ಕಾಂಗ್ರೆಸ್ ಪಕ್ಷವು ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಕೋರಿ ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡದಂತೆ ಗುಜರಾತ್ ಪೊಲೀಸರಿಗೆ ನಿರ್ದೇಶನ ಕೋರಿದೆ.
ಆಡಳಿತರೂಡ ಬಿಜೆಪಿ ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಪಕ್ಷದ ಬಲವನ್ನು ಕಡಿಮೆ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ “ಬಿಜೆಪಿ ಹಲವಾರು ರಾಜ್ಯಗಳ ವಿಧಾನಸಭೆಯಲ್ಲಿ ನಡೆಸಿದಂತೆ ಪ್ರತಿಪಕ್ಷಗಳ ಶಾಸಕರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿ, ಜನರ ಆದೇಶವನ್ನು ಉಲ್ಲಂಘಿಸುವ ತಂತ್ರವನ್ನು ಮಾಡಲು ಹೊರಟಿದ್ದಾರೆ” ಎಂದಿದ್ದಾರೆ.
ಇತ್ತೀಚೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ಸ್ಥಾಪಿಸಲು ಈ ತಂತ್ರವನ್ನು ಅನುಸರಿಸಿಂತೆ, ರಾಜ್ಯಸಭಾ ಚುನಾವಣೆಯಲ್ಲೂ ಇದೇ ತಂತ್ರವನ್ನು ಬಳಸಿದೆ ಎಂದು ಸಿಂಗ್ವಿ ಆರೋಪಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಇಲ್ಲದ ಗುಜರಾತ್‌ನ ಕಾಂಗ್ರೆಸ್ ಶಾಸಕ ಪಂಜಾಭಾಯ್ ವನ್ಶ್ ಅವರನ್ನು ಈ ವಾರ ಮೂರು ಬಾರಿ ಪೊಲೀಸರು ತಮ್ಮ ಕ್ಷೇತ್ರದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ ಕಾಂಗ್ರೆಸ್ “ಆಡಳಿತ ಪಕ್ಷವು ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಹಾಗೂ ಹಿರಿಯ ಶಾಸಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ದೂರಿದೆ. ಇದಲ್ಲದೆ, ಹೇಗಾದರೂ ಕಾನೂನು ಬಾಹಿರವಾಗಿ ಪೊಲೀಸರ ನೆರವಿನೊಂದಿಗೆ ಜೂನ್ 19 ರಂದು ಶಾಸಕರು ಮತದಾನದ ಸ್ಥಳವನ್ನು ತಲುಪುವುದನ್ನು ತಡೆಯುವ ಸಾಧ್ಯತೆಯಿದೆ ಎಂದು ಆರೋಪಿಸಿದೆ.
“ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಹಳೆಯ ಕ್ರಿಮಿನಲ್ ಪ್ರಕರಣಗಳನ್ನು ಮತ್ತೇ ತೆರೆದು ಶಾಸಕರ ವಿರುದ್ದ ಸುಳ್ಳು ಹಾಗೂ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಲು ಉದ್ದೇಶಿಸಿದೆ” ಎಂದು ಅರ್ಜಿಯಲ್ಲಿ ಹೇಳಿದೆ.
ಗುಜರಾತ್‌ನ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ, ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಜೈಪುರಕ್ಕೆ ಕರೆದೊಯ್ದಿತ್ತು, ಆದರೆ ಲಾಕ್‌ಡೌನ್ ಘೋಷಿಸಿದ್ದರಿಂದ ಚುನಾವಣೆ ಮುಂದೂಡಲ್ಪಟ್ಟು, ಎಲ್ಲರೂ ಮರಳುವಂತಾಗಿದೆ.


