ಕೊರೊನಾ ವೈರಸ್ ನೈಸರ್ಗಿದಕವಲ್ಲ, ಇದನ್ನು ತಯಾರಿದಲಾಗಿದೆ ಎಂದು ಜಪಾನಿನ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಹೇಳಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಜಪಾನಿನ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಕ್ಯಾನ್ಸರ್ ಚಿಕಿತ್ಸೆಯ ವಿಭಿನ್ನ ಆವಿಷ್ಕಾರಕ್ಕಾಗಿ 2018 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.
ವೈರಲಾಗುತ್ತಿರುವ ಸಂದೇಶ ಕೆಳಗಿನಂತಿದೆ.
“ಜಪಾನ್‌ನ ಔಷಧ ವಿಭಾಗದ ಪ್ರಾಧ್ಯಾಪಕ, ಪ್ರೊಫೆಸರ್ ಡಾ. ತಸುಕು ಹೊಂಜೊ, ಕೊರೊನಾ ವೈರಸ್ ನೈಸರ್ಗಿಕವಲ್ಲ ಎಂದು ಹೇಳುವ ಮೂಲಕ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಇದು ಸ್ವಾಭಾವಿಕವಾಗಿದ್ದರೆ ಇಡೀ ಪ್ರಪಂಚದ ಮೇಲೆ ಈ ರೀತಿಯ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಪ್ರಕೃತಿಯ ಪ್ರಕಾರ, ವಿವಿಧ ದೇಶಗಳಲ್ಲಿ ತಾಪಮಾನವು ವಿಭಿನ್ನವಾಗಿರುತ್ತದೆ. ವೈರಸ್ ಸ್ವಾಭಾವಿಕವಾಗಿದ್ದರೆ ಅದು ಚೀನಾದಂತೆಯೇ ಇರುವ ತಾಪಮಾನದಲ್ಲಿ ಮಾತ್ರ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಆದರೆ ಇದು ಸ್ವಿಟ್ಜರ್ಲೆಂಡ್‌ನಂತಹ ದೇಶದಲ್ಲಿ ಹರಡುತ್ತಿದೆ, ಅದೇ ರೀತಿ ಮರುಭೂಮಿಯಲ್ಲಿ ಕೂಡಾ ಹರಡುತ್ತಿದೆ… ಪ್ರಾಣಿಗಳು ಮತ್ತು ವೈರಸ್‌ಗಳ ಬಗ್ಗೆ ನಾನು 40 ವರ್ಷಗಳ ಸಂಶೋಧನೆ ಮಾಡಿದ್ದೇನೆ. ಇದು ಸ್ವಾಭಾವಿಕವಲ್ಲ, ಇದನ್ನು ತಯಾರಿಸಲಾಗಿದೆ ಹಾಗೂ ಸಂಪೂರ್ಣವಾಗಿ ಕೃತಕವಾಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ನಾನು 4 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆ ಪ್ರಯೋಗಾಲಯದ ಎಲ್ಲಾ ಸಿಬ್ಬಂದಿಗಳು ನನಗೆ ಪರಿಚಯವಿದೆ. ಕೊರೊನಾ ಅಪಘಾತದ ನಂತರ ನಾನು ಅವರೆಲ್ಲರಿಗೂ ಫೋನ್ ಮಾಡುತ್ತಿದ್ದೇನೆ. ಆದರೆ ಅವರೆಲ್ಲರ ಫೋನ್ ಮೂರು ತಿಂಗಳಿನಿಂದ ಡೆಡ್ ಆಗಿದೆ. ಈ ಎಲ್ಲಾ ಲ್ಯಾಬ್ ತಂತ್ರಜ್ಞರು ಸಾವನ್ನಪ್ಪಿದ್ದಾರೆ ಎಂಬುವುದು ನನ್ನ ನಿಲುವ”
“ಇಲ್ಲಿಯವರೆಗಿನ ನನ್ನ ಎಲ್ಲ ಜ್ಞಾನ ಮತ್ತು ಸಂಶೋಧನೆಯ ಆಧಾರದ ಮೇಲೆ ಹೇಳುತ್ತಿದ್ದೇನೆ, ಕೊರೊನಾ ಸ್ವಾಭಾವಿಕವಲ್ಲ ಎಂದು 100% ಆತ್ಮವಿಶ್ವಾಸದಿಂದ ಹೇಳಬಲ್ಲೆ. ಇದು ಬಾವಲಿಗಳಿಂದ ಬಂದಿಲ್ಲ, ಚೀನಾ ಇದನ್ನು ತಯಾರಿಸಿದೆ. ನಾನು ಹೇಳುತ್ತಿರುವುದು ಈಗ ಅಥವಾ ನನ್ನ ಮರಣದ ನಂತರ ಸುಳ್ಳು ಎಂದು ಸಾಬೀತಾದರೆ, ನನ್ನ ನೊಬೆಲ್ ಪ್ರಶಸ್ತಿಯನ್ನು ವಾಪಾಸು ಪಡೆಯಬಹುದು. ಚೀನಾ ಸುಳ್ಳು ಹೇಳುತ್ತಿದೆ ಹಾಗೂ ಸತ್ಯವು ಒಂದು ದಿನ ಎಲ್ಲರೆದುರು ಬಹಿರಂಗಗೊಳ್ಳುತ್ತದೆ. ”
ಈ ಸಂದೇಶವು ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯದ ಪ್ರೊ.ತಸುಕು ಹೊಂಜೊ ಅವರು ಹೇಳುತ್ತಿದ್ದಾರೆ, ನಾನು ನನ್ನ ಜೀವನದ 40 ವರ್ಷಗಳನ್ನು ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದ್ದೇನೆ. ಕೊರೊನಾ ವೈರಸ್ ಚೀನಾ ಪ್ರಯೋಗಾಲಯದಲ್ಲಿ ಅಸ್ವಾಭಾವಿಕವಾಗಿ ಸಿದ್ಧಪಡಿಸಿದೆ, ಎಂದು ಬಿಜೆಪಿಯ ಡಿ. ಆರ್. ಯಶ್ಪಾಲ್ ಸಿಂಗ್ ಟ್ವೀಟ್ ಮಾಡಿದ್ದರು.
ಫ್ಯಾಕ್ಟ್ ಚೆಕ್:
ವೈರಲ್ ಸಂದೇಶದಲ್ಲಿ ಇರುವಂತೆ ತಸುಕು ಹೊಂಜೊ, ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಎಂಬುವುದು ನಿಜ. ಕ್ಯಾನ್ಸರ್ ಚಿಕಿತ್ಸೆಯ ಆವಿಷ್ಕಾರಕ್ಕಾಗಿ ಅವರು ಜೇಮ್ಸ್ ಆಲಿಸನ್ ಅವರೊಂದಿಗೆ 2018 ರಲ್ಲಿ ಔಷಧಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪುರಸ್ಕೃತರಾಗಿದ್ದರು. ನ್ಯೂಸ್‌ಮೀಟರ್ ಎಂಬ ಸುದ್ದಿ ಸಂಸ್ಥೆ ಈ-ಮೇಲ್ ಮುಖಾಂತರ ಪ್ರಾಧ್ಯಾಪಕರನ್ನು ಇದರ ಬಗ್ಗೆ ಕೇಳಿದಾಗ ಅವರು, ಈ ಎಲ್ಲಾ ಸುದ್ದಿಗಳುನ್ನು ನಿರಾಕರಿಸಿದ್ದಾರೆ. ಇ-ಮೇಲ್‌ನಲ್ಲಿ, ತಸುಕು ಹೊಂಜೊ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪಿಎಚ್ಡಿ ವಿದ್ಯಾರ್ಥಿ ಅಲೋಕ್ ಕುಮಾರ್ ಪ್ರಾಧ್ಯಾಪಕರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.
“ಪ್ರೊ. ಹೊಂಜೊ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಸಂದೇಶದ ಪ್ರತಿಯೊಂದು ವಾಕ್ಯವೂ ಸಂಪೂರ್ಣವಾಗಿ ಸುಳ್ಳು ಮತ್ತು ಸತ್ಯದೊಂದಿಗೆ ಯಾವುದೇ ಸಂಬಂಧವಿಲ್ಲ. ಪ್ರೊ. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ಕೆಲಸ ಮಾಡಲಿಲ್ಲ, ಎಂದಿಗೂ ಅಲ್ಲಿಗೆ ಕರೆ ಮಾಡಿಲ್ಲ ಹಾಗೂ ಅವರು ವೈರಸ್ ಮೂಲ ಮತ್ತು ಕಾರ್ಯಗಳು, ಇತರ ಸಂಬಂಧಿತ ವಿಷಯಗಳ ಬಗ್ಗೆ ಕೆಲಸ ಮಾಡಲಿಲ್ಲ.” ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ವೈರಲ್ ಸಂದೇಶದಲ್ಲಿ ಇರುವಂತೆ, ಪ್ರೊಫೆಸರ್ ತಸುಕು ಹೊಂಜೊ ಕಳೆದ ನಾಲ್ಕು ವರ್ಷಗಳಿಂದ ಚೀನಾದ ವುಹಾನ್‌ನಲ್ಲಿರುವ ಯಾವುದೇ ಪ್ರಯೋಗಾಲಯದಲ್ಲಿ ಕೆಲಸ ಮಾಡಿಲ್ಲ. ಕ್ಯೋಟೋ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ನ ಅವರ ಜೀವನಚರಿತ್ರೆಯಲ್ಲಿ, ಪ್ರಾಧ್ಯಾಪಕರು 1984 ರಿಂದ 2005 ರವರೆಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಪೂರ್ಣ ಸಮಯ ಬೋಧಿಸುತ್ತಿದ್ದಾರೆಂದು ಹೇಳುತ್ತಿದೆ. ಪ್ರಸ್ತುತ, ಅವರು ಕ್ಯೋಟೋ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಮತ್ತು ಜೀನೋಮಿಕ್ ಮೆಡಿಸಿನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಇದನ್ನೂ ಓದಿ: ಮುಸ್ಲಿಮರಿಂದ ಕಲ್ಲು ತೂರಾಟಕ್ಕೊಳಗಾಗಿ ಯುಪಿ ವೈದ್ಯೆ ವಂದನಾ ತಿವಾರಿ ಸಾವಿಗೀಡಾದರೆ?
‘ಕೊರೊನಾ ವೈರಸ್ ಸ್ವಾಭಾವಿಕವಲ್ಲ’ ಎಂಬ ಹೇಳಿಕೆಯ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿದರೆ ಈ ಸಂಬಂಧ ಹುಡುಕಾಟ ನಡೆಸಿದರೆ ಪ್ರಾಧ್ಯಾಪಕ ತಸುಕು ಹಂಜೊ ಹೇಳಿರುವ ಯಾವುದೇ ಫಲಿತಾಂಶಗಳು ನೀಡುವುದಿಲ್ಲ. ವಾಸ್ತವವಾಗಿ ತಸುಕು ಹಂಜೊ 2020 ರ ಏಪ್ರಿಲ್ 10 ರಂದು ಪ್ರಕಟವಾದ ಜಪಾನ್ ಮೂಲದ ಸುದ್ದಿ ಪೋರ್ಟಲ್ ನಿಕ್ಕಿ ಏಷ್ಯನ್ ರಿವ್ಯೂಗೆ ಸಂದರ್ಶನವೊಂದನ್ನು ನೀಡಿ “ರೋಗವೂ ಚೀನಾದಲ್ಲಿ ಹುಟ್ಟಿಕೊಂಡಿತು ಆದರೆ ದೇಶವು ಮೊದಲನೆಯದಾಗಿ ಚೇತರಿಸಿಕೊಂಡಿತು. ಇದರಿಂದಾಗಿ ಚೀನಾ ಪ್ರಭಾವವನ್ನು ಹೆಚ್ಚಿಸುತ್ತದೆ ಅಥವಾ ಜಗತ್ತು ಚೀನಾವನ್ನು ದೂರವಿಡುತ್ತದೆಯೆ ಎಂದು ನಾನು ಹೇಳಲಾರೆ, ಆದರೆ ವೈರಸ್ ಸ್ಪೋಟಗೊಂಡ ನಂತರ ಜಾಗತಿಕ ಕ್ರಮವು ಬದಲಾಗುವ ಸಾಧ್ಯತೆಯಿದೆ.” ಎಂದಷ್ಟೆ ಹೇಳಿದ್ದರು. ಆದರೆ ಕೊರೊನಾ ಮಾನವ ನಿರ್ಮಿತ ವೈರಸ್ ಎಂಬ ಬಗ್ಗೆ ತಸುಕು ಹಂಜೊ ಎಲ್ಲೂ ಉಲ್ಲೇಖಿಸಿಲ್ಲ.
ಆದರೆ, ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ವೈರಾಲಜಿಸ್ಟ್ ವೈರಸ್ ಮಾನವ ನಿರ್ಮಿತ ಎಂದಿದ್ದಾರೆಂದು ಹೇಳಿರುವ ಮಾಧ್ಯಮ ವರದಿಗಳಿವೆ. “ಫ್ರೆಂಚ್ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ, ಔಷಧದಲ್ಲಿ 2008 ರ ನೊಬೆಲ್ ಪ್ರಶಸ್ತಿಯನ್ನು ಪಡೆದ ಏಡ್ಸ್ ವೈರಸ್ನ ಸಹ-ಅನ್ವೇಷಕ, ಕೊರೊನಾ ವೈರಸ್ ಜೀನೋಮ್ನಲ್ಲಿ ಎಚ್ಐವಿ ಮತ್ತು ಮಲೇರಿಯಾದ ಸೂಕ್ಷ್ಮಾಣು ಅಂಶಗಳು ಹೆಚ್ಚು ಶಂಕಿತವಾಗಿದೆ ಮತ್ತು ವೈರಸ್ನ ಗುಣಲಕ್ಷಣಗಳು ಸ್ವಾಭಾವಿಕವಾಗಿ ಹುಟ್ಟಿಕೊಂಡಿಲ್ಲ ”ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಪ್ರೊ. ತಸುಕು ಹೊಂಜೊ ಎಂಬ ಹೆಸರಿನ ಖಾತೆ “ಕೊರೊನಾ ವೈರಸ್ ಯಾವ ಉದ್ದೇಶಕ್ಕಾಗಿ ಉತ್ಪತ್ತಿಯಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಇದು ಮಾನವ ನಿರ್ಮಿತ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.” ಎಂದು ಬರೆದಿದೆ. ಆದರೆ ಟ್ವಿಟರ್ ಹ್ಯಾಂಡಲ್ ಅದು ತಸುಕು ಹೊಂಜೊ ಅವರದೆ ಎಂಬ ಬಗ್ಗೆ ಪರಿಶೀಲಿಸಲಾಗಿಲ್ಲ. ಹೊಂಜೊ ಅವರ ಹೇಳಿಕೆಯಂತೆ “ನೀವು ಪ್ರಸ್ತಾಪಿಸಿದ ಟ್ವಿಟರ್ ಹ್ಯಾಂಡಲ್ ಪ್ರೊ. ತಸುಕು ಹೊಂಜೊಗೆ ಸೇರಿಲ್ಲ. ದುರುದ್ದೇಶಪೂರಿತ ಉದ್ದೇಶಗಳೊಂದಿಗೆ ಇದನ್ನು ಯಾರೋ ರಚಿಸಿದ್ದಾರೆ. ದಯವಿಟ್ಟು ಈ ನಕಲಿ ಸುದ್ದಿಯನ್ನು ನಿಲ್ಲಿಸಿ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹುಡುಕಾಟ ನಡೆಸಿದರೆ ಈ ಖಾತೆಯನ್ನು 2020 ರ ಏಪ್ರಿಲ್‌ನಲ್ಲಿ ರಚಿಸಲಾಗಿದೆ ಎಂದು ತಿಳಿಯಬಹುದು, ಏಪ್ರಿಲ್ 24 ರಿಂದ ಕೇವಲ ಎರಡು ಟ್ವೀಟ್‌ಗಳು ಇದ್ದು, ಇದು ನಕಲಿ ಖಾತೆ ಎಂದು ಸೂಚಿಸುತ್ತದೆ.
I do not know for what purpose the corona virus has been produced, but I can definitely say that it is man-made.
— Human Being (@TasukuHonjo) April 24, 2020
ಈ ಮೂಲಕ ನಾವು ತಸುಕು ಅವರದ್ದು ಎಂದು ಹೇಳಿಕೊಂಡು ವೈರಲಾಗಿರುವ ಸಂದೇಶವೂ ಸುಳ್ಳು ಎಂದು ತಿಳಿದುಕೊಳ್ಳಬಹುದು. ಕೊರೊನಾವನ್ನು ತಯಾರಿಸಲಾಗಿದೆ ಮತ್ತು ವೈರಸ್ ಸಂಪೂರ್ಣವಾಗಿ ಕೃತಕವಾಗಿದೆ ಎಂದು ತಸುಕು ಹೊಂಜೊ ಹೇಳಿದ್ದಾರೆನ್ನುವ ಸಂದೇಶ ಸುಳ್ಳಾಗಿದೆ. ಯಾಕೆಂದರೆ ಪ್ರೊ. ಹೊಂಜೊ ಅವರೆ ಸ್ವತಃ ಇದನ್ನು ನಿರಾಕರಿಸಿದ್ದಾರೆ. ಅಲ್ಲದೆ ಕೊರೊನಾ ವೈರಸನ್ನು ತಯಾರಿಸಲಾಗಿದೆ ಎಂದ ಪ್ರೊ.ತಾಸುಕು ಹೊಂಜೊ ಕುರಿತ ಯಾವುದೇ ಮಾಧ್ಯಮ ವರದಿಗಳಿಲ್ಲ.
ಜಪಾನಿನ ಪ್ರೊಫೆಸರ್ ವುಹಾನ್ ಲ್ಯಾಬ್‌ನಲ್ಲಿ 4 ವರ್ಷಗಳನ್ನು ಕಳೆದಿದ್ದಾರೆ ಎಂಬ ಸುದ್ದಿ ಕೂಡಾ ಸುಳ್ಳಾಗಿದ್ದು. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ನಾಲ್ಕು ವರ್ಷಗಳನ್ನು ಕಳೆದಿಲ್ಲ ಎಂದು ಅವರ ಜೀವನಚರಿತ್ರೆ ಹೇಳುತ್ತದೆ, ಹಾಗೂ ಅವರದು ಎಂದು ಹೇಳಿಕೊಳ್ಳುವ ಟ್ವಿಟರ್ ಹ್ಯಾಂಡಲ್ ಕೂಡಾ ನಕಲಿಯಾಗಿದೆ.
ಇದನ್ನೂ ಓದಿ: ಅರ್ನಬ್ ಗೋಸ್ವಾಮಿಯ ದಾಳಿಯ ವಿಡಿಯೋ, ದಾಳಿಗೂ ಮುನ್ನವೇ ಮಾಡಲಾಗಿತ್ತೇ?


