ತುಮಕೂರಿನ ನಗರದ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್‌ನಲ್ಲಿಟ್ಟು ನಿಗದಿತ ಸಮಯ ಕಳೆದು ಮೂರು ದಿನವಾದರೂ ಬಿಡುಗಡೆಗೊಳಿಸದೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದು, ಈ ಮೂಲಕ ಕ್ವಾರಂಟೈನ್ ನಲ್ಲಿರುವ ಒಂದು ಸಮುದಾಯದವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ನಾಗವಲ್ಲಿಯಲ್ಲಿ ಏಪ್ರಿಲ್ 30ರಂದು ಮೃತದೇಹದ ದಫನ್ ಕ್ರಿಯೆಯಲ್ಲಿ ಭಾಗವಹಿಸಿದ್ದರೆಂದು ಹೇಳಲಾದ 56 ಜನರನ್ನು ಕರೆತಂದು ನಗರದ ಬಿಎಚ್ ರಸ್ತೆಯಲ್ಲಿರುವ ಹಾಸ್ಟೆಲ್ ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಎಲ್ಲರ ರಕ್ತ ಮತ್ತು ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಕಳಿಸಿ ನೆಗೆಟಿವ್ ವರದಿ ಬಂದಿದ್ದರೂ ಅವರನ್ನು ಮನೆಗಳಿಗೆ ಕಳುಹಿಸದೇ ಅನುಮತಿ ನೀಡುತ್ತಿಲ್ಲ ಎಂದು ದೂರಲಾಗಿದೆ.
ಹಾಸ್ಟೆಲ್ ಉಸ್ತುವಾರಿಗೆ ನಿಯೋಜಿಸಿರುವ ವೈದ್ಯಾಧಿಕಾರಿ ರಕ್ಷಿತ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಿಲ್ಲ. ಕ್ವಾರಂಟೈನ್ ನಲ್ಲಿರುವವರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಬೇಕೆಂದೇ ಮಾಹಿತಿ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಿಯಮ ಪ್ರಕಾರ 10 ದಿನ ಕ್ವಾರಂಟೈನ್ ನಲ್ಲಿ ಇರಿಸಿಕೊಳ್ಳಬೇಕು. ಆದರೆ 17 ದಿನಗಳು ಕಳೆದರೂ ಅವರನ್ನು ಬಿಡುಗಡೆ ಮಾಡಿಲ್ಲ. 56 ಮಂದಿಯಲ್ಲಿ 22 ಮಂದಿ ಮಹಿಳೆಯರು, 29 ಮಂದಿ ಪುರುಷರು, 10 ತಿಂಗಳ ಮಗುವೊಂದಿದ್ದು ಅವರೆಲ್ಲರ ಕ್ವಾರಂಟೈನ್ ಅವಧಿ ಮುಗಿದಿದೆ. ಆದರೂ ವೈದ್ಯಾಧಿಕಾರಿ ನಮ್ಮನ್ನು ಮನೆಗೆ ಕಳುಹಿಸದೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಕುಟುಂಬಗಳ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ದೂರಲಾಗಿದೆ.
ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಷರೀಫ್ ಮಾತನಾಡಿ, ವೈದ್ಯಾಧಿಕಾರಿ ರಕ್ಷಿತ್ ಬೇಕೆಂದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಕೈಗೆ ಸಿಗದಂತೆ ಓಡಾಡುತ್ತಿದ್ದಾರೆ. ಮೊಬೈಲ್ ಕರೆ ಮಾಡಿದರೂ ತೆಗೆದುಕೊಳ್ಳುತ್ತಿಲ್ಲ. ಕ್ವಾರಂಟೈನ್‌ನಲ್ಲಿರುವವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ವೈದ್ಯರ ಮೇಲೆ ಹೇಳುತ್ತಾರೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಟೀಕಿಸಿದರು.
ಕೆಬಿಎಚ್ ಕಾಲೋನಿಯ ವೃದ್ದರೊಬ್ಬರು ನಿಧನರಾಗಿದ್ದರು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ ಮೃತದೇಹವನ್ನು ನಾಗವಲ್ಲಿ ಸಮೀಪ ದಫನ್ ಮಾಡಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರೆಂದು ಶಂಕಿಸಿ 56 ಮಂದಿಯನ್ನು ನಗರಕ್ಕೆ ತಂದು ಹಾಸ್ಟೆಲ್ ನಲ್ಲಿ ಇರಿಸಿದ್ದಾರೆ. 17 ದಿನ ಕಳೆದರೂ ಅವರನ್ನು ಬಿಡುಗಡೆ ಮಾಡಿಲ್ಲ. ಜಿಲ್ಲಾಡಳಿತವೂ ಈ ಬಗ್ಗೆ ಮೌನ ವಹಿಸಿದೆ. ಅವರನ್ನು ಬಿಡುಗಡೆ ಮಾಡದೆ ಇರಲು ಕಾರಣವೇನು? ಎರಡು ಬಾರಿಯ ವರದಿಯಲ್ಲೂ ನೆಗೆಟೀವ್ ಬಂದಿದ್ದರೂ ಇನ್ನೂ ಇಟ್ಟುಕೊಂಡಿರುವುದರ ಉದ್ದೇಶವೇನು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಈ ಕುರಿತು ಪ್ರತಿಕ್ರಿಯೆಗಾಗಿ ವೈದ್ಯಾಧಿಕಾರಿ ರಕ್ಷಿತ್‌ರವರನ್ನು ಸಂಪರ್ಕಿಸಲಾಯಿತು. ಅವರು “ವೈದ್ಯಾಧಿಕಾರಿ ರಕ್ಷಿತ್ ಮಾತನಾಡಿ ವರದಿ ನೆಗೆಟೀವ್ ಬಂದಿದೆ. ತಹಶೀಲ್ದಾರ್ ಮತ್ತು ಎಸಿ ಕ್ವಾರಂಟೈನ್ ನಲ್ಲಿರುವವರನ್ನು ಬಿಡುಗಡೆ ಮಾಡುವಂತೆ ನಮಗೆ ಪತ್ರ ಕೊಟ್ಟ ಕೂಡಲೇ ಬಿಡುಗಡೆ ಮಾಡುತ್ತೇವೆ. ಪತ್ರಕ್ಕಾಗಿ ಎದುರು ನೋಡುತ್ತಿದ್ದೇವೆ. ವಾಹನಗಳನ್ನು ವ್ಯವಸ್ಥೆ ಮಾಡಿದ್ದೇವೆ” ಎಂದು ಸ್ಪಷ್ಟೀಕರಣ ನೀಡಿದರು
ಇದನ್ನೂ ಓದಿ: ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ


