ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಬಂಡಾಯ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ರಾಜಸ್ಥಾನದ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದ ಶಾಸಕರು ಬಿಜೆಪಿಯೊಂದಿಗೆ ಸೇರಿ ಸರ್ಕಾರ ಬೀಳಿಸಲು ಸಂಚು ಹೂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವು ಬಂಡಾಯ ಶಾಸಕರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್‌ನಲ್ಲಿ ಆರೋಪಿಸಲಾಗಿರುವ ಬಿಜೆಪಿ ನಾಯಕ ಸಂಜಯ್ ಜೈನ್ ಎಂಬ ಉದ್ಯಮಿಯನ್ನು ಬಂಧಿಸಲಾಗಿದೆ. ಆತ ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿದ್ದ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ನಿರಾಕರಿಸಿದೆ.
ಬಿಜೆಪಿಯೊಂದಿಗೆ ಸೇರಿ ಸರ್ಕಾರ ಉರುಳಿಸಲು ಸಂಚು ಮಾಡಿದ್ದಾರೆ ಎಂಬ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಭನ್ವರ್ ಲಾಲ್ ಶರ್ಮಾ ಮತ್ತು ಮತ್ತೊಬ್ಬ ಬಂಡಾಯ ಶಾಸಕ ವಿಶ್ವೇಂದ್ರ ಸಿಂಗ್ ಅವರನ್ನು ಶಾಸಕ ಸ್ಥಾನದಿಂದ ಕಾಂಗ್ರೆಸ್ ಅಮಾನತುಗೊಳಿಸಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಮಾತನಾಡಿ, ಎರಡು ಆಡಿಯೋ ರೆಕಾರ್ಡಿಂಗ್‌ಗಳು ಹೊರಬಂದಿದ್ದು, ಇದರಲ್ಲಿ ಭನ್ವರ್ ಲಾಲ್ ಶರ್ಮಾ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ್ದಾರೆ. ಆಡಿಯೋ ಧ್ವನಿಯೊಂದರಲ್ಲಿ ರಾಜಸ್ಥಾನದ ಹಿರಿಯ ಬಿಜೆಪಿ ಮುಖಂಡ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ಶೇಖಾವತ್ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
“ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ಆ ಆಡಿಯೊ ಧ್ವನಿ ನನ್ನದಲ್ಲ. ನನ್ನನ್ನು ಪ್ರಶ್ನಿಸಲು ಕರೆದರೆ ನಾನು ಖಂಡಿತವಾಗಿಯೂ ಹೋಗುತ್ತೇನೆ” ಎಂದು ಶೇಖಾವತ್ ಹೇಳಿದರು.
ಇದನ್ನೂ ಓದಿ: ಬಿಜೆಪಿಯೊಂದಿಗಿನ ಸಚಿನ್ ಪೈಲಟ್ ಬೆಂಬಲಿಗ ಶಾಸಕನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ ಗೆಹ್ಲೋಟ್ ಬಣ


