Homeಮುಖಪುಟಕೀಲಾರ ಟೆಂಟ್ ಹೌಸ್-2: ಟೇಸ್ಟ್ ಆಫ್‌ ಚೆರ್ರಿ: ಸಾವು, ನೋವು, ವಿಷಾದಗಳ ಶೋಧದ ಜೊತೆಗೆ ಉದುರಿದ...

ಕೀಲಾರ ಟೆಂಟ್ ಹೌಸ್-2: ಟೇಸ್ಟ್ ಆಫ್‌ ಚೆರ್ರಿ: ಸಾವು, ನೋವು, ವಿಷಾದಗಳ ಶೋಧದ ಜೊತೆಗೆ ಉದುರಿದ ಚೆರ್ರಿ ಹಣ್ಣುಗಳ ರುಚಿ

ಟೇಸ್ಟ್ ಆಫ್‌ ಚೆರ್ರಿ ಸಿನಿಮಾದ ದೃಶ್ಯಗಳ ಕಲಾವಂತಿಕೆಯನ್ನು ಅಕ್ಷರಗಳಲ್ಲಿ ಹಿಡಿಯೋದು ತುಂಬಾ ಕ್ಲೀಷೆ ಅನಿಸಿಬಿಡುತ್ತೆ. ಕೀರೊಸ್ತಮಿ ಸಿನಿಮಾಗಳನ್ನು ನೋಡುವುದು ಒಂದು ಅನುಭವ, ಅನುಭವಿಸಿಯೇ ತೀರಬೇಕು.

- Advertisement -
- Advertisement -

“When we tell a story, we tell but one story, and

each member of the audience, with a peculiar

capacity to imaging things, hears but one story.

But we say nothing, it’s as if we said a great number

of things.,, It’s necessary to envision an unfinished

and incomplete cinema so that the spectator

can intervene and fill the void, the lacks”

 – Abbas Kiarostami

ಅಬ್ಬಾಸ್ ಕಿಯರೋಸ್ತಮಿಯ ಈ ಮೇಲಿನ ಅಭಿಪ್ರಾಯಕ್ಕೆ ಆಸ್ಟ್ರಿಯಾದ ‘ಮೈಕಲ್ ಹನೆಕೆ’ ಮತ್ತು ಅಮೆರಿಕಾದ ಟೊರೆಂಟಿನೊ ಅಭಿಪ್ರಾಯಗಳು ಸಾಮ್ಯತೆಯಿದೆ. ಅಬ್ಬಾಸ್‌ನದೇ 2008ರ ಚಲನಚಿತ್ರ ‘ಶಿರಿನ್’ (Shirin). ಚಿತ್ರಮಂದಿರ ಒಂದರಲ್ಲಿ ಸಿನಿಮಾವೀಕ್ಷಣೆ ಮಾಡುತ್ತಿರುವ ಹಲವು ಮಹಿಳೆಯರು ಅದರ ಕಥೆಯನ್ನುತಮ್ಮದೇ ಬದುಕಿನ ಕಥೆಗಳೊಂದಿಗೆ ಕಲ್ಪಿಸಿಕೊಂಡು, ವ್ಯಕ್ತಪಡಿಸುವ ಭಾವನೆಗಳನ್ನು ತೋರಿಸುವುದಷ್ಟೆ`ಶಿರಿನ್’ ಸಿನಮಾದ ವಸ್ತು. ಒಂದು ಸಿನಿಮಾವನ್ನು ಎಷ್ಟು ಜನರು ನೋಡುತ್ತಾರೊ ಅಷ್ಟು ನೋಟಗಳು ಮತ್ತು ಅಭಿಪ್ರಾಯಗಳು ಆ ಸಿನಿಮಾದಾಗುತ್ತದೆ.

ಅಬ್ಬಾಸ್‌ ಕಿಯರೋಸ್ತಮಿಯ ಸಿನಿಮಾಗಳ ಬಗ್ಗೆ ಒಂದು ಮಾತಿದೆ. ಇವನ ಸಿನಿಮಾ `ಕಲ್ಪನೆ ಮತ್ತು ವಾಸ್ತವ’ಗಳನ್ನ ಬೇರ್ಪಡಿಸಲಾರದಷ್ಟುಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಪೂರ್ಣ ಡಾಕ್ಯೂಮೆಂಟರಿಯೂ ಅಲ್ಲದ, ಪೂರ್ಣ ಫಿಕ್ಷನ್ನೂ ಅಲ್ಲದ ನರೇಟಿವ್ ಶೈಲಿ ಬೆರಗುಗೊಳಿಸುವಂತಹದ್ದು.

ಟೇಸ್ಟ್ ಆಫ್‌ ಚರ್ರಿ| Taste of Cherry (1997, Iran)

‘I am afraid of heights as I have fallen from height

I’m afraid of fire as I have been burnt many times

I’m afraid of separation as I as I have suffered it many times

But I’m not afraid of death; as I have never died, even once’

Abbas Kiarostami । (Translated by Parivash Niazzadeh)

ಮಧ್ಯವಯಸ್ಸಿನ `ಬಾದಿ’ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ನಿಗಧಿಯಾಗಿರುವ ಸ್ಥಳ ಚರ್ರಿ ಮರದ ಬುಡದಲ್ಲಿರುವ ಒಂದು ಗುಂಡಿ. ಆತ್ಮಹತ್ಯೆಯ ನಂತರ ತನ್ನ ಸಾವನ್ನು ಖಚಿತಪಡಿಸಿಕೊಂಡು ಮೃತದೇಹದ ಮೇಲೆ ಒಂದು ಹಿಡಿ ಮಣ್ಣು ಹಾಕುವುದಕ್ಕೆ ಬಾದಿಗೆ ಒಬ್ಬನ ಅಗತ್ಯವಿದೆ. ಈ ಸಲುವಾಗಿ ಬೇಸಿಗೆಯ ಒಂದು ದಿನ ತನ್ನ ಕಾರಿನಲ್ಲಿ ಟೆಹರಾನ್ ನಗರ ಮತ್ತು ಅದಕ್ಕೆ ಹೊಂದಿಕೊಂಡಿರುವ ವಿಶಾಲವಾದ ಎತ್ತರದ ಬಯಲು ಪ್ರದೇಶದಲ್ಲಿ ಸುತ್ತುತ್ತಿದ್ದಾನೆ. ಒಬ್ಬರ ನಿರಾಕರಣೆಯ ನಂತರ ಮತ್ತೊಬ್ಬರಂತೆ ಒಟ್ಟು ಮೂರು ಭಿನ್ನ ವ್ಯಕ್ತಿಗಳೊಂದಿಗಿನ ಸಂಭಾಷಣೆಯೇ ಸಿನಿಮಾ.

ಇಡೀ ಸಿನಿಮಾ ಬರೆ ಸಂಭಾಷಣೆಯೇ ಆಗಿರುವುದಾದರೆ, ದೃಶ್ಯ ಎಂಬ ಕಲಾ ಪ್ರಕಾರ ಏಕೆ ಬೇಕಿತ್ತು? ನಾಟಕ, ಕಥೆ ಅಥವಾ ಕಾದಂಬರಿ ಬರೆಯಬಹುದಿತ್ತಲ್ವಾ? ಈ ಪ್ರಶ್ನೆ ಏಳುವುದು ಸಹಜ. ಅಬ್ಬಾಸ್‌ನ ಸಿನಿಮಾದಲ್ಲಿ ಮಾತು ಮತ್ತು ದೃಶ್ಯಗಳ ಸಂಯೋಜನೆ ವಿಶಿಷ್ಟವಾದದ್ದು. ಇವನು ದೃಶ್ಯಗಳನ್ನು ಕಟ್ಟುವ ಮಾಂತ್ರಿಕನಿರಬಹುದಾ ಎನಿಸುವಷ್ಟು ಸೋಜಿಗವಾಗುತ್ತದೆ. ಒಬ್ಬ ಅದ್ಭುತ ಚಿತ್ರಕಲಾವಿದನ ಬಿಡಿ ಬಿಡಿ ಚಿತ್ರಗಳು ರಸ್ತೆಯಲ್ಲಿ ಚಲಿಸುತ್ತಿವೆಯೇನೋ ಅನಿಸುವಷ್ಟು, ಪರದೆ ಮೇಲಿನ ಪ್ರೇಕ್ಷಕನ ದೃಷ್ಟಿಯನ್ನು ಕ್ಷಣ ಮಾತ್ರವು ಬೇರೆಕಡೆ ಆಯದಂತೆ, ಏಕಾಗ್ರಗೊಳಿಸಿಬಿಡುತ್ತವೆ.

ನಾನು ನೋಡಿರುವ ಕಿಯರೋಸ್ತಮಿಯ Certified Copy (2010) ಹೊರತುಪಡಿಸಿ ಬಹುತೇಕ ಎಲ್ಲಾ ಸಿನಿಮಾಗಳು ಇರಾನಿನ ಜನ ಸಾಮಾನ್ಯರ ಬದುಕಿನ ಬವಣೆ ಮತ್ತು ಸಂಘರ್ಷಗಳನ್ನ ಚರ್ಚಿಸುವಂತಹವು. ದೇಶ, ಧರ್ಮ, ಸಮುದಾಯ ಇವುಗಳ ಹಿನ್ನಲೆಯಲ್ಲಿ, ಸಾಮಾನ್ಯನೊಬ್ಬನ ಖಾಸಗಿ ಮೌಲ್ಯಗಳು, ಸರಿ-ತಪ್ಪು, ನೈತಿಕ-ಅನೈತಿಕ, ಬದುಕು-ಸಾವು ಕುರಿತ ಜಿಜ್ಞಾಸೆಯಂತಹ ಸಂಗತಿಗಳನ್ನು ಮನುಷ್ಯನ ಆಳದಲ್ಲಿರುವ ಅಂತಃಕರಣದ ಮೂಲಕ ತನ್ನಅಭೂತಪೂರ್ವ ದೃಶ್ಯಕಟ್ಟುವಿಕೆಯ ಪ್ರತಿಭೆಯಿಂದ ಪ್ರಸ್ತುತಪಡಿಸುತ್ತಾನೆ.

ಪ್ರೊಟೊಗಾನಿಸ್ಟ್ `ಬಾದಿ’, ತನ್ನಆತ್ಮಹತ್ಯೆಯ ನಂತರ ಮಣ್ಣು ಮುಚ್ಚವ ಸಹಾಯಕ್ಕಾಗಿ, ಒಬ್ಬರ ನಿರಾಕರಣೆಯ ನಂತರ ಮತ್ತೊಬ್ಬರನ್ನು ಸಂಧಿಸಿಸುವ ಮೂರು ಪಾತ್ರಗಳ ಪ್ರದೇಶ, ವೃತ್ತಿ, ವಯಸ್ಸು ಹಿನ್ನಲೆಯಿಂದ ಭಿನ್ನವಾದಂತಹವು. ಮೊದಲನೆಯವನು ಕುರ್ದಿಷ್ ಮೂಲದವನು. ಜೀವನೋಪಯಕ್ಕಾಗಿ ಸೈನಿಕನಾಗಿರುವ ಯುವಕ. ಎರಡನೇಯವನು ಅಫ್ಘನ್. ಯುದ್ಧದಿಂದ ಬೇಸತ್ತು, ಬದುಕು ಅರಸಿ ಇರಾನ್‌ಗೆ ಬಂದಿದ್ದಾನೆ. ಧರ್ಮ ಬೋಧನೆಯ ಶಾಲೆಯಲ್ಲಿಕಲಿಯುತ್ತಿದ್ದಾನೆ. ಮೂರನೇ ವ್ಯಕ್ತಿ ಟರ್ಕಿಯವನು. ಟೆಹರಾನ್‌ನ ಮ್ಯೂಸಿಯಂ ಒಂದರಲ್ಲಿ ಮೃತ ಪ್ರಾಣಿಗಳ ಚರ್ಮವನ್ನು ಸಂಸ್ಕರಿಸುವವ (Taxidermist) ಕೆಲಸ ಮಾಡುವವನು.

ಬಾದಿ ಅಷ್ಟು ದೊಡ್ಡ ಮೊತ್ತದ ಆಮಿಷ ನೀಡಿದರೂ, ಅವನ ಪ್ರಸ್ತಾವನೆಯನ್ನು ಮೊದಲು ಭೇಟಿಯಾಗುವ ಯುವಕ ನಿರಾಕರಿಸಲು ಅವನಲ್ಲಿರುವ ನೈತಿಕ ಪ್ರಜ್ಞೆ ಅಥವಾ ಭಯ ಕಾರಣವಿರಬಹುದು. ಇನ್ನೂ, ನಡುವಯಸ್ಸಿನ ಧರ್ಮ ಬೋಧಕ `ಆತ್ಮಹತ್ಯೆ ಧರ್ಮಕ್ಕೆ ವಿರೋಧವಾದದ್ದು’ ಎಂದು ಹೇಳಿ ಬಾದಿಯ ಆತ್ಮಹತ್ಯೆ ಯೋಜನೆಯನ್ನು ವಿರೋಧಿಸುತ್ತಾನೆ. ಮೂರನೆಯವ್ಯಕ್ತಿ ವೃದ್ಧನ ಪಾತ್ರ, ಪ್ರೇಕ್ಷಕನ ಎದುರು ಮೂಡುವಷ್ಟರಲ್ಲಿ‘ಬಾದಿ’ಯ ಪ್ರಸ್ತಾವನೆಯನ್ನು ಸ್ವೀಕರಿಸಿರುತ್ತಾನೆ. ವೃದ್ಧ ಹೇಳುವ ಮೊದಲ ಮಾತು `ಅಂತರಾಳದಿಂದ ಸಹಾಯ ಮಾಡುವವನೇ ಒಬ್ಬ ನಿಜವಾದ ಸ್ನೇಹಿತ’. ಪ್ರಾರಂಭದಲ್ಲಿ ವೃದ್ಧ ಹಣದ ಸಲುವಾಗಿ (ಇವನಿಗೆ ಅನಾರೋಗ್ಯಕ್ಕೆ ತುತ್ತಾಗಿರುವ ಒಬ್ಬ ಮಗನಿರುತ್ತಾನೆ) ಸಮ್ಮತಿಸಿರಬಹುದೆಂಬ ಸಣ್ಣ ಅನುಮಾನ ಶುರುವಾಗುತ್ತಾದರೂ, ಮುಂದೆ ಅದು ಮರುಕಳಿಸುವುದಿಲ್ಲ.

ವೃದ್ಧ ಮತ್ತು ಬಾದಿಯ ನಡುವಿನ ಸಂಭಾಷಣೆಯೇ ಸಿನಿಮಾದ ನಿರ್ಣಾಯಕ ಘಟ್ಟ. ಪ್ರೇಕ್ಷಕ, ಬಾದಿಯ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಏನಿರಬಹುದು ಎಂದು ಯೋಚಿಸುತ್ತಿರುವಾಗಲೇ, ಬದುಕಿನ ಸಾಧ್ಯತೆಗಳ ಬಗ್ಗೆ ತನ್ನದೇ ಅನುಭವಗಳನ್ನ ವೃದ್ಧ ಹೇಳುತ್ತಾ ಹೋಗುತ್ತಾನೆ. ಕಾರು ಓಡಿಸುತ್ತಿದ್ದ ಬಾದಿ ಸ್ವಲ್ಪ ದೂರ ಕ್ರಮಿಸಿದ ನಂತರ ‘ಈ ದಾರಿ ನನಗೆ ಪರಿಚಯ ಇಲ್ಲ’ ಎಂದು ಹೇಳಿದಾಗ, ವೃದ್ಧ ‘ಈ ರಸ್ತೆಯಲ್ಲಿ ಹೋಗೋಣ ಬಹಳ ಚನ್ನಾಗಿದೆ’ ಎಂದು ಹೇಳುತ್ತಾನೆ. ವಿಶಾಲವಾದ ಬಟಾಬಯಲು, ಧೂಳು, ಗುಡ್ಡ, ತಿರುವುಗಳು ಎಲ್ಲವನ್ನು ನೋಡಿದ ನಂತರ, ವೃದ್ಧ ತೋರಿದ ದಾರಿಯಲ್ಲಿ ಮಾತ್ರ ಉದ್ದಕ್ಕೂ ರಸ್ತೆಯ ಇಕ್ಕೆಲುಗಳಲ್ಲಿ ಬಣ್ಣ ಬಣ್ಣದ ಎಲೆಗಳಿಂದ ಕಂಗೊಳಿಸುತ್ತಿರುವ ಸುಂದರವಾದ ಮರಗಳ ಸಾಲುಗಳಿವೆ. ಈ ದಾರಿ ವೃದ್ಧನಾಡುವ ಮಾತುಗಳಿಗೆ ಮುನ್ನುಡಿಯಾಗಿರಬಹುದು ಅನಿಸುತ್ತದೆ.

ಮುನುಷ್ಯನಿಗೆ ಕಷ್ಟಗಳು ಬರುವುದು ಸ್ವಾಭಾವಿಕ. ಅದಕ್ಕೆ ಆತ್ಮಹತ್ಯೆ ಪರಿಹಾರವಲ್ಲ ಎಂದು ಹೇಳುವಾಗ ತನ್ನದೇ ಒಂದು ಅನುಭವವನ್ನು ವೃದ್ಧ ಹೀಗೆ ವಿವರಿಸುತ್ತಾನೆ. `ಮದುವೆಯ ನಂತರದ ನನ್ನ ಬದುಕಿನ ಕ್ಷಣಗಳು ಸಂಕಷ್ಟದವು, ಒಂದು ದಿನ ಸಾಕೆನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ರಾತ್ರಿ ಹಗ್ಗವನ್ನುಒಂದು ಮರಕ್ಕೆ ಕಟ್ಟಿ ಕುಣಿಕೆ ಭದ್ರವಾಗಿದಿಯೆ ಎಂದು ಪರೀಕ್ಷಿಸಲು ಜೋರಾಗಿ ಜಗ್ಗಿದೆ, ಮರದಿಂದ ಹಣ್ಣುಗಳು ಉದುರಿದವು. ಒಂದು ಹಣ್ಣು ತೆಗೆದು ಬಾಯಿಗೆ ಹಾಕಿದೆ, ಬಹಳ ರುಚಿ ಇತ್ತು, ಮತ್ತೊಂದು ತೆಗೆದು ಹಾಕಿದೆ ತುಂಬಾ ರುಚಿಯಾಗಿತ್ತು. ಹೀಗೆ ಒಂದರ ನಂತರ ಒಂದು ತಿನ್ನುವಾಗ ಸೂರ್ಯ ಹುಟ್ಟಿದ್ದೇ ತಿಳಿಯಲಿಲ್ಲ. ಅಬ್ಬಾ! ಎಂಥಾ ಸೂರ್ಯೋದಯ ಅದು, ಸುತ್ತಲಿನ ಪ್ರಕೃತಿ ನೋಡಿ ವಿಸ್ಮಯನಾದೆ. ಅಷ್ಟರಲ್ಲಿ ಮಕ್ಕಳು ಬಂದು ಮರವನ್ನುಜಗ್ಗಲು ಹೇಳಿದರು, ಮತ್ತೆ ಜಗ್ಗಿದೆ ಹಣ್ಣುಗಳು ಉದುರಿದವು, ಅವುಗಳನ್ನು ಆಯ್ದುಕೊಂಡು ಮನೆಗೆ ಮರಳಿದೆ. ಹೆಂಡತಿ ಆ ಹಣ್ಣುಗಳು ತಿಂದು ಖುಷಿಪಟ್ಟಳು. ಆತ್ಮಹತ್ಯೆ ಅಲೋಚನೆ ಮರೆತೇ ಹೋಗಿತ್ತು’.

ಇಡೀ ಚಿತ್ರದಲ್ಲಿ `ಬಾದಿ’ ಪಾತ್ರ ಅಸಾಧ್ಯ ವಿಷಾದಿಂದ ಕೂಡಿದೆ. ಬದುಕನ್ನು ಅಂತ್ಯಗೊಳಿಸಿಕೊಳ್ಳುವ ಅವನ ನಿರ್ಧಾರ ಅವನ ಮುಖ ಚಹರೆಯಲ್ಲೂ ಕಾಣುತ್ತಿದೆ. ಇಂತಹ ಬಾದಿಯ ಮುಖದಲ್ಲೂ ಒಮ್ಮೆ ಮಾತ್ರ ನಗು ಜಿನುಗುತ್ತದೆ. ವೃದ್ಧ, ಬಾದಿಗೆ ನೀನು ಟರ್ಕಿ ಮೂಲದವನು ಅಲ್ಲವಾದರೆ ಒಂದು ತಮಾಷೆ ಹೇಳುತ್ತೇನೆ, `ಟರ್ಕಿಯ ಒಬ್ಬ ರೋಗಿ ವೈದ್ಯರ ಬಳಿ, ಬೆರಳಿನಿಂದ ದೇಹವನ್ನು ಮುಟ್ಟಿದೆಲ್ಲೆಲ್ಲಾ ಅಸಾಧ್ಯ ನೋವುಂಟಾಗುತ್ತದೆ.  ದೇಹವನ್ನೆಲ್ಲಾ ಒಮ್ಮೆ ಪರೀಕ್ಷೆ ಮಾಡಿ ಎಂದು ಅಂಗಲಾಚುತ್ತಾನೆ. ಪರೀಕ್ಷೆ ಮಾಡಿದ ವೈದ್ಯರು ಹೇಳುತ್ತಾರೆ, ಅಯ್ಯೋ ಮೂರ್ಖ ನಿನ್ನ ದೇಹಕ್ಕೆ ಯಾವ ಸಮಸ್ಯೆಯೂಇಲ್ಲ, ನೋವಿರುವುದು ನಿನ್ನ ಬೆರಳಿನಲ್ಲಿ’. ಕಿಯರೋಸ್ತಮಿ ಪಾತ್ರಗಳ ನಡುವೆ ತರುವ ಈ ತರಹದ ಹ್ಯೂಮರಸ್‌ಗಳು ಸಿನಿಮಾದಲ್ಲಿ ಬರುವ ತಾತ್ವಿಕ ಜಿಜ್ಞಾಸೆಗೆ ಒತ್ತಾಸೆಯಾಗಿರುವುದು ಗಮನಿಸಿದರೆ ಸೋಜಿಗವೆನಿಸುತ್ತದೆ.

ಇಲ್ಲಿವೃದ್ಧ, ಬದುಕಿನ ಸಾಧ್ಯತೆಗಳ ಬಗ್ಗೆ, ತನ್ನದೇಅನುಭವದ ಮೂಲಕ ಹೇಳುವುದನ್ನು ಕೇಳಿದ ಬಾದಿ ‘ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯಬಹುದು ಮತ್ತು ಸಿನಿಮಾ ಈ ರೀತಿಯ ತಾರ್ಕಿಕ ಅಂತ್ಯದಲ್ಲಿ ಮುಗಿಯುತ್ತದೆ’ಎಂದು ಅನಿಸುತ್ತದೆ. ಆದರೆ ಅದು ಹಾಗೆ ಆಗುವುದಿಲ್ಲ, ಇದು ಕೀರೊಸ್ತಮಿಯ ಉದ್ದೇಶವೂ ಅಲ್ಲ. ಬಹುಶಹ ಬಾದಿಯ ಆತ್ಮಹತ್ಯೆಯ ಕಾರಣ ಮತ್ತವನ ಒಳಬೇಗುದಿ ಕಿಯರೋಸ್ತಮಿಗೂ ಗೊತ್ತಿಲ್ಲ. ಬಾದಿಯಾದಿಯಾಗಿ ಸೈನಿಕ, ಧರ್ಮಬೋಧಕ, ವೃದ್ಧ ಮತ್ತು ಅವರೆಲ್ಲಾ ಹೇಳುವ ಸಂಗತಿಗಳನ್ನು ಪ್ರೇಕ್ಷಕನ ಅನಂತ ಕಲ್ಪನೆಯ ಸಾಧ್ಯತೆಗೆ ಬಿಟ್ಟು ಬಿಡುತ್ತಾನೆ. ಅವುಗಳನ್ನು ಪ್ರೇಕ್ಷಕ ತನ್ನ ಬದುಕಿನ ಅನುಭವದ ಅಥವಾ ತಿಳಿವಳಿಕೆಯ ಹಿನ್ನಲೆಯಲ್ಲಿ ಹೇಗೆ ಬೇಕಾದರೂ ಗ್ರಹಿಸಬಹುದು.

ಸಿನಿಮಾದ ಪ್ರಾರಂಭ ಮತ್ತು ಕೊನೆಯ ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ, ಕಾರು, ಕಾರಿನೊಳಗೆ ಎರಡು ಪಾತ್ರಗಳ ಸಂಭಾಷಣೆ, ಹಿನ್ನಲೆಯಲ್ಲಿ ವಿಸ್ತಾರ ಬಯಲು ಮಾತ್ರ. ಕಿಯರೋಸ್ತಮಿಸಿ ನಿಮಾಗಳಲ್ಲಿ `ಕಾರು’ ಒಂದು ಪ್ರಧಾನ ಪಾತ್ರವಾಗಿಬಿಡುತ್ತದೆ. ಕಾರಿನ ಪ್ರತಿಯೊಂದು ಚಲನೆ ಪ್ರೇಕ್ಷಕನ ಮನೋ ಲಯವನ್ನು ನಿಯಂತ್ರಿಸುತ್ತಿದೆಯೇನೊ ಅನಿಸುವಷ್ಟು. ಟೇಸ್ಟ್ ಆಫ್‌ ಚರ್ರಿಯಲ್ಲಿ `ಕಾರಿ’ನದು ನಿಜವಾಗಿಯೂ ಒಂದು ಪ್ರಧಾನ ಪಾತ್ರ. ಕಿಯರೋಸ್ತಮಿ ಕಾರಿನ ಬಗ್ಗೆ ಒಮ್ಮೆ ಹೀಗೆ ಹೇಳುತ್ತಾನೆ.

ಕೀರೊಸ್ತಮಿ

“My car is my best friend, my office, my home, my location. I have a very intimate sense when I am in a car with someone next to me. We’re in the most comfortable seats because we’re not facing each other, but sitting side by side. We don’t look at each other, but instead do so only when we want to. We’re allowed to look around without appearing rude. We have a big screen in front of us and side views. Silence doesn’t seem heavy or difficult. Nobody serves anybody. And many other aspects. One most important thing is that it transport  us from one place to another”

ಟೇಸ್ಟ್ ಆಫ್‌ ಚೆರ್ರಿ ಸಿನಿಮಾದ ದೃಶ್ಯಗಳ ಕಲಾವಂತಿಕೆಯನ್ನು ಅಕ್ಷರಗಳಲ್ಲಿ ಹಿಡಿಯೋದು ತುಂಬಾ ಕ್ಲೀಷೆ ಅನಿಸಿಬಿಡುತ್ತೆ. ಕೀರೊಸ್ತಮಿ ಸಿನಿಮಾಗಳನ್ನು ನೋಡುವುದು ಒಂದು ಅನುಭವ, ಅನುಭವಿಸಿಯೇ ತೀರಬೇಕು.

  • ಯದುನಂದನ್ ಕೀಲಾರ, ಅವರಿಗೆ ಜಾಗತಿಕ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...