ಕೇಂದ್ರದ ಕಾನೂನುಗಳು ಬೆಂಗಳೂರಿಗೆ ಅರ್ಥ ಆಗಲಿಲ್ಲ. ರಾಜ್ಯದ ಕಾನೂನುಗಳು ಜಿಲ್ಲೆ, ತಾಲೂಕಿನಾಗ ಜಾರಿ ಆಗಲಿಲ್ಲ. ಮೈಸೂರು, ಬೆಳಾಗಾವಿ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಲ್ಲಾ ಶಂಕಿತರನ್ನ ಒಂದೇ ಹಾಲಿನಲ್ಲಿ ಕೂಡಿ ಇಟ್ಟದ್ದಕ್ಕ ಪಾಸಿಟಿವ್ ಇದ್ದವರಿಂದ ಅನೇಕ ನೆಗಾಟಿವ್ ಇದ್ದವರಿಗೆ ಕೋರೋನಾ ಬಂತು.
ಈ ಕೋರೋನಾ ಗದ್ದಲದಾಗ ಬರ್ತಾ ಇರೋ ಸುದ್ದಿಗಳ ಮಹಾಪೂರದಾಗ ಒಂದು ಭಾರಿ ಮಜಾ ಸುದ್ದಿ ಬಂದಿದ್ದು ಏನಪಾ ಅಂದ್ರ ಯಾವ ದೇಶದಾಗ ವಿಕೇಂದ್ರೀಕರಣ ಅದನೋ ಆ ದೇಶದಾಗ ಕೋರೋನಾ ಸರಿಯಾಗಿ ನಿಯಂತ್ರಣಕ್ಕ ಬಂದದ. ಅದು ಇರಲಾರದ ಕಡೆ ಬಹಳ ಸಮಸ್ಯೆ ಆಗೇದ.

ಇದು ಒಂದು ರೀತಿಯ ಚೇತೋಹಾರಿ ಸುದ್ದಿ. ಯಾಕ ಅಂದ್ರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ ಅವರು ಕೋರೋನಾಗೆ ಸಂಪೂರ್ಣ ಚಿಕಿತ್ಸೆ ಸಾಧ್ಯವಿಲ್ಲ. ಅದರ ಗುಣಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು ಅಷ್ಟೇ ಅಂತ ಹೇಳಿದಾರು. ಆದರ ಅಂತರಾಷ್ಟ್ರೀಯ ಅಧ್ಯಯನ ಮಾಡಿದ ಪರಿಣಿತರು ಇದಕ್ಕ ಸಂಪೂರ್ಣ ಉಲ್ಟಾ ಅಭಿಪ್ರಾಯ ಕೊಟ್ಟಾರು.
`ಕೋರೋನಾ ಅನ್ನುವುದು ನಮ್ಮ ಸರ್ಕಾರಿ ವ್ಯವಸ್ಥೆಯ ಶವ ಪರೀಕ್ಷೆ ಮಾಡಿದೆ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದೆ’ ಅಂತ ಪಿ.ಸಾಯಿನಾಥ್ ಹೇಳಿದಾರು.
ಹಂಗ ಅಂದ್ರ ಈ ಹಿನ್ನೆಲೆಯೊಳಗ ವಿಕೇಂದ್ರೀಕರಣ ಅಂದ್ರ ಏನು? ಮೊದಲನೆದಾಗಿ, ಅದು ಅಲ್ಲಲ್ಲಿಗೆ ಸಂಬಂಧಪಟ್ಟ ವಿಷಯಗಳಿಗೆ ಅಲ್ಲಲ್ಲೇ ನಿರ್ಧಾರ ತೊಗೋಳೋದು.
ಎರಡನೇಯದು, ಹಳ್ಳಿ, ನಗರಗಳ ಮೇಲೆ ತಾಲೂಕು, ಜಿಲ್ಲೆ, ರಾಜ್ಯ, ಕೇಂದ್ರ ಸರ್ಕಾರಗಳು ರಾಜ್ಯಭಾರ ಮಾಡದೇ, ನಿಗರಾಣಿ ಮಾಡದೇ, ತಮ್ಮ ತಮ್ಮ ಕೆಲಸ ಮಾಡಬೇಕು. ಉದಾಹರಣೆಗೆ ನೋಡೋಣ- ಒಂದು ಹಳ್ಳಿಯೊಳಗ ಒಂದು ಸಂಡಾಸು ಕಟ್ಟಬೇಕು ಅಂದರ ಅದಕ್ಕ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ, ಬೆಂಗಳೂರಿನ ಐಎಏಸ್ಸು, ದೆಹಲಿಯ ಐಎಎಸ್ಸು, ಎಲ್ಲರನ್ನೂ ಪರವಾನಗಿ ಕೇಳಬೇಕು. ಅವರು ಹೂಂ ಅಂದ್ರ ಕಟ್ಟಬೇಕು, ಇಲ್ಲಾಂದರ ಸುಮ್ಮನ ಚರಿಗಿ ತೊಗೊಂಡು ಹೋಲದ ಕಡೆ ಹೋಗಬೇಕು.
ಆದರ ನಿಮ್ಮದಷ್ಟು ನೀವು ನೋಡಿಕೊಳ್ರಿ ಅಂತ ದೆಹಲಿ ಸುಲ್ತಾನರು, ಬೆಂಗಳೂರಿನ ದೊಣ್ಣೆ ನಾಯಕರು ನಮ್ಮನ್ನು ಬಿಟ್ಟರ, ದಿನಾ ಸಂಜೀಕೆ ಹಾವು ಚೋಳು, ಹುಳಾ ಹುಪಟಿ ಹೆದರಿಕೆ ಇರಲಾರದೆ ನಾವು ನಮ್ಮ ಕೆಲಸ ಮುಗಸಬಹುದು.
ಇದಕ್ಕ ಒಂದು ಇಲ್ಲಿಯ ಉದಾಹರಣೆ, ಒಂದು ಹೊರಗಿನ ಉದಾಹರಣೆ ನೋಡೋಣು. ಕೇರಳದಾಗ ಸಣ್ಣ ಹಳ್ಳಿಗಳು ಸಹಿತ ಕೊರೋನಾದ ವಿರುದ್ಧದ ಹೋರಾಟವನ್ನು ಗಂಭೀರವಾಗಿ ತೊಗೊಂಡವು. ಪ್ರತಿ ಹಳ್ಳಿಯ ಪ್ರತಿ ಮನಿಗೆ ಒಬ್ಬ ಡಾಕ್ಟರು ಭೇಟಿ ಕೊಟ್ಟಾರ ಅಂತ ಅಲ್ಲಿಯ ಆರೋಗ್ಯ ಸಚಿವರು ಹೇಳಿಕೆ ಕೊಟ್ಟಾರ.
ಆದರ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯದಾಗ ಜನ ಗಂಭೀರ ರೋಗ ಬಂದು ಸತ್ತಾಗ ನೋಡಲಿಕ್ಕೆ ಒಬ್ಬ ಡಾಕ್ಟರ ಅಲ್ಲಾ, ಒಬ್ಬ ಕಂಪೌಂಡರು ಸಿಗಲಿಲ್ಲ. `ಕೋರೋನಾ ಅಂದ್ರ ಅಂಥಾದೇನೂ ಅಲ್ಲರಿಪಾ, ಅದರಿಂದಾ ಚೇತರಿಸಿಕೊಳ್ಳಬಹುದು’ ಅಂತ ಹೇಳಬೇಕಾದವರು, ಐದೂವರೆ ವರ್ಷ ಎಂಬಿಬಿಎಸ್ಸು ಓದಿದವರು ಹೇಳಬೇಕಾಗಿತ್ತು. ಆದರ ಅವರು ಕನಿಷ್ಟ ಅದನ್ನೂ ಮಾಡದೇ ಹೋದರು. ಅವರಿಗೆ ತಮ್ಮ ಕ್ಲಿನಿಕ್ಕು ಕಾಲಿ ಹೊಡದು ಅದರ ಬಾಡಿಗೆ ಕೊಡೋದು ಮೀ ಮ್ಯಾಲೆ ಬಂದರೂ ಅವರು ತಲಿ ಕೆಡಿಸಿಕೊಳ್ಳದೇ ಕೂತರು. ನಮ್ಮ ಸರ್ಕಾರದವರು ಆ ಡಾಕ್ಟರುಗಳಿಗೆ ಒಂದು ನೋಟೀಸು ಸಹಿತ ಕೊಡಲಿಲ್ಲ.
ಕೇಂದ್ರದ ಕಾನೂನುಗಳು ಬೆಂಗಳೂರಿಗೆ ಅರ್ಥ ಆಗಲಿಲ್ಲ. ರಾಜ್ಯದ ಕಾನೂನುಗಳು ಜಿಲ್ಲೆ, ತಾಲೂಕಿನಾಗ ಜಾರಿ ಆಗಲಿಲ್ಲ. ಮೈಸೂರು, ಬೆಳಾಗಾವಿ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಲ್ಲಾ ಶಂಕಿತರನ್ನ ಒಂದೇ ಹಾಲಿನಲ್ಲಿ ಕೂಡಿ ಇಟ್ಟದ್ದಕ್ಕ ಪಾಸಿಟಿವ್ ಇದ್ದವರಿಂದ ಅನೇಕ ನೆಗಾಟಿವ್ ಇದ್ದವರಿಗೆ ಕೋರೋನಾ ಬಂತು. ಅದು ಪೇಪರಿನಾಗ ಬಂದ ಮೇಲೆ ರಾಜ್ಯದ ಹಿರಿಯ ಅಧಿಕಾರಿಗಳ ತಲಿಯೊಳಗ ಟ್ಯೂಬು ಲೈಟು ಹತ್ತಿ ಅವರನ್ನ ಬೇರೆ ಬೇರೆ ರೂಮಿನ್ಯಾಗ ಇಡಲಿಕ್ಕೆ ಹತ್ತಿದರು.
ಅಂತರರಾಜ್ಯ ಓಡಾತದ್ದು ಒಂದು ಜಿಲ್ಲೆ ಯೊಳಗ ಒಂದು ಕಾನೂನು. ಕೆಲವರು ಬಿಡತಾರ, ಕೆಲವರು ಇಲ್ಲ. ಮೊದಲಿಗೆ ನಮ್ಮ ಊರಾಗ ಕರೆಂಟು ಹೋದರ ಕೇಈಬಿಯವರು ಇದು ನಮ್ಮ ಕಡೆ ಇಲ್ಲಾರೀ. ಜೋಗ ಜಲಪಾತದಾಗನ ಹೋಗೇತಿ, ಅಂತಿದ್ದರು. ಹಂಗ ಈಗ ಯಾವುದರ ಗ್ರಾಮ ಪಂಚಾಯಿತಿ, ನಗರಸಭೆ ಒಳಗ ಎನಾರ ಕೆಲಸ ಕೇಳಾಕ ಹೋದರ ಆ ಒಂದು ಕಾಗದ ಪತ್ರ, ದಾಖಲಾತಿ, ಧನಸಹಾಯ ಎಲ್ಲಾ ಬೆಂಗಳೂರಿನಿಂದ ಬರಬೇಕು ದೇಹಲಿಯಿಂದ ಬರಬೇಕು ಅಂತ ಹೇಳಿ ಕೈ ತೊಳಕೋತಾರ.
ಇದು ಬದಲು ಆಗಬೇಕು. ಇದಕ್ಕ ಒಂದು ಉದಾಹರಣೆ ನೋಡೋಣ. ರಾಜ್ಯದಾಗ ಸುಮಾರು 300 ಐಎಎಸ್ಸು, 350 ಐಪಿಎಸ್ಸು ಅಧಿಕಾರಿಗಳು ಅದಾರ. ಅದರಾಗ ಸುಮಾರು 60 ಜನ ಐಎಎಸ್ಸು ಹಾಗೂ 70 ಜನ ಐಪಿಎಸ್ಸು ಮಾತ್ರ ಬೆಂಗಳೂರು ಬಿಟ್ಟು ಹೊರಗ ಇದ್ದಾರ. ಒಬ್ಬ ಅಧಿಕಾರಿ ಸರಾಸರಿ 35 ವರ್ಷ ನೌಕರಿ ಮಾಡತಾರ. ಅದರಾಗ ಬರೇ 10 ವರ್ಷ ಅಷ್ಟನ ಜಿಲ್ಲೆಯೊಳಗ ಕೆಲಸ ಮಾಡತಾರ. ಉಳಿದ 25 ವರ್ಷ ಬೆಂಗಳೂರಿನಯಾಗ ಠಿಕಾಣಿ ಹೊಡಕೊಂಡು ಕೂತಿರತಾರ.
ಇದ್ದದ್ದರಾಗ ಪೊಲೀಸು ಮತ್ತು ಅರಣ್ಯ ಅಧಿಕಾರಿಗಳು ಬೇಕು. ಅವರಿಗೆ ಸುಮಾರು ಹಿರೇತನ ಬಂದ ನಂತರನೂ ಜಿಲ್ಲೆಯೊಳಗ ಕೆಲಸ ಮಾಡಲಿಕ್ಕೆ ಅವಕಾಶ ಐತಿ. ಆಡಳಿತ ಸೇವೆ ಅಧಿಕಾರಿಗಳಿಗೆ ಮಾತ್ರ ಆ ಭಾಗ್ಯ ಇಲ್ಲ. ಅವರು ಒಮ್ಮೆ ವಿಧಾನಸೌಧ ಅನ್ನೋ ಜೇನುಗೂಡಿನೊಳಗ ಹೋಗಿ ಕೂತುಕೊಂಡರು ಅಂದ್ರ ಅವರು ಹೂವಿನ ತೋಟದಾಗ ಅಲಿಯೋ ದಿಲ್ಲಾ, ಹೊರಗ ಹೋಗಿ ಮಕರಂದ ಮೂಸಂಗಿಲ್ಲ. ಬೇಡವಾದ ಮನಸ್ಸಿನಿಂದ ಜಿಲ್ಲಾಕ್ಕ ಉಸ್ತುವಾರಿ ಮಾಡಲಿಕ್ಕೆ ಬರ್ತಾರ. ಅದೂ ಬೆಂಗಳೂರಿನಿಂದ ಬೆಳಿಗ್ಗೆ ತಿಂಡಿ ಮಾಡಿ ಹೊರಟು ಮಧ್ಯಾನ ಐ.ಬಿ. ಒಳಗ ಊಟ ಮಾಡಿ ಸಂಜೀ ಕಾಫಿಗೆ ಮತ್ತ ಡಾಲರ್ ಕಾಲನಿಯ ಮನಿಗೆ ವಾಪಸ್ ಹೋಗೋ ಹಂಗ ತಯಾರಿ ಮಾಡಿಕೊಂಡು ಬಂದಿರತಾರ.
ಯಾವ ದೇಶದ ಶೇಕಡಾ 70 ಜನ ಗ್ರಾಮೀಣ ಪ್ರದೇಶದಾಗ ಇರತಾರೋ, ಆ ದೇಶದಾಗಿನ ಕೇವಲ ಶೇಕಡಾ 20 ಅಧಿಕಾರಿಗಳು ತಮ್ಮ ಸೇವೆಯ ಅವಧಿಯ 25 ಶೇಕಡಾ ಕಾಲವನ್ನು ಮಾತ್ರ ರಾಜಧಾನಿಯಿಂದ ಹೊರಗೆ ಕಳೀತಾರೆ.
ಇದು ಎಲ್ಲರಿಗೂ ಅರ್ಥ ಆದರ ಒಳ್ಳೆಯದು.
ಇನ್ನ ನಮ್ಮನ್ನು ಆಳುವವರು ಬೆಂಗಳೂರಿನ/ದೆಹಲಿಯ ಒಂದು ಮೂಲಿಯೊಳಗ ಕೂತಗೊಂಡು, ಇಡೀ ರಾಜ್ಯಕ್ಕ, ದೇಶಕ್ಕ, ಒಂದೇ ಕಾನೂನು ಅಂತ ಮಾಡೋದು, ಭಾರಿ ಭಯಂಕರ ಪರಿಣಾಮ ಬೀರಬಹುದು. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನ ಮನಸಿನಲ್ಲಿ ಇಟಗೋಬೇಕು. ಅರವತ್ತರ ದಶಕದಾಗ ಹಸಿವಿನ ಮಾರಿಗೆ ಮಹಾ ಔಷಧ ಅಂತ ಹೇಳಿ ಇಡೀ ದೇಶಕ್ಕ ಅಕ್ಕಿ, ಗೋಧಿ, ತಿನಸಲಿಕ್ಕೆ ಹತ್ತಿದರು, ಆಗಿನ ನಮ್ಮ ಆಳುವವರು. ಅದರ ಅವರಿಗೆ ಉತ್ತರ ಕರ್ನಾಟಕದವರು ಜೋಳ ತಿನ್ನೋದು, ದಕ್ಷಿಣದವರು ರಾಗಿ, ಕರಾವಳಿಯವರು ಕೆಂಪು ಅಕ್ಕಿ ತಿನ್ನೋದು ಕಲ್ಪನಾ ಇರಲಿಲ್ಲ. ಇದ್ದರೂ ಒಂದು ದೇಶ, ಒಂದು ನೀತಿ ಅನ್ನೋ ಗದ್ದಲದಾಗ ಅವರಿಗೆ ಇನ್ನೂ ಮಾಡ್ಲಿಕ್ಕೆ ಆಗಲಿಲ್ಲ.
ಅಂದಿನ ಗಡಿಬಿಡಿಯ ನಿರ್ಧಾರ ಇಂದಿಗೂ ಮುಂದುವರೆದಿದೆ. ಕೋಟ್ಯಾಂತರ ಜನರ ಆಹಾರ ಪದ್ಧತಿ ಬದಲು ಆದ ಮೇಲೆ ಸಹಿತ ಸರ್ಕಾರಗಳಿಗೆ ಇಂತಹ ಮೂಲಭೂತ ವಿಷಯಗಳ ಬದಲಾವಣೆ ಸಾಧ್ಯ ಆಗಿಲ್ಲ. ಇದರ ಬದಲಿಗೆ ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ, ಜಿಲ್ಲೆಗಳಿಗೆ ಬೇರೆ ಬೇರೆ ನೀತಿಗಳು ಲಾಗೂ ಆಗಬಹುದು, ಆದರ ತಪ್ಪು ಏನಿಲ್ಲ, ಅದೇನು ದೇಶದ್ರೋಹ ಅಲ್ಲ ಅಂತ ಅವರ ಚಿಂತನೆ ಇಲ್ಲ.
ಈಗಂತೂ ಕಾಲ ಬದಲಾಗಿ ಹೋಗೇದ. ಕೇಂದ್ರ ಆಹಾರ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಅವರು ಒಂದು ದೇಶ ಒಂದು ಪಡಿತರ ಚೀಟಿ ಅಂತ ಘೋಷಣೆ ಮಾಡಿದಾರ. ಇನ್ನ ಇದರಿಂದ ಏನೇನು ಘಟಿಸಲಿಕ್ಕೆ ಅದನೋ ಏನೋ.
ಪರಿಸರ ರಕ್ಷಣೆಯಂತಹ ಅನೇಕ ವಿಷಯಗಳಲ್ಲಿ ಒಳ್ಳೆ ಪಾಠ ಕಳಿಸಿಕೊಟ್ಟ ಕೋರೋನಾ ಆಡಳಿತದ ವಿಷಯಕ್ಕೆ ನಮಗ ದೋಖಾ ಮಾಡಿತು. ಯಾವ ಜಿಲ್ಲೆಯೊಳಗ ಎಷ್ಟು ಕೇಸು ಅದಾವು ಅನ್ನೋ ಸಣ್ಣ ವಿಷಯದಿಂದ ಹಿಡದು, ದುಡ್ಡು, ಸೂಕ್ತಕ್ರಮದ ಸೂಚಿ, ವಲಸಿಗರ ಓಡಾಟ, ಮುಂತಾದ ಗಂಭೀರ ವಿಷಯಗಳಿನ್ನೂ ಸಹಿತ ಕೇಂದ್ರ ರಾಜ್ಯಗಳಿಗೆ ತಾಕೀತು ಮಾಡಿತು.
ಇದೇ ಸರಿಯಾದ ದಾರಿ ಅಂತ ಜನರಿಗೆ ಗಿಣಿಮಾತು ಹೇಳಿಕೊಟ್ಟಿತು. ಇದನ್ನು ವಿರೋಧಿಸೋದು – ಇತರ ವಿಷಯಗಳನ್ನು ವಿರೋಧಿಸಿದಂತೆ – ರಾಷ್ಟ್ರದ್ರೋಹದ ಮಾದರಿ ಅಂತ ಅನ್ನುವಷ್ಟು ಜನರ ತಲಿಯೊಳಗ ಕೂಡಿಸಿಬಿಟ್ಟಿತು. ವಿಕೇಂದ್ರೀಕರಣಕ್ಕ ಸಂಬಂಧ ಪಟ್ಟಂತೆ, ನಾವು ಯಾವ ದಿಕ್ಕಿನಾಗ ಹೋಗಬೇಕಾಗಿತ್ತೋ ಅದರ ಸಂಪೂರ್ಣ ವಿರುದ್ಧ ದಿಕ್ಕಿನಾಗ ಹೋಗಲಿಕ್ಕ ಹತ್ತೇವಿ. ಇಂತಹ ಕಾಲದಾಗ, ರಾಜನ ಮೈ ಮೇಲೆ ಬಟ್ಟೆಗಳು ಇಲ್ಲ ಅಂತ ಹೇಳೋರು ಯಾರು, ಮನೋಲ್ಲಾಸಿನಿ?


