ದೆಹಲಿಯ ಜಹಾಂಗೀರ್‌ಪುರಿಯ ಬಾಬು ಜಗಜೀವನ್ ರಾಮ್ ಆಸ್ಪತ್ರೆಯ 40 ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ANI ವರದಿ ಮಾಡಿದೆ.
ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಈ ಬಗ್ಗೆ ಮಾತನಾಡುತ್ತಾ “ದೆಹಲಿಯ ಬಾಬು ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಕೆಲವು ಸಿಬ್ಬಂದಿಗಳು ಸೇರಿದಂತೆ ನಲವತ್ತು ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ” ಎಂದು ಹೇಳಿದ್ದಾರೆ.
ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಿಕೆಯ ಕುರಿತು ಮುಖ್ಯಮಂತ್ರಿ ಕೇಜ್ರಿವಾಲ್ ಮಾತನಾಡಿ “ಕಳೆದ ವಾರ ಕೊರೊನಾ ಬಾಧಿತವಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಸುವ ಬಗ್ಗೆ ಕೇಂದ್ರ ಸರಕಾರದ ಆದೇಶದ ನಂತರ ನಾವು ನಿರ್ಬಂಧಗಳನ್ನು ಸರಾಗಗೊಳಿಸದಿರಲು ನಿರ್ಧರಿಸಿದ್ದೆವು. ಅದಾಗಿ ಒಂದು ವಾರದ ನಂತರ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಿರ್ಧರಿಸಿದ್ದೇವೆ” ಎಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿದರು.
ಇದನ್ನೂ ಓದಿ: ಪ್ಲಾಸ್ಮಾ ಥೆರಪಿ ಸಕ್ಸಸ್, 4 ರೋಗಿಗಳು ಗುಣಮುಖ: ದೆಹಲಿ ಆರೋಗ್ಯ ಸಚಿವ
ದೆಹಲಿಯಲ್ಲಿ ನಾಳೆಯಿಂದ ಸ್ವತಂತ್ರವಾಗಿರುವ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಆದರೆ ಮಾರುಕಟ್ಟೆಗಳು, ಮಾರುಕಟ್ಟೆ ಸಂಕೀರ್ಣಗಳು ಅಥವಾ ಮಾಲ್‌ಗಳು ತೆರೆಯಲು ಅನುಮತಿಸಿಲ್ಲ. ಕಂಟೈನ್‌ಮೆಂಟ್ ವಲಯಗಳಲ್ಲಿ ಹಿಂದಿನ ಪರಿಸ್ಥಿತಿ ಮುಂದುವರೆಯಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎಲ್ಲಾ 11 ಜಿಲ್ಲೆಗಳಲ್ಲೂ 95 ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿರುವ ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ ಸುಮಾರು 2,500 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದೆ. ಸೋಂಕಿನಿಂದ 53 ಸಾವುಗಳು ಸಂಭವಿಸಿವೆ.
ಇದನ್ನೂ ಓದಿ: PPE ಗಳ ಕೊರತೆ: ದೆಹಲಿಯಲ್ಲಿ ಬಿಜೆಪಿ, ಆಪ್ ನಡುವೆ ಜಟಾಪಟಿ


