ಹತ್ತಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ತಲೆಮರೆಸಿಕೊಂಡಿರುವ ಭೂಗತ ಲೋಕದ ದಾವೂದ್ ಇಬ್ರಾಹಿಂ ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದ್ಧಾರೆ, ಅವರ ಹೆಂಡತಿಗೂ ಕೊರೊನಾ ಸೋಂಕು ತಗುಲಿದೆ ಎಂಬಂತಹ ಸುದ್ದಿಗಳು ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅವರ ಸಹೋದರ ಅನೀಸ್ ಇಬ್ರಾಹಿಂ ಈ ಕುರಿತು ಸ್ಪಷ್ಟನೆ ನೀಡಿದ್ದು ಇವೆಲ್ಲವೂ ಸುಳ್ಳು ಎಂದಿದ್ದಾರೆ.
ದಾವೂದ್ ಇಬ್ರಾಹಿಂ ಮತ್ತವರ ಹೆಂಡತಿಗೆ ಕೋವಿಡ್-19 ರೋಗದ ಸೋಂಕು ತಗುಲಿದ್ದು, ಅವರನ್ನು ಕರಾಚಿಯ ಆರ್ಮಿ ಹಾಸ್ಪಿಟಲ್‌ಗೆ ದಾಖಲಿಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ ಎಂದು ಕೆಲ ಮಾಧ್ಯಮಗಳಲ್ಲೂ ಸುದ್ದಿಗಳಾಗಿವೆ. ಆದರೆ, ದಾವೂದ್ ಸಹೋದರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ.
ದಾವೂದ್ ಇಬ್ರಾಹಿಂನ ಎಲ್ಲಾ ಚಟುವಟಿಕೆ ಹಾಗೂ ಹಣಕಾಸು ವ್ಯವಹಾರಗಳನ್ನ ನೋಡಿಕೊಳ್ಳುವ ಅನೀಸ್ ಇಬ್ರಾಹಿಂ ಅವರು ತಮ್ಮ ಅಣ್ಣನ ಬಗ್ಗೆ ಹರಡಿರುವ ಸುದ್ದಿಗಳು ಬರೇ ವದಂತಿ ಎಂದಿದ್ದಾರೆಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ತಮ್ಮ ಸಹೋದರ ದಾವೂದ್ ಇಬ್ರಾಹಿಂ ಸೇರಿದಂತೆ ಇಡೀ ಕುಟುಂಬದ ಯಾರೊಬ್ಬರಿಗೂ ಕೊರೋನಾ ಸೋಂಕು ತಗುಲಿಲ್ಲ ಎಂದು ಅನೀಸ್ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ಪ್ರಪಂಚದೆಲ್ಲಡೆ ಹರಡಿರುವ ಕೊರೊನಾ ಪಾಕಿಸ್ತಾನಕ್ಕೂ ಹಬ್ಬಿದೆ. ದಾವೂದ್ ಇಬ್ರಾಹಿಂ ಸದ್ಯ ಪಾಕಿಸ್ತಾನದಲ್ಲಿದ್ದಾರೆ ಎಂಬ ವದಂತಿಗಳಿರುವ ಹಿನ್ನೆಲೆಯಲ್ಲಿ ಬಹುತೇಕ ಮಾಧ್ಯಮಗಳು ಅವರಿಗೆ ಕೊರೊನ ತಗುಲಿದೆ ಎಂಬ ವರದಿಗಳನ್ನು ಮಾಡಿದ್ದರು. ಅದನ್ನು ಅವರ ಸಹೋದರ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ಬಡ ಕಾರ್ಮಿಕರ ಪಿಎಫ್ ಹಣವನ್ನು ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿಗೆ ಕೊಟ್ಟ ಯೋಗಿ ಸರ್ಕಾರ…
ದಾವೂದ್ ಇಬ್ರಾಹಿಂ ಮತ್ತು ಭಾರತದ ಸಂಬಂಧದ ವಿಚಾರದಲ್ಲಿ ಹಲವಾರು ಗೊಂದಲಗಳಿದ್ದು, ಅವರು ಅನೇಕ ಕಂಪನಿಗಳಲ್ಲಿ ಹಣ ಹೂಡಿದ್ದಾರೆ ಎಂಬ ಆರೊಪವಿದೆ. ಅಲ್ಲದೇ ಭಾರತದ ಹಲವಾರು ಮಾಧ್ಯಮಗಳು ದಾವೂದ್ ಪಾಕಿಸ್ತಾನ ಸರ್ಕಾರದ ಬೆಂಬಲದೊಂದಿಗೆ ಅಲ್ಲಿ ನೆಲೆಸಿದ್ದಾರೆ ಎಂದು ವರದಿ ಮಾಡಿವೆ. ಈಗ ಕೊರೊನಾ ಸೋಂಕು ಹಿನ್ನೆಲೆಯಲ್ಲಿಯೂ ಸಹ ಅವರು ಪಾಕಿಸ್ತಾನದ ಸೇನಾ ಆಸ್ಪತ್ರೆಯಲ್ಲಿದ್ದಾರೆ ಎಂಬ ವರದಿಗಳು ಬಂದಿವೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾರೆಂದು ಭಾರತದ ಆರೋಪಕ್ಕೆ ಈ ಕೊರೊನಾ ಸುದ್ದಿ ಪುಷ್ಟಿ ನೀಡಿತ್ತು. ದಾವೂದ್ ಕರಾಚಿಯಲ್ಲಿದ್ದಾನೆಂದು ಭಾರತ ಪದೇಪದೇ ಹೇಳುತ್ತಲೇ ಬಂದಿದೆ. ಆದರೆ, ಪಾಕಿಸ್ತಾನ ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಇದೀಗ ಕೊರೋನಾ ಸೋಂಕಿನ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅನೀಸ್ ಇಬ್ರಾಹಿಂ ಅವರು ತಮ್ಮ ಕುಟುಂಬದವರು ಪಾಕಿಸ್ತಾನದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆದರೆ, ಯುಎಇ ಮತ್ತು ಪಾಕಿಸ್ತಾನದಲ್ಲಿ ವ್ಯವಹಾರಗಳಿರುವುದನ್ನು ಅನೀಸ್ ಒಪ್ಪಿಕೊಂಡಿದ್ದಾಗಿ ಐಎಎನ್ಎಸ್ ಸುದ್ದಿ ಸಂಸ್ಥೆಯ ವರದಿಯಿಂದ ತಿಳಿದುಬರುತ್ತದೆ.
ಇದನ್ನೂ ಓದಿ : ಜನರ ತೆರಿಗೆ ದುಡ್ಡಲ್ಲಿ ದಾವೂದ್ ಇಬ್ರಾಹಿಂ ನಷ್ಟ ತುಂಬಲು ಮುಂದಾಯ್ತಾ ‘ನಮೋ’ ಸರ್ಕಾರ?
ಇದನ್ನೂ ಓದಿ: ಭೂಗತ ನಂಟು ಹೊಂದಿರುವ ಕಂಪನಿಯಿಂದ ದೇಣಿಗೆ ಪಡೆಯಿತಾ ಬಿಜೆಪಿ?: ಇಡಿ ತನಿಖೆಯಲ್ಲಿ ಬಹಿರಂಗವಾದ ಸತ್ಯವೇನು..?


