ಮೇ 03 ರಂದು ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ “ಲಾಕ್ ಡೌನ್ ನಂತರದ ಆರ್ಥಿಕ ಸಂಕಷ್ಟ ಮತ್ತು ಪರಿಹಾರೋಪಾಯಗಳು” ವಿಷಯದ ಕುರಿತು ವೆಬಿನಾರ್ ನಡೆಯಿತು. ಅದರಲ್ಲಿ ಅಜೀಂ ಪ್ರೇಮ್‌ಜಿ ವಿ.ವಿಯ ಸುಸ್ಥಿರ ಉದ್ಯೋಗ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ.ಅಮಿತ್ ಬಾಸೋಲೆಯವರು ಮಾಡಿದ ಭಾಷಣದ ಅಕ್ಷರ ರೂಪ ಇಲ್ಲಿದೆ.
ಸರ್ವೇಗಳು ಮತ್ತು ವರದಿಗಳನ್ನು ಆಧರಿಸಿ ಗ್ರಾಮೀಣ ಆರ್ಥಿಕತೆಯ ಸ್ಥಿತಿಗತಿ, ಈ ಪರಿಸ್ಥಿತಿಯಲ್ಲಿ ನಾವು ಏನು ಮಾಡಬಹುದು… ಇದರ ಪರಿಹಾರದ ಮಾರ್ಗಗಳೇನು? ಎಂಬ ಪ್ರಶ್ನೆಗಳಿವೆ.
ಮೊದಲನೇಯದಾಗಿ, ಈ ಆರ್ಥಿಕ ಬಿಕ್ಕಟ್ಟಿನ ಸ್ಥಿತಿ ಅತ್ಯಂತ ಅಸಹಜ. ಸಾಮಾನ್ಯ ಆರ್ಥಿಕ ಕುಸಿತಗಳು ನಿಧಾನಗತಿಯಲ್ಲಿ ಉಂಟಾಗುತ್ತವೆ. ಎರಡನೇಯದು ಆರ್ಥಿಕ ಬಿಕ್ಕಟ್ಟಿಗೆ ಯಾವಾಗಲೂ ಕಾರಣವಾಗುವುದು ಬೇಡಿಕೆ ಮತ್ತು ಪೂರೈಕೆಯ ನಡುವಿನ ಬಿಕ್ಕಟ್ಟು. ಸಾಮಾನ್ಯವಾಗಿ ಕೊಳ್ಳುವವರ ಕೈಯ್ಯಲ್ಲಿ ಹಣವಿಲ್ಲದೆ ಮಾರುಕಟ್ಟೆ ನಿಧಾನಗತಿಯನ್ನು ತಳೆಯುತ್ತದೆ. ಅಥವಾ ಕೆಲವು ಸನ್ನಿವೇಶಗಳಲ್ಲಿ- ಉದಾಹರಣೆಗೆ ಮಳೆ ಇಲ್ಲದೆ ಇತ್ಯಾದಿ ಸಮದಯಲ್ಲಿ ಪೂರೈಕೆಯ ಸರಣಿ ಕಡಿದುಹೋಗಿರಬಹುದು. ಇದನ್ನು ಬಿಟ್ಟರೆ ಸಾಮಾನ್ಯವಾಗಿ ಆರ್ಥಿಕ ಬಿಕ್ಕಟ್ಟನ್ನು ನಾವು ಕಾಣುವುದಿಲ್ಲ. ಆದರೆ ಇಲ್ಲಿನದು ಬೇರೆ ಸನ್ನಿವೇಶ. ನಾನು ಕೊರೊನಾದಿಂದ ನೇರವಾಗಿ ಉಂಟಾಗಿರುವ ಪರಿಣಾಮದ ಬಗ್ಗೆ ಮಾತಾಡುವುದಿಲ್ಲ, ಲಾಕ್‌ಡೌನ್ ನ ಪರಿಣಾಮದ ಬಗ್ಗೆ ಮಾತಾಡುತ್ತೇನೆ. ಲಾಕ್‌ಡೌನ್‌ನಿಂದ ಅಂಗಡಿಗಳು ಮುಚ್ಚಿವೆ, ಉತ್ಪಾದನೆ ಇಲ್ಲ, ಯಾವುದೇ ಕೈಗಾರಿಕೆಗಳೂ ಚಾಲ್ತಿಯಲ್ಲಿಲ್ಲ. ಆದ್ದರಿಂದ ಬೇಡಿಕೆ ಇಲ್ಲ. ಹಾಗೆಯೇ ಪೂರೈಕೆಯೂ ಇಲ್ಲ. ಇದು ಬೇಡಿಕೆ ಪೂರೈಕೆಯ ಸ್ಥಿತಿಗತಿ.
ಭಾರತದ ಆರ್ಥಿಕತೆ ಬಹುಮುಖ್ಯವಾಗಿ ಅನೌಪಚಾರಿಕ. ಅಂದರೆ ಹೊರದೇಶಗಳಲ್ಲಿ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ ಕಾರ್ಮಿಕರು ದುಡಿಯದಿದ್ದರೂ ಅವರಿಗೆ ನೆರವಿನ ರಚನೆಗಳಿರುತ್ತವೆ. ಆದರೆ ಭಾರತದಲ್ಲಿ ಹಾಗಿಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಆರ್ಥಿಕತೆಯಲ್ಲಿ ವೆಚ್ಚವೂ ಇಲ್ಲ, ಉತ್ಪಾದನೆಯೂ ಇಲ್ಲ. ಅಂದರೆ ಯಾವುದೇ ಆರ್ಥಿಕ ಚಟುವಟಿಕೆ-ಮೂಲಭೂತ ಅಗತ್ಯಗಳನ್ನು ಬಿಟ್ಟರೆ-ಯಾವುವೂ ದೇಶದಲ್ಲಿ ನಡೆಯುತ್ತಿಲ್ಲ ಎಂಬುದು ನಮಗೆ ಗೊತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ, ಮುಂಬೈ ಮೂಲದ ಅಧ್ಯಯನ ಸಂಸ್ಥೆಯು ಹಲವು ಕುಟುಂಬಗಳನ್ನು ಪೋನ್ ಮೂಲಕ ಅಧ್ಯಯನ ಮಾಡಿದೆ. 40-50 ಸಾವಿರ ಕುಟುಂಬಗಳನ್ನು ದೇಶಾದ್ಯಂತ ಸಂಪರ್ಕಿಸಿ ಅಧ್ಯಯನ ಮಾಡಿದ್ದಾರೆ. ದೇಶದ ನಿರುದ್ಯೋಗ 7-8 ಶೇ.ದಿಂದ ಧಿಡೀರನೇ ಶೇ.23-24 ಗೆ ಏರಿದೆ. ಶಿಕ್ಷಣದ ಹಿನ್ನಲೆಯನ್ನಿಟ್ಟು ನೋಡಿದಾಗ ಅನಕ್ಷರಸ್ಥರ ನಡುವೆ ನಿರುದ್ಯೋಗದ ಸಮಸ್ಯೆ ಇನ್ನೂ ತೀವ್ರವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಶಿಕ್ಷಣ ಪಡೆದವರ ನಡುವೆ ನಿರೂದ್ಯೋಗ ಹೆಚ್ಚಿದೆ. ಏಕೆಂದರೆ ಅನಕ್ಷರಸ್ಥರು ಹೆಚ್ಚು ಕಾಲ ಕೆಲಸ ಮಾಡದೆ ಇರುವ ಬದುಕಿನ ಪರಿಸ್ಥಿತಿ ಹೊಂದಿರುವುದಿಲ್ಲ, ಜೀವನ ನಡೆಸಲು ಏನಾದರೂ ಕೆಲಸ ಮಾಡಲೇಬೇಕಿರುತ್ತದಾದ್ದರಿಂದ ಅವರ ನಡುವೆ ನಿರುದ್ಯೋಗ ಕಡಿಮೆ. ಶಿಕ್ಷಣ ಪಡೆದವರ ಕುಟುಂಬಗಳೂ ಸ್ವಲ್ಪ ಅನುಕೂಲಸ್ಥರಾಗಿರುತ್ತಾರಾದ್ದರಿಂದ ನಿರುದ್ಯೋಗ (ಸೂಕ್ತ ಕೆಲಸ ಹುಡುಕುವ ಕಾರಣಕ್ಕೆ) ಹೆಚ್ಚು.
ಆದರೆ ಈ ಹಂತದಲ್ಲಿ ಧಿಡೀರನೇ ನಿರುದ್ಯೋಗ ಅನಕ್ಷರಸ್ಥರ ನಡುವೆ ಬಹಳ ಹೆಚ್ಚಾಯಿತು. ಒಟ್ಟಾರೆಯಾಗಿ ಈ ಬಿಕ್ಕಟ್ಟಿನ ಸ್ವಭಾವ ಬಹಳ ವಿಚಿತ್ರವಾದುದು. ಉತ್ಪಾದನೆ ಮತ್ತು ಪೂರೈಕೆ ಎರಡೂ ಗಂಭೀರವಾಗಿ ತೊಂದರೆಗೊಳಗಾಗಿವೆ. ಸಾಮಾನ್ಯವಾಗಿ ಪೂರೈಕೆ ಸಂಬಂಧಿ ತೊಂದರೆ ಕಂಡುಬಂದಾಗ, ಹಣದುಬ್ಬರ ಹೆಚ್ಚಾಗುವುದನ್ನು ಕಾಣುತ್ತೇವೆ. ಜನರು ಕೊಳ್ಳಲು ಬಯಸುತ್ತಾರೆ, ಆದರೆ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಆದರೆ ಈಗ ಬೇರೆಯ ಸನ್ನಿವೇಶ ನೋಡುತ್ತಿದ್ದೇವೆ. ಪೂರೈಕೆ ಮಾತ್ರವಲ್ಲ ಜನರಿಗೆ ಆದಾಯ ಇಲ್ಲದಿರುವುದರಿಂದ ಬೇಡಿಕೆಯೂ ಇಲ್ಲ. ಆದ್ದರಿಂದ ಪೂರೈಕೆ ಇಲ್ಲದಾಗಲೂ ಬೆಲೆ ಹೆಚ್ಚುವುದಿಲ್ಲ, ಅಂದರೆ ಹಣದುಬ್ಬರ ಹೆಚ್ಚುವುದಿಲ್ಲ. (ಕೃಷಿಯಲ್ಲಿ ತೊಂದರೆ ಆಗಿರುವುದರಿಂದ ಆಹಾರ ಧಾನ್ಯಗಳ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಬಹುದು, ಇದನ್ನು ನಂತರ ಚರ್ಚಿಸೋಣ).
ಭಾರತದ ಸಮಾಜ ಮತ್ತು ಆರ್ಥಿಕತೆಯ ನಿರ್ದಿಷ್ಟತೆಗಳಿವೆ-ಜಾತಿ, ವರ್ಗ ಲಿಂಗ ತಾರತಮ್ಯ, ಶಿಕ್ಷಣದ ಅಸಮಾನತೆ ಇತ್ಯಾದಿ…. ಅವೆಲ್ಲವೂ ಈ ಸಂದರ್ಭದಲ್ಲಿ ಹಸಿಹಸಿಯಾಗಿ ಕಂಡವು.
ಬಹುತೇಕ ಶ್ರಮಿಕ ವರ್ಗದ ಕುಟುಂಬಗಳು ಕೇವಲ ಎರಡು ವಾರಕ್ಕೆ ಸಾಲುವಷ್ಟು ಉಳಿತಾಯ ಹೊಂದಿದ್ದರು. ಮನೆಯಲ್ಲೇ ಇರಬೇಕಾದ ಸನ್ನಿವೇಶದಲ್ಲಿ ಅತ್ಯಂತ ಸಣ್ಣ ಮನೆಗಳು-ಜಾಗದಲ್ಲಿ ಜನರು ಉಸಿರುಕಟ್ಟುವಂತೆ ಬದುಕಬೇಕಾಗಿ ಬಂದು ಮಾನಸಿಕ ಮತ್ತು ದೈಹಿಕ ಆರೋಗ್ಯ ಗಂಭೀರವಾಗಿ ಹಾನಿಗೊಳಗಾಗಿದೆ. ಕೌಟುಂಬಿಕ ದೌರ್ಜನ್ಯ ಬಹಳ ಹೆಚ್ಚಾಗಿದೆ. ಬೇರೆ ಬಗೆಯ ದುರ್ಘಟನೆಗಳೂ ವರದಿಯಾಗಿವೆ.
ಜೊತೆಗೆ, ಬಹಳ ಕಾಲದಿಂದ ನಾವು ನಿರ್ಲಕ್ಷಿಸಿದ್ದ ಕೆಲವು ಕ್ಷೇತ್ರಗಳನ್ನು ಹಣಹೂಡಿಕೆಯ ಮೂಲಕ ಬಲಪಡಿಸಬೇಕಾದ ವಿಚಾರ ಈ ಸಂದರ್ಭದಲ್ಲಿ ಎದ್ದು ಕಂಡಿದೆ. ಉದಾಹರಣೆಗೆ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸರ್ಕಾರಗಳು ಹೂಡಿಕೆ ಮಾಡಿದ್ದು ಎಷ್ಟು ಕಡಿಮೆಯಾಗಿತ್ತೆಂದರೆ, ಅದು ಯಾವ ಕಾರಣಕ್ಕೂ ಸಾಂಕ್ರಾಮಿಕವನ್ನು ತಡೆಯಲಾರವು ಎಂಬುದು ಸ್ಪಷ್ಟವಿತ್ತು. ಆಸ್ಪತ್ರೆಗಳ ಸಂಖ್ಯೆ, ಹಾಸಿಗೆಗಳು, ವೆಂಟಿಲೇಟರ್‌ಗಳು ಇತ್ಯಾದಿ. ಹೀಗಾಗಿ ಬಹಳ ಕಠಿಣ ರೂಪದ ಲಾಕ್‌ಡೌನ್‌ನ್ನು ಹೇರಬೇಕಾಗಿ ಬಂತು. ಹಾಗಿಲ್ಲದಿದ್ದಿದ್ದರೆ, ಲಾಕ್‌ಡೌನ್‌ನ ತೀರ್ಮಾನ ತೆಗೆದುಕೊಳ್ಳಲು ಹೆಚ್ಚು ವಿರಾಮ ಮತ್ತು ಸ್ವಾತಂತ್ರ್ಯ ಇರುತ್ತಿತ್ತು. ಇಷ್ಟು ತೀವ್ರರೂಪದ ಪರಿಣಾಮಗಳನ್ನು ಅನುಭವಿಸಬೇಕಾಗಿ ಬರುತ್ತಿರಲಿಲ್ಲ.
ಈ ಸರ್ಕಾರದ ಕೆಳಗೆ ಜನರ ನಡುವೆ ಹೆಚ್ಚಿಸಲಾದ ಕೋಮು ವೈರುಧ್ಯವು -ಹೆಚ್ಚೂ ಕಡಿಮೆ 2014ರಿಂದ-ಈ ಸಂದರ್ಭದಲ್ಲಿ ಜನರು ಒಗ್ಗೂಡಿ ಸಾಂಕ್ರಾಂಮಿಕವನ್ನು ಮಣಿಸುವ ಬದಲು ಜನ ತಮ್ಮ ತಮ್ಮಲ್ಲೇ ಹೊಡೆದಾಡಿಕೊಳ್ಳುವ ಸ್ಥಿತಿ ತಂದಿಟ್ಟಿವೆ. ನಗರ ಪ್ರದೇಶದ ಯೋಜನೆಗೆ ನಾವು ನೀಡಿದ ಅತಿಕಡಿಮೆ ಒತ್ತೂ ಕೂಡಾ ಇವತ್ತು ನಮ್ಮನ್ನು ಬಹಳ ದುಸ್ಥಿತಿಗೆ ದೂಡಿದೆ.
ನಾನು ಆಗಲೇ ಹೇಳಿದಂತೆ, ಭಾರತದ ಬಹುಸಂಖ್ಯಾತ ಕಾರ್ಮಿಕ ವರ್ಗ ಅಸಂಘಟಿತವಾಗಿದೆ ಅಥವಾ ಅನೌಪಚಾರಿಕ ಸ್ಥಿತಿಯಲ್ಲಿದೆ. ಆದ್ದರಿಂದ ಈ ವರ್ಗ ಬಹಳ ದೊಡ್ಡ ಪ್ರಮಾಣದಲ್ಲಿ ಲಾಕ್‌ಡೌನ್‌ನ ಸಂಕಷ್ಟಕ್ಕೆ ತುತ್ತಾದರು. ಧಿಡೀರನೇ ಭಾರೀ ದೊಡ್ಡ ಸಂಖ್ಯೆಯ ಈ ವರ್ಗದ ಜನರು ಸಂಪೂರ್ಣ ಅಸಹಾಯಕರಾದರು. ತಮ್ಮ ಒಂದು ಹೊತ್ತಿನ ಆಹಾರ ಅಥವಾ ಯಾವುದೇ ನೆರವಿಗಾಗಿ ಸರ್ಕಾರದ ಕಡೆಗೆ ಅಥವಾ ಅಧಿಕಾರಿಗಳು ಅಥವಾ ಬೇರೆ ಯಾವುದೇ ಸಂಸ್ಥೆಗಳ ಕಡೆಗೆ ನೋಡುವ ಸ್ಥಿತಿಗೆ ಇಳಿಸಲ್ಪಟ್ಟರು. ಇದು ಅವರ ಆತ್ಮಗೌರವದ ದೃಷ್ಟಿಯಿಂದ ಅತ್ಯಂತ ಕೆಟ್ಟ ಸ್ಥಿತಿಯಾಗಿತ್ತು.
ಭಾರತದ ಸಹಾಯದ ಪ್ಯಾಕೇಜ್ ಕೂಡಾ ಎಲ್ಲ ಸೇರಿದರೆ 2 ಲಕ್ಷ ಕೋಟಿಯ ಹತ್ತಿರ ಬರಬಹುದಷ್ಟೇ. ಬಹುತೇಕ ಕೊರೊನಾ ಬಾಧಿತ ದೇಶಗಳು ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹಣವನ್ನು ಎತ್ತಿಟ್ಟಿವೆ. ಭಾರತಕ್ಕಿಂತ ಆರ್ಥಿಕವಾಗಿ ಕೆಳಗಿರುವ ವಿಯೆಟ್ನಾಂ, ಬಾಂಗ್ಲಾದೇಶದಂತಹ ದೇಶಗಳೂ ಕೂಡಾ ನಮ್ಮದಕ್ಕಿಂತ ಹೆಚ್ಚು ಶೇಕಡಾ ಹಣವನ್ನು (ತಮ್ಮ ಜಿಡಿಪಿಯಲ್ಲಿ) ಆರ್ಥಿಕತೆಯ ಚೇತರಿಕೆಗೆ ಎತ್ತಿಟ್ಟಿವೆ.
ಈ ನಡುವೆ ದೇಶದ ಬಹುಸಂಖ್ಯಾತ ಜನರು ಮುಂದೇನು ಎಂಬುದೇ ಗೊತ್ತಿಲ್ಲದ ಶೋಚನೀಯ ಸ್ಥಿತಿಯಲ್ಲಿದ್ದಾರೆ. ‘ಸಿಲುಕಿಕೊಂಡ ಕಾರ್ಮಿಕರ ಕ್ರಿಯಾ ಸಮಿತಿ’ ಎಂಬ ತಂಡವು –ಇದರಲ್ಲಿ ಕೆಲವರು ಅಜೀಂ ಪ್ರೇಮ್‌ಜಿ ವಿವಿಯವರೂ ಇದ್ದಾರೆ-ನಡೆಸಿದ ಅಧ್ಯಯನವು ಸ್ಪಷ್ಟವಾಗಿ ಅವರ ವಲಸೆ ಮತ್ತು ದಿನಗೂಲಿ ಕಾರ್ಮಿಕರ ಸ್ಥಿತಿ ಎಷ್ಟು ಘನಘೋರವಾಗಿದೆ ಎಂಬುದನ್ನು ತೋರಿಸುತ್ತಿದೆ.
ಹಲವು ಅಧ್ಯಯನಗಳು ನಡೆಯುತ್ತಿದೆ. ನಾವು ನಡೆಸುತ್ತಿರುವ ಅಧ್ಯಯನಕ್ಕೆ ಗೌರಿ ಮೀಡಿಯಾ ಟ್ರಸ್ಟ್ ಕೂಡಾ ನೆರವಾಗುತ್ತಿದೆ. ಬೇರೆ ರಾಜ್ಯಗಳಲ್ಲೂ ಸೇವಾ ಮೊದಲಾದವರ ನೆರವಿನಿಂದ ಪೋನ್ ಕರೆಗಳ ಮೂಲಕ ಸರ್ವೆ ಮಾಡುತ್ತಿದ್ದೇವೆ.
ಗ್ರಾಮೀಣ ಸ್ಥಿತಿಗತಿ ಕೂಡಾ ಬಹಳ ಕಷ್ಟದಲ್ಲಿದೆ. ಇಡೀ ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯ ಸರಪಳಿಯೇ ಕಡಿದುಹೋಗಿದೆ. ಬೆಳೆ ಬೆಳೆಯುವಿಕೆ, ಸುಗ್ಗಿ, ಮಾರುಕಟ್ಟೆಗೆ ತಲುಪಿಸುವುದು ಎಲ್ಲವೂ ಕಷ್ಟಕ್ಕೆ ಸಿಲುಕಿಕೊಂಡಿವೆ. ತರಕಾರಿ ಮಂಡಿಗಳ ಬಗ್ಗೆ ನಡೆದಿರುವ ಅಧ್ಯಯನದ ಪ್ರಕಾರ ಅವೂ ಕೂಡಾ ನೆಲಕ್ಕಚ್ಚಿವೆ ಎಂಬುದು ತಿಳಿದಿದೆ.
ಇದೆಲ್ಲಾ ಕೆಟ್ಟ ಸುದ್ದಿ. ಈಗ ಸ್ವಲ್ಪ ಒಳ್ಳೆಯದೇನಾದರೂ ಇರಬಹುದೇ ನೋಡೋಣ:
1. ನರೇಗಾ ವಿಚಾರವು ಈಗ ಮಹತ್ವ ಪಡೆದುಕೊಳ್ಳುತ್ತದೆ. ವಲಸೆ ಹೋದ ಕಾರ್ಮಿಕರು ಊರುಗಳಿಗೆ ಮರಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲೇ ಉದ್ಯೋಗ ಸೃಷ್ಟಿಸುವ ಸಾಧ್ಯತೆಗಳು ತೆರೆದುಕೊಂಡಿವೆ. ಅದು ನರೇಗಾ ಈಗಿರುವಂತೆ ಆಗುವುದಿಲ್ಲ. ಅದು ಕೇವಲ ಹಣ ವರ್ಗಾವಣೆಯ ಯೋಜನೆಯಲ್ಲ. ಅದರಲ್ಲಿ ಹಲವು ಸುಧಾರಣೆಗಳಾಗಬೇಕಾಗಿದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮಾಡಲು ಇದು ಸಕಾಲ. ಇದು ರಾಜ್ಯಗಳ ಮಟ್ಟದಲ್ಲಿ ಆಗುವ ಕೆಲಸವಲ್ಲ. ಕೇರಳ ಪ್ರಯತ್ನಿಸಿದೆ-ಅಯ್ಯಂಕಾಳಿ ರಾಜ್ಯ ಉದ್ಯೋಗ ಖಾತರಿ ಯೋಜನೆ. ಆದರೆ ಕೇರಳ ಒಂದು ಎಕ್ಸೆಪ್ಷನ್. ಈಗ ಒಡಿಸ್ಸಾ ಕೂಡಾ ಪ್ರಯತ್ನಿಸುತ್ತಿದೆ. ಕರ್ನಾಟಕವನ್ನೇ ತಗೊಂಡರೆ, ಕರ್ನಾಟಕದ ಒಟು ವೆಚ್ಚದ ಮೊತ್ತ 2 ಲಕ್ಷ ಕೋಟಿಯ ಸುತ್ತಮುತ್ತ ಇದೆ ಅಷ್ಟೇ. ಹಾಗಾಗಿ ಕೇಂದ್ರ ಭಾಗವಹಿಸಲೇಬೇಕು. ಆದರೆ ರಾಜ್ಯಗಳೂ ಪ್ರಯತ್ನಿಸಬಹುದು. ಈಗ ನರೆಗಾ ಬಜೆಟ್ ಸುಮಾರು 60,000 ಕೋಟಿ ಇದೆ. ಅದು ಕನಿಷ್ಟ 2 ಲಕ್ಷ ಕೋಟಿಯಷ್ಟಾದರೂ ಆಗಬೇಕಿದೆ. ಆದ್ದರಿಂದ ಉದ್ಯೋಗ ಖಾತರಿಯಂತದ್ದನ್ನು ವಿಸ್ತರಿಸಲು ಸಾಧ್ಯವಾಗುವಂತೆ ಈ ಸನ್ನಿವೇಶವನ್ನು ಸ್ವಲ್ಪ ಸಡಿಲಗೊಳಿಸುವಂತೆ ಕೆಲವು ರಾಜ್ಯಗಳು ಬೇಡಿಕೆಯಿಟ್ಟಿವೆ.
ಎರಡನೇ ವಿಚಾರ, ಜಾಗತಿಕ ಮೂಲಸೌಕರ್ಯಗಳನ್ನು ವಿಸ್ತರಿಸುವುದು. ಇದು ಬಹಳ ಕಾಲದಿಂದ ಆಗಬೇಕಾದ ಕೆಲಸ. ಆ ಮೂಲಕ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿ ಮಾತ್ರವಲ್ಲ, ಸರ್ಕಾರದ ಹಣ ವೆಚ್ಚವಾಗಬೇಕಾದ ಜನಸಮುದಾಯಕ್ಕೆ ಅದು ತಲುಪುತ್ತದೆ.
ಒಟ್ಟಿನಲ್ಲಿ ಇವುಗಳಿಂದ ನಾವು ಬಿಕ್ಕಟ್ಟಿನ ಸನ್ನಿವೇಶವನ್ನು ಬಹಳ ಪ್ರಮಾಣಕ್ಕೆ ಸುಧಾರಿಸಲು ಸಾಧ್ಯ. ಇವೆಲ್ಲಕ್ಕೆ ನಮ್ಮಲ್ಲಿ ಹಣ ಇದೆಯಾ? ಆಗಲೇ ಹೇಳಿದಂತೆ, ರಾಜ್ಯಗಳು ಈ ವಿಚಾರದಲ್ಲಿ ಬಹಳ ಸೀಮಿತ ಸಾಧ್ಯತೆಗಳನ್ನು ಹೊಂದಿರುತ್ತವೆ. ಏಕೆಂದರೆ ಅವರಿಗೆ ತೆರಿಗೆ ಸಂಗ್ರಹವಾಗುವುದು ಕಡಿಮೆ. ಅದಕ್ಕೆ ಮದ್ಯಮಾರಾಟದಂತಹ ಕ್ರಮಗಳ ಮೇಲೆ ಏಕೆ ಸರ್ಕಾರಗಳು ಅವಲಂಬಿಸುವಂತಾಗಿದೆ? ಅದು ಕೇಂದ್ರದ ಜಿಎಸ್‌ಟಿ ಯಂತಹ ನೀತಿಗಳ ಕಾರಣಕ್ಕೆ. ಅಲ್ಲಿ ರಾಜ್ಯ ಸರ್ಕಾರಗಳಿಗೆ ಅಥವಾ ಮುನಿಸಿಪಾಲಿಟಿಗಳಿಗೆ ಬಹಳ ಕಡಿಮೆ ಸ್ವಾತಂತ್ರ್ಯವಿರುತ್ತದೆ. ಆದ್ದರಿಂದ, ಇದರಲ್ಲಿ ಕೇಂದ್ರದ ಭಾಗೀದಾರಿಕೆ ಬೇಕೇ ಬೇಕಿರುತ್ತದೆ.
ಕನ್ನಡಕ್ಕೆ: ಮಲ್ಲಿಗೆ ಸಿರಿಮನೆ
ಇದನ್ನೂ ಓದಿ: ಕೊರೋನಾ ಲಾಕ್‌ಡೌನ್ ನಂತರ ಭಾರತ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯ. ಹೇಗೆ ಗೊತ್ತೆ?


