Homeಮುಖಪುಟಯಡ್ಡಿ-ಡಿಕೆಶಿ ದಿಢೀರ್ ಭೇಟಿಗಿದೆ ಬಿಸ್ನೆಸ್ ಮರ್ಮ?

ಯಡ್ಡಿ-ಡಿಕೆಶಿ ದಿಢೀರ್ ಭೇಟಿಗಿದೆ ಬಿಸ್ನೆಸ್ ಮರ್ಮ?

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ಒಂದು ಸೇತುವೆ ನಿರ್ಮಾಣಕ್ಕಾಗಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಚಿವರ ಮನೆಗೇ ಭೇಟಿ ನೀಡುತ್ತಾರೆ!
ಸೇತುವೆ ಆಗಬೇಕಾಗಿರುವುದು ಅವರ ಕ್ಷೇತ್ರದಲ್ಲಲ್ಲ!
ಭೇಟಿಯಾಗಿದ್ದು ಲೋಕೋಪಯೋಗಿ ಅಥವಾ ಅರಣ್ಯ ಮತ್ತು ಪರಿಸರ ಸಚಿವರನ್ನಲ್ಲ!

ಮೇಲಿನಿದನ್ನು ಓದಿ ಬಿಟ್ಟರೆ, ಕರುನಾಡಲ್ಲಿ ಜನಪರ ಕೆಲಸಗಳಿಗಾಗಿ ನಾಯಕರು ಪ್ರತಿಷ್ಠೆ ಮರೆತು ಮನೆ ಮನೆಗೆ ಅಲೆದಾಡುತ್ತಾರೆ ಎನಿಸಿದರೆ ಅದು ಶುದ್ಧ ಮೂರ್ಖತನ. ನವೆಂಬರ್ ೨೯ರಂದು ವಿಪಕ್ಷ ನಾಯಕ ಯಡಿಯೂರಪ್ಪನವರು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ನೀಡಿದ ಭೇಟಿಯ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮಗಳು ‘ಹೊಸ ರಾಜಕೀಯ ಬೆಳವಣಿಗೆ’ಯ ಸುತ್ತ ಗಿರಕಿ ಹೊಡೆದವು. ಇರಬಹುದು, ಆದರೆ ಈ ಸ್ನೇಹ ‘ಸೇತುವೆ’ಗೆ ದಶಕದ ಹಿನ್ನೆಲೆಯಿದೆ. ಅವತ್ತಿನ ಆ ಇಂ’ಧನ’ವಿಲ್ಲದೇ ಇವತ್ತು ಈ ಹೊಗೆ ಆಡುತ್ತಿರಲಿಲ್ಲ.

ಖುಲ್ಲಂ ಖುಲ್ಲ ಹೇಳಬೇಕೆಂದರೆ ಈ ಭೇಟಿ, ಸ್ನೇಹದ ಹಿನ್ನೆಲೆ ಕೆದಕುತ್ತ ಹೋದರೆ, ಮುಚ್ಚಿಹೋದ ಸಾವಿರ ಕೋಟಿಗಳ ಹಗರಣಗಳು ತೆರೆದುಕೊಳ್ಳುತ್ತವೆ. ಈ ಈರ್ವರು ನಾಯಕರು ಪರಸ್ಪರರನ್ನು ರಕ್ಷಿಸಿಕೊಳ್ಳಲು ರಾಜ್ಯದ ಖಜಾನೆಗೆ ಸಾವಿರಾರು ಕೋಟಿ ದೋಖಾ ಮಾಡಿದ ಸ್ನೇಹ-ಸಂಬಂಧಗಳು ಅನಾವರಣಗೊಳ್ಳುತ್ತವೆ.

ನವಂಬರ್ 29ರ ಒಂದು ತಾಸಿನ ಭೇಟಿಯಲ್ಲಿ ರಾಜಕೀಯ ಚರ್ಚೆ ಇರಲಿಲ್ಲ ಎಂದು ಯಡಿಯೂರಪ್ಪ ಮತ್ತು ಶಿವಕುಮಾರ್ ಮಾಧ್ಯಮಗಳ ಮುಂದೆ ಹೇಳಿದರು. ಶಿವಮೊಗ್ಗ ಗ್ರಾಮೀಣ, ಸೊರಬ, ಶಿಕಾರಿಪುರ ಭಾಗದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಸಾಗರದ ಸಿಗಂದೂರು ಸೇತುವೆ ನಿರ್ಮಾಣಕ್ಕಿರುವ ಅಡ್ಡಿ-ಆಕ್ಷೇಪಗಳ ನಿವಾರಣೆಗೆ ಈ ಭೇಟಿ ನಡೆಸಲಾಯಿತಂತೆ. ಅದ್ಯಾವ ನೀರಾವರಿ ಯೋಜನೆಗಳು ಎಂದು ಇಬ್ಬರೂ ಉಲ್ಲೇಖಿಸಲಿಲ್ಲ! ಅಷ್ಟು ಸೀರಿಯಸ್ಸಾಗಿ ನಡೆದಿತ್ತು ಇವರ ನೀರಾವರಿ ಚರ್ಚೆ! ಉಲ್ಲೇಖವಾಗಿದ್ದು ಕೇವಲ ಸಿಗಂದೂರು ಸೇತುವೆ ಮಾತ್ರ!

ಅಂದರೆ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಸಂಸದ, ಪುತ್ರ ರಾಘವೇಂದ್ರ ಮತ್ತು ಸಾಗರ ಶಾಸಕ ಹರತಾಳು ಹಾಲಪ್ಪರನ್ನು ಕಟ್ಟಿಕೊಂಡು ಯಡಿಯೂರಪ್ಪ ಜಲ ಸಂಪನ್ಮೂಲ ಸಚಿವರ ಮನೆಗೆ ಹೋಗಿದ್ದರು. ಇವರ ಭೇಟಿಗಾಗಿಯೇ ಸಚಿವ ಶಿವಕುಮಾರ್ ಮಹತ್ವದ ಹೈದರಾಬಾದ್ ಭೇಟಿಯನ್ನು ರದ್ದುಗೊಳಿಸಿದ್ದರು. ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿಗಂದೂರು ಸೇತುವೆಗೆ ಪರಿಸರ ಸಂಬಂಧಿ ಆಕ್ಷೇಪಗಳಿವೆ. ಅದನ್ನು ನಿವಾರಿಸಿಕೊಳ್ಳಲು ಅರಣ್ಯ ಮತ್ತು ಪರಿಸರ ಸಚಿವ ಆರ್. ಶಂಕರರ ಮನೆಗೆ ಹೋಗಬೇಕಿದ್ದ ಯಡಿಯೂರಪ್ಪ ತಂಡ ಶಿವಕುಮರ್ ಮನೆಗೆ ಹೋಗಿತ್ತು! ಶಿವಕುಮಾರ್ ಅಲ್ಲಿಂದಲೇ ಸಚಿವ ಶಂಕರ್‌ಗೆ ಫೋನ್ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಈ ಯೋಜನೆಗೆ ಅನುಮತಿಯನ್ನು ತಡೆ ಹಿಡಿದಿದೆ. ಅರಣ್ಯ ಸಚಿವ ಶಂಕರ್ ಜೊತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರನ್ನು ಭೇಟಿ ಮಾಡಬಹುದಿತ್ತೇನೋ? ಅಥವಾ ಸಾಗರ ಶಾಸಕ ಹರತಾಳು ಹಾಲಪ್ಪ ಸಚಿವ ಶಂಕರ್ ಭೇಟಿ ಮಾಡಿದ್ದರೆ ಸಾಕಿತ್ತು… ನೀರಾವರಿ ಯೋಜನೆಗಾಗಿ ಯಡಿಯೂರಪ್ಪ ಶಿವಕುಮಾರ್‌ಗೆ ಒಂದು ಪತ್ರ ಬರೆದರೂ ಸಾಕಿತ್ತು. ಸೊರಬ ಮತ್ತು ಶಿವಮೊಗ್ಗದ ಗ್ರಾಮೀಣ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಇರಬಹುದಾದ(?!) ಅಲ್ಲಿನ ಶಾಸಕರಾದ ಕುಮಾರ್ ಬಂಗಾರಪ್ಪ ಮತ್ತು ಅಶೋಕ ನಾಯ್ಕರೂ ಯಡಿಯೂರಪ್ಪ ಜೊತೆಗಿರಲಿಲ್ಲ.

ಇದೆಲ್ಲರ ಅರ್ಥ: ಇಲ್ಲಿ ಯಾವ ನೀರಾವರಿ ಯೋಜನೆ ಅಥವಾ ಸೇತುವೆ ಯೋಜನೆ ಮಹತ್ವದ್ದೇ ಆಗಿರಲಿಲ್ಲ. ಯಡಿಯೂರಪ್ಪಗೂ ಮೊದಲು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಶಿವಕುಮಾರ್‌ರನ್ನು ಭೇಟಿ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಮೂಡಿಸುವುದು, ಶಿವಕುಮಾರ್ ನೆರವಿನಿಂದ ಸರ್ಕಾರ ರಚಿಸುವುದು, ಶಿವಕುಮಾರ್‌ಗೆ ಸಿಎಂ ಪಟ್ಟ ನೀಡುವುದು-ಇಂತಹ ಗಾಳಿ ಸುದ್ದಿಗಳನ್ನು ಸೃಷ್ಟಿಸುವುದೇ ಇದರ ಉದ್ದೇಶವಾಗಿತ್ತು. ಅದಕ್ಕೇ ಮಾಧ್ಯಮಗಳಿಗೆ ಮಾಹಿತಿ ನೀಡಿಯೇ ಈ ಭೇಟಿ ನಡೆಸಲಾಗಿತ್ತು.

ಡಿಕೆಶಿಗೆ ಕಾಂಗ್ರೆಸ್ಸೇ ಹಿತ!

ಒಂದಿಲ್ಲೊಂದು ದಿನ ಕರ್ನಾಟಕದ ಮುಖ್ಯಮಂತ್ರಿ ಆಗಲೇಬೇಕೆಂದಿರುವ ಡಿಕೆಶಿ ಸಿಎಂ ಆಗುವುದಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ. ಟ್ರಬಲ್‌ಶೂಟರ್ ಎನಿಸಿರುವ ಡಿಕೆಶಿ ಜೊತೆ ಗಟ್ಟಿಯಾಗಿ, ಖಾಯಂ ಆಗಿ ನಿಲ್ಲಬಲ್ಲ ಹತ್ತು ಶಾಸಕರೂ ಇಲ್ಲ. ಹೀಗಾಗಿ ಬಿಜೆಪಿ ನೆರವಿನಿಂದ ಡಿಕೆಶಿ ಸಿಎಂ ಆಗುವುದು ಅಸಾಧ್ಯ. ಆದರೆ ಯಡಿಯೂರಪ್ಪ ಮತ್ತು ಶಿವಕುಮಾರರ ಈ ಬಾಂಧವ್ಯದ ಹಿಂದೆ ಪರಸ್ಪರರನ್ನು ರಕ್ಷಿಸಿಕೊಳ್ಳುವ, ಪರಸ್ಪರರಿಗೆ ಲಾಭ ಮಾಡಿಕೊಳ್ಳುವ ವ್ಯವಹಾರಗಳಿವೆ. ಅಮಿತ್ ಶಾ ತಂತ್ರಗಳಿಗೆ ಎರಡು ಸಲ ಬಲವಾದ ಪೆಟ್ಟು ನೀಡಿ, ಹಲವಾರು ಐಟಿ-ಇಡಿ ಕೇಸು ಗಳಿದ್ದರೂ ಡಿಕೆಶಿ ಆರಾಮಾ ಗಿರೋದು ಇಂತಹ ಸ್ನೇಹ- ಸೇತುಗ ಳಿಂದಲೇ. ಬಿಜೆಪಿ ಯವರು ಡಿಕೆಶಿಯ ವರನ್ನು ಹೊಗಳಿದ ಸುದ್ದಿ ಗಳಿರುವ ಕಟಿಂಗ್ಸ್‌ಗಳನ್ನು ಅವರಿಗೆ ನೀಡಿದೆ ಎಂದೂ ಯಡಿಯೂರಪ್ಪ ಅವತ್ತು ಹೇಳಿದ್ದರು! ಬಹುಷ: ಯಾವುದೋ ದೊಡ್ಡ ’ಕಾಮಗಾರಿ’ಗಾಗಿ ಬೆಣ್ಣೆ ಹಚ್ಚುವ ಅಥವಾ ಶಾ ತಮ್ಮ ಬಗ್ಗೆ ಸಾಫ್ಟ್ ಆಗಿದ್ದಾರೆ ಎಂಬ ಸಂದೇಶ ನೀಡುವ ಉದ್ದೇಶ ಇರಬಹುದು. ಅದು ಹಾಳಾಗಿ ಹೋಗಲಿ, ಇಂತಹ ವಿವಾದಾತ್ಮಕ, ರಾಜಕೀಯ ವಿರೋಧಿ ’ಗಣ್ಯ’ ನಾಯಕರ ಇಂತಹ ಭೇಟಿ-ಸ್ನೇಹಗಳ ಹಿಂದೆ ವೈಯಕ್ತಿಕ ಸ್ವಾರ್ಥಗಳಂತೂ ಖಂಡಿತ ಇರುತ್ತವೆ. ಅಂತಹ ವಿದ್ಯಮಾನಗಳತ್ತ ಗಮನಹರಿಸೋಣ, ಬನ್ನಿ.

ಪವರ್ ಡೀಲ್ಸ್, ಕೋಲ್ಸ್ ಆಂಡ್ ಸೋಲಾರ್ ಸೆಲ್ಸ್!

ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಸ್ನೇಹಕ್ಕೆ ವಿವಿಧ ಆಯಾಮಗಳಿವೆ. ಇದನ್ನು ಅರಿಯಲು ಕಳೆದ ಅವಧಿ ಮತ್ತು ಅದಕ್ಕೂ ಹಿಂದಿನ ಸರ್ಕಾರದ ಕಡೆ ನೋಡಬೇಕಿದೆ. ಇಲ್ಲಿ ಡಿ.ಕೆ.ಶಿವಕುಮಾರ್ ಯಡಿಯೂರಪ್ಪರಿಗೆ ನೆರವಾಗಿದ್ದಾರೆ. ವಿದ್ಯುತ್ ಖರೀದಿ ಅಕ್ರಮದಲ್ಲಿ ಶೋಭಾ ಕರಂದ್ಲಾಜೆ ಸಿಕ್ಕಿಕೊಂಡಾಗ ಶಿವಕುಮಾರ್ ತನಿಖೆಯೇ ಆಗದಂತೆ ನೋಡಿಕೊಂಡಿದ್ದಾರೆ. ಶೋಭಾರನ್ನು ರಕ್ಷಿಸಲು ಅವರು ಕುಮಾರಸ್ವಾಮಿಯವರ ಮನೆಗೇ ಹೋಗಿ, ಎಲ್ಲ ಇತ್ಯರ್ಥಪಡಿಸಿಕೊಂಡು ಬಂದಿದ್ದರು.

ಇಂಧನ ಸಚಿವ ಶಿವಕುಮಾರ್ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ನಿಯಮ ಮೀರಿ ಸಾಕಷ್ಟು ಸೌರ ವಿದ್ಯುತ್ ಪ್ರಾಜೆಕ್ಟ್‌ಗಳನ್ನು ನೀಡಿದ್ದರು ಎಂದು ಬಿಜೆಪಿ ಅಪಾದನೆ ಮಾಡಿದಾಗ, ಯಡಿಯೂರಪ್ಪ ಶಿವಕುಮಾರ್ ನೆರವಿಗೆ ಬಂದು ಪ್ರಕರಣ ಮುಚ್ಚಲು ನೆರವಾಗಿದ್ದರು. ಹೇಗಿದೆ ಪರಸ್ಪರ ಸಹಾಯ ‘ಹಸ್ತ’: ಶೋಭಾ ರಕ್ಷಿಸಿದ ಡಿಕೆಶಿ, ಲಕ್ಷ್ಮಿ ರಕ್ಷಿಸಿದ ಯಡ್ಡಿ!

ಇನ್ನೊಂದು ಕಡೆ ವಿಧಾನಸೌಧದ ಆವರಣದಲ್ಲಿ 2.5 ಕೋಟಿ ಹಣದ ಸಮೇತ ಕಾರೊಂದು ಸಿಕ್ಕಿ ಬಿದ್ದಾಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಮುನ್ನೆಲೆಗೆ ಬಂದಿತ್ತು. ಆಗಲೂ ಡಿಕೆಶಿ ನೆರವಿನಿಂದ ಯಡಿಯೂರಪ್ಪ ಈ ಪ್ರಕರಣವನ್ನೇ ಮರೆಸಿಬಿಟ್ಟರು! (ಇನ್ನೊಂದು ಬಾಕ್ಸ್ ನೋಡಿ)….

ಹೀಗಾಗಿ ಕಳೆದ ವಾರ ನಡೆದ ಯಡಿಯೂರಪ್ಪ ಮತ್ತು ಶಿವಕುಮಾರ್ ಭೇಟಿ ಅಭಿವೃದ್ಧಿಗಾಗಿ ಆಗಿರಲಿಲ್ಲ. ಅಲ್ಲಿ ಕುಟುಂಬ ವ್ಯವಹಾರಗಳನ್ನು ರಕ್ಷಿಸಿಕೊಳ್ಳುವ ಜನದ್ರೋಹಿ ಉದ್ದೇಶಗಳಿರದೇ ಇನ್ನೇನು ಇರಲು ಸಾಧ್ಯವಿಲ್ಲ.

ಕಾರಲ್ಲಿ 2 ಕೋಟಿ: ವಿಜಯೇಂದ್ರ ಮಾತ್ರ ಸೇಫ್ಟಿ!
2016ರ ಅಕ್ಟೋಬರ್ 21ರಂದು ವಿಧಾನಸೌಧದ ಪೂರ್ವ ದ್ವಾರದ ಬಳಿ (ಕೆಪಿಎಸ್‌ಸಿ ಕಡೆ) ಪೊಲೀಸರು ಅಡ್ವೊಕೇಟ್ ಒಬ್ಬರ ಕಾರನ್ನು (ವೊಕ್ಸ್‌ವೊಗನ್ ಪೊಲೊ, ಕೆ.ಎ.04 ಎಂಎಂ 9018) ತಡೆದು (ವಿಧಾನಸೌಧ ಆವರಣದ ಮೂಲಕ ಹೈಕೋರ್ಟಿಗೆ ಹೋಗಲು ವಕೀಲರು, ಜಡ್ಜ್‌ಗಳಿಗೆ ಅವಕಾಶವಿದೆ) ಪರಿಶೀಲಿಸಿದಾಗ, ಅದರಲ್ಲಿ ಸುಮಾರು ೨.೫ ಕೋಟಿ ಹಣ ಪತ್ತೆಯಾಗಿತ್ತು. ಕಾರಿನ ಮಾಲಿಕ ಮತ್ತು ಚಾಲಕ ಅಡ್ವೋಕೇಟ್ ಎಚ್.ಎಂ.ಸಿದ್ದಾರ್ಥ ಪೊಲೀಸರಿಗೆ ಗೊಂದಲಮಯ ವಿವರಣೆ ನೀಡಿ ಸಿಕ್ಕಿ ಬಿದ್ದಿದ್ದರು.

ಹಣ ವಶ ಪಡಿಸಿಕೊಂಡ ಪೊಲೀಸರು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಅಡ್ವೋಕೇಟ್ ಸಿದ್ದಾರ್ಥ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪುತ್ರ… ಆಗಷ್ಟೇ ರಾಜ್ಯದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಂಸ್ಥೆಯೊಂದರ ಮುಖ್ಯಸ್ಥರಾಗಿ ಪಕ್ಕದ ವಿಕಾಸ ಸೌಧದಲ್ಲಿ ಕಚೇರಿ ಹೊಂದಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಳಿಯ ಎಂಬ ‘ಹೆಗ್ಗಳಿಕೆ’ ಹೊಂದಿದಾತ ಎಂಬುದು ನಿಧಾನಕ್ಕೆ ಗೊತ್ತಾಗಿತ್ತು.

ಅದಕ್ಕೂ ಮುಖ್ಯವಾಗಿ, ಅಡ್ವೊಕೇಟ್ ಸಿದ್ದಾರ್ಥ ಯಡಿಯೂರಪ್ಪ ಪುತ್ರ ವಿಜಯೇಂದ್ರರ ವಕೀಲನಾಗಿದ್ದ ಮತ್ತು ಬಹುಕಾಲದ ಆಪ್ತ ಮಿತ್ರನಾಗಿದ್ದ. ಕಾರಲ್ಲಿದ್ದ ಹಣ ವಿಜಯೇಂದ್ರ ಮನೆಯಿಂದ ರವಾನೆ ಆದದ್ದೆಂದು, ಅದನ್ನು ‘ಡೀಲ್’ ಒಂದರ ಭಾಗವಾಗಿ ಯಾರಿಗೋ ತಲುಪಿಸಲು ಒಯ್ಯಲಾಗುತ್ತಿತ್ತು ಎಂಬ ಮಾಹಿತಿ ತೇಲಿ ಬಂದಿತ್ತು. ಕಾರು ಎಲ್ಲಿಂದ ಹೊರಟಿತ್ತೆಂಬುದನ್ನು ರಸ್ತೆಗಳ ಸಿಸಿಟಿವಿಯಲ್ಲಿ ಪರಿಶೀಲಿಸಿದ ಪೊಲೀಸ್ ಇಲಾಖೆಯಲ್ಲಿನ ಒಂದು ಕ್ರಿಯಾಶೀಲ ಗುಂಪು, ಅದು ವಿಜಯೇಂದ್ರ ಮನೆಯಿಂದಲೇ ಹೊರಟಿತ್ತೆಂಬುದನ್ನು ಪತ್ತೆ ಹಚ್ಚಿತ್ತು.

ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ನಡೆದ ಈ ಕೇಸು ಥಟ್ಟಂತ ಐಟಿ ಇಲಾಖೆಗೆ ವರ್ಗಾವಣೆಗೊಂಡಿತು. ಅಲ್ಲಿಗೇ ಮತ್ತೆ ಸುದ್ದಿಯಾಗಲೇ ಇಲ್ಲ! ಆಗಲೂ ಮತ್ತೆ ಸಚಿವ ಡಿಕೆ ಶಿವಕುಮಾರರ ಸಹಾಯಹಸ್ತ ಮುಂದೆ ಬಂತು ಎಂಬುದು ವಿಧಾನಸೌಧದ ಪೊಲೀಸ್ ಠಾಣೆಯ ಗೋಡೆಗಳಿಗೆ ಮಾತ್ರ ಗೊತ್ತಿರುವ ಸುದ್ದಿಯೇನಲ್ಲ.

ಸಹೃದಯಗಳ ಸಹಾಯ’ಹಸ್ತ’: ಶೋಭಾಗೆ ಡಿಕೆಶಿ, ಲಕ್ಷ್ಮಿಗೆ ಯಡ್ಡಿ!
ಇದು ತಮಗಾಗಿ, ತಮ್ಮವರಿಗಾಗಿ ನಮ್ಮ ರಾಜಕೀಯ ನಾಯಕರು ಸಹಾಯಹಸ್ತಗಳನ್ನು ಚಾಚುವ ನಿದರ್ಶನ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಚಿಂತೆಯಿಲ್ಲ, ಆರೋಪ ಹೊತ್ತವರಿಗೆ ನೆಮ್ಮದಿ ನೀಡುವ ‘ಧಾರಾಳತನ’..

ಕಳೆದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ, ಕಲ್ಲಿದ್ದಲು ಖರೀದಿಯಲ್ಲಿ ಗೋಲ್‌ಮಾಲ್ ಎಂಬ ಆರೋಪ ಬಂದಿತ್ತು. ಅದು ಅವರ ಸರ್ಕಾರದ ವಿರುದ್ಧ ಅಲ್ಲ. ಸದನದಲ್ಲಿ ವಿದ್ಯುತ್ ಖರೀದಿಯ ಅಕ್ರಮದ ಕುರಿತು ದಾಖಲೆಗಳ ಸಮೇತ ಗಟ್ಟಿ ದನಿಯಲ್ಲಿ ಕುಮಾರಸ್ವಾಮಿ ಯಡಿಯೂರಪ್ಪ ಮತ್ತು ಶೋಭಾರ ವಿರುದ್ಧ ಆರೋಪ ಮಾಡಿದ್ದರು.

ಕಡಿಮೆ ದರದಲ್ಲಿ ವಿದ್ಯುತ್ ಖರೀದಿಗೆ ಅವಕಾಶವಿದ್ದರೂ, ಹೆಚ್ಚಿನ ದರದಲ್ಲಿ ಖರೀದಿಸಿ ಶೋಭಾ ಕರಂದ್ಲಾಜೆ ಅಕ್ರಮವೆಸಗಿದ್ದಾರೆಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಆಗಿನ್ನೂ ಸಚಿವ ಭಾಗ್ಯದಿಂದ ವಂಚಿತರಾಗಿದ್ದ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಜೆಡಿಎಸ್ ಕೋಟಾದಲ್ಲಿ ಬೇರೆಯವರನ್ನು ಸೂಚಿಸದೇ ಕುಮಾರಸ್ವಾಮಿ ತಾವೇ ಈ ಸಮಿತಿಗೆ ಸೇರಿದ್ದರು.

ಸಮಿತಿಯ ವರದಿ ಪ್ರಕಾರ, ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಗೆ ಕರೆದ ಟೆಂಡರ್‌ಗೆ 5 ಕಂಪನಿಗಳು ಬಿಡ್ ಸಲ್ಲಿಸಿದ್ದವು. 4 ಕಂಪನಿಗಳು ಹೆಚ್ಚಿನ ಮೊತ್ತ ಬಿಡ್ ಮಾಡಿವೆ ಎಂದು ಕಾರಣ ನೀಡಿದ್ದ ಇಂಧನ ಸಚಿವೆ ಕರಂದ್ಲಾಜೆ ಜೆಎಸ್‌ಡಬ್ಲೂ ಎನರ್ಜಿ ಕಂಪನಿಯನ್ನು ಆಯ್ಕೆ ಮಾಡಿದ್ದರು. ಜೆಎಸ್‌ಡಬ್ಲೂ ಯುನಿಟ್‌ಗೆ 3.80 ರೂ ಬಿಡ್ ಮಾಡಿತ್ತು. ಆದರೆ ಕ್ಯಾಬಿನೆಟ್ ಅನುಮೋದನೆ ನಂತರ ಈ ದರ ಏರಿಕೆಯಾಗಿತ್ತು!

4.41ರಿಂದ 4.99ರೂ ದರದಲ್ಲಿ ವಿದ್ಯುತ್ ಖರೀದಿಸಿದ್ದ ಶೋಭಾ ಕರಂದ್ಲಾಜೆ ಬೊಕ್ಕಸಕ್ಕೆ ಸಾವಿರ ಕೋಟಿಗಳಷ್ಟು ನಷ್ಟ ಉಂಟು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದ ವರದಿ, ತನಿಖೆಗೆ ಶಿಫಾರಸು ಮಾಡಿತ್ತು. ಕುಮಾರಸ್ವಾಮಿ ಸಮಿತಿಯ ಕಾರ್ಯ ವೈಖರಿಗೆ ಬೇಸತ್ತು ಅರ್ಧದಲ್ಲೇ ರಾಜಿನಾಮೆ ನೀಡಿದ್ದರು. ಅಷ್ಟೊತ್ತಿಗೆ ಇಂಧನ ಸಚಿವರಾ ಶಿವಕುಮಾರ್ ರಾಜಿನಾಮೆ ಅಂಗೀಕರಿಸಿರಲಿಲ್ಲ. ಅಂತಿಮವಾಗಿ ವರದಿಗೆ ಸಹಿ ಮಾಡಲು ಕುಮಾರಸ್ವಾಮಿ ನಿರಾಕರಿಸಿದ್ದರು. ಅಷ್ಟರಲ್ಲಿ ಇಂಧನ ಖಾತೆಯ ‘ವ್ಯವಹಾರ’ಗಳ ಮೇಲೆ ಹಿಡಿತ ಸಾಧಿಸಿದ್ದ ಡಿಕೆಶಿಯವರ ಸಹಾಯಹಸ್ತ ಬೇಡಿದ್ದರು ಯಡಿಯೂರಪ್ಪ.

೨೦೧೭ರ ಅಕ್ಟೋಬರ್ ೨೮ರಂದು, ಕುಮಾರಸ್ವಾಮಿಯವರ ಜೆಪಿನಗರದ ಮನೆಗೆ ಖುದ್ದು ಭೇಟಿ ನೀಡಿದ್ದ ಸಚಿವ ಶಿವಕುಮಾರ್ ಸಹಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವರದಿಯಲ್ಲಿ ಕುಮಾರಸಾಮಿ ಆಡಳಿತ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ರೇವಣ್ಣರ ಮೇಲೂ ಆರೋಪವಿತ್ತು. ಹೀಗಾಗಿ ಕುಮಾರಸ್ವಾಮಿ ಸಹಿ ಮಾಡಿದ್ದರು ಎಂಬ ಮಾತೂ ಇದೆ.

ಮುಂದೆ ಸಭಾಪತಿಗೆ ವರದಿ ಸಲ್ಲಿಕೆಯಾಯ್ತು… ತನಿಖೆ ನಡೆಯದಂತೆ ಶಿವಕುಮಾರ್ ನೋಡಿಕೊಂಡರು. ಕರಂದ್ಲಾಜೆ ಕೋಲ್ಗೇಟ್ ನಗೆ ಬೀರಿದರು.

ಕಳೆದ ಸರ್ಕಾರದ ಅವಧಿಯಲ್ಲಿ, ಸೌರ ವಿದ್ಯುತ್ ಪ್ರಾಜೆಕ್ಟ್‌ಗಳನ್ನು ಹಂಚುವಲ್ಲಿ ಅಕ್ರಮ ನಡೆದಿದೆ ಎಂದು ಇಂಧನ ಸಚಿವ ಡಿಕೆಶಿ ವಿರುದ್ಧ ಆರೋಪಿಸಿದ್ದ ಸಿ.ಟಿ.ರವಿ, ಸುರೇಶಕುಮಾರ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ನಿಯಮ ಮೀರಿ ಸಾಕಷ್ಟು ಪ್ರಾಜೆಕ್ಟ್ ನೀಡಲಾಗಿದೆ ಎಂದಿದ್ದರು. ಆಗ ಡಿಕೆಶಿ ಯಡ್ಡಿಯ ಸಹಾಯಹಸ್ತಕ್ಕೆ ಯಾಚಿಸಿದರು. ಆರೋಪ ಪ್ರಖರ ಸೌರ ವಿದ್ಯುತ್‌ನಲ್ಲಿ ಕರಗಿ ಬೂದಿಯಾಗಿತು.

ಶಿವಕುಮಾರ್, ಲಕ್ಷ್ಮಿ ಯಡ್ಡಿಯತ್ತ ‘ಪ್ರಾಮಿಸ್’ ನಗೆ ಬೀರಿದ್ದರು! ಆ ‘ಪ್ರಾಮಿಸ್’ ಭಾಗವಾಗಿ ಮೊನ್ನೆ ಯಡಿಯೂರಪ್ಪ ಶಿವಕುಮಾರ್ ಮನೆಗೆ ಹೋಗಿರಬೇಕು!

ನೀತಿ: ಒಟ್ಟಿನಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಿಯೂ ಬಚಾವಾಗಲು ಎದುರು ಪಾರ್ಟಿಯಲ್ಲಿ ಸಹಾಯಹಸ್ತಗಳಿರಬೇಕು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read