹ ಮಹೋನ್ನತ ಉದ್ದೇಶವನ್ನು ಒಯ್ಯುತ್ತಲೇ ಇದ್ದುದರಿಂದ ಇದು ಇಷ್ಟು ಅಮೂಲ್ಯ ಕೃತಿಯಾಗಲು ಸಾಧ್ಯ. ಅವರ ಆಸಕ್ತಿ, ಬದ್ಧತೆ, ಕೆಲಸದಲ್ಲಿನ ಪ್ರಾಮಾಣಿಕತೆ, ಜ್ಞಾನದಾಹ ನಮ್ಮ ಕನ್ನಡಕ್ಕೆ ಕೊಡುಗೆಗಳಾದವು.
ತೆಲುಗು, ತಮಿಳು, ಮಲಯಾಳಂಗಳೂ ಸೇರಿದಂತೆ ಬಹಳಷ್ಟು ಪ್ರಾದೇಶಿಕ ಭಾಷೆಗಳ ನಿಘಂಟುಗಳನ್ನು ರಚಿಸಿರುವವರು ವಿದೇಶಿಯರೇ ಮತ್ತು ಈ ಬಗೆಯ ಧರ್ಮಪ್ರಚಾರಕರೇ. ಬಹುಶಃ ಭಾಷಾಧ್ಯಯನ ಮತ್ತು ನಿಘಂಟು ರಚನೆ ಅವರಿಗೆಲ್ಲಾ ಬಹಳ ಪ್ರೀತಿಯ ಹವ್ಯಾಸವಾಗಿದ್ದಿರಬಹುದು. ಅದೇನೇ ಆಗಲಿ, ಈ ನಿಘಂಟೂ ಸೇರಿದಂತೆ ಕಿಟ್ಟೆಲ್ ಭೂತಾರಾಧನೆಯಂತಹ ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಐತಿಹಾಸಿಕವಾಗಿ ಮತ್ತು ಗ್ರಂಥಗಳ ಬಗ್ಗೆ ಅನೇಕ ಸಂಶೋಧನಾ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಇಂಗ್ಲೀಷಿಗೆ ಮತ್ತು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ತಾಳೆಗ್ರಂಥಗಳಲ್ಲಿರುವಂತಹ ಅನೇಕ ಕನ್ನಡದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಬಿ ಎಲ್ ರೈಸ್ ರವರು ಕನ್ನಡದಲ್ಲಿ ಅರುಣೋದಯ ಎಂಬ ಪತ್ರಿಕೆಯೊಂದನ್ನು ತರುತ್ತಿದ್ದರು. ಅದಕ್ಕೆ ಇವರು ಸಹಸಂಪಾದಕರಾಗಿಯೂ ದುಡಿಯುತ್ತಿದ್ದರು.
ಇವರ ಯಾವ ಕೃತಿಗಳನ್ನು ನಮಗೆ ಪರಿಶೀಲಿಸುವ, ಅಧ್ಯಯನ ಮಾಡುವ, ಓದುವ ಅಗತ್ಯ ಬರುತ್ತದೆಯೋ ಇಲ್ಲವೋ, ಈ ಕನ್ನಡ ಇಂಗ್ಲಿಷ್ ಡಿಕ್ಷನರಿ ಮಾತ್ರ ನಿಜಕ್ಕೂ ಕನ್ನಡ ಭಾಷಾಶಾಸ್ತ್ರದ ಪುಸ್ತಕಗಳ ಸಾಲಿನಲ್ಲಿ ಅನರ್ಘ್ಯ ರತ್ನ. ಅವರ ಬದ್ಧತೆಗೆ, ಕಾಳಜಿಗೆ, ವೃತ್ತಿಪರತೆಗೆ ಶರಣು.
ಇದನ್ನೂ ಓದಿ: ಕೊರೊನಾ ವಿರುದ್ದ ಹೋರಾಡುವ ವೈದ್ಯರಿಗೆ ಮೂಲಭೂತ ಸೌಕರ್ಯವಿಲ್ಲ: ವೀಡಿಯೊ ಬಿಡುಗಡೆ


