ರಾತ್ರಿ 8 ಗಂಟೆಗೆ ಏಕಾಏಕಿಯಾಗಿ ದೇಶವನ್ನಿಡೀ ಸ್ತಬ್ಧಗೊಳಿಸಿದ ದಿಗ್ಬಂಧನವನ್ನು ಹೇರಿ 60 ದಿನಗಳ ಮೇಲಾಗಿವೆ. ಗಂಡ-ಹೆಂಡತಿಯರು, ಮಕ್ಕಳು-ಹೆತ್ತವರು, ಚಿಕಿತ್ಸೆಗೆಂದು ಪರವೂರಿಗೆ ಹೋದವರು ಮನೆಗಳಿಗೆ ಮರಳಲಾಗದೆ ಅಲ್ಲಲ್ಲೇ ಬಾಕಿಯಾಗಿ, ಪರಸ್ಪರ ಬೇರೆಯಾಗಿ ಎರಡು ತಿಂಗಳಾಗಿವೆ. ಹತ್ತು ಕೋಟಿಗೂ ಹೆಚ್ಚು ಜನರು ಆ ಒಂದೇ ಘಳಿಗೆಯಲ್ಲಿ ತಮ್ಮ ಕೆಲಸ, ವಸತಿ, ಊಟ, ನಿದ್ದೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಾಗಿದೆ. ಮನೆಗಳಿಗೆ ಮರಳಲು ಬಸ್ಸು, ರೈಲು ಯಾವಾಗ ದೊರೆಯಬಹುದೆಂಬುದು ತಿಳಿಯದ ಅನಿಶ್ಚಿತತೆಯಲ್ಲಿ ಸಾವಿರಾರು ಜನರು ಸಾವಿರಗಟ್ಟಲೆ ಕಿಮೀ ದೂರದ ತಮ್ಮ ಮನೆಗಳಿಗೆ ನಡೆದೇ ಸಾಗಿದ್ದಾರೆ. ಅವರಲ್ಲಿ ಕೆಲವರು ರಸ್ತೆಗಳಲ್ಲಿ, ರೈಲು ಹಳಿಗಳಲ್ಲಿ ಜೀವ ತೆತ್ತಿದ್ದಾರೆ.
ದೇಶವ್ಯಾಪಿ ದಿಗ್ಬಂಧನಕ್ಕೆ ಎರಡು ತಿಂಗಳಾಗುತ್ತಿದ್ದಂತೆ ಪ್ರಕರಣಗಳ ಸಂಖ್ಯೆಯು ದೇಶದಲ್ಲಿ 564ರಿಂದ ಒಂದೂವರೆ ಲಕ್ಷಕ್ಕೆ, ಸಾವುಗಳ ಸಂಖ್ಯೆಯು 10ರಿಂದ 4200ಕ್ಕೆ ಏರಿವೆ, ರಾಜ್ಯದಲ್ಲಿ ಇವು ಕ್ರಮವಾಗಿ 15 ಮತ್ತು 1ರಿಂದ 2200 ಮತ್ತು 44ಕ್ಕೆ ಏರಿವೆ. ಕೊರೊನಾ ನಿಯಂತ್ರಣವು ಹೀಗೆ ವಿಫಲವಾದರೆ, ದಿಗ್ಬಂಧನದಿಂದಾಗಿ ವಿಪರೀತ ನಿರುದ್ಯೋಗ, ವಹಿವಾಟುಗಳಲ್ಲಿ ಅಪಾರ ನಷ್ಟ, ಎಲ್ಲಾ ಕೈಗಾರಿಕೋದ್ಯಮಗಳು, ಸಂಚಾರ ಸೇವೆಗಳು, ಪ್ರವಾಸೋದ್ಯಮಗಳು ಸ್ಟಗಿತಗೊಂಡಿರುವುದು, ಭೀಕರ ಹಸಿವು, ನಿರ್ವಸತಿ ಮುಂತಾದ ಕೊರೊನಾಕ್ಕಿಂತಲೂ ಗಂಭೀರವಾದ, ದಶಕಗಳಾದರೂ ಸರಿಪಡಿಸಲಾಗದ ಹಲವಾರು ಸಮಸ್ಯೆಗಳಾಗಿವೆ. ದೇಶದ ಆರ್ಥಿಕತೆಗೆ 40 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದ್ದು, ಮುಂದಿನ ಕೆಲವು ವರ್ಷಗಳವರೆಗೆ ಅಭಿವೃದ್ಧಿ ದರವು ತೀವ್ರ ಪ್ರಮಾಣದಲ್ಲಿ ಹಿಂಜರಿಯಲಿದೆ, ಆರ್ಥಿಕತೆಯು ಹಿಗ್ಗುವ ಬದಲು ಕುಗ್ಗಲಿದೆ ಎಂದು ಹಲವು ಮೂಲಗಳು ಹೇಳಿವೆ. ಇಷ್ಟೇಲ್ಲ ಅನಾಹುತಗಳನ್ನುಂಟು ಮಾಡಿದ ಬಳಿಕ ಪ್ರಧಾನಮಂತ್ರಿಗಳು ಎಲ್ಲರೂ ಆತ್ಮನಿರ್ಭರರಾಗಬೇಕೆಂದು ಉಪದೇಶಿಸಿದ್ದಾರೆ. ಆತ್ಮನಿರ್ಭರ ಅಂದರೆ ವಿಪರೀತ, ಬಲಿಷ್ಠ, ಹಿಂಸಾತ್ಮಕ, ಉತ್ಕಟ, ಬಿಗಿ, ಆಳ, ಪೂರ್ಣ ಎಂಬ ಅರ್ಥಗಳಷ್ಟೇ ಕಾಣಸಿಗುತ್ತವೆ ಎಂದು ನಮ್ಮ ಹಿರಿಯ ವಿದ್ವಾಂಸರಾದ ಡಾ.ಜಿ.ರಾಮಕೃಷ್ಣ ಬರೆದಿದ್ದಾರೆ.
ಕೊರೊನಾ ಪ್ರಕರಣಗಳು ಕೇವಲ ಐನೂರರಷ್ಟಿದ್ದಾಗ ಇಡೀ ದೇಶವನ್ನೇ ಸ್ತಬ್ಧಗೊಳಿಸಿ, ಬಡವರನ್ನೆಲ್ಲ ಬೀದಿಪಾಲಾಗಿಸಿ, ಲಕ್ಷಗಟ್ಟಲೆಯಾದಾಗ ಆತ್ಮನಿರ್ಭರತೆಗೆ ವಹಿಸಿಕೊಟ್ಟಿರುವಾಗ ಕೊರೊನಾ ಸೋಂಕನ್ನು ಎದುರಿಸುವುದಕ್ಕೆ ನಮ್ಮ ದಾರಿಯನ್ನೀಗ ನಾವೇ ನೋಡಿಕೊಳ್ಳಬೇಕಾಗಿದೆ.

ಸರಕಾರವು ಮಾಡಬೇಕಾದದ್ದೇನು?
ಮೊತ್ತಮೊದಲನೆಯದಾಗಿ ಸರಕಾರವು ಜನರಿಗೆ ಸತ್ಯವನ್ನು ಹೇಳಬೇಕು; ದೇಶವ್ಯಾಪಿ ದಿಗ್ಬಂಧನದಿಂದ ನಿರೀಕ್ಷಿತ ಪ್ರಯೋಜನವಾಗದೆ, ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಲಾರಂಭಿಸಿದೆ ಎನ್ನುವುದನ್ನು ವಿವರಿಸಬೇಕು. ಹಾಗೆಯೇ, ಶೇ.80ಕ್ಕೂ ಹೆಚ್ಚು ಸೋಂಕಿತರಲ್ಲಿ ರೋಗಲಕ್ಷಣಗಳೂ ಇಲ್ಲದೆ, ಇನ್ನೂ ಹಲವರಲ್ಲಿ ಅತಿ ಸೌಮ್ಯವಾದ ರೋಗಲಕ್ಷಣಗಳಷ್ಟೇ ಇದ್ದು ಯಾವುದೇ ಚಿಕಿತ್ಸೆಯ ಅಗತ್ಯವೂ ಇಲ್ಲದೆ ನಾಲ್ಕೈದು ದಿನಗಳಲ್ಲಿ ತಾನಾಗಿ ವಾಸಿಯಾಗುವಂತಹ, ಯಾರೂ ಭಯಗೊಳ್ಳುವ ಅಗತ್ಯವೇ ಇಲ್ಲದಂತಹ ಸೋಂಕು ಅದೆನ್ನುವುದನ್ನು ಗಟ್ಟಿಯಾಗಿ ಪ್ರಚಾರ ಮಾಡಬೇಕು, ಜನರಲ್ಲಿ ಧೈರ್ಯವನ್ನು ತುಂಬಬೇಕು.
ಎರಡನೆಯದಾಗಿ, ಸೋಂಕುಳ್ಳವರು ಅಗತ್ಯವಿಲ್ಲದ ಪರೀಕ್ಷೆ ಅಥವಾ ಚಿಕಿತ್ಸೆಗಳಿಗಾಗಿ ವೈದ್ಯರ ಬಳಿಗೋ, ಆಸ್ಪತ್ರೆಗಳಿಗೋ ಹೋಗುವ ಅಗತ್ಯವಿಲ್ಲ, ಹಾಗೆ ಹೋಗುವುದರಿಂದ ಸೋಂಕು ಹರಡಲು ಕಾರಣವಾಗುತ್ತದೆ, ಆದ್ದರಿಂದ ಕೊರೊನಾ ಸಹಾಯವಾಣಿಗೆ ಕರೆ ಮಾಡಿ ಮನೆಯಲ್ಲೇ ಉಳಿಯಬೇಕು, ಸಮಸ್ಯೆಯು ಹೆಚ್ಚಿದರೆ ಮತ್ತೆ ಕರೆ ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ, ಧೈರ್ಯ ತುಂಬುವ ರೀತಿಯಲ್ಲಿ ಜನರಿಗೆ ತಿಳಿಸಬೇಕು. ಇಂಥ ಸಹಾಯವಾಣಿಗಳು ಕೇಂದ್ರೀಕೃತವಾಗಿ, ಯಾಂತ್ರಿಕವಾಗಿದ್ದರೆ ಜನರಿಗೆ ಹೆಚ್ಚಿನ ಪ್ರಯೋಜನವೆನಿಸದು, ವಿಶ್ವಾಸವೂ ಮೂಡದು. ಆದ್ದರಿಂದ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಅದೇ ರೀತಿಯ ಆರೋಗ್ಯ ಸೌಲಭ್ಯಗಳಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಬೇಕು ಮತ್ತು ಆರೋಗ್ಯ ಸಹಾಯಕರು, ದಾದಿಯರು ಅಥವಾ ವೈದ್ಯರು ಅವುಗಳಲ್ಲಿ ಲಭ್ಯರಿರಬೇಕು.
ಮೂರನೆಯದಾಗಿ, ಹಾಗೆ ಮನೆಯಲ್ಲೇ ಉಳಿಯುವವರನ್ನು, ಅದರಲ್ಲೂ, ಜ್ವರ, ಕೆಮ್ಮು ಹೆಚ್ಚಿ, ಅಥವಾ ಉಸಿರಾಟಕ್ಕೆ ಸಮಸ್ಯೆಯಾಗಿ ಮತ್ತೆ ಸಹಾಯವಾಣಿಗೆ ಕರೆ ಮಾಡಿದವರನ್ನು ಮನೆಗಳಲ್ಲೇ ಪರೀಕ್ಷಿಸುವುದಕ್ಕೆ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಚಾರಿ ಘಟಕಗಳನ್ನು ಈ ಕೂಡಲೇ ವ್ಯವಸ್ಥೆ ಮಾಡಬೇಕು. ಈ ಘಟಕಗಳಲ್ಲಿ ಸೋಂಕಿತರನ್ನು ಪರೀಕ್ಷಿಸುವುದಕ್ಕೆ ದಾದಿಯರು ಅಥವಾ ವೈದ್ಯರು ಮತ್ತು ಅವರ ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯುವುದಕ್ಕೆ ಪಲ್ಸ್ ಆಕ್ಸಿಮೀಟರ್ ಎಂಬ ಸರಳವಾದ ಉಪಕರಣಗಳಿರಬೇಕು. ಗಂಭೀರ ಸಮಸ್ಯೆಗಳಿದ್ದವರು, ರಕ್ತದ ಆಮ್ಲಜನಕದ ಮಟ್ಟವು ಶೇ.95ಕ್ಕಿಂತ ಕಡಿಮೆಯುಳ್ಳವರು ಗುರುತಿಸಲ್ಪಟ್ಟರೆ ಅಂಥವರನ್ನಷ್ಟೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಬೇಕು.
ನಾಲ್ಕನೆಯದಾಗಿ, ಹೀಗೆ ಸಮಸ್ಯೆಗೊಳಗಾದ ಕೊರೊನಾ ಪೀಡಿತರನ್ನು ದಾಖಲಿಸುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸಬೇಕು, ತಾತ್ಕಾಲಿಕವಾಗಿ ಶಾಲೆ, ಕಾಲೇಜು, ಬಳಕೆಯಲ್ಲಿಲ್ಲದ ಕಟ್ಟಡಗಳಲ್ಲಿಯೂ ಅವನ್ನು ತೆರೆಯಬಹುದು.
ಐದನೆಯದಾಗಿ, ಕೊರೊನಾ ಸೋಂಕಿನಿಂದ ತೀವ್ರವಾದ ಕಾಯಿಲೆಗೀಡಾಗಬಲ್ಲ 60 ವರ್ಷಕ್ಕೆ ಮೇಲ್ಪಟ್ಟವರು, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಶ್ವಾಸಕೋಶಗಳು, ಹೃದಯ, ಮೂತ್ರಪಿಂಡಗಳು, ನರಮಂಡಲಗಳ ಕಾಯಿಲೆಯುಳ್ಳವರು, ಕ್ಯಾನ್ಸರ್ ಪೀಡಿತರು ಮುಂತಾದವರನ್ನು ಸೋಂಕಿನಿಂದ ರಕ್ಷಿಸುವ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿಯನ್ನು ಕೂಡಲೇ ನೀಡಬೇಕು. ನಮ್ಮಲ್ಲಿ ಶೇ.80ರಷ್ಟು ಮನೆಗಳು ಎರಡು ಅಥವಾ ಕಡಿಮೆ ಕೋಣೆಗಳನ್ನು ಹೊಂದಿರುವುದರಿಂದ ಅಲ್ಲಿರುವ ಕಿರಿಯರಿಗೆ ಸೋಂಕು ತಗಲಿದರೆ ಮತ್ತು ಹೀಗೆ ಸಮಸ್ಯೆಗಳಾಗಬಲ್ಲವರು ಅದೇ ಮನೆಗಳಲ್ಲಿ ಜೊತೆಗಿದ್ದರೆ, ಅವರಿಗೆ ಸೋಂಕು ಹರಡಿ ಅಂಥವರು ಕಷ್ಟಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಕೊರೊನಾದಿಂದ ತೀವ್ರ ಸಮಸ್ಯೆಗೀಡಾಗಬಲ್ಲವರನ್ನು ಮೊದಲೇ ವೃದ್ಧಾಲಯಗಳಲ್ಲಿ ಅಥವಾ ಹೋಟೆಲುಗಳು, ಹಾಸ್ಟೆಲುಗಳು, ಛತ್ರಗಳು, ಸಮುದಾಯ ಭವನಗಳು ಮುಂತಾದ ತಾತ್ಕಾಲಿಕ ಆಶ್ರಯಗಳಲ್ಲಿ ಸುರಕ್ಷಿತವಾಗಿ, ವೈದ್ಯಕೀಯ ನಿಗಾವಣೆಯಲ್ಲಿ, ಇತರರ ಸಂಪರ್ಕಕ್ಕೆ ಬರದಂತೆ ಇರಿಸುವುದೊಳ್ಳೆಯದು.
ಅತಿ ಹೆಚ್ಚು ಜನಸಾಂದ್ರತೆಯಿರುವ ನಮ್ಮ ದೇಶದಲ್ಲಿ ಕೊರೊನಾ ಹರಡುವುದನ್ನು ತಡೆಯುವುದು ಕಷ್ಟದ ಕೆಲಸವೆನ್ನುವುದು ಈ ಎರಡು ತಿಂಗಳ ದಿಗ್ಬಂಧನವು ವಿಫಲವಾಗಿರುವುದರಲ್ಲೇ ಸ್ಪಷ್ಟವಾಗುತ್ತದೆ. ಆದ್ದರಿಂದ ಸರಕಾರವು ಇನ್ನಾದರೂ ದಿಗ್ಬಂಧನ, ಅದಕ್ಕಾಗಿ ಸಾವಿರಾರು ಜನರನ್ನು ತಮ್ಮ ಮನೆಮಂದಿಯಿಂದ ಪ್ರತ್ಯೇಕಿಸಿಡುವುದು, ಅವರು ಹಾಗೂ ಹೀಗೂ ಮನೆ ಸೇರಲೇಬೇಕಾಗಿ ಬಂದಾಗ ಅವರನ್ನು ಮತ್ತೆ ಎಲ್ಲೆಲ್ಲೋ ಕೂಡಿ ಹಾಕುವುದು, ಅವರಿಗೆಲ್ಲ ಊಟೋಪಚಾರ ಇತ್ಯಾದಿ ವ್ಯವಸ್ಥೆ ಮಾಡಲು ಹೆಣಗಾಡುವುದು ಇತ್ಯಾದಿಯಾಗಿ ಸೃಷ್ಟಿಸಿಕೊಂಡ ಸಮಸ್ಯೆಗಳಲ್ಲೇ ಸಿಕ್ಕಿಕೊಳ್ಳುವ ಬದಲಿಗೆ, ಕೊರೊನಾ ಸೋಂಕಿನಿಂದ ನಿಜಕ್ಕೂ ಸಮಸ್ಯೆಗೀಡಾಗಬಲ್ಲವರನ್ನು ರಕ್ಷಿಸಿಡುವುದಕ್ಕೆ, ತೀವ್ರ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಗಳನ್ನು ಬಲಪಡಿಸುವುದಕ್ಕೆ, ಜನರಿಗೆ ಸತ್ಯವನ್ನು ತಿಳಿಸಿ, ಅವರ ಸಹಕಾರವನ್ನು ಪಡೆದು, ಸೋಂಕಿನ ಹರಡುವಿಕೆಯನ್ನು ಸಾಧ್ಯವಿರುವಷ್ಟು ನಿಭಾಯಿಸುವ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಪುನರ್‍ರೂಪಿಸಬೇಕು.
ಜನಸಾಮಾನ್ಯರು ಮಾಡಬೇಕಾದದ್ದೇನು?
ಮೊದಲನೆಯದಾಗಿ, ಕೊರೊನಾ ಸೋಂಕಿನ ಬಗ್ಗೆ ಸರಕಾರವೂ, ಮಾಧ್ಯಮಗಳೂ ಹುಟ್ಟಿಸಿರುವ ಭಯದಿಂದ ಎಲ್ಲರೂ ಮುಕ್ತರಾಗಬೇಕು. ಬಹುತೇಕ (95%ಕ್ಕೂ ಹೆಚ್ಚು) ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುತ್ತಾರೆ ಎನ್ನುವುದನ್ನು ನಮ್ಮವರೆಲ್ಲರಿಗೆ ತಿಳಿಸಿ ಧೈರ್ಯ ತುಂಬಬೇಕು.
ಎರಡನೆಯದಾಗಿ, ಕೊರೊನಾ ಸೋಂಕಿನಿಂದ ಗಂಭೀರ ಸಮಸ್ಯೆಗಳಾಗಬಲ್ಲವರನ್ನು ಸೋಂಕಿನಿಂದ ರಕ್ಷಿಸಲು ಅವರನ್ನು ಪ್ರತ್ಯೇಕವಾಗಿರಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು. ಅನುಕೂಲವುಳ್ಳವರು ತಾವಾಗಿ ಇಂತಹ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು; ಇತರರಿಗೆ ಮೇಲೆ ಸೂಚಿಸಿದಂತೆ ಸರಕಾರದ ನೆರವಿನಿಂದ ವ್ಯವಸ್ಥೆ ಮಾಡುವಂತೆ ನೋಡಿಕೊಳ್ಳಬಹುದು..
ಮೂರನೆಯದಾಗಿ, ಬಹುತೇಕ ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುವುದರಿಂದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರೆಲ್ಲರೂ ಮನೆಯಲ್ಲೇ ಉಳಿದು, ಮೇಲೆ ಹೇಳಿದಂತೆ ಸಹಾಯವಾಣಿಯನ್ನು ಸಂಪರ್ಕಿಸಿ ನೆರವು ಪಡೆಯಬೇಕು. ಭಯದಿಂದ ತಮ್ಮ ಸಮಸ್ಯೆಯನ್ನು ಬಚ್ಚಿಟ್ಟುಕೊಳ್ಳುವುದರಿಂದ ಅಥವಾ ಪರೀಕ್ಷೆ ಯಾ ಚಿಕಿತ್ಸೆಗಾಗಿ ಅಲ್ಲಿಲ್ಲಿ ತಿರುಗಾಡುವುದರಿಂದ ಸೋಂಕಿತರಿಗೂ ಸಮಸ್ಯೆಯಾಗಬಹುದು, ಇತರರಿಗೂ ಸೋಂಕು ಹರಡಲು ಕಾರಣವಾಗಬಹುದು. ಆದ್ದರಿಂದ ಯಾವುದೇ ಸಮಸ್ಯೆಗಳಿಲ್ಲದವರು, ಸೋಂಕು ಗಂಭೀರಗೊಳ್ಳುವ ಅಪಾಯಗಳಿಲ್ಲದವರು ಕೊರೊನಾ ಸೋಂಕಿನ ಲಕ್ಷಣಗಳು ಆರಂಭವಾದರೆ ಮನೆಯೊಳಗೇ ಉಳಿದುಕೊಂಡು ಇತರರಿಗೆ ಸೋಂಕು ಹರಡದಂತೆ ನೆರವಾಗಬೇಕು. ಒಮ್ಮಿಂದೊಮ್ಮೆಗೇ ವಾಸನೆ ಗ್ರಹಿಸುವ ಸಾಮಥ್ರ್ಯವು ನಷ್ಟವಾಗುವುದು, ಜ್ವರ, ಕೆಮ್ಮು, ಗಂಟಲು ನೋವು ಆರಂಭವಾದರೆ, ಮನೆಯಲ್ಲೇ ಉಳಿದು, ತಮ್ಮ ವೈದ್ಯರನ್ನು ಅಥವಾ ಆರೋಗ್ಯ ಇಲಾಖೆಯ ಸಹಾಯವಾಣಿಯನ್ನು ದೂರವಾಣಿಯಲ್ಲಷ್ಟೇ ಸಂಪರ್ಕಿಸಬೇಕು. ಯಾರಿಗೇ ಆಗಲಿ, ಜ್ವರ, ಕೆಮ್ಮು ವಿಪರೀತವಾಗಿದ್ದರೆ, ಉಸಿರಾಟಕ್ಕೆ ಸಮಸ್ಯೆಯಾದರೆ ಅಥವಾ ಆರು ನಿಮಿಷದಷ್ಟು ನಡೆದಾಡುವಾಗ ಉಸಿರಾಟದ ಕಷ್ಟವು ಉಲ್ಬಣಿಸಿದರೆ ಕೂಡಲೇ ಆರೋಗ್ಯ ಸಹಾಯವಾಣಿಗೆ ಅಥವಾ ತಮ್ಮ ವೈದ್ಯರಿಗೆ ಕರೆ ಮಾಡಬೇಕು; ಅಂಥವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಮನೆಯಲ್ಲೇ ಉಳಿಯುವ ಸೋಂಕಿತರು ತಮ್ಮ ಬಟ್ಟೆ, ತಟ್ಟೆಗಳನ್ನು ಪ್ರತ್ಯೇಕವಾಗಿಟ್ಟು, ಮನೆಮಂದಿಯ ಸಂಪರ್ಕದಿಂದ ಆದಷ್ಟು ದೂರವನ್ನು ಕಾಯ್ದುಕೊಳ್ಳಬೇಕು. ಮನೆಯು ಸಣ್ಣದಾಗಿದ್ದು, ಹಲವರು ಉಳಿಯುವಂತಿದ್ದರೆ ಗಂಭೀರ ಸಮಸ್ಯೆಗೀಡಾಗುವ ಅಪಾಯವುಳ್ಳ ಮನೆಮಂದಿಯನ್ನು ನೆಂಟರಿಷ್ಟರ ಮನೆಗೆ ಕಳುಹಿಸಿ ರಕ್ಷಿಸಬಹುದು.
ನಾಲ್ಕನೆಯದಾಗಿ, ಕೊರೊನಾದ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸುವ, ಅದರ ಹರಡುವಿಕೆಗೆ ಯಾರು ಯಾರನ್ನೋ ತೆಗಳುವ, ಆ ನೆಪದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಕೆಡಿಸುವ ಅಪಪ್ರಚಾರಗಳನ್ನು ತಡೆಯುವುದಕ್ಕೆ ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ನೆರೆಹೊರೆಯವರಿಗೆ, ಬಂಧುಬಳಗದವರಿಗೆ ಕೊರೊನಾ ಸೋಂಕು ತಗಲಿದರೆ ಅವರೊಡನೆ ಸಹಾನುಭೂತಿಯಿಂದ ವರ್ತಿಸಬೇಕು; ತಮ್ಮನ್ನಷ್ಟೇ ರಕ್ಷಿಸಿಕೊಳ್ಳುವುದಕ್ಕೆ ಎಲ್ಲರನ್ನೂ ಮುಟ್ಟಬಾರದವರಂತೆ ನೋಡುವುದು, ದಿಗ್ಬಂಧನದಿಂದಾಗಿ ತಮ್ಮ ಮನೆಯವರಿಂದೆಲ್ಲ ಬೇರೆಯಾಗಿ ವಾರಗಟ್ಟಲೆ ಪರವೂರುಗಳಲ್ಲಿ ಸಿಕ್ಕಿಹಾಕಿಕೊಂಡವರು ಮತ್ತೆ ತಮ್ಮದೇ ಮನೆಗೆ ಮರಳಿದಾಗ ಅದನ್ನು ವಿರೋಧಿಸುವುದು, ಕೊರೊನಾ ಹರಡಲು ಅಂಥವರೇ ಕಾರಣ ಎಂದೆಲ್ಲ ದೂರುವುದು ಮಾನವೀಯವೆನಿಸದು. ಕೊರೊನಾ ವೈರಾಣು ಯಾರನ್ನಾದರೂ ಸೋಂಕಬಹುದು, ಯಾರಾದರೂ ಅದನ್ನು ಹರಡಬಹುದು; ಆದ್ದರಿಂದ ಕೊರೊನಾದ ಹೆಸರಲ್ಲಿ ಮಾನವೀಯತೆಯನ್ನೇ ಮರೆಯುವುದು ಅಕ್ಷಮ್ಯ.
(ಲೇಖಕರು ಪ್ರಸಿದ್ದ ವೈದ್ಯರಾಗಿದ್ದು, ಕೊರೊನಾ ಸೋಂಕು ಆರಂಭವಾಗಿನಿಂದಲೇ ತಮ್ಮ ಅನಿಸಿಕೆಗಳನ್ನು ದಿಟ್ಟವಾಗಿ ಹೇಳುತ್ತಿದ್ದಾರೆ. ಅವರ ಅನಿಸಿಕೆಗಳನ್ನು ಅತಿರೇಕವೆಂದು ಭಾವಿಸಿದವರೂ ನಿಧಾನಕ್ಕೆ ಅವರ ಅನಿಸಿಕೆಗಳೇ ನಿಜವಾಗುತ್ತಿರುವುದನ್ನು ನೋಡುತ್ತಿದ್ದಾರೆ. ಕನಿಷ್ಠ ಈಗಲಾದರೂ ಸರ್ಕಾರವು ಈ ವಿವೇಕದ ಮತ್ತು ವಿಜ್ಞಾನದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.)
ಇದನ್ನೂ ಓದಿ: ಮಿಡತೆ ದಾಳಿಯ ಪೂರ್ವಾಪರ: ಅದೂ ಯಾಕೊ ಕೊರೊನಾ ಥರಾ!


