ಇದು ಗಾಳಿ ಬೀಸುವ ಕಾಲ, ಬರ್ರೊ ಎಂದು ಬೀಸುವ ಗಾಳಿಯೂ ಕರೋನ ಸೋಂಕನ್ನು ಹೊತ್ತು ತರುತ್ತದೆಂದು ವಾಟಿಸ್ಸೆ ಹೇಳಿದಾಗಿನಿಂದ, ಹೆದರಿದ ಜುಮ್ಮಿ ಮನೆ ಬುಟ್ಟು ಈಚೆ ಬಂದಿರಲಿಲ್ಲ. ಆಗ ಆಗಮಿಸಿದ ಉಗ್ರಿ.
“ಸುಮಲತನಿಗೂ ಕರೋನ ಬಂದದಂತೆ ಕಣೆ” ಎಂದ.
“ಅಯ್ಯೊ ಶಿವನೇ ಅವುಳಿಗ್ಯಾಕೆ ಬತ್ತೂ.”
“ಪಾಪ ಅವಳು ಮನೆವಳಗಿಲ್ದೆಲೆ ಜನಗಳ ಜ್ವತೆ ಮಾತಾಡ್ಯವುಳೆ ಅದ್ಕೆ ಬಂದದೆ.”
“ನೀನು ಎಲ್ಲಿಂದ ಬಂದ್ಲ.”
“ಮನಿಂದ ಬಂದೆ.”
“ಅಂಗಾದ್ರೆ ವಳಿಕೆ ಬಾ, ಎಲ್ಲೆಲ್ಲೊ ನಾಯಿ ತಿರುಗಿದಂಗೆ ತಿರುಗಿದ್ರೆ ಇಲ್ಯಲ್ಲ ಬರದು ಬ್ಯಾಡ.”
“ಆ ಮಾತ ವಾಟಿಸ್ಸೆಗೇಳು.”
“ಯಾವ ಮಾತನಪ್ಪ” ಎನ್ನುತ್ತ ವಾಟಿಸ್ಸೆ ಬಂದ.
“ಇನ್ನ ಮುಂದೆ ಜುಮ್ಮಿ ಮನಿಗೆ ಬರಬೇಕಾದ್ರೆ, ನಿನ್ನ ಮನಿಂದ ಇಲ್ಲಿಗೆ ನೇರವಾಗಿ ಬರಬೇಕಂತೆ. ಅಲ್ಲಿ ಇಲ್ಲಿ ತಿರುಗಿದೊರಿಗೆ ನೊ ಎಂಟ್ರಿ.”
“ಲೇ ಉಗ್ರಿ, ನಾವು ಎಲ್ಯಾರ ತಿರುಗ್ಲಿ. ಆದ್ರೆ ಪೇಸ್‍ನ ಬಟ್ಟೆ ಮಕಾಡದಿಂದ ಕವರ್ ಮಾಡಿರಬೇಕು. ಯಾರತ್ರ ಮಾತಾಡಿದ್ರು ಟೆನ್ ಆರ್ ಪೈ ಪಿಟ್ ದೂರ ಮೆಂಟೇನ್ ಮಾಡಬೇಕು. ಕೈ ಕುಲುಕಬಾರ್ದು. ಎಷ್ಟೇ ಆತ್ಮೀಯರಾದ್ರು ತಬ್ಬಿಕಬಾರ್ದು, ನಿಸರ್ಗನೇ ತಂದಿರೊ ಅಸ್ಪೃಶ್ಯತೆನ ಚಾಚೂ ತಪ್ಪದೆ ಫಾಲೋ ಮಾಡಿದ್ರೆ ಎಲ್ಯಾರ ತಿರುಗಬಹುದು” ಎಂದ ವಾಟಿಸ್ಸೆ.
“ನಿನ್ನಂಗೆ ಮಾತಾಡಿ ಕೃಷ್ಣೇಗೌಡರ ಕತೆ ಏನಾಗ್ಯದೆ ಗೊತ್ತೆ.”
“ಏನಾಗ್ಯದೊ ವಾಟ್ಯಾಪನ್.”
“ವಸ ಇನ್ನೋವಾ ತಗಂಡಿದ್ನಲ್ಲಾ. ಅದ ಯಲ್ಲಾರಿಗೂ ತೋರಿಸಿಗಂಡು ಮಾತಾಡಿಸಿಗಂಡು ತಿರುಗುತಿದ್ದ. ಮನ್ನೆ ದಿನ ಮಂಡ್ಯಾಕ್ಕೂ ಹೋಗಿ ಬಂದನಂತೆ. ಅಷ್ಟೆ. ಅವುನ ಸಮೇತ ಮನಿ ಮಕ್ಕಳಿಗ್ಯಲ್ಲ ಕರೊನ ಹಟಗಾಯಿಸಿಕೊಂಡದೆ.”
“ಛೇ ಪಾಪ ಅಂಗಾಗಬಾರದಿತ್ತು.”
“ನೀನಂಗಂತಿ ಕೇಳಿದೊರ್ಯಲ್ಲ ನಗ್ತರಲ್ಲ ಯಾಕೆ.”
“ಕ್ಯಟ್ಟ ಮನುಸರಿಗೆ ಕರೋನ ಬಂದ್ರೆ ಜನಗಳು ಕ್ಯಟ್ಟ ಕುಶಿಯಿಂದ ನಗ್ತರೆ ಕಣೊ. ಆದ್ರೆ ಇವತ್ತು ಅವುನಿಗೆ ಬಂದಿದ್ದು ನಾಳೆ ನಮಿಗೂ ಬಂದೇ ಬತ್ತದೆ ಅದ್ಕೆ ಆಡಿಕಬಾರ್ದು.”
“ನಿಜ ಕಂಡ್ಳ ನೀನೇಳಿದ್ದು. ನೋಡು ಮದ್ಲು ಮಂಡೇವುಕೆ ಬತ್ತು. ಆಮ್ಯಾಲೆ ನಾಗಮಂಗಲಕ್ಕೆ ಬತ್ತು. ಈಗ ಬಿಂಡಗನೂಲೆ ಹೆಂಗಸಿಗೆ ಬಂದದೆ. ಅಂಗೆ ಇಲ್ಲಿಗೂ ಬರಬಹುದು” ಎಂದಳು ಜುಮ್ಮಿ.
“ಬಂದೆ ಬತ್ತದೆ ಕಣಕ್ಕ. ಯಾಕೆ ಅಂದ್ರೇ ಬೆಂಗಳೂರಲ್ಲಿದ್ರಲ್ಲ ನಮ್ಮ ಜನ ಅವುರ್ಯಲ್ಲ ಮನೆ ಖಾಲಿ ಮಾಡಿಕಂಡು ಊರು ಕಡಿಕೆ ವಂಟವುರೆ. ಅವುರೇನು ಸುಮ್ಮಸುಮ್ಮನೆ ಬಂದರೇ, ಕರೋನ ಹಿಡಕಂಡೇ ಬತ್ತರೆ.”
“ಅಂಗಾದ್ರೆ ಗತಿಯೇನ್ಲ.”
“ಗತಿಯೇನು ಇಲ್ಲ ಕಣಕ್ಕ. ನಿನ್ನ ವಲ್ದತ್ರ ಒಂದು ಗುಡ್ಳಾಯ್ಕಂಡಿರು.”
“ಆಗ ಪ್ಳೇಗು ಕಾಲರ ಬಂದಾಗ ಅಂಗೇ ಮಾಡಿದ್ರಂತೆ.”
“ಈಗ್ಲು ಅಂಗೆ ಮಾಡನ ತಗೊ.”
“ಊರು ಬುಟ್ಟು ಹ್ವರಗೋಗಿ ಗುಡ್ಳಾಯ್ಕಂಡ್ರೆ ಪ್ಲೇಗು ಬತ್ತಿರಲಿಲ್ಲ. ಕರೋನ ಅಂಗಲ್ಲ ಯಾರಿಂದ ಬತ್ತದೆ ಅಂತ ಹೇಳಕ್ಕಾಗದಿಲ್ಲ” ಎಂದ ವಾಟಿಸ್ಸೆ.
“ಪಾಪ ಕೃಷ್ಣೇಗೌಡನಿಗೆ ಬಂದಿರದು ಅಂಗೆ ಅಲವೆ. ಯಾರಿಂದ ಬತ್ತು ಅಂತ್ಲೆ ಗೊತ್ತಿಲ್ಲ” ಎಂದ ಉಗ್ರಿ.
“ಥೇಟ್ ಡಿ.ಕೆ.ಶಿವಕುಮಾರನಂಗವುನೆ ಕಣೊ ಅವುನು. ನೋಡಿದ್ರೆ ಅವಳಿಜವಳಿ ಅನ್ನಬೇಕು.”
“ಅಂತೂ ಡಿ.ಕೆ.ಶಿವಕುಮಾರ್ ಕಡಿಗೂ ಅಧ್ಯಕ್ಷಾದ ಬುಡತ್ತಗೆ.”
“ಅವುನು ವಳ್ಯೊನೇನ್ಲ” ಎಂದಳು.
“ವಳ್ಳೆಯವನು ಅಂದ್ರೆ ಯಾವ ತರನಕ್ಕ. ನಿನ್ನ ಗಂಡನಂಗಿರಬೇಕೊ, ನನ್ನಂಗಿರಬೇಕೊ ಇಲ್ಲ ಈ ಉಗ್ರಿ ತರ ಇರಬೇಕೊ ಯಾವ ತರ ಅಂತ ಹೇಳು.”
“ಬಡವುರಾಧಾರಿನೆ ಅಂತ ಕೇಳಿದೆ ಕಂಡ್ಳ.”
“ಬಡವುರಾಧಾರಿ ಅನ್ನದ್ರಲ್ಲಿ ಯರಡು ಮಾತಿಲ್ಲ ಕಣಕ್ಕ. ದಿವ್ಸ ಮನೆ ಹತ್ರಕ್ಕೆ ನೂರಾರು ಜನ ಬತ್ತರೆ. ಯಾಕೆ ಅಂದ್ರೆ ಯಾರೊ ನಿನ್ನಂಥವುಳಿಗೆ ಹೆರಿಗೆಯಾಗಬೇಕಿರುತ್ತೆ ದುಡ್ಡಿರದಿಲ್ಲ ಡಿ.ಕೆ.ಶಿ ಹುಡಿಕ್ಕಂಡು ಬತ್ತಳೆ.”
“ನನ್ನಂಥೊಳು ಅಂತ ಯಾಕಂತಿಲ ಮುಂಡೆ ಮಗನೆ.”
“ಪರೆಗ್‍ಜಾಂಪಲ್ಲು ಕಣಕ್ಕ ಸಿಟ್ಟಾಗಬ್ಯಾಡ. ಇನ್ನ ಯಂತ್ಯಂಥ ಜನ ಬತ್ತರೆ ಗೊತ್ತ. ಕ್ಯಾನ್ಸರ್ ಆದೊರು, ಆರಟಾಪರೇಶನ್ ಜನ, ತಿಥಿ ಮಾಡೋರು, ನಾಮಕರಣ ಮಾಡೋರು, ತಿರುಪ್ತಿಗೋಗರು, ಅಯ್ಯಪ್ಪ ಸ್ವಾಮಿ ಹುಡಿಕ್ಕಂಡೋಗವು ಹಿಂಗೆ ಈ ಸಮಾಜದ ಸಕಲಿಸ್ಟು ರೋಗನು ಡಿ.ಕೆ.ಶಿ ಮನೆತಕ್ಕೆ ಬತ್ತದೆ.”
“ಅವಿರುಗ್ಯಲ್ಲ ದುಡ್ಡು ಕೊಟ್ಟನೆ.”
“ಯಾರ್ನು ಬರಿಕೈಲಿ ಕಳಸದಿಲ್ಲ ಕಣಕ್ಕ. ನಾನೇ ನಿಂತುಗಂಡು ನೋಡಿದಂಗೆ ಲಕ್ಷಾಂತೃಪಾಯಿ ದಾನ ಮಾಡ್ತನೆ.”
“ಬೇಕಾದಷ್ಟು ಸಂಪಾದ್ನೆ ಮಾಡ್ಯವುನೆ ಕೊಡ್ತನೆ.”
“ಮಿಸ್ಟರ್ ಉಗ್ರಿ, ಸಂಪಾದ್ನೆ ಮಾಡಿದೊರ್ಯಲ್ಲ ದಾನ ಮಾಡಿದ್ರೆ ನಮ್ಮಂಥೊರು ಹಿಂಗಿರತಿರಲಿಲ್ಲ ಕಣೊ. ಡಿ.ಕೆ.ಶಿಗಿಂತ ಅವುನ ತಮ್ಮನಂತೂ ದಾನಸೂರ ಕರ್ಣ ಕಣೊ.”
“ಕರ್ಣ ಏನು ದುಡದಿದ್ನೆ ದುರ್ಯೋಧನ ಮಾಡಿ ಮಡಗಿದ್ದ ಅವುನು ಕೊಟ್ಟ ಅಂಗೆ ಇವುನುವೆ.”
“ನೋಡೊ ಉಗ್ರಿ, ಸಣ್ಣಮಾತ ಯಲ್ಲಾರು ವಿಷಯದಲ್ಲೂ ಮಾತಾಡಕ್ಕೆ ಬರದಿಲ್ಲ. ಈ ಡಿ.ಕೆ. ಬ್ರದರ್ಸೆ ಡಿಪರೆಂಟು ಕಣೊ, ಏನಪ್ಪ ಅಂದ್ರೆ ಇವುರು ಆಸ್ತಿ ಮಾಡಿಕಂಡು ಪವರಿಗೆ ಬತ್ತಾ ಅವುರೆ, ಆದ್ರಿಂದ ಆಸ್ತಿ ಮಾಡೊ ಅಗತ್ಯ ಇಲ್ಲ. ಅದೇ ಎಡೂರಪ್ಪ ಮುಖ್ಯಮಂತ್ರಿಯಾದೇಟಿಗೆ ಬರೀ ಆಸ್ತಿ ಮಾಡದ್ನೆ ಆಡಳತ ಅನ್ನಕಂಡಿದ್ದ. ಡಿ.ಕೆ.ಶಿ ಆಸ್ತಿ ಅದರಿಂದ್ಲೆ ತೊಂದ್ರೆ ಅನುಭವಿಸಿದೋನು. ನಮ್ಮ ಜನಾಂಗದಲ್ಲಿ ಕುಮಾರಣ್ಣನಿಗಿಂತ ವಳ್ಳೆ ಪರಸನ್ನು.”
“ಅದ್ಯಂಗೇಳತಿಯೋ.”
“ಯಂಗೇ ಅಂದ್ರೆ ಡಿ.ಕೆ.ಶಿ ಕಾಂಗ್ರೆಸ್ಸಿಂದ ಬಂದವುನು. ಅವುನು ಕಾಂಗ್ರೆಸ್ಸಿಗ. ಆ ಪಾರ್ಟಿ ಸಿದ್ಧಾಂತ ಮಾತಾಡ್ತನೆ. ಅದೇ ಕುಮಾರಣ್ಣ ಯಾವ ಪಾರ್ಟಿ ಅಂತ್ಲೂ ಹೇಳಕ್ಕ ಬರದಿಲ್ಲ. ಒಟ್ಟಿನಲ್ಲಿ ನಂಬಿಕೆಗೆ ಯೋಗ್ಯನಲ್ಲ ಅಂತ ಅವನಿಂದ ದೂರ ಹೋದೊರು ಹೇಳ್ತ ಅವುರೆ. ಆದ್ರೆ ಡಿ.ಕೆ.ಶಿ ಅಂಗಲ್ಲ ಏನಪ್ಪ ಅಂದ್ರೆ ಒಂದಿಷ್ಟು ರೌಡಿ ಇಮೇಜದೆ.”
“ಸದ್ದಿಕೆ ಅದುಬೇಕು ಕಣೊ. ಈ ಬಿಜೆಪಿಗಳ ಹೆದರಸಬೇಕಾದ್ರೆ ರೌಡಿ ಗಂಟ್ಳೇಬೇಕು ಅದ್ಕೆ ಹೆದರದವುರು.”
“ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು.”
“ಅವುನ್ನೊಂದು ಸತಿ ತೋರುಸ್ಲ.”
“ಹೋಗನಿರಕ್ಕ ಮನೆತಕ್ಕೆ ಹೋಗನ. ಯಸ್ಸೆಂ ಕೃಷ್ಣನ ಕಡಿಯೋರು ಅಂದ್ರೆ ಊಟ ಮಾಡ್ಸಿ ಕಳುಸ್ತನೆ.”
“ !?
- ಬಿ.ಚಂದ್ರೇಗೌಡ


