Homeಪುಸ್ತಕ ವಿಮರ್ಶೆJNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು: ರಾಷ್ಟ್ರೀಯವಾದ ಎಂದರೇನು?

JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು: ರಾಷ್ಟ್ರೀಯವಾದ ಎಂದರೇನು?

ಈಗ ನಾವು ಕಾಣುತ್ತಿರುವ ಹುಸಿ, ಧಾರ್ಮಿಕ ಹಿಂದುತ್ವ ರಾಷ್ಟ್ರೀಯವಾದ, ಚರಿತ್ರೆಯನ್ನು ಆಧರಿಸದೆ, ಹೇಗೆ ಕೇವಲ ಕಲ್ಪಿತ ಮಿಥಿಕಗಳಿಂದ ರೂಪಿಸಲ್ಪಟ್ಟಿವೆ.

- Advertisement -
- Advertisement -

ಇಂದು “ರಾಷ್ಟ್ರೀಯವಾದ” ಎನ್ನುವುದು ಒಂದು ಮಲಿನಗೊಂಡ ಪದವಾಗಿದೆ. ಪದದ ಜತೆ ಪರಿಕಲ್ಪನೆಯೂ ಮಲಿನಗೊಂಡಿದೆ. ವೈವಿಧ್ಯತೆಯುಳ್ಳ, ಬಹುರೂಪಿಯಾಗಿರುವ ಯಾವುದೇ ವಿಚಾರ ಅಥವಾ ಪರಿಕಲ್ಪನೆಯನ್ನು ಏಕರೂಪಕ್ಕೆ ಇಳಿಸಿ, ಅದರ ಸಂಕೀರ್ಣತೆಯನ್ನು ನಾಶಮಾಡಿದ ಕೂಡಲೇ ಅದು ಸೊರಗುತ್ತದೆ, ವಿಕೃತಗೊಳ್ಳುತ್ತದೆ ಮತ್ತು ಬೇರೆ ಯಾವುದೇ ಅರ್ಥವನ್ನು ಸಹಿಸದ ಸರ್ವಾಧಿಕಾರಿ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಬಹುರೂಪತ್ವ, ವೈವಿಧ್ಯತೆಗಳು ಪ್ರಜಾಪ್ರಭುತ್ವದ ಲಕ್ಷಣಗಳಾದರೆ, ಏಕರೂಪಿ ವ್ಯಾಖ್ಯಾನ ಸರ್ವಾಧಿಕಾರದ ಗುಣವಿಶೇಷವಾಗುವುದು ಹೀಗೆ.

2015-16ರಲ್ಲಿ ದೇಶದ ಪ್ರಮುಖ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯಾಯಿತು. ಅಲ್ಲಿನ ಶೈಕ್ಷಣಿಕ ಪರಿಸರವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಯಿತು. ಇದರಿಂದ ಇಡೀ ದೇಶಕ್ಕೆ ಒಂದು ಸಂದೇಶವನ್ನು ಕಳಿಸಿದ್ದೇವೆ ಎಂದು ಕೇಂದ್ರ ಪ್ರಭುತ್ವ ಮತ್ತು ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಸಂಘಪರಿವಾರಗಳು ಅಂದುಕೊಂಡವು. ಈ ದಾಳಿಗಳು ಯಾವ ಕಾರಣಕ್ಕೆ ನಡೆದವು ಎನ್ನುವುದನ್ನು ಇಲ್ಲಿ ಮತ್ತೆ ವಿವರಿಸಬೇಕಿಲ್ಲ.

ಈ ದಾಳಿಗಳ ಕೇಂದ್ರಬಿಂದುವಾಗಿದ್ದ ಜೆ.ಎನ್.ಯು ಅದಕ್ಕೆ ಸೊಪ್ಪು ಹಾಕದೆ, ಯಾವ ಸ್ಥಳದಲ್ಲಿ ರಾಜದ್ರೋಹದ ಕೂಗನ್ನು ಹಾಕಲಾಗಿದೆ ಎಂದು ಪ್ರಭುತ್ವ ಆಪಾದಿಸಿತ್ತೋ, ಅದೇ ನೆಲದಲ್ಲಿ “ಭಾರತ, ದೇಶ ಮತ್ತು ರಾಷ್ಟ್ರೀಯವಾದ” ಎನ್ನುವ ಶೀರ್ಷಿಕೆಯಡಿ, 2016ರ ಫೆಬ್ರವರಿ 17ರಿಂದ, ಮಾರ್ಚ್ 17ರವರೆಗೆ 24 ದಿನ ದೇಶದ ಹಲವು ಖ್ಯಾತನಾಮರಿಂದ ಬಹಿರಂಗ ಉಪನ್ಯಾಸಗಳನ್ನು ಏರ್ಪಡಿಸಿತು. ನಮ್ಮ ವಿವಿಗಳು ಸರ್ಕಾರದ ಅಡಿಯಾಳಲ್ಲ ಬದಲಿಗೆ ಭಿನ್ನಾಭಿಪ್ರಾಯಗಳನ್ನು ಎತ್ತಿಹಿಡಿಯುವ ಪ್ರಜಾತಾಂತ್ರಿಕ ಕೇಂದ್ರಗಳು ಎನ್ನುವುದನ್ನು ಸಮರ್ಥಿಸಿಕೊಂಡಿತು. ಆಗ ನೀಡಲಾದ 24 ಉಪನ್ಯಾಸಗಳಲ್ಲಿ, 13ರನ್ನು ನಮ್ಮ ಹೋರಾಟಗಾರ-ಚಿಂತಕರಲ್ಲೊಬ್ಬರಾದ ಬಿ.ಶ್ರೀಪಾದ ಭಟ್ ಅವರು ಕನ್ನಡಕ್ಕೆ ತಂದಿದ್ದು ಅದನ್ನು “JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು” ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ಇಲ್ಲಿನ ಉಪನ್ಯಾಸಗಳನ್ನು ಸ್ಥೂಲವಾಗಿ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಮೊದಲನೆಯದು ರಾಷ್ಟ್ರೀಯವಾದ ಕುರಿತ ಪರಿಕಲ್ಪನಾತ್ಮಕವಾದ ವಿವರಣೆ ಮತ್ತು ಸೈದ್ಧಾಂತಿಕ ವಿಶ್ಲೇಷಣೆಯನ್ನು ಒದಗಿಸುವಂಥವು. ವಿದ್ವಾಂಸರಾದ ರೋಮಿಲಾ ಥಾಪರ್, ಗೋಪಾಲಗುರು, ಅಚಿನ್ ವನೈಕ್, ಪ್ರಭಾತ್ ಪಟ್ನಾಯಕ್, ಜೈರಸ್ ಬಾನಾಜಿ ಅವರುಗಳ ಉಪನ್ಯಾಸಗಳು ಇಂಥವು. ರಾಷ್ಟ್ರೀಯವಾದದ ಪರಿಕಲ್ಪನೆಯನ್ನು ಅನೇಕ ಆಯಾಮಗಳಲ್ಲಿ ವಿವರಿಸುವುದು ಮತ್ತು ಅದು ಹಾದುಹೋಗಿರುವ ದಾರಿಯನ್ನು ಅನೇಕ ಹಿರಿಯರ ದರ್ಶನದ ಮೂಲಕ ಕಟ್ಟಿಕೊಡುವುದು ಎರಡನೆಯ ಗುಂಪಿಗೆ ಸೇರುವ ಉಪನ್ಯಾಸಗಳು.

ರಾಷ್ಟ್ರ-ರಾಷ್ಟ್ರೀಯವಾದ ಪರಿಕಲ್ಪನೆಗಳು ಆಧುನಿಕವಾದರೂ, ಅವು ತಮ್ಮ ಅಸ್ಮಿತೆಗಳಿಗಾಗಿ ಒಂದು ಮಹಾಸಂಪ್ರದಾಯವನ್ನು ಅವಲಂಬಿಸುತ್ತವೆ. ಹಾಗೂ ತಮ್ಮ ಉಳಿವು ಬೆಳವಣಿಗೆಗಳಿಗಾಗಿ ಭೌಗೋಳಿಕ ಗಡಿಯಷ್ಟೇ ಮುಖ್ಯವಾಗಿ ಸಾಂಸ್ಕೃತಿಕ ಗಡಿಗಳನ್ನೂ ಗುರುತಿಸಿಕೊಳ್ಳುತ್ತದೆ. ಇದು ಸರಳ ಆಯ್ಕೆಗಳಿಂದ ಕೂಡಿರುವುದಿಲ್ಲ. ಆದ್ದರಿಂದಲೇ, “ತಮ್ಮ ಚರಿತ್ರೆಗಳನ್ನು ತಪ್ಪಾಗಿ ಅರ್ಥೈಸುವುದರ ಮೂಲಕವೇ ರಾಷ್ಟ್ರವೊಂದು ಅಸ್ತಿತ್ವಕ್ಕೆ ಬರುತ್ತದೆ” ಎನ್ನುತ್ತಾನೆ ಫ್ರೆಂಚ್ ವಿದ್ವಾಂಸ ಅರ್ನೆಸ್ಟ್ ಗೆಲ್ನರ್. ಹೀಗೆ ಇತಿಹಾಸದ ಯಾವುದೋ ಒಂದು ಅಂಶಕ್ಕೆ ಮಾತ್ರ ‘ಅಧಿಕೃತ’ ಮನ್ನಣೆ ಸಿಕ್ಕು, ಇತರ ಅಂಶಗಳು (ಇತರೆ ಭಾಷೆಗಳು, ನಂಬಿಕೆ, ಆಚರಣೆ ಮತ್ತು ಸಿದ್ಧಾಂತಗಳು) ಹಿನ್ನೆಲೆಗೆ ಸರಿಯುತ್ತವೆ. ಅಂದರೆ ಬಹುಸಂಸ್ಕೃತಿ ಮತ್ತು ವೈವಿಧ್ಯತೆಗಳನ್ನು ನಿರಾಕರಿಸುವುದರ ಮೂಲಕ ಒಂದು ರಾಷ್ಟ್ರ ತನ್ನ ಅನನ್ಯತೆಯನ್ನು ಸ್ಥಾಪಿಸಲು ಹೆಣಗುತ್ತದೆ. ಇದು ಸಾಮಾನ್ಯವಾಗಿ ರಾಷ್ಟ್ರೀಯತೆಯ ಹುಟ್ಟು ಮತ್ತು ಬೆಳವಣಿಗೆಯ ಹಾದಿ. ಆದರೆ ಇದರಲ್ಲೂ ವ್ಯತ್ಯಾಸಗಳಿವೆ. ಉದಾಹರಣೆಗೆ ಪಶ್ಚಿಮದ ರಾಷ್ಟ್ರೀಯವಾದಕ್ಕೂ, ಭಾರತದಂಥ ವಸಾಹತುಶಾಹಿ ರಾಷ್ಟ್ರೀಯವಾದಕ್ಕೂ ಇರುವ ವಿಭಿನ್ನತೆಗಳ ಬಗ್ಗೆ ಮಾತನಾಡುತ್ತಾ, ಪ್ರಭಾತ ಪಟ್ನಾಯಕ್ ಯೂರೋ ರಾಷ್ಟ್ರೀಯವಾದವನ್ನು ಸಾಮ್ರಾಜ್ಯಶಾಹಿ ಹಿನ್ನೆಲೆ; ಜನರಿಗಿಂತಲೂ ದೇಶವನ್ನೇ ಉನ್ನತವೆಂಬ ಭಾವನೆ; ಬಂಡವಾಳದ ಕ್ರೋಢೀಕರಣ ಮತ್ತು ಒಂದು ಕಲ್ಪಿತ ಶತ್ರುವಿನ ಅಗತ್ಯದ ಮೂಲಕ ಕಟ್ಟಲಾಗಿದೆ ಎನ್ನುವುದನ್ನು ವಿವರಿಸುತ್ತಾರೆ. ಇದಕ್ಕೆ ಹೋಲಿಸಿದರೆ, ಮೂರನೇ ಜಗತ್ತಿನ ವಸಾಹತುಶಾಹಿ ವಿರೋಧಿ ರಾಷ್ಟ್ರೀಯವಾದ ಒಳಗೊಳ್ಳುವಿಕೆಯ, ಜನರ ಹಕ್ಕುಗಳನ್ನು ಮಾನ್ಯಮಾಡುವ, ಸಮಾನತೆ ಮತ್ತು ಪ್ರಜಾತಾಂತ್ರಿಕ ಗುಣಗಳಿಂದ ಕೂಡಿದ್ದು. ಉದಾಹರಣೆಗೆ ಭಾರತದ ರಾಷ್ಟ್ರೀಯವಾದ ಪರಂಪರೆಯ ಮುಂದುವರಿಕೆಯಲ್ಲ, ಅದನ್ನು ಮುರಿದು ಹೊಸದಾಗಿ ನಮ್ಮ ಸಮಾಜವನ್ನು ರಚಿಸಿಕೊಳ್ಳುವ ಆಶಯದಿಂದ ರೂಪಿತವಾದದ್ದು. ಆದರೆ, ಇಂದಿನ ಭಾರತೀಯ ರಾಷ್ಟ್ರೀಯವಾದ, ಇವುಗಳನ್ನೆಲ್ಲಾ ಹಿಂದಿಕ್ಕಿ ಯೂರೋಕೇಂದ್ರಿತ ರಾಷ್ಟ್ರೀಯವಾದದ ಗುಣಲಕ್ಷಣಗಳನ್ನು ಪಡೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ವೈಭವೀಕೃತ ರಾಷ್ಟ್ರೀಯವಾದದಲ್ಲಿ ಭಿನ್ನತೆ ಮತ್ತು ವಿರೋಧಗಳಿಗೆ ಅವಕಾಶವಿಲ್ಲ. ಇದುವೇ ಜೆ.ಎನ್.ಯು ಮೇಲಿನ ದಾಳಿಯ ಹಿನ್ನೆಲೆ.

ಇದನ್ನೇ ಇನ್ನಷ್ಟು ವಿಶದಪಡಿಸುತ್ತಾ, ನಮ್ಮ ಇಂದಿನ ರಾಷ್ಟ್ರೀಯವಾದ ವಸಾಹತುಶಾಹಿ ಚರಿತ್ರೆಯ ಫಲಿತಾಂಶ, ಎನ್ನುವ ರೋಮಿಲಾ ಥಾಪರ್ ಅವರು “ಎರಡು ರಾಷ್ಟ್ರ”, “ಆರ್ಯರ ದಾಳಿ”, ಹರಪ್ಪ ನಾಗರಿಕತೆಗೆ ಮುಂಚೆಯೇ ವೈದಿಕತೆ ಇತ್ತು ಎನ್ನುವ ವಿತಂಡವಾದ ಇತ್ಯಾದಿಗಳು ವಸಾಹತು ಬಳುವಳಿ ಎನ್ನುತ್ತಾರೆ. ಈಗ ನಾವು ಕಾಣುತ್ತಿರುವ ಹುಸಿ, ಧಾರ್ಮಿಕ ಹಿಂದುತ್ವ ರಾಷ್ಟ್ರೀಯವಾದ, ಚರಿತ್ರೆಯನ್ನು ಆಧರಿಸದೆ, ಹೇಗೆ ಕೇವಲ ಕಲ್ಪಿತ ಮಿಥಿಕಗಳಿಂದ ರೂಪಿಸಲ್ಪಟ್ಟಿವೆ ಎನ್ನುವುದನ್ನು ವಿವರಿಸುತ್ತಾರೆ. ರಾಷ್ಟ್ರೀಯವಾದಕ್ಕೆ ಇತಿಹಾಸ ಬೇಕು ನಿಜ; ಆದರೆ ಅದು ನಮ್ಮ ಬಹುಸಾಂಸ್ಕೃತಿಕ ವಿಭಿನ್ನ ಧಾರ್ಮಿಕತೆಯ (ಉದಾ: ಶ್ರಮಣ ತತ್ವ-ಪರಂಪರೆ) ಮೂಲಕ ರಚಿತವಾದ ವಿಶ್ವಸನೀಯ ಇತಿಹಾಸವಾಗಿರಬೇಕೆ ವಿನಃ, ಇವತ್ತಿನ ಅಗತ್ಯಕ್ಕೆ ತಕ್ಕಂತೆ ಹೆಣೆಯಲಾದ ಮತೀಯ ಇತಿಹಾಸವಾಗಬಾರದು. ತಮ್ಮದು ಶುದ್ಧ ಸ್ವದೇಶಿ ಎಂದು ಬೀಗುವ ಹಿಂದುತ್ವ ರಾಷ್ಟ್ರೀಯವಾದ ಆಳದಲ್ಲಿ ವಿದೇಶಿ ಪರಿಕಲ್ಪನೆ ಮತ್ತು ಸಿದ್ಧಾಂತಗಳಿಂದ ರೂಪಿತವಾಗಿದೆ ಎನ್ನುವ ವ್ಯಂಗ್ಯವನ್ನು ಅವರ ಉಪನ್ಯಾಸ ತೆರೆದಿಡುತ್ತದೆ.

ಇದೇ ಧಾಟಿಯಲ್ಲಿರುವ ಗೋಪಾಲಗುರು ಅವರ ಉಪನ್ಯಾಸ, ಒಂದು ಮುಖ್ಯವಾದ ಪ್ರಮೇಯವನ್ನು ಮುಂದಿಡುತ್ತದೆ. ಅದು ದೇಶದ, ಅಂದರೆ ಜನರ, ಕಾಳಜಿಗಿಂತಲೂ, ರಾಷ್ಟ್ರೀಯವಾದ ಮುಖ್ಯವಾಗಿಬಿಟ್ಟಿರುವ ಇಂದಿನ ವಿದ್ಯಮಾನ. ರಾಷ್ಟ್ರೀಯವಾದ, ದೇಶವನ್ನು ಮುಂದೊಯ್ಯಲು ಇರುವ ಒಂದು ಸಾಧನ ಮಾತ್ರವೇ ಹೊರತು ಅದೇ ಗುರಿಯಲ್ಲ ಎನ್ನುವ ಗೋಪಾಲ ಗುರು ಅವರು, ಹಾಗಾದಾಗ ಅದರ ಅಸ್ಮಿತೆಯ ಮಿಮಾಂಸೆಯೇ ಮುಖ್ಯವಾಗಿ, ಜ್ಞಾನ ಮೀಮಾಂಸೆ ಹಿನ್ನೆಲೆಗೆ ಸರಿಯುತ್ತದೆ ಎನ್ನುತ್ತಾರೆ. ಈಗಾಗಿರುವುದು ಅದೇ. ನಮ್ಮ ಬಾವುಟದಲ್ಲಿರುವ ಅಶೋಕ ಚಕ್ರವನ್ನು ಒಂದು ಸಂಕೇತದಂತೆ ಭಾವಿಸಿದರೆ, ಅದಕ್ಕೆ ಧಾರ್ಮಿಕ ಅರ್ಥವೂ ಇದೆ, ಒಂದು ಸಾಮಾಜಿಕ ಪರಿವರ್ತನೆಯ ಅರ್ಥವೂ ಇದೆ. ಆದರೆ ಇಂದು ಅದರ ಕ್ರಾಂತಿಕಾರಿ ಆಯಾಮ ಮಾಯವಾಗಿರುವುದು ಇಂದಿನ ದುರಂತಕ್ಕೆ ಕಾರಣ. ರಾಷ್ಟ್ರೀಯವಾದದ ಏಕಸ್ವಾಮ್ಯದಿಂದಾಗಿ ದೇಶದ ಪ್ರಗತಿಯ ಚಿಂತನೆ ಮುಳುವಾಗಿದೆ. ಹೀಗಾಗಿ ನಾವು ದೇಶ ಮತ್ತು ರಾಷ್ಟ್ರೀಯವಾದದ ಮೇಲಿನ ಹಕ್ಕುದಾರಿಕೆಯನ್ನು ಸ್ಥಾಪಿಸಬೇಕು ಎಂದು ಗೋಪಾಲಗುರು ಕರೆ ನೀಡಿದ್ದಾರೆ.

ಇದೇರೀತಿ, ಅಚನ್ ವನ್ಯಕ್ ಅವರು ರಾಷ್ಟ್ರೀಯವಾದ ಎಂದರೆ ಅದೊಂದು ತತ್ವವೇ ಅಥವಾ ಭಾವನೆಯೇ; ನಾಗರಿಕ-ಸಂಬಂಧಿತವೇ ಅಥವಾ ಜನಾಂಗೀಯ-ಸಂಬಂಧಿಯೇ; ಒಳಗೊಳ್ಳುವಿಕೆಯೋ ಅಥವಾ ಹೊರಗಿಡುವಿಕೆಯೋ ಎಂದು ಹಲವು ಪ್ರಶ್ನೆಗಳನ್ನು ಕೇಳುತ್ತಾ ಅದಕ್ಕೆ ತಕ್ಕ ಉತ್ತರಗಳನ್ನು ನಮ್ಮ ಮುಂದೆ ಇಡುತ್ತಾರೆ. ರಾಷ್ಟ್ರೀಯವಾದ ಯಾವುದೇ ದೇಶದ ಸಾಮಾಜಿಕ, ರಾಜಕೀಯ ಸಂರಚನೆಯಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಅದರ ಜತೆಗೇ ಹೊಸ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯೂ ಪೂರಕವಾಗಿದ್ದರೆ ಮಾತ್ರ ರಾಷ್ಟ್ರೀಯವಾದಕ್ಕೆ ಹೊಸ ಅರ್ಥಬರುತ್ತದೆ. ಆಗ ಮಾತ್ರ ಅದು ಸಾಮುದಾಯಿಕ, ಸಾಂಸ್ಕøತಿಕ ಸಮಾನತೆ, ವಿಭಿನ್ನತೆಯನ್ನು ಗೌರವಿಸುವ, ಸಹಿಸುವ ಮತ್ತು ಬೆಳೆಸುವ ಸಾಧನವಾಗುತ್ತದೆ. ಇಲ್ಲದಿದ್ದರೆ, ಈ ಹೊತ್ತಿನ ರಾಷ್ಟ್ರೀಯವಾದದ ಹಾಗೆ ಕೋಮುವಾದ, ಅಸಹಿಷ್ಣುತೆಗಳನ್ನು ತನ್ನ ಆಯುಧಗಳನ್ನಾಗಿ ಬಳಸಿಕೊಳ್ಳುತ್ತದೆ ಮತ್ತು ಫ್ಯಾಸಿಸ್ಟ್ ಆಳ್ವಿಕೆಗೆ ದಾರಿಮಾಡಿಕೊಡುತ್ತದೆ ಎನ್ನುವುದು ಅವರ ಸ್ಪಷ್ಟ ನಿಲುವು. ಈ ವಾದವನ್ನೇ ಮುಂದುವರೆಸುವ ಹಾಗೆ, ಜೈರಸ್ ಬಾನಾಜಿ ಅವರು ಫ್ಯಾಸಿಸಂನ ಮೂಲಾಧಾರವಾಗಿ ಪುರುಷಾಧಿಪತ್ಯ ಮತ್ತು ಸರ್ವಾಧಿಕಾರಿ ಕುಟುಂಬ ವ್ಯವಸ್ಥೆಯು ಕೆಲಸ ಮಾಡುವುದನ್ನು, ಅದು ನಂತರ ಪ್ರತಿಗಾಮಿ ಸಿದ್ಧಾಂತದ ಕಾರ್ಖಾನೆಯಾಗುವುದನ್ನು ವಿವರಿಸುತ್ತಾ ಒಂದು ಮುಖ್ಯವಾದ ವ್ಯಾಖ್ಯಾನವನ್ನು ಮುಂದಿಡುತ್ತಾರೆ. ಅದು ಫ್ರೆಂಚ್ ತತ್ವಜ್ಞಾನಿ ಸಾತ್ರ್ರೆ ಹೇಳುವ ‘ಸರಣಿ ಭಾಗಿತ್ವ’ ಎಂಬ ಪರಿಕಲ್ಪನೆ. ಇದನ್ನು ಸಾತ್ರ್ರೆ ದುಡಿಯುವ ವರ್ಗ ಯಾಕೆ ತಮ್ಮ ಹಿತಾಸಕ್ತಿಗೆ ವಿರೋಧವಾದ ಚಳವಳಿಗೆ ಸಮ್ಮತಿ ನೀಡುತ್ತದಲ್ಲದೆ, ಅದರಲ್ಲಿ ಯಾಕೆ ಭಾಗಿಯಾಗುತ್ತದೆ ಎನ್ನುವುದನ್ನು ವಿವರಿಸಲು ಬಳಸುತ್ತಾನೆ. ತಮ್ಮನ್ನೇ ಗುರಿಯಾಗಿಸುವ ಆಯುಧವನ್ನು ತಯಾರು ಮಾಡುವುದರಲ್ಲಿ ಜನ ಯಾಕೆ ಪಾಲುಗೊಳ್ಳುತ್ತಾರೆ ಎನ್ನುವುದನ್ನು ಕೇವಲ ಆರ್ಥಿಕತೆಯ ಮೂಲಕ ವಿಶ್ಲೇಷಣೆ ಮಾಡಲಾಗದು; ಅದಕ್ಕೆ, ಮನೋವೈಜ್ಞಾನಿಕ ವಿವರಣೆ ಅಗತ್ಯ. ಸಮಾಜದಲ್ಲಿ ಒಂದು ಸಂಘಟಿತವರ್ಗ ಅಥವಾ ಗುಂಪು ಇರುತ್ತದೆ. ಇದು ಅಸಂಘಟಿತ ಜನಸಮೂಹಕ್ಕೆ ಭಿನ್ನವಾದದ್ದು. ಮೊದಲನೆಯದರ ಸಮಷ್ಟಿ ಪ್ರತಿಫಲವೇ ಪ್ರಭುತ್ವವಾಗಿ ಹೊರಹೊಮ್ಮುತ್ತದೆ (ಸಂಘ ಪರಿವಾರದಿಂದ, ಇಂದಿನ ಪ್ರಭುತ್ವ ಮೂಡಿಬಂದಿರುವ ಹಾಗೆ). ಇದು ಅಸಂಘಟಿತ ಸಮೂಹದ ಮೇಲೆ ದಬ್ಬಾಳಿಕೆ ಹಾಗೂ ನಿಯಂತ್ರಣವನ್ನು ಹೇರುತ್ತದೆ; ಮತ್ತು ಅದರ ಮೂಲಕ ಒಂದು ಫ್ಯಾಸಿಸ್ಟ್ ಸರ್ಕಾರವನ್ನು ಸ್ಥಾಪಿಸಿಕೊಳ್ಳುತ್ತದೆ. ಮೇಲಿನ ಎಲ್ಲಾ ಉಪನ್ಯಾಸಗಳನ್ನು ಒಟ್ಟಿಗೇ ಓದಿಕೊಂಡಾಗ, ರಾಷ್ಟ್ರೀಯವಾದ ಕುರಿತ ಪರಿಕಲ್ಪನೆಗೆ ಇರುವ ವೈವಿಧ್ಯ ವ್ಯಾಖ್ಯಾನಗಳು, ಸಂಕೀರ್ಣವಾದ ಆಯಾಮಗಳ ಪರಿಚಯವಾಗುತ್ತದೆಯಲ್ಲದೆ, ಇವೆಲ್ಲವನ್ನೂ ನಿರಾಕರಿಸಿ ಹೇಗೆ ಹಿಂದುತ್ವ ರಾಷ್ಟ್ರೀಯವಾದ ತನ್ನ ಏಕಸ್ವಾಮ್ಯವನ್ನು ಹೇರಲು ಬಯಸುತ್ತದೆ ಮತ್ತು ಏಕೆ ಎನ್ನುವುದರ ಸ್ಪಷ್ಟಚಿತ್ರಣ ದೊರೆಯುತ್ತದೆ.

ಜೆ.ಎನ್.ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು
ಸಂ: ಜಾನಕಿ ನಾಯರ್, ರೋಹಿತ್ ಆಜಾದ್,
ಮೊಹಿಂದರ್ ಸಿಂಗ್, ಮಲ್ಲಾರಿಕಾ ಸಿನ್ಹಾ ರಾಯ್.
ಅನುವಾದ: ಶ್ರೀಪಾದ ಭಟ್
ಪ್ರಕಟಣೆ: ಕ್ರಿಯಾ ಮಾಧ್ಯಮ, 2020, ಬೆಂಗಳೂರು

ಈ ಉಪನ್ಯಾಸಗಳಿಗೆ ಹೋಲಿಸಿದರೆ, ಇನ್ನು ಮಿಕ್ಕವು ರಾಷ್ಟ್ರೀಯವಾದವನ್ನು ನಿರ್ದಿಷ್ಟ ದೃಷ್ಟಿಕೋನದಿಂದ ಪರಿಶೀಲಿಸುತ್ತವೆ. ಇದರಲ್ಲಿ ಮುಖ್ಯವಾದದ್ದು ರಾಷ್ಟ್ರೀಯವಾದಕ್ಕೂ ಪ್ರಾದೇಶಿಕತೆಗೂ ಇರುವ ಸಂಬಂಧ. ಇದನ್ನು ಕುರಿತು ಮಾತನಾಡುತ್ತಾ ಆರುಣಿಮಾ ಜಿ. ಅವರು ದೇಶವೊಂದರ ಅಸ್ಮಿತೆಯನ್ನು ಕಟ್ಟಿಕೊಳ್ಳುವಾಗ ಇರಬೇಕಾದ ವಿಚಕ್ಷಣತೆ ಹಾಗೂ ಎಚ್ಚರಿಕೆಯನ್ನು ಕುರಿತ ಪ್ರಶ್ನೆಗಳನ್ನು ಮುಂದಿಡುತ್ತಾರೆ.. ಉದಾಹರಣೆಗೆ ಭಾರತವನ್ನು, “ನಾವು, ಜನಗಳು…” ಎಂದು ಕರೆದಾಗ, “ಭಿನ್ನತೆಯಲ್ಲಿ ಏಕತೆ” ಎನ್ನುವಾಗ, ದೇಶಕ್ಕೂ, ಅದನ್ನು ರೂಪಿಸಿರುವ ಪ್ರದೇಶಕ್ಕೂ ಇರುವ ಸಂಬಂಧ ಗಟ್ಟಿಯಾದ ತಾತ್ವಿಕತೆಯ ಆಧಾರದ ಮೇಲೆ ರೂಪುಗೊಂಡಿರಬೇಕು. ದೇಶ ಪ್ರದೇಶವನ್ನು ನುಂಗಿ ಅದರ ಮೇಲೆ ಸವಾರಿ ಮಾಡಬಾರದು, ಅವೆರಡರ ನಡುವೆ ಕೇವಲ ಭಾವನಾತ್ಮಕ ಅಥವಾ ಸಂಘರ್ಷಾತ್ಮಕ ಸಂಬಂಧ ಇರಕೂಡದು; ಬದಲಿಗೆ ಅವು ಒಳಗೊಳ್ಳುವಿಕೆಯ, ವೈವಿಧ್ಯತೆಯ ಹಾಗೂ ಅಸ್ಮಿತೆಯ ಭಾಗವಾಗಿಸುವ ಧೋರಣೆಯ ಮೇಲೆ ಕಟ್ಟಲ್ಪಟ್ಟಿರಬೇಕು. ಉದಾಹರಣೆಗೆ ಭಾಷೆಯ ಪ್ರಶ್ನೆ. ಇದು ಒಂದು ರಾಜ್ಯದಿಂದ ಇನ್ನೊಂದಕ್ಕೆ ಭಿನ್ನವಾಗಿ ನಿರ್ವಚಿಸಲ್ಪಟ್ಟಿದೆ. ತಮಿಳುನಾಡಿನಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯದ ಕಲ್ಪನೆಯನ್ನು ಭಾಷೆಯ ಅಸ್ಮಿತೆ, ಜಾತಿ ನಿರ್ಮೂಲನೆಯ ನುಡಿಕಟ್ಟಿನಲ್ಲಿ ಮಾಡಲಾದರೆ, ಅದನ್ನು ಕೇರಳದಲ್ಲಿ ವರ್ಗ ಸಂಘರ್ಷ ಮತ್ತು ವರ್ಗಭೇದ ನಿರ್ಮೂಲನೆಯ ನುಡಿಕಟ್ಟಿನಲ್ಲಿ ನಿರ್ವಹಿಸಲಾಯಿತು. ತಮಿಳುನಾಡಿನಲ್ಲಿ ಹುಟ್ಟಿಕೊಂಡ ರಾಷ್ಟ್ರೀಯವಾದ, ಕೇವಲ ಭಾಷೆ ಅಸ್ಮಿತೆಯನ್ನು ಮಾತ್ರ ಮುಂದಿಡದೆ, ಹಿಂದಿ-ಹಿಂದೂ ವಿರೋಧಿಯಾಗಿ ಮೂಡಿಬಂತು ಎನ್ನುವ ತಮಿಳು ಲೇಖಕಿ ಮಂಗೈ, ತಮಿಳು ರಾಷ್ಟ್ರೀಯತೆಯ ಸಂಕೀರ್ಣತೆಯನ್ನು ಪೆರಿಯಾರರ ಸಿದ್ಧಾಂತಗಳ ಮೂಲಕ ವಿವರಿಸುತ್ತಾರೆ.

ಪ್ರಾದೇಶಿಕತೆಯ ವಿಚಾರವನ್ನೇ ಆಯೇಷಾ ಕಿದ್ವಾಯಿ ಅವರು ಮುಂದುವರೆಸುತ್ತಾ, ವೈವಿಧ್ಯಮಯ ಭಾಷಾ ಸಮುದಾಯಗಳು ನಿಧಾನಕ್ಕೆ ಕಣ್ಮರೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಭಾಷೆ ವೈವಿಧ್ಯತೆಯ ನಾಶವೆಂದರೆ, ಒಂದು ಸಮುದಾಯದ ಅಸ್ತಿತ್ವ ಅದೃಶ್ಯವಾಯಿತೆಂದೇ ಅರ್ಥ. ಇದು ದೇಸೀ ಜ್ಞಾನಕ್ಕೂ ಅನ್ವಯವಾಗುತ್ತದೆ. ಹೀಗಿರುವಾಗ ಒಳಗೊಳ್ಳುವ ರಾಷ್ಟ್ರೀಯವಾದವು ಪ್ರಾದೇಶಿಕ ಭಾಷೆ ಮತ್ತು ಜ್ಞಾನಗಳು ನಾಶವಾಗದ ಹಾಗೆ ತಡೆಯಬೇಕು, ಒಂದೇ ಭಾಷೆಯ ಅಧಿಪತ್ಯ ಇರಕೂಡದು. ಇದು ನಾಗರಿಕ ಹಕ್ಕುಗಳಿಗೆ ಕೂಡ ಸಂಬಂಧವುಳ್ಳದ್ದು. ಈ ವಿಚಾರವನ್ನು ಮುಂದುವರೆಸುತ್ತಾ, ಮೃದುಲಾ ಮುಖರ್ಜಿಯವರು, ನಾಗರಿಕ ಸ್ವಾತಂತ್ರ್ಯ ರಕ್ಷಣೆ ನಮ್ಮ ರಾಷ್ಟ್ರೀಯ ಚಳವಳಿಯ ಭಾಗವಾಗಿತ್ತು ಎನ್ನುವುದನ್ನು ನೆನಪಿಸುತ್ತಾ, ಇಂದಿನ ನವ-ರಾಷ್ಟ್ರೀಯವಾದ ಇದರ ಮುಂದುವರಿಕೆಯಾಗದೆ, ಸರ್ವಾಧಿಕಾರಿಯಾಗಲು ಹೊರಟಿದೆ ಎನ್ನುತ್ತಾರೆ. ಜಾತಿ/ವರ್ಣಗಳ ಅಸಮಾನತೆಯ ನಡುವೆಯೂ, ವಸಾಹತು ವಿರೋಧಿ ಕಥಾನಕವು ತನ್ನ ರಾಷ್ಟ್ರೀಯತೆಯನ್ನು ಕಟ್ಟಿಕೊಂಡಿದ್ದನ್ನು ವಿವರಿಸುತ್ತಾ ತನಿಕಾ ಸರ್ಕಾರ್ ಅವರು, ಗಾಂಧಿ ಮತ್ತು ಸಾವರ್ಕರ್ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಮಂಡಿಸುತ್ತಾರೆ. ಅಲ್ಲದೆ ಗಾಂಧಿ ಮಾರ್ಗದ ರಾಷ್ಟ್ರೀಯತೆಯ ಸಾಧನೆ ಮತ್ತು ಮಿತಿಗಳನ್ನು ಬಿಚ್ಚಿಡುತ್ತಾರೆ. ಅನೇಕ ವಿರೋಧಾಭಾಸಗಳ ನಡುವೆಯೂ, ಗಾಂಧಿ ಏಕತೆಯನ್ನು ಸಾಧಿಸಲು ಪ್ರಯತ್ನಿಸಿದ್ದು, ಅದಾಗದಾಗ ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ಧೈರ್ಯ ತೋರಿದ್ದು ನಮ್ಮ ರಾಷ್ಟ್ರೀಯತೆ ಮುಖ್ಯ ಘಟ್ಟಗಳಲ್ಲಿ ಒಂದು ಎನ್ನುವುದು ಅವರ ಅಭಿಪ್ರಾಯ.

ಗಾಂಧಿ ಹಾಗೆ ಟ್ಯಾಗೋರರು ಕೂಡ ರಾಷ್ಟ್ರೀಯತೆಯ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದರು. ಗಾಂಧಿಯವರ ಸ್ವದೇಶಿಯನ್ನು ಒಪ್ಪಿಕೊಂಡರೂ, ಚರಕದ ಬಗ್ಗೆ ಟ್ಯಾಗೋರ್ ಭಿನ್ನಾಭಿಪ್ರಾಯ ಹೊಂದಿದ್ದರು. ಉಗ್ರ ರಾಷ್ಟ್ರೀಯತೆ ಶುದ್ಧ ಅವಿವೇಕ ಮತ್ತು ವಿನಾಶಕ್ಕೆ ಕಾರಣ ಎನ್ನುವುದು ಟ್ಯಾಗೋರರ ನಿಲುವು. ಅಲ್ಲದೆ, ಪ್ರತಿ ದೇಶವೂ ತನ್ನದೇ ವಿಶಿಷ್ಟವಾದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಟ್ಯಾಗೋರರ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ, ರಣಬೀರ ಚಕ್ರವರ್ತಿಯವರು ಅವರ ವಿಶ್ವಭಾರತಿ ಪರಿಕಲ್ಪನೆಯನ್ನು ಇಟ್ಟುಕೊಂಡು ಟ್ಯಾಗೋರರ ರಾಷ್ಟ್ರೀಯತೆಯನ್ನು ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ, ಈ ಉಪನ್ಯಾಸಗಳು ರಾಷ್ಟ್ರೀಯವಾದ ಕುರಿತಂತೆ ಗಾಂಧಿ ಮತ್ತು ಟ್ಯಾಗೋರ್ ನಡುವೆ ಇದ್ದ ವ್ಯತ್ಯಾಸಗಳು ಮತ್ತು ಅವುಗಳ ಪ್ರಸ್ತುತತೆ ಕುರಿತು ಚಿಂತನೆ ನಡೆಸುತ್ತವೆ.

ಬದರೀನಾರಾಯಣ ಅವರ “ರಾಷ್ಟ್ರೀಯವಾದದ ಕಲ್ಪನೆ: ನೆನಪು, ಪುರಾಣ ಮತ್ತು ಉಗ್ರ ಹಿಂದುತ್ವ” ತನ್ನ ವಿಷಯಮಂಡನೆ ಮತ್ತು ನಿರೂಪಣಾ ಶೈಲಿಯಲ್ಲಿ ಭಿನ್ನವಾಗಿರುವ ಉಪನ್ಯಾಸ. ದಲಿತರ ದೃಷ್ಟಿಯಲ್ಲಿ ರಾಷ್ಟ್ರೀಯವಾದ ಹೇಗೆ ಕಾಣಬಹುದು ಎನ್ನುವುದರ ಬಗ್ಗೆ ಇಲ್ಲಿ ಅವರ ಚಿಂತನೆ ನಡೆದಿದೆ. ಹಿಂದುತ್ವ ರಾಷ್ಟ್ರೀಯವಾದ ಹೇಗೆ ದಲಿತರನ್ನು ಬಲಿಪಶುಗಳನ್ನಾಗಿಸಿದೆ ಮತ್ತು ಕೋಮುವಾದಿಗಳ ಕೈಯಾಳುಗಳನ್ನಾಗಿ ದುಡಿಸಿಕೊಳ್ಳಲಾಗಿದೆ ಎನ್ನುವುದನ್ನು ಅನೇಕ ದಲಿತ ಕಥನ ಮತ್ತು ವೃತ್ತಾಂತಗಳ ಮೂಲಕ ತೋರಿಸಿಕೊಡುತ್ತಾರೆ. ಹಾಗೆಯೇ ಮತೀಯಗೊಂಡ ದಲಿತ ಜನಪದವನ್ನು ಲಖನೌ ಕುರಿತ ಐತಿಹ್ಯದ ಮೂಲಕ ವಿಮರ್ಶೆಗೆ ಒಳಪಡಿಸುತ್ತರೆ. ‘ಲಾಕನ್ ಪಾಸಿ’ ಎನ್ನುವ ಹೆಸರಿನ ಮೇಲೆ ರೂಪುಗೊಂಡ ಲಖನೌ, ಇಂದು ಸಂಘಪರಿವಾರದ ರಾಜಕೀಯದ ಪರಿಣಾಮವಾಗಿ ‘ರಾಜ ಲಕ್ಷಣ’ನ ಊರೆಂದು ಬಿಂಬಿಸಲಾಗಿದೆ. ಈ ದೇಶದ ನೆಲಸಂಸ್ಕೃತಿಗಳು ಇಂದಿನ ಕೋಮುವಾದಿ ರಾಜಕಾರಣಕ್ಕೆ ಸಿಲುಕಿ ನಲುಗುತ್ತಿರುವುದನ್ನು, ದ್ವೇಷ ರಾಜಕೀಯಕ್ಕೆ ಅನಿವಾಸಿ ಹಣ ಬಳಕೆಯಾಗುತ್ತಿರುವ ಅತ್ಯಂತ ಆತಂಕದ ವಿಚಾರವನ್ನು ಇಲ್ಲಿ ಮಂಡಿಸಲಾಗಿದೆ.

ಒಟ್ಟಿನಲ್ಲಿ, ಈ ಉಪನ್ಯಾಸಗಳು ರಾಷ್ಟ್ರೀಯವಾದವನ್ನು ಅದರ ಹಲವು ವಿನ್ಯಾಸ ಮತ್ತು ಸಂಕೀರ್ಣತೆಗಳಲ್ಲಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆಯಷ್ಟೇ ಅಲ್ಲದೆ, ಅದರ ಅಗತ್ಯವನ್ನು ಮತ್ತೆ ಮತ್ತೆ ಒತ್ತಿಹೇಳುತ್ತವೆ. ಹಿಂದುತ್ವ ಫ್ಯಾಸಿಸಂನಿಂದ ಅಪಾಯಕ್ಕೆ ಒಳಗಾಗಿರುವ ನಮ್ಮ ದೇಶವನ್ನು ಮತ್ತೆ ಪ್ರಜಾತಾಂತ್ರಿಕ ಹಳಿಗಳ ಮೇಲೆ ಕೂರಿಸಲು, ಪ್ರೀತಿ ಮತ್ತು ಒಳಗೊಳ್ಳುವಿಕೆಯ ಆಧಾರದ ಮೇಲೆ ಹೊಸ, ವಿಶಾಲವಾದ ಮತ್ತು ಅನನ್ಯವಾದ ರಾಷ್ಟ್ರೀಯವಾದಕ್ಕೆ ಬೇಕಾದ ವೈಚಾರಿಕ ತಳಹದಿಯನ್ನು ಈ ಪುಸ್ತಕ ಒದಗಿಸುತ್ತದೆ.

ರಾಷ್ಟ್ರೀಯವಾದದ ಸುತ್ತ ಬೆಳೆದಿರುವ ಕ್ಲಿಷ್ಟಕರ ಪರಿಕಲ್ಪನೆಗಳನ್ನೂ, ಅಮೂರ್ತ ಸೈದ್ಧಾಂತಿಕ ವಿಚಾರಗಳನ್ನೂ ಅತ್ಯಂತ ಸರಳವಾಗಿ ಕನ್ನಡಿಗರಿಗೆ ಶ್ರಮವಹಿಸಿ ಅನುವಾದಿಸಿ ಕೊಟ್ಟಿರುವ ಶ್ರೀಪಾದ ಭಟ್ಟರಿಗೆ ನಮ್ಮ ಕೃತಜ್ಞತೆಗಳು.

  • ಪ್ರೊ.ವಿ.ಎಸ್ ಶ್ರೀಧರ್

ಇದನ್ನು ಓದಿ: ಕೀಲಾರ ಟೆಂಟ್ ಹೌಸ್-2: ಟೇಸ್ಟ್ ಆಫ್‌ ಚೆರ್ರಿ: ನೋವು –ವಿಷಾದಗಳ ಶೋಧದ ಜೊತೆಗೆ ಉದುರಿದ ಚೆರ್ರಿ ಹಣ್ಣುಗಳ ರುಚಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...