ವರವರ ರಾವ್ ಸ್ಥಿತಿ ಗಂಭೀರವಾಗಿದೆ; ನಾನಾವತಿ ಆಸ್ಪತ್ರೆಗೆ ದಾಖಲಿಸಿ - ಬಾಂಬೆ ಹೈಕೋರ್ಟ್‌!
ವರವರ ರಾವ್

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜೈಲಿನಲ್ಲಿರುವ ಖ್ಯಾತ ತೆಲುಗು ಕ್ರಾಂತಿಕಾರಿ ಕವಿ ವರವರ ರಾವ್ (79) ಅವರ ಜೀವಕ್ಕೆ ಅಪಾಯವಿದ್ದು, ದಯವಿಟ್ಟು ಅವರನ್ನು ಜೈಲಿನಲ್ಲಿ ಕೊಲ್ಲಬೇಡಿ ಎಂದು ಕುಟುಂಬವು ಮನವಿ ಮಾಡಿದೆ.

ಆನ್‌ಲೈನ್‌ನಲ್ಲಿ ಪತ್ರಿಕಾಗೊಷ್ಟಿ ನಡೆಸಿದ ಅವರ ಪತ್ನಿ ಹೇಮಲತಾ ಮಾತನಾಡಿ ರಾವ್ ಒಬ್ಬ ಶಿಕ್ಷಕ, ವಾಗ್ಮಿ ಮತ್ತು ಕವಿ. ತನ್ನ ಜೀವನದಲ್ಲಿ ಪದಗಳು ಅಥವಾ ಆಲೋಚನೆಗಳಿಗಾಗಿ ಎಂದಿಗೂ ಮುಗ್ಗರಿಸಿಲ್ಲ. ಆದರೆ ಈಗ ಅವರು ಮಾತನಾಡಲು ಪದಗಳಿಗಾಗಿ ಹುಡುಕುತ್ತಿರುವುದು ಭಯಾನಕವಾಗಿದೆ. ಕೂಡಲೇ ಅವರಿಗೆ ಚಿಕಿತ್ಸೆ ಮತ್ತು ಹಾರೈಕೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಜುಲೈ 11 ರಂದು ಫೋನ್ ಮೂಲಕ ವರವರ ರಾವ್‌ರೊಂದಿಗೆ ಮಾತನಾಡಿದ ಸಮಯದಲ್ಲಿ, ಅವರು ಸ್ಪಷ್ಟವಾಗಿ ಮಾತನಾಡಿಲ್ಲ. ಅವರ ಆರೋಗ್ಯದ ಬಗೆಗಿ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. 70 ವರ್ಷಗಳ ಹಿಂದೆ ಮತ್ತು 40 ವರ್ಷಗಳ ಹಿಂದೆಯೇ ನಿಧನ ಹೊಂದಿರುವ ತಮ್ಮ ತಂದೆ ಮತ್ತು ತಾಯಿಯ ಅಂತ್ಯಕ್ರಿಯೆಯ ಬಗ್ಗೆ ಒಂದು ರೀತಿಯ ಭ್ರಮನಿರಸನ ಮತ್ತು ಭ್ರಮೆಯ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಮಾತನಾಡಲು ಪದಗಳಿಗಾಗಿ ಅವರು ಹುಡುಕಾಡುತ್ತಿದ್ದರು. ಇದೆಲ್ಲವೂ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಅವರ ಪತ್ನಿ ದೂರಿದ್ದಾರೆ.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಪ್ರಸ್ತುತ ನವೀ ಮುಂಬಯಿಯ ತಾಲೋಜ ಜೈಲಿನಲ್ಲಿರುವ ತೆಲುಗು ಕವಿ ಮತ್ತು ಹೋರಾಟಗಾರ ವರವರ ರಾವ್‌ 2018ರಿಂದ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಕೋವಿಡ್ -19 ಗೆ ಒಳಗಾಗುವ ಸಾಧ್ಯತೆಯನ್ನು ಉಲ್ಲೇಖಿಸಿ ರಾವ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಜೂನ್ 27 ರಂದು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

“ರಾಜ್ಯ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದೆ. ಅವರ ಮೆದುಳಿಗೆ ಹಾನಿಯಾಗುತ್ತಿದೆ. ಈ ಸಮಯದಲ್ಲಿ ನಮ್ಮ ಏಕೈಕ ಬೇಡಿಕೆಯೆಂದರೆ ಅವರಿಗೆ ವೈದ್ಯಕೀಯ ಆರೈಕೆ ನೀಡುವುದು ಇಲ್ಲವೇ ಜಾಮೀನು ನೀಡಿ ಅವರನ್ನು ಕುಟುಂಬಕ್ಕೆ ನೀಡುವುದು. ನಾವು ಅವರನ್ನು ನೋಡಿಕೊಳ್ಳುತ್ತೇವೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ನೀಡುತ್ತದೆ. ವರವರ ರಾವ್ ಅವರ ಜೀವನ ಅಪಾಯದಲ್ಲಿದೆ. ದಯವಿಟ್ಟು ಅವರನ್ನು ಜೈಲಿನಲ್ಲಿ ಕೊಲ್ಲಬೇಡಿ” ಎಂದು ರಾವ್ ಅವರ ಸೋದರಳಿಯ ಎನ್ ವೇಣುಗೋಪಾಲ್ ರಾವ್ ಹೇಳಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, ರಾವ್ ಅವರನ್ನು ಮೇ 28, 2020 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತಲೋಜಾ ಜೈಲಿನಿಂದ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಿದಾಗಿನಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮೂರು ದಿನಗಳ ನಂತರ ಜೈಲಿಗೆ ಕಳುಹಿಸಲಾಗಿದ್ದರೂ ಸಹ, ಅಲ್ಲಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಮತ್ತು ಅವರಿಗೆ ಇನ್ನೂ ತುರ್ತು ಆರೋಗ್ಯ ರಕ್ಷಣೆಯ ಅವಶ್ಯಕತೆಯಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

1969 ರಿಂದ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ರಾವ್‌ ಮುಂಚೂಣಿಯಲ್ಲಿದ್ದಾರೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅಥವಾ ಸರ್ಕಾರದ ಯಾವುದೇ ಅಧಿಕಾರಿಗಳು ಕುಟುಂಬದ ಮನವಿಗೆ ಸ್ಪಂದಿಸಿಲ್ಲ ಎಂದು ರಾವ್ ಪತ್ನಿ ಹೇಮಲತಾ ದೂರಿದ್ದಾರೆ.

ಡಿಸೆಂಬರ್ 29, 2017 ರಂದು ಪುಣೆಯ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಎಲ್ಗಾರ್ ಪರಿಷತ್ ಕಾರ್ಯಕ್ರಮ ಆರೋಜಿಸಿ ಪ್ರಚೋದನಾಕಾರಿ ಭಾಷಣ ಮಾಡಿ, ಆ ಮೂಲಕ ದಲಿತರ ಮೇಲಿನ ಹಲ್ಲೆಗೆ ಕಾರಣರಾಗಿದ್ದಾರೆ. ಇದು ಕೇಂದ್ರ ಸರ್ಕಾರವನ್ನು ಉರುಳಿಸುವ ಕ್ರಿಮಿನಲ್ ಪಿತೂರಿಯ ಭಾಗವಾಗಿದೆ ಎಂಬ ಆರೋಪದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ವರವರ ರಾವ್‌ ಕೂಡ ಒಬ್ಬರಾಗಿದ್ದಾರೆ.


ಇದನ್ನೂ ಓದಿ; ಭೀಮಾ ಕೋರೆಗಾಂವ್- ಕೇಂದ್ರದ ಹಸ್ತಕ್ಷೇಪ ದುರುದ್ದೇಶಪೂರಿತ

LEAVE A REPLY

Please enter your comment!
Please enter your name here