Homeಅಂಕಣಗಳುಸೌಹಾರ್ದದ ತತ್ವಪದಕಾರ ದಾದಾಪೀರ್ ಮಂಜರ್ಲಾ ಸಂಕಷ್ಟದಲ್ಲಿ...

ಸೌಹಾರ್ದದ ತತ್ವಪದಕಾರ ದಾದಾಪೀರ್ ಮಂಜರ್ಲಾ ಸಂಕಷ್ಟದಲ್ಲಿ…

- Advertisement -
- Advertisement -
ಎಲೆಮರೆ-33

ಎಲೆಮರೆ 32 ರಲ್ಲಿ ಬೀದಿಗೆ ಬಿದ್ದ ರಾಮನಗರದ ತೊಗಲುಗೊಂಬೆ ಕಲಾವಿದೆ ಗೌರಮ್ಮನ ಬಗ್ಗೆ ಬರೆದಿದ್ದೆ. ಕೆಲವು ಸಹೃದಯರು ಗೌರಮ್ಮನಿಗೆ ನೆರವಾದರು. ಅವರಿಗೆ ಪತ್ರಿಕೆ ಪರವಾಗಿ ಕೃತಜ್ಞತೆಗಳು. ಇದೀಗ ಎರಡೂ ಕಿಡ್ನಿ ವೈಫಲ್ಯದಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಯಚೂರಿನ ಸೂಫಿ ಮೂಲದ ದಾದಾಪೀರ್ ಮಂಜರ್ಲಾ ಅವರ ಬಗ್ಗೆ ಬರೆಯಬೇಕಾಗಿದೆ.

ನಾನೊಮ್ಮೆ ಜನಪದ ಕವಿಗಳ ಬಗ್ಗೆ ಕ್ಷೇತ್ರಕಾರ್ಯ ಮಾಡುತ್ತಾ, ಸುರಪುರ ಭಾಗದ ಹಳ್ಳಿಗಳಲ್ಲಿ ಸುತ್ತುವಾಗ, ಕೆಲವರ ಮೊಬೈಲ್‍ನಲ್ಲಿ ಜನಪದ ಗೀತೆಯೊಂದು ಕೇಳಿ ಬಂತು. ಹಾಡಿದವರು ಯಾರು ಎಂದು ವಿಚಾರಿಸಲಾಗಿ ಅದು ರಾಯಚೂರಿನ ಕವಿ ದಾದಾಪೀರ್ ಮಂಜರ್ಲಾ ಎಂದು ತಿಳಿಯಿತು. ಆ ನಂತರ ಸುರಪುರದ ಮೊಬೈಲ್ ಸೆಂಟರ್ ಒಂದರಲ್ಲಿ ದಾದಾಪೀರ್ ಅವರ ಹಾಡುಗಳನ್ನು ಮೊಬೈಲಿನಲ್ಲಿ ಹಾಕಿಸಿಕೊಂಡು ಕೇಳಿದೆ. ಜನಪದ ಲಯದಲ್ಲಿ ಆಧುನಿಕ ಬದುಕಿನ ಸಾಮರಸ್ಯದ ತತ್ವಗಳನ್ನು ಸರಳವಾಗಿ ಹೇಳುವ ಈ ಜನಪ್ರಿಯ ಹಾಡಿಕೆ ಆಳದಲ್ಲಿ ಜನತೆಯ ಸೌಹಾರ್ದವನ್ನು ಬೆಸೆಯುವ ಆಶಯ ಹೊಂದಿತ್ತು.

ನಂತರ ದಾದಾಪೀರ್ ಅವರನ್ನು ಸಂಪರ್ಕಿಸಿ ಅವರ ಸಂದರ್ಶನ ಮಾಡಲೆಂದು ನಾನು ಮತ್ತು ಗೆಳೆಯ ಗೋಪಾಲಕೃಷ್ಣ ರಾಯಚೂರಿನ ಅವರ ಮೆನೆಗೆ ಹೋದೆವು. ನಮ್ಮ ಪಯಣ ತಡವಾದ ಕಾರಣ ರಾತ್ರಿ ಹತ್ತಕ್ಕೆ ಅವರ ಮನೆ ತಲುಪಿದೆವು. ಅಷ್ಟೊತ್ತು ಕಾದು ಕೂತಿದ್ದ ಮಂಜರ್ಲಾ ಅವರು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಆತಿಥ್ಯ ಮಾಡಿ, ತಡರಾತ್ರಿ ಹನ್ನೆರಡರ ತನಕ ಅನುಭವಗಳನ್ನು ಹಂಚಿಕೊಂಡರು. ಅಷ್ಟೂ ಮಾತುಕತೆಯನ್ನು ಚೂರು ಬೇಸರಿಸದೆ ಅಷ್ಟೇ ಪ್ರೀತಿಯಿಂದ ಅವರ ಮಡದಿ ಕೇಳುತ್ತಾ ಕೂತಿದ್ದರು.

ರಾಯಚೂರು ತಾಲೂಕಿನ ಮಂಜರ್ಲಾದಲ್ಲಿ ಖಾದರವಲಿ ಎಂಬ ತತ್ವಪದಕಾರರಿದ್ದರು. 1932 ರಲ್ಲಿ ಜನಿಸಿದ ಖಾದರವಲಿಯವರು ಹತ್ತನೆ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿ ಪೂರ್ಣಗೊಳಿಸಿ, ಪುಣೆಯ ಬಾಲಗಂಗಾಧರ ತಿಲಕ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿದ್ದರು. ಮೊಹಮ್ಮದೀಯ ಕುಟುಂಬದಲ್ಲಿ ಜನಿಸಿದ್ದ ಖಾದರವಲಿ ಶಿವನ ಆರಾಧಕರಾಗಿದ್ದರು. ಸಿದ್ಧರಾಮ ಸ್ವಾಮಿ ಎನ್ನುವ ಗುರುವಿಗೆ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದರು. ಆಧ್ಯಾತ್ಮಿಕ ಚಿಂತಕರಾಗಿದ್ದ ಖಾದರವಲಿ ಅವರು ಕನ್ನಡ, ಉರ್ದು ಹಾಗೂ ತೆಲಗು ಭಾಷೆಗಳಲ್ಲಿ ಸುಮಾರು 1,500 ಕ್ಕೂ ಹೆಚ್ಚು ತತ್ವಪದಗಳನ್ನು ರಚಿಸಿದ್ದರು. ಎಲ್ಲಾ ಜಾತಿ ಧರ್ಮದವರು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಮರಣಾನಂತರ ನೆನಪಿಗಾಗಿ ಆಧ್ಯಾತ್ಮಿಕ ಚಿಂತಕ ಖಾದರವಲಿ ಟ್ರಸ್ಟ್ ರಚಿಸಿಕೊಂಡು, ಖಾದರವಲಿಯವರ ಪೀಠ ಮಂಜರ್ಲಾದಲ್ಲಿ ಪ್ರತಿ ವರ್ಷ `ಖಾದರ ವಲಿ ಪ್ರಭುಗಳ ಆರಾಧನೆ’(ಉರುಸ್) ಮಾಡುತ್ತಾರೆ. ಉರುಸ್‍ಗಳಲ್ಲಿ ಗಂಧದ ಮೆರವಣಿಗೆ ಸಾಮಾನ್ಯ, ಆದರೆ ಖಾದರವಲಿಯವರ ಉರುಸ್‍ನಲ್ಲಿ `ಮಹಾಮಂಗಳಾರತಿ’ ಸೇವೆ ನಡೆಯುತ್ತದೆ. ಇದೊಂದು ಸೌಹಾರ್ದದ ಸಂಕೇತವಾಗಿದೆ. ಖಾದರವಲಿ ಭಕ್ತರು ವ್ಯಾಪಕವಾಗಿ ಸೇರುತ್ತಾರೆ. ರಾತ್ರೀಪೂರಾ ಸಂಗೀತ ಹಾಡಿಕೆ ಇರುತ್ತದೆ. ದೂರ ದೂರದಿಂದ ಹಾಡಿಕೆಯವರು ಬಂದಿರುತ್ತಾರೆ. ಈ ಖಾದರವಲಿ ಅವರ ಮಗನೇ ದಾದಾಪೀರ್ ಮಂಜರ್ಲಾ.

ದಾದಾಪೀರ್ ಅವರಿಗೆ ತನ್ನ ತಂದೆ ಖಾದರವಲಿಯ ಪ್ರಭಾವ ದಟ್ಟವಾಗಿತ್ತು. ಬಾಲ್ಯದಲ್ಲಿಯೇ ಸೂಫಿ, ತತ್ವಪದ, ಜನಪದ ಹಾಡಿಕೆಯಲ್ಲಿ ಪಳಗಿದರು. ಎಸ್ಸೆಸ್ಸೆಲ್ಸಿ ನಂತರ ಹೈದರಾಬಾದ್‍ನ ವಿಜಯಶಾಂತಿ ಸಿನಿಮಾ ಸಂಸ್ಥೆಯಿಂದ ಹಾಡುಗಾರಿಕೆಯಲ್ಲಿ ಡಿಪ್ಲೊಮಾ ಪಡೆದರು. ನಂತರ ದಾದಾಪೀರ್ ಅವರು ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದ ಕೋಲ್ಕತ್ತಾದ ಉಸ್ತಾದ್ ರಶೀದ್ ಖಾನ್‍ರಲ್ಲಿ ಶಿಷ್ಯತ್ವ ಪಡೆದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. 1993ರಲ್ಲಿ ತೆರೆ ಕಂಡ ‘ಭಗವದ್ಗೀತೆ’ ಸಿನಿಮಾದಲ್ಲಿ ಅದ್ವಿತೀಯ ಹಾಡುಗಾರ ಡಾ.ಎಂ.ಬಾಲಮುರಳಿಕೃಷ್ಣ ಅವರ ಜತೆಗೆ ಹಿನ್ನೆಲೆ ಗಾಯಕರಾಗಿ ಹಾಡಿದ ಅನುಭವ ಪಡೆದರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಜತೆಗೆ ಹಾಡಿದ ಕನ್ನಡ ಭಕ್ತಿಗೀತೆಗಳ ಧ್ವನಿ ಸುರುಳಿಯನ್ನು ಒಳಗೊಂಡಂತೆ, ಈತನಕ ನೂರ ಐವತ್ತಕ್ಕಿಂತ ಹೆಚ್ಚಿನ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ. ಬೆಂಗಳೂರಿನ ‘ಲಹರಿ’, ‘ಅಶ್ವಿನಿ’, ‘ಮನೋರಂಜನ’, ‘ಆನಂದ’ ಆಡಿಯೊ ಸಂಸ್ಥೆಗಳಲ್ಲದೇ ಮಹಾರಾಷ್ಟ್ರದ ಸಾಂಗ್ಲಿಯ ‘ಜಯಸಿಂಧು’ ಮತ್ತು ಆಂಧ್ರದ ‘ಕರ್ನಾಲ್’ ಆಡಿಯೊ ಸಂಸ್ಥೆಗಳು ಮಂಜರ್ಲಾ ಅವರ ಹಾಡಿಕೆಯನ್ನು ಧ್ವನಿಮುದ್ರಿಸಿ ಪ್ರಚಾರಗೊಳಿಸಿವೆ. ಮಂಜರ್ಲಾ ಅವರು ತೆಲುಗಿನಿಂದ ಮೈಥಿಲಿ ವೆಂಕಟೇಶ್ವರ ರಾವ್ ಅವರ `ಸಂಪೂರ್ಣ ಶಿವ ಪುರಾಣ’ವನ್ನು ಕನ್ನಡಕ್ಕೆ ತಂದಿದ್ದಾರೆ. ಹೀಗೆ ಹಲವು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.

ದಾದಾಪೀರ್ ಅವರು ತಂದೆಯಂತೆ ಬಹುಭಾಷಾ ಪಂಡಿತರು. ಗ್ರಾಮೀಣ ಭಾಗದಲ್ಲಿ ನೆಲೆಗೊಂಡ ಸೌಹಾರ್ದತೆಯನ್ನು ತಮ್ಮ ಹಾಡಿಕೆಯಲ್ಲಿ ಬೆಸೆದುಕೊಂಡಿದ್ದಾರೆ. ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನದೇ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ನಾನಾ ಕಡೆ ತಮ್ಮ ಪ್ರತಿಭೆಯಿಂದ ಜನಪ್ರಿಯವಾಗಿದ್ದಾರೆ. ಕನ್ನಡ, ತೆಲುಗು, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ನುರಿತ ಅವರು, ದಾಸರು, ಶರಣರು ಮತ್ತು ಸಂತರ ಕೀರ್ತನೆ, ವಚನ, ತತ್ವಪದ, ಜನಪದ ಗೀತೆಗಳನ್ನು ಹಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಕಾಶವಾಣಿ, ದೂರದರ್ಶನ ಮತ್ತು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ದಾರೆ. ಬೆಂಗಳೂರು, ಮಂತ್ರಾಲಯ, ತಿರುಪತಿ, ಚೆನ್ನೈನ ಹೆಸರಾಂತ ಸಂಸ್ಥೆಗಳು ಇವರ ಹಾಡಿಕೆಗೆ ವೇದಿಕೆ ಕಲ್ಪಿಸಿವೆ.

2014 ರಲ್ಲಿ ದಾದಾಪೀರ್ ಮಂಜರ್ಲಾ ಅವರನ್ನು ಗುರುತಿಸಿ ಕರ್ನಾಟಕ ಸರಕಾರ `ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿತ್ತು. ಆ ಸಂದರ್ಭದಲ್ಲಿ ದಾದಾಪೀರ್ ಅವರು `ಬಹಳ ಖುಷಿ ಆಗೈತ್ರಿ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಗುರುತಿಸಿದ ಸರಕಾರ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದವರ ಬಗ್ಗೆ ಧನ್ಯತಾ ಭಾವ ನೆಲೆಸಿದೆ. ಇದಕ್ಕಿಂತ ಹೆಚ್ಚಿಗೆ ಹೇಳಲು ಇನ್ನೇನೂ ಹೊಳೆಯುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಇದಲ್ಲದೆ ಹಲವಾರು ಸಂಸ್ಥೆಗಳು ಮಂಜರ್ಲಾ ಅವರಿಗೆ ಪ್ರಶಸ್ತಿ, ಸನ್ಮಾನ, ಅಭಿನಂದನೆಗಳನ್ನು ಅರ್ಪಿಸಿವೆ.

ಹೀಗಿರುವ ದಾದಾಪೀರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅನಾರೋಗ್ಯದ ಚಿಕಿತ್ಸೆಗಾಗಿ ನೆರವು ಕೋರಿ ಜನರನ್ನು ಮನವಿ ಮಾಡಿದ ವೀಡೀಯೋ ಗಮನಸೆಳೆಯಿತು. ಆಸ್ಪತ್ರೆಯ ಬೆಡ್ ಮೇಲೆಯೆ ಕೂತು ಅವರು `ಕಲಾ ಬಂಧುಗಳಲ್ಲಿ ಸವಿನಯ ಪ್ರಾರ್ಥನೆ, ನಾನು ರಾಜ್ಯೋತ್ಸವ ಪ್ರಶಸ್ತಿ ಪಡೆದಿರುತ್ತೇನೆ, ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದ್ದೇನೆ. ಚಿಕಿತ್ಸೆಗಾಗಿ ಸಹಾಯ ಮಾಡಲು ತಮ್ಮಲ್ಲಿ ಕಳಕಳೆಯ ಪ್ರಾರ್ಥನೆ’ ಎಂದು ಮನವಿ ಮಾಡಿದ್ದರು. ನಾನು ಕೂಡಲೆ ಫೋನ್ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಆ ನಂತರ ಅವರ ಶಿಷ್ಯ ರವಿ ದಾದಸ್‍ರನ್ನು ಸಂಪರ್ಕಿಸಿದಾಗ `ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದಾರೆ. ಎರಡೂ ಕಿಡ್ನಿಗಳು ವಿಫಲವಾಗಿದ್ದು, ಅವರ ಮಡದಿ ಒಂದು ಕಿಡ್ನಿ ಕೊಡುವುದಾಗಿ ಒಪ್ಪಿದ್ದಾರೆ, ಶಸ್ತ್ರಚಿಕಿತ್ಸೆ ಆಗಬೇಕು, ಈ ತನಕ ಎಂಬತ್ತು ಸಾವಿರದಷ್ಟು ಖರ್ಚಾಗಿದೆ. ಅವರಿಗೆ ನೆರವಿನ ಅಗತ್ಯವಿದೆ’ ಎಂದರು.

ನಾನು ಕಳೆದ ವರ್ಷ ಸಂದರ್ಶನ ಮಾಡಿದಾಗ ಅಳುಕಿನಿಂದಲೇ `ಹಾಡಿಕೆಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಧನಿ ತಗ್ಗಿಸಿ ಮಾತನಾಡಿದ್ದರು. ಅವರ ಮಾತಿನಲ್ಲಿ ದಣಿವು, ಮುಂದೇನು ಎಂಬ ಆತಂಕ ಮನೆಮಾಡಿದಂತಿತ್ತು. ಬಹುಶಃ ಚಿಕಿತ್ಸೆಗೆ ಬೇಕಾಗುವ ಖರ್ಚುವೆಚ್ಚ ಭರಿಸಲು ಮಂಜರ್ಲಾ ಅವರಿಗೆ ನಿಜಕ್ಕೂ ಕಷ್ಟವಾಗಿದೆ ಅನ್ನಿಸಿತು. ಕಾರಣ ಏಳನೆ ತರಗತಿ ಮತ್ತು ಪಿಯು ಓದುವ ಇಬ್ಬರು ಗಂಡು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನತೆಯ ಸೌಹಾರ್ದಕ್ಕಾಗಿ ದುಡಿದ, ಸಮಾಜದ ಆರೋಗ್ಯಕ್ಕಾಗಿ ಶ್ರಮಿಸಿದ ದಾದಾಪೀರ್ ಮಂಜರ್ಲಾ ಅವರಿಗೆ ನಾವು ನೆರವಾಗಬೇಕಿದೆ. ನಿಮ್ಮ ಸಹಾಯಕ್ಕಾಗಿ ಅವರು ವಿನಂತಿಸಿಕೊಂಡಿದ್ದಾರೆ. ಆದಷ್ಟು ಸಹಾಯ ದೊರಕಲಿ, ದಾದಾಪೀರ್ ಮಂಜರ್ಲಾ ಅವರು ಬೇಗ ಗುಣಮುಖವಾಗಲಿ ಎಂದು ಪತ್ರಿಕೆ ಆಶಿಸುತ್ತದೆ. ಸಂಪರ್ಕ ಮತ್ತು ಮಾಹಿತಿಗಾಗಿ ರವಿ ದಾದಸ್, ರಾಂಪುರ, ರಾಯಚೂರು ಅವರ 9901883488 ಸಂಖ್ಯೆಗೆ ಸಂಪರ್ಕಿಸಿ. ಅಗತ್ಯ ನೆರವು ನೀಡಲು ದಾದಾಪೀರ್ ಮಂಜರ್ಲಾ

ಅವರ ಅಕೌಂಟ್ ಮಾಹಿತಿ ಹೀಗಿದೆ:

Dadapeer Manjarla
A/c: 62386435099
IFSC.code:SBIN0020944
MICR :584004003
State Bank of India
Jawaharnagar Branch Raichur.


ಇದನ್ನು ಓದಿ: ಬೀದಿಗೆ ಬಿದ್ದ ತೊಗಲುಗೊಂಬೆ ಕಲಾವಿದೆ ಗೌರಮ್ಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...