ದೃಶ್ಯ -1
ಲಾಕ್ ಡೌನ್ ನಿಂದ ಕಂಗಾಲಾಗಿ ತಲೆ ಮೇಲೆ ಗಂಟು ಮೂಟೆ, ಹೆಗಲಲ್ಲಿ ನಿದ್ದೆಗೆ ಜಾರಿದ ಮಗುವನ್ನು ಕಟ್ಟಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕುಟುಂಬಗಳನ್ನು ಸಂದರ್ಶಿಸುವ ಬಿಬಿಸಿಯ ವರದಿಗಾರನೋರ್ವ ವಲಸಿಗನ ಬರಿಗಾಲ ಕಂಡು ತನ್ನ ಷೂ ಗಳನ್ನೆ ಕಳಚಿ ವಲಸಿಗನಿಗೆ ಹಾಕಿ ಕಳುಹಿಸುತ್ತಾನೆ.
ದೃಶ್ಯ-2
ಖ್ಯಾತ ಪತ್ರಕರ್ತೆ ಬರ್ಕಾದತ್ ಮಕ್ಕಳು – ಮರಿಗಳ ಜೊತೆ ವಲಸೆ ಹೊರಟ ತಾಯಿಯೊಬ್ಬಳನ್ನು ಸಂದರ್ಶಿಸುವಾಗ ನೋಡುಗರ ಕಣ್ಣು ನೀರಾಡದೆ ಇರದು.

ದೃಶ್ಯ-3
ಮುಂಬೈ -ನಾಸಿಕ ಹೆದ್ದಾರಿಯಲ್ಲಿ ಲಕ್ನೋಗೆ ಟೆಂಪೋ ದಲ್ಲಿ ಅನ್ನ ನೀರು ಇಲ್ಲದೆ ವಲಸೆ ಹೊರಟಿದ್ದ ಹತ್ತಾರು ಕುಟುಂಬಗಳನ್ನು ಸಂದರ್ಶಿಸುವ ಎನ್.ಡಿಟಿ.ವಿ ವರದಿಗಾರ ತನ್ನ ಬಳಿ ಇದ್ದ ಬಿಸ್ಕೇಟ್ ಪೊಟ್ಟಣಗಳನ್ನು ಕೊಟ್ಟು ಮುಂದೆ ಹೋಗಿ ವಾಪಾಸ್ ಬರುವಾಗ ಅದೇ ಹೆದ್ದಾರಿಯಲ್ಲಿ ಟೆಂಪೋ ಅಪಘಾತಕ್ಕೀಡಾಗಿ ಚಾಲಕ ಸಾವು ಕಂಡು ಹೆಂಡತಿ ಮಕ್ಕಳು, ಕಾರ್ಮಿಕರು ಗಾಯಗೊಂಡದ್ದನ್ನು ಕಾಣುತ್ತಾನೆ. ಯಾವೊಬ್ಬ ಪತ್ರಕರ್ತನಿಗೂ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಸಂದರ್ಭ ಕಾಣುವ ದಿನಗಳು ಬರದಿರಲಿ ಎಂದು ಆದ್ರಃಗೊಳ್ಳುತ್ತಾನೆ.
ಲಾಕ್‌ಡೌನ್ ಕಾಲದಲ್ಲಿ ಇಂತಹ ಅನೇಕ ಘಟನೆಗಳು, ದುಃಖಗಳ ಮಡುವೇ ಹರಿದಿದೆ. ಕಂಡಿದ್ದು ಕೆಲವು ಮಾತ್ರ. ಇದಕ್ಕೆಲ್ಲಾ ಯಾರೂ ಹೊಣೆ ಎಂದು ಯಾರಾದರೂ ಯೋಚಿಸಿದ್ದೀರಾ?
ಕೊರೊನಾ ಸೋಂಕು ವಿರುದ್ದ ಹೋರಾಟದಲ್ಲಿ ಭಾರತ ಎಡವಿದ್ದು, ಕೊರೊನಾ ಸೋಂಕಿನಿಂದ ಬಾಧಿತರಾಗುವುದಕ್ಕಿಂತ ಅದರ ನಿರ್ಬಂಧ , ದಿಗ್ಬಂಧನಗಳಿಂದ ಜನ ನರಳಿದ್ದು, ಸಾವು ಕಂಡಿದ್ದೇ ಹೆಚ್ಚು. ಚೀನಾ, ಅಮೇರಿಕಾ, ಇಟಲಿಯಂತ ದೊಡ್ಡ ದೊಡ್ಡ ರಾಷ್ಟ್ರಗಳನ್ನು ಕೊರೊನಾ ಕಾಡಿದ್ದು ಕಣ್ಣ ಮುಂದೆ ಇರುವಾಗ ಅದನ್ನು ನಿರ್ಲಕ್ಷಿಸುವುದು ಭಾರತಕ್ಕೆ ಸಾಧ್ಯವೇ ಇಲ್ಲ ನಿಜ, ಆದರೆ ಎಚ್ಚೆತ್ತುಕೊಳ್ಳುವ ಕಾಲಕ್ಕೆ ಮೈಮರೆತು ಮೆರೆದಾಡಿದ್ದರಿಂದ ರೋಗಕ್ಕಿಂತ ಅದರ ನೆರಳಲ್ಲಿ ಸೃಷ್ಟಿಸಿದ ಭಯ (ಭಯೋತ್ಪಾದನೆ) ವೇ ಭೀಕರತೆಯಿಂದ ಕೂಡಿದೆ.
ನಲವತ್ತೈದು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಬಾಧಿತರ ಸಂಖ್ಯೆ ಇಂದಿಗೆ ಒಟ್ಟು 90,927 ಆಗಿದ್ದರೆ, 2872 ಜನ ಸಾವು ಕಂಡಿದ್ದಾರೆ. (ಸೋಂಕಿತರ ಸಂಖ್ಯೆ ಲಕ್ಷ ದಾಟುವತ್ತ ಸಾಗಿದೆ.) ಅಂದರೆ ಸುಮಾರು ಶೇ. 3ರಷ್ಟು ಜನ ಸೋಂಕಿನಿಂದ ಸಾವು ಕಂಡಿದ್ದಾರೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ಗುಣಮುಖರಾಗಿರುವುದನ್ನು ಗಮನಿಸಬೇಕು. ಸಾವು ಕಂಡವರಲ್ಲಿ ವೃದ್ದರೇ ಹೆಚ್ಚಾಗಿರುವುದರಿಂದ ಅದು ವಯೋಸಹಜ ಕಾರಣಗಳನ್ನು ಅವಲಂಬಿಸಿದೆ. ಈ ಪ್ರಮಾಣವನ್ನು ಅಮೇರಿಕಾಕ್ಕೆ ಹೋಲಿಸಿದಾಗ ಭಾರತದ ಸ್ಥಿತಿ ಅಷ್ಟೇನೂ ಭೀಕರವಾಗಿಲ್ಲ ಎಂಬುದು ಕಾಣುತ್ತದೆ. ಭಾರತದ ನೈಸರ್ಗಿಕ ವಾತಾವರಣ, ಇಲ್ಲಿನ ಜನರಲ್ಲಿನ ರೋಗನಿರೋಧಕ ಸಾಮರ್ಥ್ಯ ವೇ ದೊಡ್ಡಮಟ್ಟದ ಜೀವ ನಷ್ಟವನ್ನು ತಂದೊಡ್ಡುವಲ್ಲಿ ತಡೆಯೊಡ್ಡಿದೆ. ಜನವರಿ ತಿಂಗಳಲ್ಲೇ ಕೊರೊನಾ ಜಗತ್ತಿನಾದ್ಯಂತ ವಿಸ್ತರಗೊಳ್ಳುತ್ತಿರುವ ಸೂಚನೆಗಳು ಕಾಣತೊಡಗಿದ್ದರೂ ಭಾರತ ಅಮೇರಿಕಾದ ಅಧ್ಯಕ್ಷರನ್ನು ಕರೆದು ಕಳುಹಿಸುವ ಉತ್ಸಾಹದಲ್ಲಿ ಓಡಾಡತೊಡಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಕರೆಗಳನ್ನು ಭಾರತ ಕಿರುಗಣ್ಣಿನಿಂದಲೂ ನೋಡಲಿಲ್ಲ. ರಾಹುಲ್‌ಗಾಂಧಿ ಯ ಎಚ್ಚರಿಕೆಯ ಟ್ವೀಟ್‌ನ್ನು ಎಂದಿನಂತೆ ಲೇವಡಿ ಮಾಡಿತು ಸರ್ಕಾರ. ಭಾರತದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿದ್ದೆಗೆ ಜಾರಿತ್ತು.
ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಹೊತ್ತಿಗೆ ಕೊರೊನಾ ಸೋಂಕು ದೇಶದ ಮೂಲೆ ಮೂಲೆಗಳನ್ನು ತಲುಪಿ ಕೇಕೆ ಹಾಕುತ್ತಿತ್ತು. ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು. ಜನರನ್ನು ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ದೂಡುವಲ್ಲಿ ಸರ್ಕಾರವೇ ಯಶಸ್ವಿಯಾಗಿದೆ.
ಕೋಟ್ಯಾಂತರ ವಲಸೆ ಕಾರ್ಮಿಕರ ಬದುಕು ಬರ್ಬರವಾಯಿತು, ಜನಸಾಮಾನ್ಯರು , ಮಧ್ಯಮ ವರ್ಗದವರು ಅನ್ನಕ್ಕಾಗಿ ಪರದಾಡುವಂತಾಯಿತು. ಒಂದು ಸರ್ಕಾರವೇ ಜನರನ್ನು ವ್ಯವಸ್ಥಿತವಾಗಿ ಬೀದಿಗೆ ನೂಕಿ ಹಸಿವಿಗೆ ಈಡು ಮಾಡುವ, ಆರ್ಥಿಕತೆಯನ್ನು ಪಾತಾಳಕ್ಕೆ ತುಳಿಯುವ ಹೊಣೆಗೇಡಿತವನ್ನು ಮಾಡಿ ಕೈಚೆಲ್ಲಿ ಕುಳಿತುಕೊಂಡಿತು. ಆಶ್ಚರ್ಯವೆಂದರೆ ಈ ದೇಶದ ಕಾರ್ಮಿಕ ಸಚಿವಾಲಯಕ್ಕೆ ತನ್ನ ದೇಶದಲ್ಲಿ ಎಷ್ಟು ಪ್ರಮಾಣದ ಕಾರ್ಮಿಕರಿದ್ದಾರೆ. ಅವರ ಹಕ್ಕು, ಸವಲತ್ತುಗಳೇನು? ಅದಕ್ಕಾಗಿ ಖಜಾನೆಯಲ್ಲಿ ಇರಬಹುದಾದ ಮೊತ್ತವೆಷ್ಟು,? ಒಂದು ಪಕ್ಷ ಕಾರ್ಮಿಕರ ಬದುಕಿಗೆ ದಿಢೀರನೆ ನಷ್ಟವೊಂದು ಒದಗಿ ಬಂದರೆ ಅವರಿಗಾಗಿ ಮಾಡಬಹುದಾದ ತಕ್ಷಣದ ಕ್ರಮಗಳೇನು ಎಂಬ ಯಾವ ಡಾಟಾವೂ ಇಲ್ಲದಿರುವುದು ಬೆಳಕಿಗೆ ಬಂತು. ಆರೋಗ್ಯ ಸಚಿವಾಲಯವೂ ಕೂಡ ಇಂತಹುದ್ದೆ ಸ್ಥಿತಿಯಲ್ಲಿರುವುದು ಜಗಜ್ಜಾಹೀರಾಯಿತು. ದಾರಿ ಹಿಡಿದು ಹೊರಟ 16 ಜನ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕು ಸತ್ತದ್ದು, ಲಕ್ನೋದ ಹೆದ್ದಾರಿಯಲ್ಲಿ 24 ವಲಸೆ ಕಾರ್ಮಿಕರ ದೇಹಗಳು ನುಜ್ಜುಗುಜ್ಜಾಗಿ ಚೆಲ್ಲಾಡಿದ್ದು ಪ್ರಭುತ್ವ ಪ್ರಾಯೋಜಿತ ಕೊಲೆ ಎಂದು ಈ ದೇಶದ ಮಾಧ್ಯಮಗಳಿಗೆ ಅನಿಸಲೇ ಇಲ್ಲ. ಇದಕ್ಕೆ ಯಾರನ್ನೂ ಹೊಣೆ ಗಾರರನ್ನಾಗಿ ಮಾಡಲಿಲ್ಲ. ರಾಜೀನಾಮೆ ಕೇಳಲಿಲ್ಲ.! ಈ ದೇಶದ ಪ್ರಧಾನಿಯ 56 ಇಂಚು ಎದೆ ಕ್ಷಣಕಾಲವೂ ಕದಲಿಲ್ಲ. ಯಾವೊಬ್ಬ ಸಚಿವನೂ ನೈತಿಕ ಹೊಣೆ ಹೊರಲಿಲ್ಲ. ವಿಪಕ್ಷಗಳು ಹರತಾಳ ನಡೆಸಲಿಲ್ಲ. ಎಂತಹ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಯೋಚಿಸಿ.

ಲಾಕ್ ಡೌನ್ ನಿಂದ ಕಂಗಾಲಾಗಿ ಬೀದಿಗಿಳಿದ ವಲಸೆ ಕಾರ್ಮಿಕರು, ಬಡಕುಟುಂಬಗಳು ಕೊರೊನಾ ಸೋಂಕು ನಿಂದ ಸಾಯುವ ಭೀತಿಗಿಂತ ಅಭದ್ರತೆ, ಹಸಿವಿನಿಂದ ಸಾಯುವ ಆತಂಕವನ್ನು ಹೊತ್ತು ದೇಶದ ಉದ್ದಗಲಕ್ಕೂ ಹೊರಟು ಬಿಟ್ಟಿದ್ದರು. ಸೋಂಕಿನಿಂದ ಸತ್ತವರಿಗಿಂತ ಇಂತಹ ಅಭದ್ರತೆ, ಹಸಿವಿನಿಂದ ಸತ್ತವರ ಪ್ರಮಾಣವೇ ಹೆಚ್ಚಾಗಿದೆ. ಇದಾವುದನ್ನೂ ಕಂಡೂ ಕಾಣದೆ ಇದ್ದ ಸರ್ಕಾರಗಳು ಸ್ಪೆಷಲ್ ಫ್ಲೈಟ್ ಗಳಲ್ಲಿ ತಮ್ಮ ತಮ್ಮ ಕುಟುಂಬಸ್ಥರುನ್ನು ಬಂಧು ಬಾಂಧವರನ್ನು ವಿದೇಶದಿಂದ ಸುರಕ್ಷಿತವಾಗಿ ಮನಗೆ ಕರೆಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಜನರಿಗೆ ಅನ್ನಕ್ಕಿಂತ ಭಾಷಣಗಳನ್ನು ಉಣಿಸಿದ್ದೇ ಹೆಚ್ಚು. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕು, ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಹೆಲಿಕಾಪ್ಟರ್ ಗಳಿಂದ ಹೂಮಳೆಗೆರೆಯಿರಿ ಎಂದು ದಿಕ್ಕು ತಪ್ಪಿಸಲಾಯಿತು. ಈ ಸದ್ದು-ಸಂಭ್ರಮಗಳ ಅಬ್ಬರದಲ್ಲಿ ದೇಶದುದ್ದಗಲಕ್ಕೂ ದಾರಿ ಹುಡುಕುತ್ತಾ ಹೊರಟ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರ ಹಸಿವಿನ ಆಕ್ರಂದನ, ಬರಿಗಾಲ ಸದ್ದುಗಳು ಜಗತ್ತಿಗೆ ತಿಳಿಯದಾಯಿತು. ಮಾಧ್ಯಮಗಳು ಚಪ್ಪಾಳೆ ತಟ್ಟುವುದನ್ನು, ಹೂಮಳೆಗೆರೆಯುವುದನ್ನು ಕೊಂಡಾಡುವಲ್ಲಿ ಮುಳುಗಿದವೆ ವಿನಃ ವಲಸೆ ಹೊರಟ ಜನರ ದುಃಖ, ದುಮ್ಮಾನಗಳಿಗೆ ಕ್ಯಾಮರಾ ಹಿಡಿಯಲಿಲ್ಲ. ಪೆನ್ನುಗಳು ತಹತಹಿಸಲಿಲ್ಲ.

ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪುತ್ತಿರುವ ಹೊತ್ತಿನಲ್ಲಿ ಇನ್ನೇನು ದೇಶ ನಾಶವಾಗಿಬಿಡುತ್ತದೆ. ಜನರೆಲ್ಲಾ ರೋಗಕ್ಕೆ ತುತ್ತಾಗಿ ಇಲ್ಲವಾಗಿಬಿಡುತ್ತಾರೆ ಎಂಬ ಪೋಬಿಯಾವನ್ನು ಬಿತ್ತಲಾಗುತ್ತಿದೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ರೋಗವನ್ನು ಎದುರಿಸಿ ಗುಣಮುಖರಾಗುತ್ತಿರುವ ಆಶಾದಾಯಕ ಬೆಳವಣಿಗೆಯನ್ನು ಜನರಿಗೆ ತಿಳಿಸುತ್ತಿಲ್ಲ. ಮದ್ದೇ ಇಲ್ಲದ ಈ ಸೋಂಕನ್ನು ಲಾಕ್ ಡೌನ್ ಎಂಬ ದಿಗ್ಬಂಧನಗಳಿಂದ ಕಟ್ಟಿಹಾಕುವುದಷ್ಟೇ ನಮಗೆ ಉಳಿದಿರುವ ದಾರಿ ಎಂದೇ ಭಾವಿಸಿರುವ ಮಾಧ್ಯಮಗಳು ಲಾಕ್ ಡೌನ್ ಎಂಬ ಅಸ್ತ್ರದಿಂದ ಭಾರತದೊಳಗಿನ ಬಡ ಭಾರತವನ್ನು ದಂಡಿಸಲು ಪ್ರಚೋದಿಸುತ್ತಿವೆ. ಜಾಗತೀಕರಣವನ್ನು ಹಾಸು ಹೊದ್ದು, ಉಣ್ಣುತ್ತಿರುವಾಗ ಈ ದೇಶದ ಪ್ರಧಾನಿ ಆತ್ಮ ನಿರ್ಭರ ಎಂಬ ಕಗ್ಗ ವಾಚನ ಮಾಡುತ್ತಿದ್ದಾರೆ.
ಜನತೆ ಈ ರೋಗದ ಜೊತೆ ಗುದ್ದಾಡುತ್ತಲೆ ಬದುಕಬೇಕೆಂಬ ಪರ‍್ಯಾಯ ಮಾರ್ಗಗಳನ್ನು ತೋರುವ, ಜನರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆ ಕೊರೊನಾ ಬರುವುದಕ್ಕಿಂತಲೂ ಮೊದಲೇ ವಿಫಲತೆಯ ಸೋಂಕು ಹಿಡಿದು ಉಸಿರೆಳೆಯುತ್ತಿತ್ತು. ಈಗ ಎಲ್ಲಾ ಅಸಮರ್ಥತೆಯನ್ನು ಕೊರೊನಾ ತಲೆಗೆಕಟ್ಟಿ ತಲೆ ಉಳಿಸಿಕೊಳ್ಳುವ ಕೆಲಸ ನಡೆದಿದೆ. ಇತ್ತ ಜನತೆ ಕೊರೊನಾ ಫೋಬಿಯಾದಿಂದ ಹೊರಬಂದು ಕೊರೊನಾ ಜೊತೆಯೇ ಬದುಕು ಕಟ್ಟಿಕೊಳ್ಳಬೇಕಾಗಿದೆ.
(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)


