ಒಂದು ಎಕರೆ, ಎರಡು ಎಕರೆ ಜಮೀನು ಒತ್ತುವರಿ ಮಾಡಿಕೊಂಡಿರುವವರನ್ನು ವಿಶೇಷ ನ್ಯಾಯಾಲಯ ವಿಚಾರಣೆಗೆ ಒಳಪಡಿಸುವಂತಿಲ್ಲ. ಅಕ್ರಮ-ಸಕ್ರಮ ಕಾಯ್ದೆಯಡಿ ಈ ಕಬಳಿಕೆಯ ಪ್ರಶ್ನೆಯನ್ನು ಇತ್ಯಾರ್ಥಗೊಳಿಸಲಾಗುವುದು ಎಂದು ಸಂಪುಟ ಸಭೆ ತೀರ್ಮಾನಿಸಿ ಈ ಸುಗ್ರಿವಾಜ್ಞೆಗೆ ಅನುಮತಿಯನ್ನು ರಾಜ್ಯಪಾಲರಿಂದ ಪಡೆಯಲಾಗಿದೆ ಇದು ಸರಿಯಾದ ಕ್ರಮ.
ಒಂದು ಎಕರೆ, ಎರಡು ಎಕರೆ ಭೂಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ಹೇಗೆ ಕೈಗೆತ್ತಿಕೊಂಡಿತು? ವಿಶೇಷ ನ್ಯಾಯಾಲಯ ಸ್ಥಾಪನೆಯಾದದ್ದೇ ಎ.ಟಿ.ರಾಮಸ್ವಾಮಿ ಸಮಿತಿಯ ವರದಿಯ ಆಧಾರದ ಮೇಲೆ ಹೌಸ್ ಕಮಿಟಿಯ ಶಿಫಾರಸ್ಸನ್ನು ಆಧರಿಸಿ. ಎ.ಟಿ.ರಾಮಸ್ವಾಮಿ ಸಮಿತಿಯ ವರದಿಯ ರೀತ್ಯಾ ಮುಖ್ಯಮಂತ್ರಿಗಳು, ಶಾಸಕರು, ಮಂತ್ರಿಗಳು, ಸರ್ಕಾರಿ ಉನ್ನತಾಧಿಕಾರಿಗಳು, ಭೂಗಳ್ಳರು, ರಿಯಲ್ ಎಸ್ಟೇಟ್ ಏಜೆಂಟರ್‍ಗಳು, ಬಿಲ್ಡರ್‍ಗಳು ಎಲ್ಲರೂ ಸೇರಿ ಈ ಭೂಹಗರಣದಲ್ಲಿ ಭಾಗಿಗಳು. ಅವರ ಜೊತೆಗೆ ಕೆಲವರು ಜಮೀನಿರುವ ಪ್ರಭಾವಿ ರೈತರು, ಭೂಹೀನರೂ ಸೇರಿರಬಹುದು. ವಿಶೇಷ ನ್ಯಾಯಾಲಯ ಆರಂಭವಾಯಿತಾದರೂ ಒಂದು ವರ್ಷದವರೆಗೆ ಯಾವ ಜಿಲ್ಲಾಧಿಕಾರಿಯೂ ಈ ನ್ಯಾಯಾಲಯದಲ್ಲಿ ಎ.ಟಿ.ರಾಮಸ್ವಾಮಿ ವರದಿಯಲ್ಲಿ ನಮೂದಿಸಿದ್ದ ಯಾರೊಬ್ಬರ ಮೇಲೂ ಕೇಸು ದಾಖಲು ಮಾಡಲಿಲ್ಲ.
ಜಿಲ್ಲಾಧಿಕಾರಿಗಳ ಈ ಅಸಹಕಾರಕ್ಕೆ ಬೇಸರಿದ ವಿಶೇಷ ನ್ಯಾಯಾಲಯ ಪತ್ರಿಕೆಗಳಲ್ಲಿ ವರದಿಯಾದ ದೂರುಗಳನ್ನು ಆಧರಿಸಿ ಒಂದು ಎಕರೆ, ಎರಡು ಎಕರೆ ಕಬಳಿಸಿದ್ದ ಬಡ ರೈತರ ಬಗೆಗೆ ವಿಚಾರಣೆಯನ್ನು ಆರಂಭಿಸಿತು. ವಿಶೇಷ ನ್ಯಾಯಾಲಯ ಸ್ಥಾಪನೆಯಾದ ಸುದ್ದಿ ತಿಳಿದ ಮಾಜಿ ಮುಖ್ಯ ಮಂತ್ರಿ ಗುಂಡೂರಾಯರ ಮಗ ದಿನೇಶ್ ಗೂಂಡೂರಾವ್ ತನ್ನ ಪಾಲಿಗೆ ಅಕ್ರಮವಾಗಿ ಬಂದಿದ್ದ 11 ಎಕರೆ ಜಮೀನನ್ನು ಸರಕಾರಕ್ಕೆ ಹಿಂದಿರುಗಿಸಿದರು. ಮಂತ್ರಿಗಳಾಗಿದ್ದ ಲೇಔಟ್ ಕೃಷ್ಣಪ್ಪ ಎಂದೇ ಖ್ಯಾತನಾಮರಾಗಿರುವ ಮಗ ಪ್ರಿಯಾಕೃಷ್ಣ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ನೂರಾರು ಎಕರೆ ಜಮೀನಿನ ಪೈಕಿ ಹತ್ತಾರು ಎಕರೆ ಜಮೀನನ್ನು ವಶಪಡಿಸಿಕೊಂಡು ಮಾರಾಟ ಮಾಡಿರುವುದಾಗಿ ಆರೋಪಣೆ ಮಾಡಿ ವಿಶೇಷ ನ್ಯಾಯಾಲಯದಲ್ಲಿ ಮಾಹಿತಿಹಕ್ಕು ಕಾಯ್ದೆ ಕಾರ್ಯಕರ್ತರೊಬ್ಬರು ಖಟ್ಲೆ ಹೂಡಿದರು. ವಿಚಾರಣೆಯಾಗಿ ಇನ್ನೇನು ತೀರ್ಪು ನೀಡುವ ಸನ್ನಿವೇಶದಲ್ಲಿ ಸುಪ್ರಸಿದ್ದ ನ್ಯಾಯವಾದಿಯೊಬ್ಬರು ಪೂವಯ್ಯ ಹೈಕೋರ್ಟಿಗೆ ಅರ್ಜಿಸಲ್ಲಿಸಿ ವಿಶೇಷ ನ್ಯಾಯಾಲಯ ತನಿಖೆ ಮುಂದುವರೆಸದಂತೆ ತಡೆಯಾಜ್ಞೆ ತಂದರು. ಇದು ಮಾತ್ರವಲ್ಲ. ವಿಶೇಷ ನ್ಯಾಯಾಲಯ ಇನ್ನೇನು ತೀರ್ಪು ನೀಡಲಿದ್ದಾರೆ ಎಂದು ತಿಳಿದ ಅನೇಕ ಪಟ್ಟಭದ್ರರು ಉಚ್ಚನ್ಯಾಯಾಲಯದ ಮೊರೆಹೊಕ್ಕು ತಡೆಯಾಜ್ಞೆ ತಂದಿದ್ದಾರೆ. ಮೊದಲನೇ ವರ್ಷ 80 ಮಂದಿ ತಡೆಯಾಜ್ಞೆ ಪಡೆದಿದ್ದರೆ, ಎರಡನೇ ವರ್ಷದ ಅವಧಿಯಲ್ಲಿ ಮತ್ತೆ ನೂರು ಮಂದಿ ತಡೆಯಾಜ್ಞೆ ಪಡೆದಿದ್ದಾರೆ. ಎರಡು ವರ್ಷ ಕಳೆದರೂ ಸ್ಟೇ ವೆಕೆಟ್ ಆಗದ್ದನ್ನು ಗಮನಿಸಿ ಅಂದಿನ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ನಾನು ಪತ್ರ ಬರೆದರೂ ಅವರು ಕಾರ್ಯೋನ್ಮುಖರಾಗಲಿಲ್ಲ. ಇಂದಿಗೂ 180 ಕೇಸುಗಳ ಸ್ಟೇ ಹಾಗೇ ಉಳಿದಿದೆ. ಸರ್ಕಾರದ ಉನ್ನತಾಧಿಕಾರಿಗಳು ಜಮೀನ ಪಡೆಯುವಂತಿಲ್ಲ ಎಂಬ ಕಾನೂನಿದ್ದರೂ ಐಜಿಪಿ ಆಗಿದ್ದ ಸಮಯದಲ್ಲಿ ಸಾಂಗ್ಲಿಯಾನ ತನ್ನ ಹೆಂಡತಿ, ಮಕ್ಕಳು ಅಳಿಯನ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಿದ್ದರು. ಅವರೂ ತಾವು ಅಕ್ರಮವಾಗಿ ಪಡೆದ ಜಮೀನನ್ನು ವಾಪಸು ಮಾಡಿರಬಹುದು.
ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಏನೆಂದರೆ ಎ.ಟಿ.ರಾಮಸ್ವಾಮಿ ವರದಿಯಲ್ಲಿ ನಮೂದಾಗಿರುವ ಭಾರೀ ಭೂಗಳ್ಳರ ಮೇಲೆ ಮೊಕದ್ದಮೆ ಹೂಡಲು ಈ ಕೂಡಲೇ ಮಂತ್ರಿಮಂಡಲ ತೀರ್ಮಾನ ಮಾಡಬೇಕು. ಒಂದು ಎಕರೆ, ಎರಡು ಎಕರೆ ಕಬಳಿಸಿರುವ ಭೂಹೀನ ರೈತರಿಗೆ ನ್ಯಾಯ ಒದಗಿಸಬೇಕು.
ಆದರೆ ಹತ್ತಾರು ಎಕರೆ ಸ್ವಾಹಾನೂ ಮಾಡಿರುವ ಧೂರ್ತರ ಬಗ್ಗೆ ಸರ್ಕಾರ ಚಕಾರ ಶಬ್ದವನ್ನು ಎತ್ತದಿರುವ ಬಗೆಗೆ ನನ್ನ ಖಂಡನೆ ಇದೆ. ಕೂಡಲೇ ಮಂತ್ರಿ ಮಂಡಲ ಎ.ಟಿ.ರಾಮಸ್ವಾಮಿ ವರದಿಯಲ್ಲಿ ನಮೂದಿಸಿರುವ ಎಲ್ಲಾ ಪಟ್ಟಭದ್ರರ ಮೇಲೆ ಕೇಸು ಹೂಡಿ ಅವರು ಕಬಳಿಸಿರುವ ಜಮೀನುಗಳನ್ನು ವಾಪಸ್ ಪಡೆಯಬೇಕಲ್ಲದೆ ಅವರಿಗೆ ಶಿಕ್ಷೆಯೂ ಆಗಬೇಕು. ನ್ಯಾಯಾಂಗ ಖಾತೆಯ ಹೊಣೆಗಾರಿಕೆ ಹೊತ್ತಿರುವ ಮಾಧುಸ್ವಾಮಿವರು ಸತ್ಯನಿಷ್ಠುರರೂ ಎಂದು ತಿಳಿದಿದ್ದೇನೆ. ಅವರು ಭೂಕಬಳಿಕೆ ಮಾಡಿರುವ ಭೂಹೀನ ರೈತರ ಬಗೆಗೆ ತಳೆದಿರುವ ಭಾವನೆ ಮೆಚ್ಚತಕ್ಕದ್ದೇ. ಆದರೆ ಅಷ್ಟೇ ಅಲ್ಲ ಅವರ ಹೊಣೆಗಾರಿಕೆ. ವಿಶೇಷ ನ್ಯಾಯಾಲಯದ ಅಂತಿಮ ತೀರ್ಪು ಬರುವ ಸಂದರ್ಭದಲ್ಲಿ ‘ಬೀಸೋ ದೊಣ್ಣೆಯಿಂದ ಏಟು ಬೀಳದಿದ್ದರೆ, ನೂರು ವರ್ಷ ಆಯಸ್ಸು’ ಎಂದು ಭಾವಿಸಿ ಹೈಕೋರ್ಟ್‍ನಿಂದ ಸ್ಟೇ ತಂದಿರುವ 180ಕ್ಕೂ ಹೆಚ್ಚು ಅಪರಾಧಿಗಳ ಸ್ಟೇಯನ್ನು ಕೂಡಲೇ ಅವರು ತೆರವುಗೊಳಿಸಬೇಕು. ಅಲ್ಲದೆ ಸರ್ಕಾರಿ ಜಮೀನು ಸ್ವಾಹಾ ಮಾಡಿರುವವರ ಮೇಲೆ ವಿಶೇಷ ನ್ಯಾಯಾಲಯದಲ್ಲಿ ಖಟ್ಲೆ ಹೂಡಬೇಕು. ನನ್ನ ಸ್ನೇಹಿತರೂ, ನಿಷ್ಟೂರವಾದಿಗಳೂ ಆದ ಮಾಧುಸ್ವಾಮಿಯವರು ಎ.ಟಿ.ರಾಮಸ್ವಾಮಿಯವರಿಗೆ ಆ ಮೂಲಕ ಗೌರವ ಸಲ್ಲಿಸುವರೆಂದು ಭಾವಿಸುತ್ತೇನೆ.
ಮಾಧುಸ್ವಾಮಿಯವರಲ್ಲಿ ಮತ್ತೊಂದು ಬಿನ್ನಹ. ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿಲ್ಲದಿದ್ದರೂ ನಾಲ್ಕಾರು ಹುದ್ದೆಗಳನ್ನು ಸೃಷ್ಟಿಸಿ ಅವರು ಸಾವಿರಾರು ಜನರಿಗೆ ಹತ್ತಿರ ಹತ್ತಿರ 40 ಸಾವಿರ ಎಕರೆ ಜಮೀನನ್ನು 1, 2, 4 ಮತ್ತು 6 ಎಕರೆಯಂತೆ ಹಂಚಿರುವುದು ನ್ಯಾಯಭಾಹಿರವೆಂದು ಹೈಕೋರ್ಟಿನ ನ್ಯಾಮೂರ್ತಿಗಳಾಗಿದ್ದ ಶೈಲೆಂದ್ರಕುಮಾರ್ ತೀರ್ಪು ನೀಡಿದ್ದಾರೆ. ಅವರು ತಮ್ಮ ತೀರ್ಪಿನಲ್ಲಿ
“the post of special deputy commissinoner has now become synonym for corruption, nepotism and arbitrarininessof which fact this court can take judicial notice and it is high time a governance woth it is name having some sumbalnce of commitiment to maintenance of rule of law looks into suc anarchic exereise of power by these special deputy commissinoner and takes correctiv measures, instead of each and every affected person to seek for relief in right jurisdiction before thi high court”
ಈ ಆದೇಶದನ್ವಯ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಯನ್ನು ಆಗಿನ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಆಡಳಿತದ ಕಾಲದಲ್ಲಿ ರದ್ದು ಮಾಡಲಾಯಿತು. ಆದರೆ 40 ಸಾವಿರ ಎಕರೆ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಕುಂಟುತ್ತಾ ನಡೆದಿದ್ದಾರೆ. ಇಲ್ಲಿಯವರೆಗೂ ಶೇ.25 ರಷ್ಟು ಜಮೀನು ಕೂಡ ಸರ್ಕಾರ ವಶಪಡಿಸಿಕೊಂಡಿಲ್ಲ.
ಈ ಜಮೀನು ಹಂಚಿಕೆಯ ಪ್ರಕ್ರಿಯೆಯೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಮಗೆ ತೋಚಿದಂತೆ ಇರುವುದರಿಂದಲೂ ಸರ್ಕಾರವೇ ನೇಮಿಸಿರುವ ವಿಶೇಷ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಜಮೀನು ಹಂಚುವ ಜವಾಬ್ದಾರಿ ಇರುವುದಿಲ್ಲವೆಂದು ನ್ಯಾಯಾಲಯವೇ ಹೇಳಿರುವುದರಿಂದ ಈ 40 ಸಾವಿರ ಎಕರೆ ಜಮೀನನ್ನು ಒಂದು ordinance ಮುಖಾಂತರ ಸರ್ಕಾರ ಹಿಂಪಡೆಯಬಹುದೆಂಬುದು ನನ್ನ ಅನಿಸಿಕೆ.



ಇಂತಹ ಕೇಸುಗಳಿಗೆ ಹೊಂದಿಕೊಂಡತೆ, ಡೊಡ್ಡ ಪಟ್ಟಣಗಳಿಗೆ ಹೊಂದಿಕೊಂಡಂತಿರುವ ನೆಲವನ್ನು ಕಬಳಿಸಿರುವ,ಮಂಜೂರು ಮಾಡಿಸಿಕೊಂಡಿರುವುದನ್ನು ಆಳ್ವಿಕೆ ಹಿಂಪಡೆಯಲು ಮೊದಲು ಹೆಜ್ಜೆ ಇಡಬೇಕು. ತರುವಾಯ ಉಳಿಕೆ ಕೇಸುಗಳ ಬಗ್ಗೆ ಹೆಜ್ಜೆ ಇಡಬೇಕು. ಸಿಬ್ಬಂದಿ ಕೊರತೆ ನೆಪಹೇಳಿ ಎಲ್ಲವೂ ಆಮೆ ವೇಗದಲ್ಲಿ ಆಗುವುದನ್ನು ತಪ್ಪಿಸಲು ಮೊದಲು ರಿಯಲ್ ಎಸ್ಟೇಟ್ ವಹಿವಾಟಿಗೆ ಒಳಗಾಗಬಹುದಾದ ಕೇಸಗಳನ್ನು ಅಂದರೆ, ಡೊಡ್ಡ ಪಟ್ಟಣಗಳನ್ಮು ಗುರಿಮಾಡಿ ಕೆಲಸ ಮಾಡಬೇಕು.