ಪ್ರಶ್ನೆ ಮಾಡುವ ರೈತರ ಮೇಲೆ ರೇಗುವ ಪರಿಪಾಠ ಬೆಳೆಸಿಕೊಂಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಿಂದೆ ಕೋಲಾರ ರೈತ ಮಹಿಳೆಯೊಬ್ಬರನ್ನು ರ್‍ಯಾಸ್ಕಲ್ ಬಾಯ್ಮುಚ್ಚು ಎಂದು ಧಮಕಿ ಹಾಕಿದ್ದ ಕಾನೂನು ಸಚಿವರು ಇದೀಗ ತುಮಕೂರಿನಲ್ಲಿ ಹಿರಿಯ ಹೋರಾಟಗಾರರಿಗೆ ’ಐ ಆಮ್ ದಿ ಮಿನಿಸ್ಟರ್, ನಾನೇಳಿದ್ದು ಕೇಳಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗಿ’ ಎಂದು ಸೌಜನ್ಯ ಮೀರಿದ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಡೆದದ್ದು ಇಷ್ಟು. ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಎಸ್ ಸಿಸಿ ಮತ್ತು ಎಐಕೆಎಸ್ ಮತ್ತು ದಲಿತ ಸಂಘಟನೆಗಳು ಜೂನ್ 29ರಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಪ್ರತಿಭಟನಾನಿರತ ರೈತ ಮುಖಂಡರು ಕಾದರು. ಅರ್ಧ ಗಂಟೆಯ ನಂತರ ಸಚಿವರು ಡಿಸಿ ಕಚೇರಿಯ ಎಡ ಭಾಗದ ಗೇಟಿನಿಂದ ಹೊರಕ್ಕೆ ಬಂದರು. ಪ್ರತಿಭಟನಾಕಾರರು ಬಲಭಾಗದ ಗೇಟಿನಲ್ಲಿ ಕಾಯುತ್ತಿದ್ದರು. ಸಚಿವರು ಬಲಭಾಗದ ಗೇಟ್ ಗೆ ಬಂದು ಮನವಿ ಸ್ವೀಕರಿಸುವಂತೆ ರೈತರು ಒತ್ತಾಯಿಸಿ ಸಚಿವರ ಕಾರನ್ನು ತಡೆದು ಘೋಷಣೆ ಕೂಗಿದರು.
ಪ್ರತಿಭಟನಾ ನಿರತರ ಬಳಿಗೆ ಬಂದು ಅಧಿಕಾರಿಗಳು ಸಚಿವರು ಮನವಿ ಸ್ವೀಕರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.( ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿ) ಸಚಿವರು ಬಲ ಭಾಗದ ಗೇಟ್ ಗೆ ಬರಲು ಒಪ್ಪಲಿಲ್ಲ. ತಾನಿರುವಲ್ಲಿಗೇ ಬಂದು ಕೊಡಿ ಎಂದರು. ರೈತರು ಸಿಟ್ಟಿಗೆದ್ದರು. ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಇದು ಮಿನಿಸ್ಟರ್ ಅವರನ್ನು ಕೆರಳಿಸಿತು. ಮತ್ತೆ ಕಾರಿನಲ್ಲಿ ಕೂತರು. ಅಧಿಕಾರಿಗಳು ಸಮಾಧಾನ ಪಡಿಸಿ ಸಚಿವರನ್ನು ಕರೆತಂದರು.
ಎರಡನೇ ಅಂಕ: ರೈತರ ಒತ್ತಾಯಕ್ಕೆ ಮಣಿದು ಪ್ರತಿಭಟನಾ ನಿರತರ ಬಳಿಗೆ ಬಂದರು. ಪ್ರಾಂತ ರೈತ ಸಂಘ ಮುಖಂಡ ಬಿ.ಉಮೇಶ್ ಸಚಿವರೊಂದಿಗೆ ಸರ್ಕಾರದ ತೀರ್ಮಾಗಳಿಂದ ರೈತರಿಗಾಗುವ ಅನ್ಯಾಯವನ್ನು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಸಚಿವರು ಉಮೇಶ್ ಅವರನ್ನು ದಬಾಯಿಸಲು ಮುಂದಾದರು. ಕೂಡಲೆ ಬಡವರ ಭೂಮಿ ವಸತಿ ಹಕ್ಕಿಗಾಗಿ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವ ಹಿರಿಯರಾದ ಸಿ. ಯತಿರಾಜು ಅವರು ಸಚಿವರನ್ನು ಪ್ರಶ್ನಿಸತೊಡಗಿದರು.
ಸಿ.ಯತಿರಾಜ್ ರವರು ನಾಡಿನ ಹಿರಿಯ ಹೋರಾಟಗಾರರು. ಸದಾ ರೈತರು ,ಪರಿಸರದ ಕುರಿತು ಕಾಳಿಜಿಯಿಂದ ಹೋರಾಟ ನಡೆಸುತ್ತಿರುವವರು. ಇಂತಹ ಹಿರಿಯರ ಜೊತೆ ಸಚಿವ ಮಾಧುಸ್ವಾಮಿಯವರು ಇತ್ತಿಚಿಗೆ ನಡೆದ ಭೂ ಸುಧಾರಣಾ ಕಾಯ್ದೆ ವಿರುದ್ಧದ ಹೋರಾಟದ ಸಮಯದಲ್ಲಿ ಮನವಿಪತ್ರ ನೀಡುವ ವೇಳೆ ದುರಂಹಕಾರದಿಂದ ನಡೆದುಕೊಂಡಿದ್ದಾರೆ.#NaanuGauri #LawMinister #maduswamy
Posted by Naanu Gauri on Tuesday, June 30, 2020
ಭೂಸ್ವಾದೀನ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗುತ್ತದೆ. ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಹೊಂದಬಹುದು. ಈಗಿರುವ ಕಾನೂನಿನಂತೆ 10 ಯೂನಿಟ್ ಗೆ 5.4 ಎಕರೆಯಂತೆ 54 ಎಕರೆ ಜಮೀನು ಹೊಂದಲು ಅವಕಾಶವಿದೆ. ತಿದ್ದುಪಡಿ ಮಾಡಿದರೆ 4 ಮಂದಿ ಸದಸ್ಯರಿರುವ ಕುಟುಂಬಕ್ಕೆ 20 ಯೂನಿಟ್ ಮಾಡಿದ್ದೀರಿ. ಇದರಿಂದ 108 ಎಕರೆ ಹೊಂದಬಹುದು. 5 ಮಂದಿ ಸದಸ್ಯರಿರುವ ಕುಟುಂಬಕ್ಕೆ 40 ಯೂನಿಟ್ ನಂತೆ 216 ಎಕರೆ ಹೊಂದಬಹುದು ಎಂದು ಹಿರಿಯ ಹೋರಾಟಗಾರ ಯತಿರಾಜು ಅವರು ಸಚಿವರನ್ನು ಪ್ರಶ್ನಿಸುತ್ತಾ ಹೋದರು.
ಇದರಿಂದ ಕೆರೆಳಿ ಕೆಂಡವಾದ ಸಚಿವ ಮಾಧುಸ್ವಾಮಿ, ’ಐ ಆಮ್ ಮಿನಿಸ್ಟರ್, ನಾನು ಹೇಳಿದ್ದು ಮೊದಲು ಕೇಳಿ. ನನಗೆ ಮಾತಾಡಲು ಮೊದಲು ಬಿಡಿ ನಿಮ್ಮ ಭಾಷಣ ಕೇಳಲು ನಾನಿಲ್ಲಿ ಬಂದಿಲ್’ ಎಂದು ಕೋಪಗೊಂಡರು. ಒಂದು ಹಂತದಲ್ಲಿ ನನ್ನ ಮಾತನ್ನು ಕೇಳುವುದಾದರೆ ಕೇಳಿ ಇಲ್ಲಾಂದ್ರೆ ಇಲ್ಲಿಂದ ಹೊರಡಿ ಎಂದು ಕೂಗಾಡಿದರು ಸಚಿವರು. ಸರ್ಕಾರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಆಗ ಯತಿರಾಜು ಅವರು ‘ಮೊದಲು ರೈತರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ರೈತರ ಬೇಡಿಕೆಗಳ ಗಂಭೀರತೆ ತಿಳಿದುಕೊಳ್ಳಿ ಸರ್. ನಮಗೂ ಮಾತನಾಡಲು ಅವಕಾಶ ಕೊಡಿ. ಆಮೇಲೆ ನೀವು ಸರ್ಕಾರದ ನಡೆಯನ್ನು ಬೇಕಾಧರೆ ಸಮರ್ಥಿಸಿಕೊಳ್ಳಿ ಎಂದು ಅತ್ಯಂತ ಗೌರವಯುತವಾಗಿಯೇ ಸಚಿವರಿಗೆ ಹೇಳಿದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಚಿವರು ಟೆಕ್ಕಿಗಳು ಸರ್ಕಾರಕ್ಕೆ ಭೂಮಿ ಬೇಕೆಂದು ಮನವಿ ಸಲ್ಲಿಸಿದ್ದಾರೆ. ಅದಕ್ಕಾಗಿ ಭೂಸುಧಾರಣೆಗೆ ತಿದ್ದುಪಡಿ ತರುತ್ತಿದ್ದೇವೆ ಎಂದು ಸಚಿವರು ಹೇಳತೊಡಗಿದರು. ಇದರಿಂದ ರೈತರಿಗೆ ದೊಡ್ಡಮಟ್ಟದ ಲಾಭವಾಗುತ್ತದೆ ಎಂದರು. ಇದರಿಂದ ಸಿಟ್ಟುಗೊಂಡ ಯತಿರಾಜು ಅವರು ತಲೆತಲಾಂತರದಿಂದ ಕೃಷಿಯನ್ನೇ ನಂಬಿಕೊಂಡು ಬಂದಿರುವರಿಗೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಭೂಮಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರನ್ನು ಬಿಟ್ಟು ಸಂಡೇ ಕೃಷಿಕರಿಗೆ ಭೂಮಿ ನೀಡುವುದರಿಂದ ಅನ್ನದ ಅಭದ್ರತೆ ಸೃಷ್ಟಿಯಾಗುತ್ತದೆ ಎಂದು ಹೇಳಿದಾಗ ಸಚಿವರು ಕೆರಳಿ ಕೆಂಡವಾದರು.
ನಿಮ್ಮ ಮಾತು ನಿಲ್ಲಿಸಿ, ನೀವು ಹೇಳುತ್ತಿರುವುದು ಸರಿಯಲ್ಲ. 5 ಜನರಿರುವ ಕುಟುಂಬಕ್ಕೆ 40 ಯೂನಿಟ್ ನಂತೆ ಕೇವಲ 84 ಎಕರೆ ಭೂಮಿ ಹೊಂದಲು ಈಗಿನ ಕಾನೂನಿನಲ್ಲಿ ಅವಕಾಶವಾಗಲಿದೆ ಎಂದು ಸಚಿವರ ಹೇಳಿಕೆ ಸುಳ್ಳಿನಿಂದ ಕೂಡಿದೆ ಈಗಿನ ಕಾನೂನಿನಂತ ಒಂದು ಕುಟುಂಬ 216 ಎಕರೆ ಹೊಂದಬಹುದು. ಇದು ಭೂಮಿಯನ್ನೇ ನಂಬಿರುವ ರೈತರಿಗೆ ತೊಂದರೆಯಾಗುತ್ತದೆ ಎಂದು ವಿವರಿಸಲು ಯತಿರಾಜು ಮುಂದಾದರು.
ಹೀಗಾಗಿ ತನಗೆ ಪ್ರಶ್ನಿಸಲು ಬರುತ್ತಾರೆ ಎಂದುಕೊಂಡ ಸಚಿವರು ಹಿರಿಯ ಹೋರಾಟಗಾರರಿಗೆ ಗೌರವ ಕೊಡದೆ ನಡೆದುಕೊಂಡರು ಎಂದು ಆಡಿಕೊಳ್ಳುವಂತಾಗಿದೆ. ಕೇವಲ ಬಂದು ಮನವಿ ಪಡೆದು ಹೋಗಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಚಿವರ ಅಹಂಗೆ ಇದು ಉದಾಹರಣೆಯಾಗಿದೆ. ಇಂತಹ ಧೋರಣೆಯನ್ನು ಸಚಿವರು ತಿದ್ದಿಕೊಳ್ಳಬೇಕು ಎಂದು ಹಿರಿಯ ಜೀವಗಳು ಆಗ್ರಹಿಸಿವೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಹಿರಿಯ ಹೋರಾಟಗಾರ ಸಿ.ಯತಿರಾಜು, “ರೈತರ ಆತಂಕವನ್ನು ಸಚಿವರ ಮುಂದೆ ಹೇಳಿದ್ದೇ ತಪ್ಪಾ? ಸದನ ಶೂರ ಎಂದು ಕರೆಸಿಕೊಳ್ಳುವ ಸಚಿವರು ಹೀಗೆ ವರ್ತಿಸಿರುವುದು ಬೇಸರ ಮೂಡಿಸಿದೆ. ಟಿಕ್ಕಿಗಳಿಗೆ ಭೂಮಿ ನೀಡಿದರೆ ನ್ಯಾಚುರಲ್ ಫಾರಂ ಹೆಚ್ಚಾಗುತ್ತದೆ. ಕೃಷಿ ಉತ್ತೇಜನ ಸಿಗುವುದಿಲ್ಲ. ಶೇ.85ರಷ್ಟು ಸಣ್ಣ ಮಧ್ಯಮ ರೈತರು ಇದ್ದು ಭೂಮಿ ನಂಬಿ ಬದುಕುತ್ತಿದ್ದಾರೆ. ಈಗ ಭೂಮಿಯನ್ನೂ ಕಳೆದುಕೊಂಡರೆ ಅವರ ಬದುಕು ಬರ್ಬರವಾಗುತ್ತದೆ. ಒಂದಿಷ್ಟು ದುಡ್ಡು ಬರಬಹುದು. ರೈತರ ಸ್ವಾಭಿಮಾನ ಮತ್ತು ಘನತೆಯುತ ಬದುಕಿಗೆ ಧಕ್ಕೆ ಬರುತ್ತದೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು. ತಾನೇ ಸರ್ವಜ್ಞ ಎಂಬ ಮನೋಭಾವ ಬಿಟ್ಟರೆ ಒಳ್ಳೆಯದು” ಎಂದು ಹೇಳಿದರು.
ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿ ಕಾರ್ಪೋರೇಟ್ ಕುಳಗಳು ಸಂಡೇ ಕೃಷಿಕರ ಪಾಲಾಗುತ್ತದೆ ಕಂಪನಿಗಳು, ಬಂಡವಾಳಗಾರರು ಭೂಮಿ ಹೊಂದಿ ನಿಜವಾದ ರೈತರು ಜೀತದಾಳುಗಂತೆ ದುಡಿಮೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ರೈತ ಮುಖಂಡರದ್ದು.
79 ಎ ಬಿ ಕಲಂಗಳಿಂದ ಹೆಚ್ಚು ಭೂಮಿ ಹೊಂದಲು ಅವಕಾಶವಿಲ್ಲ. ಇವುಗಳನ್ನು ತೆಗೆದುಹಾಕಿದರೆ ಕೃಷಿಕರಿಗೆ ತೊಂದರೆಯಾಗಲಿದೆ. ನೈಸರ್ಗಿಕ ಕೃಷಿ ಹೋಗಿ ರಫ್ತು ಆಧಾರಿತ ಕೃಷಿ ಸಂಸ್ಕೃತಿ ಬರುತ್ತದೆ. ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ರೈತರ ಆಧಾಯ ಖೋತಾ ಆಗುತ್ತದೆ. ಯಾವುದೇ ಕಾರಣಕ್ಕೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬಾರದು. ರೈತರ ಪರವಾಗಿ ಧ್ವನಿ ಎತ್ತಬೇಕಾಗಿದ್ದ ಸಚಿವ ಮಾಧುಸ್ವಾಮಿ ಬಂಡವಾಳಿಗರು ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾಗಿ ನಿಂತಿರುವುದಕ್ಕೆ ರೈತ ಸಂಘಟನೆಗಳು ಸಿಡಿದೇಳುವಂತೆ ಮಾಡಿದೆ.
ಓದಿ: ಭೂಸುಗ್ರೀವಾಜ್ಞೆ ವಿರೋಧಿಸಿ ಪ್ರತಿಭಟನೆ: ರೈತಮುಖಂಡರೊಂದಿಗೆ ಮಾಧುಸ್ವಾಮಿ ಮಾತಿನ ಚಕಮಕಿ


