ಉತ್ತರ ಪ್ರದೇಶದ ಕಾನ್ಪುರದ ಬಳಿಯ ಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಲು ಹೋದ 8 ಪೊಲೀಸರ ಮೇಲೆ ಆತನ ಸಹಚರರು ಗುಂಡಿಕ್ಕಿ ಕೊಂದಿರುವ ದುರ್ಘಟನೆ ಇಂದು ಮುಂಜಾನೆ ಜರುಗಿದೆ.
ಉತ್ತರ ಪ್ರದೇಶ ರಾಜಧಾನಿ ಲಖನೌದಿಂದ 150 ಕಿ.ಮೀ ದೂರದಲ್ಲಿರುವ ಡಿಕ್ರು ಗ್ರಾಮದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ದಿವೇಂದ್ರ ಕುಮಾರ್ ಮಿಶ್ರಾ, ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಹತ್ಯೆ ಮಾಡಲಾಗಿದೆ.
ದರೋಡೆ, ಕೊಲೆ, ಅಪಹರಣ, ಸುಲಿಗೆ, ಗಲಭೆ, ಕ್ರಿಮಿನಲ್ ಪಿತೂರಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕಾಸ್ ದುಬೆ ಎಂಬಾತನನ್ನ ಹುಡುಕಿಕೊಂಡು ಮೂರು ಪೊಲೀಸ್ ಠಾಣೆಗಳ ತಂಡಗಳು ಹಳ್ಳಿಗೆ ಹೋಗಿದ್ದವು. ಆತನ ಮೇಲೆ ಸುಮಾರು 60 ಕ್ರಿಮಿನಲ್ ಪ್ರಕರಣಗಳಿದ್ದು ಹೊಸ ಕೊಲೆಗೆ ಯೋಜಿಸಿದ್ದ ಎನ್ನಲಾಗಿದೆ. ಆತನ ಸುಳಿವು ಹಿಡಿದು ಹೊರಟ ಪೊಲೀಸರ ಮೇಲೆ ಆತನ ಸಹಚರರು ಎಗ್ಗಾಮಗ್ಗಾ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಪೊಲೀಸರು ಡಿಕ್ರು ಹಳ್ಳಿ ಸಮೀಪಿಸುತ್ತಿದ್ದಂತೆ ಭಾರೀ ಬುಲ್ಡೋಡರ್‌ಗಳನ್ನು ರಸ್ತೆಗಡ್ಡವಾಗಿ ನಿಲ್ಲಿಸಲಾಗಿತ್ತು. ಪೊಲೀಸರು ಬರುವ ಮುನ್ಸೂಚನೆ ಅರಿತಿದ್ದ ಆರೋಪಿಗಳು ಹಲವು ರಸ್ತೆಗಳನ್ನು ಬಂದ್ ಮಾಡಿದ್ದರು. ಅವುಗಳನ್ನು ತೆರವುಗೊಳಿಸಿ ಕೊನೆಗೆ ಪೊಲೀಸರು ಗ್ರಾಮ ಪ್ರವೇಶಿಸಿದ ಕೂಡಲೇ ಹಲವು ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಅಡಗಿದ್ದ ಆರೋಪಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡ ಪಿಂಟೂ ಸೆಂಗಾರ್‌ನನ್ನು ಇದೇ ಆರೋಪಿಗಳು ಜೂನ್ 18 ರಂದು ಕೊಂದಿದ್ದರು. ಈ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಮಧ್ಯಪ್ರದೇಶದ ಚಿಂದ್ವಾರದಿಂದ ಕಾನ್ಪುರ ಪೊಲೀಸರು ಗುರುವಾರ ಬಂಧಿಸಿದ್ದರು. ಆನಂತರ ಉಳಿದ ಆರೋಪಿಗಳು ಬಿಕ್ರುನಲ್ಲಿ ಹಲವು ಬಾಡಿಗೆ ಶೂಟರ್‌ಗಳೊಂದಿಗೆ ಅಡಗಿಕೊಂಡಿದ್ದರು ಎನ್ನಲಾಗಿದೆ.
ಶಿವರಾಜ್‌ಪುರದ ಸ್ಟೇಷನ್ ಆಫೀಸರ್ ಆಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಮಿಶ್ರಾ, ಸಬ್ ಇನ್ಸ್‌ಪೆಕ್ಟರ್ ಮಹೇಶ್ ಯಾದವ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಮತ್ತು ಬಾಬ್ಲೂ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ ಇತರ ಐವರು ಪೊಲೀಸರು ಗಾಯಗೊಂಡಿದ್ದಾರೆ.
“ಪೊಲೀಸರ ಕಡೆಯಿಂದಲೂ ಪ್ರತಿ ಗುಂಡಿನ ದಾಳಿ ನಡೆಯಿತು ಆದರೆ ಅಪರಾಧಿಗಳು ಕಟ್ಟಡಗಳ ಮೇಲಿದ್ದರಿಂದ ತಪ್ಪಿಸಿಕೊಂಡರು. ಪೊಲೀಸರ ಮೇಲಿನ ಏಕಾಏಕಿ ದಾಳಿಗೆ ನಮ್ಮ ಎಂಟು ಮಂದಿ ಸಾವನ್ನಪ್ಪಿದ್ದಾರೆ” ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಚ್‌ಸಿ ಅವಸ್ಥಿ ಹೇಳಿದ್ದಾರೆ.
ಎಕೆ 47 ಕಾರ್ಬೈನ್‌ಗಳ ಖಾಲಿ ಚಿಪ್ಪುಗಳನ್ನು ಮೇಲ್ಛಾವಣಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಲಕ್ನೋದಿಂದ ವಿಧಿವಿಜ್ಞಾನ ತಂಡ ಆಗಮಿಸಿ ಸಾಕ್ಷ್ಯ ಸಂಗ್ರಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಕ್ರುನಿಂದ 3 ಕಿ.ಮೀ ದೂರದಲ್ಲಿರುವ ನಿವಾಡಾ ಗ್ರಾಮದಲ್ಲಿ ವಿಕಾಸ್ ದುಬೆ ಅವನ ಇಬ್ಬರು ಸಹಚರರು ಎನ್‌ಕೌಂಟರ್‌ನಲ್ಲಿ ಸಾವನಪ್ಪಿದ್ದಾರೆ. ಪೊಲೀಸರು ಆತನ ಸಹೋದರ ದಿನೇಶ್ ತಿವಾರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
60 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ವಿಕಾಸ್ ದುಬೆ 2001 ರಲ್ಲಿ ಶಿವ್ಲಿ ಪೊಲೀಸ್ ಠಾಣೆಯೊಳಗೆ ರಾಜ್ಯ ಸಚಿವ ಮತ್ತು ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾನೆ. ನಂತರ ಪ್ರಕರಣದಲ್ಲಿ ಅವನನ್ನು ಖುಲಾಸೆಗೊಳಿಸಲಾಯಿತು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಡಿಕ್ರು ಹಳ್ಳಿಗೆ ತೆರಳುತ್ತಿದ್ದಾರೆ ಮತ್ತು ಕಾನ್ಪುರದ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ದಿನೇಶ್ ಕುಮಾರ್ ಪಿ ಮತ್ತು ಇನ್ಸ್‌ಪೆಕ್ಟರ್ ಜನರಲ್ ಮೋಹಿತ್ ಅಗರ್‌ವಾಲ್ ಅವರು ಈಗಾಗಲೇ ಸ್ಥಳದಲ್ಲಿದ್ದಾರೆ.
ಆರು ಜಿಲ್ಲೆಗಳನ್ನು ಒಳಗೊಂಡ ಕಾನ್ಪುರ ವಿಭಾಗದ ಎಲ್ಲಾ ಗಡಿಗಳಿಗೆ ಪೊಲೀಸ್ ಕಣ್ಗಾವಲು ವಿಧಿಸಲಾಗಿದೆ.
ವಿಕಾಸ್ ದುಬೆಯನ್ನು ಹುಡುಕಿಹೋದ ಪೊಲೀಸ್ ತಂಡಗಳ ಸಮರ್ಪಕ ಯೋಜನೆಯ ಕೊರತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಮಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸರ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ.
ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯುಪಿ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.
ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!


