8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕ್ರಿಮಿನಲ್ ವಿಕಾಸ್ ದುಬೆಯನ್ನು ಪೊಲೀಸರು ಇಂದು ಮುಂಜಾನೆ ಹೈತ್ಯೆಗೈದಿದ್ದಾರೆ.
ನಿನ್ನೆ ತಾನೇ ಮಧ್ಯಪ್ರದೇಶದಲ್ಲಿ ಶರಣಾಗಿದ್ದ ವಿಕಾಸ್ ದುಬೆಯನ್ನು ಅಲ್ಲಿಂದ ಉತ್ತರ ಪ್ರದೇಶಕ್ಕೆ ಕರೆತರುವಾಗ ಸಚೇಂದಿಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದಾಗ ಮಳೆಯ ಕಾರಣದಿಂದ ಕಾನ್ಪುರ ಬಳಿಯ ಸಚೇಂದಿಯಲ್ಲಿ ಕಾರು ಲಯ ತಪ್ಪಿತು. ಆ ಸಂದರ್ಭದಲ್ಲಿ ವಿಕಾಸ್ ದುಬೆ ಪೊಲೀಸ್ ಒಬ್ಬನಿಂದ ಬಂದೂಕು ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಆತನ ಮೇಲೆ ಗುಂಡಿಕ್ಕಿ ಕೊಲ್ಲಲಾಯಿತು ಎಂದು ವಿಶೇಷ ಕಾರ್ಯಪಡೆಯ ಪೊಲೀಸರು ತಿಳಿಸಿದ್ದಾರೆ.
“ಇಂದು ಅಪಘಾತದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ” ಎಂದು ಕಾನ್ಪುರದ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ಹೇಳಿದ್ದಾರೆ.
ನಿನ್ನೆಯ ವಿಕಾಸ್ ದುಬೆ ಬಂಧನವನ್ನು ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಜನ ಪೂರ್ವ ನಿರ್ಧರಿತ ಎಂದು ಟೀಕಿಸಿದ್ದರು. ಪೊಲೀಸರ, ರಾಜಕಾರಣಿಗಳ ಬೆಂಬಲದಿಂದಲೇ ವಿಕಾಸ್ ದುಬೆ ಇಷ್ಟು ಬೆಳೆಯಲು ಸಾಧ್ಯವಾಗಿದ್ದು ಎಂದು ಟೀಕಿಸಿದ್ದರು. ಇನ್ನು ಕೆಲವರು ದುಬೆ ಶರಣಾದರೂ ಸಹ ಅವನನ್ನು ಎನ್‌ಕೌಂಟರ್ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದರು. ಅದನ್ನು ಉತ್ತರ ಪ್ರದೇಶ ಪೊಲೀಸರು ಇಂದು ನಿಜ ಮಾಡಿದ್ದಾರೆ.
ಇಂದಿನ ಪೊಲೀಸ್ ಎನ್‌ಕೌಂಟರ್ ಅನ್ನು ಬಹಳಷ್ಟು ಜನ ಇದು ನೈಸರ್ಗಿಕವಾದುದ್ದಲ್ಲ ಬದಲಿಗೆ ಇದು ಕೂಡ ಪೂರ್ವ ನಿಯೋಜಿತವಾದುದು ಎಂದು ಆರೋಪಿಸಿದ್ದಾರೆ. ವಿಕಾಸ್ ದುಬೆ ಬದುಕಿದ್ದಲ್ಲಿ ವಿಚಾರಣೆ ವೇಳೆ ಆತನ ಕುಕೃತ್ಯಗಳಲ್ಲಿ ಭಾಗಿಯಾದ ಮತ್ತು ಆತನಿಗೆ ರಕ್ಷಣೆ ನೀಡಿದ ಪೊಲೀಸರ ಮತ್ತು ರಾಜಕಾರಣಿಗಳ ಹೆಸರು ಬಾಯಿ ಬಿಡುತ್ತಾನೆಂದು ಆತನನ್ನು ಪೊಲೀಸರು ಮುಗಿಸಿದ್ದಾರೆ ಎಂದು ನೆಟ್ಟಿಗರು ದೂರಿದ್ದಾರೆ.
ರಾಜಕೀಯ ಸಂಪರ್ಕಗಳಿರುವ ಕ್ರಿಮಿನಲ್ ಒಬ್ಬ ಸರ್ಕಾರಿ ವ್ಯವಸ್ಥೆಯ ಕೈಗೆ ಸೆರೆ ಸಿಕ್ಕರೆ ಜನ ತಕ್ಷಣವೇ “ಓ.. ಅವನು ಎನ್ಕೌಂಟರ್ ಆಗ್ತಾನೆ” ಅಂತ ಪ್ರತಿಕ್ರಿಯಿಸ್ತಾರೆ.
ಮರುದಿನ ಬೆಳಗ್ಗೆ ಅವನು ಎನ್ಕೌಂಟರ್‌ಗೆ ಈಡಾಗುತ್ತಾನೆ.
ಇದು ಸಿನಿಮಾವೂ ಅಲ್ಲ, ಆಫ್ರಿಕಾದ ಯಾವುದೋ ಕಾಡು ರಾಜ್ಯದ ಸುದ್ದಿಯೂ ಅಲ್ಲ. ನಮ್ಮದೇ ದೇಶದ ಸುದ್ದಿ…
ನಾಡಿಗಿಂತ ಕಾಡೇ ಹೆಚ್ಚು ನ್ಯಾಯಯುತ ಈಗ!
ಇಂತಹದೊಂದು ವ್ಯವಸ್ಥೆಯ ಭಾಗ ಆಗಿರುವುದಕ್ಕೆ ತಲೆತಗ್ಗಿಸೋಣ.
#ShameOnUs ಎಂದು ಹಿರಿಯ ಪತ್ರಕರ್ತ ರಾಜರಾಂ ತಲ್ಲೂರುರವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ
ಇದನ್ನೂ ಓದಿ: ವಿಕಾಸ್ ದುಬೆಯ ಬಂಧನ ಪೂರ್ವ ನಿರ್ಧರಿತ: ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪ


