ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಕಾರಣಕರ್ತರು ಎನ್ನಲಾಗಿದ್ದ ಎಚ್. ವಿಶ್ವನಾಥ್ ಹಾಗೂ ಸಿ. ಪಿ. ಯೊಗೇಶ್ವರ್ ಸೇರಿದಂತೆ ಐವರನ್ನು ವಿಧಾನ ಪರಿಷತ್ತಿಗೆ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದೆ.
ರಾಜ್ಯ ಸರ್ಕಾರದ ಈ ಶಿಫಾರಸ್ಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ಸಿನಿಮಾ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್, ಸಾಹಿತ್ಯ ಕ್ಷೇತ್ರದಿಂದ ವಿಶ್ವನಾಥ್, ಸಮಾಜ ಸೇವಾ ಕ್ಷೇತ್ರದಿಂದ ಭಾರತಿ ಶೆಟ್ಟಿ, ಬುಡಕಟ್ಟು ಕ್ಷೇತ್ರದಿಂದ ಶಾಂತಾರಾಮ್ ಸಿದ್ದಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಡಾ.ತಳವಾರ್ ಸಾಬಣ್ಣ ಅವರನ್ನು ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.
ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರ ಸೂಚನೆಯಂತೆ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್, ಸಿ.ಪಿ. ಯೋಗೇಶ್ವರ್ ಅವರನ್ನು ಬಿಜೆಪಿ ಕೈಮಾಂಡ್ ಪರಿಷತ್ಗೆ ನಾಮನಿರ್ದೇಶನ ಮಾಡಿದೆ ಎನ್ನಲಾಗಿದೆ.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ಪತನದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದರು.
ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್. ವಿಶ್ವನಾಥ್ ಪರಾಭವಗೊಂಡಿದ್ದರು. ಈಗ ವಿಧಾನಪರಿಷತ್ ಪ್ರವೇಶಿಸುವ ಮೂಲಕ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ರಾಜ್ಯಪಾಲ ವಜುಭಾಯಿ ಮೊದಲಿಗೆ ಭಾರತೀ ಶೆಟ್ಟಿ, ಸಿ. ಪಿ. ಯೋಗೀಶ್ವರ್ ಹಾಗೂ ಎಚ್. ವಿಶ್ವನಾಥ್ ನೇಮಕಕ್ಕೆ ಅನುಮೋದನೆ ನೀಡಲು ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದ್ದು, ನಂತರ ಇಂದು ಬೆಳಿಗ್ಗೆ ರಾಜಭವನಕ್ಕೆ ಭೇಟಿನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರ ಜೊತೆ ಚೆರ್ಚಿಸಿ ರಾಜಕೀಯ ವ್ಯಕ್ತಿಗಳ ನೇಮಕಕ್ಕೂ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.
ರಾಜ್ಯದ ವಿಧಾನಪರಿಷತ್ನಲ್ಲಿ ಒಟ್ಟು 11 ಸ್ಥಾನಗಳನ್ನ ರಾಜ್ಯಪಾಲರೇ ನೇರವಾಗಿ ನಾಮನಿರ್ದೇಶನ ಮಾಡುತ್ತಾರೆ. ಪ್ರಸ್ತುತ ಐದು ಸ್ಥಾನಗಳು ಖಾಲಿ ಇದ್ದವು.
ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿ ಬೇಗುದಿ, ಕಾಂಗ್ರೆಸ್ ಒಳಾಟ ಮತ್ತು ಜೆಡಿಎಸ್‍ನಲ್ಲಿ ಎಲ್ಲವೂ ಮಾಮೂಲು


