ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ತೆಲುಗು ಕವಿ ವರವರ ರಾವ್ ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
81 ವರ್ಷ ವಯಸ್ಸಿನ ವರವರ ರಾವ್ ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ಭಾರತಕ್ಕೆ ತೊಂದರೆ ಕೊಡಲು ಸಾಧ್ಯವಿಲ್ಲ ಎಂದು ಅಧೀರ್ ರಂಜನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“81 ವರ್ಷ ವಯಸ್ಸಿನ ವ್ಯಕ್ತಿಯು ತನ್ನ ಅಪರಾಧವೇನೆಂದು ತಿಳಿಯದೆ ಒಂದು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಯಾವುದೇ ವೈದ್ಯಕೀಯ ನೆರವು ಇಲ್ಲದೆ ಮಾನಸಿಕವಾಗಿ ಅಘಾತಗೊಂಡಿದ್ದಾರೆ. ದಯವಿಟ್ಟು ಈ ವಿಷಯದಲ್ಲಿ ನೀವು ಮಧ್ಯಪ್ರವೇಶಿಸಿ ಅವರ ಜೀವವನ್ನು ಉಳಿಸಿ, ಇಲ್ಲದಿದ್ದರೆ ನಮ್ಮ ಭವಿಷ್ಯದ ಪೀಳಿಗೆಗಳು ನಮ್ಮನ್ನು ಕ್ಷಮಿಸುವುದಿಲ್ಲ” ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿದಿದ್ದಾರೆ.
ಎಲ್ಗರ್ ಪರಿಷತ್ ನಡೆಸಿದ ಸಭೆಯ ಭಾಷಣವು ಪ್ರಚೋದನಾಕಾರಿಯಾಗಿತ್ತು, ಇದರಿಂದ ಭೀಮಾಕೊರೆಗಾಂವ್ ಹಿಂಸಾಚಾರ ಮತ್ತ ಗಲಭೆ ಉಂಟಾಯಿತು ಮತ್ತು ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ಸಂಬಂಧವಿದೆ ಎಂಬ ಆರೋಪದ ಮೇಲೆ ವರವರ ರಾವ್ ಸಹಿತ ಇತರ ಒಂಬತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಈ ಪ್ರಕರಣವನ್ನು ಮೊದಲಿಗೆ ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದರು ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಬದಲಾಗಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರ ಅಧಿಕಾರ ಹಿಡಿದ ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿದೆ.
ಓದಿ: ವರವರ ರಾವ್ ಜೀವಕ್ಕೆ ಅಪಾಯವಿದೆ; ಅವರಿಗೆ ಚಿಕಿತ್ಸಿ ನೀಡಿಯೆಂದು ಮನವಿ ಮಾಡಿದ ಕುಟುಂಬ


