ಬಿಲ್ಡರ್‌ಗಳ ಹಿತಾಸಕ್ತಿ ಕಾಪಾಡಲು ಏಕಾಏಕಿ ಅಂತರಾಜ್ಯಗಳಿಗೆ ಹೊರಡಬೇಕಿದ್ದ ಕಾರ್ಮಿಕರ ರೈಲು ಸೇವೆಗಳನ್ನು ತಡೆಹಿಡಿದ್ದಿದ್ದ ಕರ್ನಾಟಕ ಸರ್ಕಾರ ಕಾರ್ಮಿಕರ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ನಾಳೆಯಿಂದ ಮತ್ತೆ ರೈಲು ಸೇವೆ ಆರಂಭಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಗಳಿಗೆ ಈ ಸೂಚನೆ ನೀಡಿದ್ದು ಶುಕ್ರವಾರದಿಂದ ಮೇ 15ರವರೆಗೆ ಒಂದು ವಾರಗಳ ಕಾಲ ಪ್ರತಿದಿನ ರೈಲುಗಳು ಹೊರಡಲಿವೆ. ಜಾರ್ಖಂಡ್, ಉತ್ತರ ಪ್ರದೇಶ, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ, ಒಡಿಸ್ಸಾ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಪ್ರತಿದಿನ ಎರಡು ವಿಶೇಷ ರೈಲುಗಳು ಹೊರಡಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಆರಂಭವಾಗಿದ್ದ ರೈಲುಸೇವೆಗಳು ಮಂಗಳವಾರ ರಾತ್ರಿಗೆ ಕೊನೆಗೊಂಡಿದ್ದವು. ಅಂದು ಬುಧವಾರ ಬೆಂಗಳೂರಿನಿಂದ ಧಾನ್‌ಪುರ ಮತ್ತು ಬಿಹಾರಕ್ಕೆ ಹೊರಡಬೇಕಿದ್ದ ರೈಲುಗಳ ಸಂಚಾರವನ್ನು ರದ್ದುಗೊಳಿಸುವಂತೆ ಆದೇಶಿಸಿ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದರು.
ಇದನ್ನೂ ಓದಿ: ಬಿಲ್ಡರ್ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು
ಇದರಿಂದ ಕಂಗಾಲಾದ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. “ನಾವು ನಿರ್ಮಿಸಿದ ನಗರದಲ್ಲಿ ನಾವು ಕೈದಿಗಳು” ಎಂಬ ಪೋಸ್ಟರ್ ಹಿಡಿದು ಹಲವಾರು ವಲಸೆ ಕಾರ್ಮಿಕರು ತಮ್ಮ ನೋವು ತೋಡಿಕೊಂಡಿದ್ದರು.
ಅಲ್ಲದೇ ಬಹಳಷ್ಟು ವಲಸೆ ಕಾರ್ಮಿಕರು ಕಾಲ್ನಡಿಗೆ ತಮ್ಮ ರಾಜ್ಯಗಳಿಗೆ ನಡೆದುಕೊಂಡು ಹೊರಟುಬಿಟ್ಟಿದ್ದರು. ಆಂಧ್ರ ಗಡಿಯಲ್ಲಿ ಪೊಲೀಸರು ನಡೆದುಕೊಂಡು ಹೋಗಲು ಸಹ ಬಿಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
“ಹೊರರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ವ್ಯವಸ್ಥೆ ಮಾಡಿದ್ದ ರೈಲುಗಳನ್ನು ಮುಖ್ಯಮಂತ್ರಿಗಳು ಹಠಾತ್ತನೆ ರದ್ದು ಮಾಡಿರುವುದು ಅಮಾನವೀಯ ನಿರ್ಧಾರ ಮಾತ್ರವಲ್ಲ, ಕಾರ್ಮಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ವಿರೋಧ ಪಕ್ಷದ ಮುಖಂಡರಾದ ಸಿದ್ದರಾಮಯ್ಯನವರು ಟೀಕಿಸಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ರೈಲು ರದ್ದತಿಯನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ರೈಲು ಸೇವೆಗೆ ಮತ್ತೆ ಚಾಲನೆ ನೀಡಿ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಈ ಮೊದಲು ಸಹ ರಾಜ್ಯದೊಳಗಿನ ವಿವಿಧ ಜಿಲ್ಲೆಗಳಿಗೆ ತೆರಳುವ ಕಾರ್ಮಿಕರಿಗೆ ಮೂರು ಪಟ್ಟು ಬಸ್ ದರ ವಿಧಿಸಿ ರಾಜ್ಯ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಪ್ರಗತಿಪರರು ಮತ್ತು ವಿರೋಧ ಪಕ್ಷಗಳ ವಿರೋಧಕ್ಕೆ ಮಣಿದು ಸಿಂಗಲ್ ದರ ನಿಗದಿ ಮಾಡಿ ನಂತರ ಪೂರ್ಣ ಉಚಿತ ಎಂದು ಘೋಷಿಸಿದ್ದನ್ನು ನಾವಿಲ್ಲಿ ಸ್ಮರಸಬಹುದಾಗಿದೆ.
ಇದನ್ನೂ ಓದಿ: ಊರಿಗೆ ತೆರಳಲು ಬಸ್: ಟಿಕೆಟ್ ಬೆಲೆ ಮೂರು ಪಟ್ಟು ಹೆಚ್ಚು, ಸಂಕಷ್ಟದಲ್ಲಿ ಕಣ್ಣೀರಿಡುತ್ತಿರುವ ಕಾರ್ಮಿಕರು


