Homeಮುಖಪುಟರಾಜ್ಯಸಭೆ ಚುನಾವಣೆ: ಬಿಜೆಪಿ ಬೇಗುದಿ, ಕಾಂಗ್ರೆಸ್ ಒಳಾಟ ಮತ್ತು ಜೆಡಿಎಸ್‍ನಲ್ಲಿ ಎಲ್ಲವೂ ಮಾಮೂಲು

ರಾಜ್ಯಸಭೆ ಚುನಾವಣೆ: ಬಿಜೆಪಿ ಬೇಗುದಿ, ಕಾಂಗ್ರೆಸ್ ಒಳಾಟ ಮತ್ತು ಜೆಡಿಎಸ್‍ನಲ್ಲಿ ಎಲ್ಲವೂ ಮಾಮೂಲು

- Advertisement -
- Advertisement -

ಕರೋನಾ ವೈರಸ್ ತಂದೊಡ್ಡಿದ ಸಂಕಟದಿಂದ ದೇಶ ಇನ್ನೂ ಪಾರಾಗಿಲ್ಲ, ಕೋವಿಡ್ 19ಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ, ನಿರುದ್ಯೋಗ ತಾಂಡವವಾಡುತ್ತಿದೆ. ವಲಸೆ ಕಾರ್ಮಿಕರ ಸ್ಥಿತಿ ಕರುಣಾಜನಕವಾಗಿದೆ ಪರಿಸ್ಥಿತಿ ಇಷ್ಟು ಸೂಕ್ಷ್ಮವಿರುವಾಗ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರ ನಡವಳಿಕೆಯಲ್ಲಿ ಏನು ಬದಲಾವಣೆ ಬಂದಿದೆ ಅಂತ ಹುಡುಕಲು ಹೊರಟರೆ ಕಾಣುವುದು ನಿರಾಸೆ ಮಾತ್ರ. ಅದೇ ಅಸಡ್ಡೆ, ಅದೇ ಉಡಾಫೆ, ಅದೇ ಸ್ವಾರ್ಥ ಮತ್ತು ಅದೇ ಸುಳ್ಳುಗಳು.

ರಾಜಕಾರಣಿಗಳ ಜೊತೆಗೆ ಪೈಪೋಟಿಗೆ ಬಿದ್ದವರಂತೆ ಮಾಧ್ಯಮಗಳು ಐತಿಹಾಸಿಕ ಕಳಪೆ ಪ್ರದರ್ಶನವನ್ನು ಮುಂದುವರಿಸಿವೆ. ಆಡಳಿತ ಪಕ್ಷದ ವೈಫಲ್ಯಗಳನ್ನು ಮುಚ್ಚಿಡುತ್ತಾ ವಿರೋಧಪಕ್ಷಗಳಿಗೆ ಪ್ರಶ್ನೆ ಮಾಡುತ್ತಾ ಹಳಿತಪ್ಪಿದ ದೇಶದ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿಯುವುದನ್ನು ಬಿಟ್ಟು ವಲಸೆ ಕಾರ್ಮಿಕರ ಬಗ್ಗೆ ವ್ಯಂಗ್ಯ ಮಾಡುತ್ತಾ ಕಾಲ ತಳ್ಳುತ್ತಿವೆ.

ಕರೋನೋತ್ತರ ಕಾಲಘಟ್ಟ ಇನ್ನು ಹೆಚ್ಚಿನ ಆತಂಕವನ್ನು ಹೊತ್ತು ತರಲಿದೆ ಅನ್ನುವ ದುಗುಡದಲ್ಲಿ ಜನ ದಿನ ದೂಡುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ರಾಜ್ಯಸಭೆ ಚುನಾವಣೆಯ ರಂಗೇರಿಸಲಾಗಿದೆ. ಕರ್ನಾಟಕದಿಂದ ಖಾಲಿ ಇರುವ ನಾಲ್ಕು ಸ್ಥಾನಗಳಿಗಾಗಿ ಚುನಾವಣೆ ನಡೆಯಬೇಕಾಗಿದ್ದು, ಯಾವ ಪಕ್ಷದವರು ಹೆಚ್ಚಿನ ಅಭ್ಯರ್ಥಿ ಹಾಕದ್ದರಿಂದ ಅವಿರೋಧ ಆಯ್ಕೆಗೆ ವೇದಿಕೆ ಸಜ್ಜುಗೊಂಡಿದೆ.

ಮೂರನೇ ಅಭ್ಯರ್ಥಿ ಹಾಕದಿರಲು ಬಿಜೆಪಿ ನಿರ್ಧರಿಸುವ ಮೂಲಕ ರಾಜ್ಯಸಭೆ ಚುನಾವಣೆಯ ಸುತ್ತ ಇದ್ದ ಕುತೂಹಲದ ಪೊರೆ ಕಳಚಿದೆ. ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು ಐದನೇ ಅಭ್ಯರ್ಥಿ ಇಲ್ಲದೇ ಹೋದರೇ ಎಲ್ಲ ಕಣದಲ್ಲಿರುವ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಸಂಭವ ಇದೆ.

ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಕಾಂಗ್ರೆಸ್ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‍ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಣದಲ್ಲಿದ್ದಾರೆ.

ಕಾಂಗ್ರೆಸಿನ ಬಿ.ಕೆ.ಹರಿಪ್ರಸಾದ್ ಹಾಗೂ ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ ಕೋರೆ ಮತ್ತು ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಅವರು ನಿವೃತ್ತರಾಗಲಿದ್ದು ಆ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

ಈ ಪೈಕಿ ಪ್ರಭಾಕರ ಕೋರೆ ಇನ್ನೊಂದು ಅವಧಿಗೆ ಪುನರಾಯ್ಕೆ ಬಯಸಿದ್ದರಾದರೂ ಬಿಜೆಪಿ ವರಿಷ್ಠರು ಅವರಾಸೆಗೆ ಸ್ಪಂದಿಸಿಲ್ಲ. ಅಲ್ಲದೇ ಮತ್ತೊಬ್ಬ ಪ್ರಬಲ ಆಕಾಂಕ್ಷಿ ರಮೇಶ್ ಕತ್ತಿ ಅವರನ್ನೂ ಪುರಸ್ಕರಿಸಿಲ್ಲವೆನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಕಳವಳ ಉಂಟುಮಾಡಿದೆ.

ತೀರಾ ಅನಿರೀಕ್ಷಿತವಾಗಿ ಬಿಜೆಪಿ ಹೈಕಮಾಂಡ್ ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿರಿಸಿ ಪಕ್ಷ ಸಂಘಟಕರಿಗೆ ರಾಜ್ಯಸಭಾ ಟಿಕೆಟ್ ನೀಡಿರುವುದು ರಾಜ್ಯ ಬಿಜೆಪಿಯಲ್ಲಿ ತಳಮಳಕ್ಕೆ ಕಾರಣವಾಗಿದೆ. ರಾಜ್ಯ ಘಟಕ ಶಿಫಾರಸು ಮಾಡಿದ್ದ ಹೆಸರುಗಳ ಪಟ್ಟಿಯನ್ನು ಕಸದ ಬುಟ್ಟಿಗೆ ಎಸೆದು ಹೊಸ ಮುಖಗಳಾದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದಾರೆ..

ಹಾಗೆ ನೋಡಿದರೇ ಇಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದವರೇ. ಈರಣ್ಣ ಒಮ್ಮೆ (1994) ವಿಧಾನಸಭಾ ಚುನಾವಣೆಗೆ ನಿಂತು ಸೋತಿದ್ದರೂ ಪಕ್ಷ ಸಂಘಟನೆಯಲ್ಲಿ ಪ್ರಮುಖರಾಗಿದ್ದವರು. ಪ್ರಸ್ತುತ ಬೆಳಗಾವಿ ವಿಭಾಗದ ಪ್ರಭಾರಿಯಾಗಿರುವ ಈರಣ್ಣ ಈ ಹಿಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರೂ ಆಗಿದ್ದರು.

ಇನ್ನೂ ರಾಯಚೂರಿನವರಾದ ಅಶೋಕ್ ಗಸ್ತಿ ಎಬಿವಿಪಿ ಹಿನ್ನೆಲೆಯವರು. ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರೂ ರಾಜ್ಯ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತ. ಜೊತೆಗೆ ಬಳ್ಳಾರಿ ವಿಭಾಗದ ಪ್ರಭಾರಿಯೂ ಆಗಿರುವ ಅಶೋಕ್ ಗಸ್ತಿ ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು.

ಇವರಿಬ್ಬರ ಆಯ್ಕೆಯಿಂದ ಬಿಜೆಪಿಯು ಎಂದಿನ ರಾಜಕೀಯ ಮಾಡುವವರಿಗಿಂತ ತನ್ನ ಸಂಘಟಕರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ಸ್ಪಷ್ಟವಾಗಿ ರವಾನಿಸಿದೆ. ಭಾನುವಾರವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದ ಬಿಜೆಪಿಯ ದಿಲ್ಲಿ ವರಿಷ್ಠರು ಕೋರ್ ಕಮಿಟಿ ಶಿಫಾರಸು ಮಾಡಿರುವ ಹೆಸರುಗಳ ಬದಲಿಗೆ ಬೇರೆ ಹೆಸರು ಸೂಚಿಸುವಂತೆ ಕೇಳಿದ್ದರು.

ಈ ಸೂಚನೆಯ ಪ್ರಕಾರ ಯಡಿಯೂರಪ್ಪನವರು ಒಂದೆರಡು ಹೆಸರು ಸೂಚಿಸಿದ್ದರಲ್ಲದೇ ಕೋರೆ ಅಥವ ಕತ್ತಿ, ಇಬ್ಬರಲ್ಲಿ ಒಬ್ಬರಿಗಾದರೂ ಟಿಕೆಟ್ ನೀಡುವಂತೆ ಕೇಳಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ BSY ಬಲವನ್ನು ಕಡಿಮೆ ಮಾಡಬೇಕು ಜೊತೆಗೆ ಬೆಳಗಾವಿ ಒತ್ತಡದ ರಾಜಕೀಯಕ್ಕೆ ಮಣಿಯುವುದಿಲ್ಲ ಅನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ `ಸಂತೋಷ ಸೂತ್ರ’ ಕೆಲಸ ಮಾಡಿದೆ ಎಂಬುದರ ಬಗ್ಗೆ ಯಾರಿಗೂ ಸಂಶಯವಿಲ್ಲ. ಬಹಳ ಹಿಂದೆಯೇ ‘ಡಿಎನ್‍ಎ ನೋಡಿ ಪಾರ್ಟಿ ಟಿಕೆಟ್ ಕೊಡೋಕಾಗಲ್ಲ. ಹೀಗೆ ಮಾಡಿದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು?’ ಎಂಬ ಮಾತನ್ನು ಸ್ವತಃ ಸಂತೋಷ್ ಆಡಿದ್ದರು. ಇದು BSY ಬಣಕ್ಕೆ ಬಹು ದೊಡ್ಡ ಶಾಕ್ ನೀಡಿದೆ. ಪ್ರಭಾವಿ ನಾಯಕರೆಂದೇ ಗುರುತಿಸಲಾದ ಪ್ರಭಾಕರ ಕೋರೆ ಮತ್ತು ರಮೇಶ್ ಕತ್ತಿಯವರನ್ನು ಕೈಬಿಟ್ಟು ಪಕ್ಷದ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ಕ್ರಮ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ದಂಗು ಬಡಿಸಿದೆ.

ನೀವು ಹೇಳಿದ ಅಭ್ಯರ್ಥಿಗಳಿಗೆ ಬದಲಾಗಿ ಬೇರೆಯವರ ಹೆಸರನ್ನು ಹೇಳಿ ಎಂದು ದಿಲ್ಲಿ ನಾಯಕರು ಭಾನುವಾರ ಯಡಿಯೂರಪ್ಪನವರನ್ನು ಕೇಳಿದ್ದರಾದರೂ ಅದು ಕೇವಲ ಔಪಚಾರಿಕ ಎನ್ನುವುದು ಬಿಡಿಸಿ ಹೇಳಬೇಕಾಗಿಲ್ಲ. ಏನಾದರೂ ಮಾಡಿಕೊಳ್ಳಿ ಕಡೇ ಪಕ್ಷ ಕೋರೆ ಮತ್ತು ಕತ್ತಿ, ಇಬ್ಬರಲ್ಲಿ ಒಬ್ಬರಿಗಾದರೂ ಟಿಕೆಟ್ ನಿಡಿ ಎಂದು ಬಿಎಸ್‍ವೈ ವರಿಷ್ಠರನ್ನು ಕೇಳಿಕೊಂಡಿದ್ದರು. ಆದರೆ ಅವರ ಮಾತಿಗೂ ಮನ್ನಣೆ ದೊರಕಿಲ್ಲ.. ಹೀಗಾಗಿ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ.. ಇದೇ ಪರಿಸ್ಥಿತಿ ಮುಂದಿನ ಕೆಲವೇ ದಿನಗಳಲ್ಲಿ ಬರಲಿರುವ ವಿಧಾನ ಪರಿಷತ್ ಚುನಾವಣೆಯಲ್ಲೂ ಪುನರಾವರ್ತನೆ ಆಗಲಿದೆ ಎಂದು ಮೂಲಗಳು ಹೇಳಿವೆ. ಹಾಗೇನಾದರು ಆದರೆ ಃSಙ ಅವರಿಗೆ ಕೆಟ್ಟ ದಿನಗಳು ಕಾದಿವೆ ಅಂತ ಹೇಳಬಹುದು..

ಇನ್ನೊಂದಡೆ ರಾಜ್ಯಸಭಾ ಚುನಾವಣೆಯಲ್ಲಿ ಜನತಾದಳಕ್ಕೆ ಅಯಾಚಿತ ಬೆಂಬಲ ನೀಡಲು ಕಾಂಗ್ರೆಸ್ ಪ್ರಸ್ತಾಪಿಸಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಈ ನಡೆಯಿಂದ ಪಕ್ಷದೊಳಿಗಿನ ಕೆಲವ ಪ್ರಭಾವಿಗಳನ್ನು ಕಟ್ಟಿಹಾಕಲು ಷಡ್ಯಂತ್ರ ರೂಪಿಸಲಾಗಿದೆಯೇ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಖರ್ಗೆ ಆಯ್ಕೆ ಮತ್ತು ದೇವೇಗೌಡರಿಗೆ ಬೆಂಬಲ ತಂತ್ರಗಾರಿಕೆ ಹಿಂದೆ ಸಿದ್ರಾಮಯ್ಯ ಅವರನ್ನು ಕಟ್ಟಿಹಾಕುವ ತಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಅನುಸರಿಸಿದೆ..

ಇವೆರಡೂ ನಿರ್ಧಾರಗಳು ತನಗೆ ಗೊತ್ತಿಲ್ಲ ಅಥವಾ ತಮ್ಮನ್ನು ಈ ವಿಚಾರದಲ್ಲಿ ಕೇಳಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ನಂಬಲು ಅಸಾಧ್ಯ. ಹೈಕಮಾಂಡ್ ಕೈಗೆ ಕೋಲು ಕೊಟ್ಟು ಪಕ್ಷದಲ್ಲಿನ ತಮ್ಮ ವಿರೋಧಿಗಳನ್ನು ಡಿಕೆಶಿ ಮಟ್ಟ ಹಾಕುತ್ತಿದ್ದಾರೆ ಎನ್ನುವುದು ಸ್ಪಷ್ಟ. ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಡಿಕೆಶಿ ತಮ್ಮ ಹಳೇ ರಾಜಕೀಯ ವೈರತ್ವ ಮರೆತು ಗೌಡರ ಕುಟುಂಬದೊಂದಿಗೆ ರಾಜಿ ಆಗಿದ್ದಾರೆ.

ಇ.ಡಿ. ಪ್ರಕರಣದಲ್ಲಿ ಜೈಲಿಗೆ ಹೋಗುವ ಪ್ರಸಂಗ ಬಂದಾಗಲೂ ಗೌಡರು ಡಿಕೆಶಿ ಪರ ನಿಂತಿದ್ದರು. ತೀರಾ ಇತ್ತೀಚೆಗೆ ಗೌಡರ ಹುಟ್ಟುಹಬ್ಬದ ನೆಪದಲ್ಲಿ ಅವರ ಮನೆಗೆ ಭೇಟಿ ನೀಡಿ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಖರ್ಗೆ ಮತ್ತು ದೇವೇಗೌಡರನ್ನು ಬೆಂಬಲಿಸಿರುವ ನಿರ್ಧಾರದ ಹಿಂದೆ ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ರಾಮಯ್ಯ ಪ್ರಾಬಲ್ಯವನ್ನು ಮುರಿಯುವ ದೂರಗಾಮಿ ಉದ್ದೇಶವೂ ಇದೆ. ಇದನ್ನು ಒಪ್ಪದವರೂ ಇದ್ದಾರೆ. ಕಾಂಗ್ರೆಸ್‍ಗೆ ಎರಡನೇ ಸ್ಥಾನವನ್ನು ಗೆದ್ದುಕೊಳ್ಳುವ ಸಾಧ್ಯತೆಯಿರಲಿಲ್ಲ ಮತ್ತು ಜೆಡಿಎಸ್‍ಗೆ ಸ್ವತಂತ್ರವಾಗಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅವಕಾಶವಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನವರಿಬ್ಬರೂ ಸೇರಿ ಮೂರನೆಯವರಿಗೆ ಬೆಂಬಲಿಸಬೇಕು, ಇಲ್ಲವೇ ಒಂದಷ್ಟು ಜನರು ಬಿಜೆಪಿಯು ಕಣಕ್ಕಿಳಿಸುವ ಮೂರನೆಯ ಅಭ್ಯರ್ಥಿಯ ಕಡೆಗೂ ಒಲವು ತೋರಿಸಬಹುದು. ಇನ್ನೂ ಕೆಟ್ಟ ಪರಿಸ್ಥಿತಿ ಉಂಟಾದರೆ, ಬಿಜೆಪಿ ಹಾಗೂ ಜೆಡಿಎಸ್‍ಗಳಲು ಸೇರಿ ಮೂರನೆಯ ಅಭ್ಯರ್ಥಿಯೊಬ್ಬರನ್ನು ಗೆಲ್ಲಿಸಿಕೊಂಡು ಬರಲೂಬಹುದು. ಅದರ ಬದಲು ದೇವೇಗೌಡರೇ ಕಣಕ್ಕಿಳಿದರೆ ಕರ್ನಾಟಕದ ಮಾಜಿ ಪ್ರಧಾನಿಯ ಗೆಲುವಿಗೆ ತಾವು ಕಾರಣರೆಂಬ ಗುಡ್‍ವಿಲ್ ಸಹಾ ಸಿಗುತ್ತದೆ ಎಂಬುದಷ್ಟೇ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರವಾಗಿದೆ ಎಂಬುದು ಆ ಇನ್ನೊಂದು ವಾದ.

ಗೌಡರೊಂದಿಗಿನ ಹೊಂದಾಣಿಕೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿಗಳ ಧೃವೀಕರಣದ ಪ್ರಯತ್ನ ಎಂದೂ ಹೇಳಲಾಗುತ್ತಿದೆ. ಅಂದ ಮೇಲೆ ಬಿಎಸ್‍ವೈ ಇಲ್ಲಿ ಬರೇ ಉತ್ಸವ ಮೂರ್ತಿಯಾಗಿರುತ್ತಾರೆ. ಪಕ್ಷದಲ್ಲಿ ಅವರದ್ದೇನೂ ನಡೆಯುವುದಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.

ಈ ಸನ್ನಿವೇಶದಲ್ಲಿ ಈ ಮೊದಲು ಬಂಡಾಯದ ಕಹಳೆ ಮೊಳಗಿಸಿದ್ದ ಕತ್ತಿ ಸೋದರರು ಅದನ್ನೇ ಮುಂದುರಿಸುತ್ತಾರಾ? ಚುನಾವಣೆ ನಡೆಯಲಿ ಅಥವಾ ನಡೆಯದೇ ಇರಲಿ ಪಕ್ಷದ ಇಬ್ಬರು ಅಧಿಕೃತ ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಆರಿಸಿ ಕಳಿಸುವ ಹೊಣೆ ಸಿಎಂ ಯಡಿಯೂರಪ್ಪ ಅವರ ಮೇಲಿದೆ. ಸದ್ಯ ಅವರು ಹೈಕಮಾಂಡನ್ನು ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಬಿಜೆಪಿಯ ಬಹುತೇಕ ಶಾಸಕರದ್ದೂ ಇದೇ ಪರಿಸ್ಥಿತಿ.

ಹೀಗಿರುವಾಗ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಯಾರಾದರೂ ಕಣಕ್ಕಿಳಿಯುವ ಪ್ರಯತ್ನ ಮಾಡಿದರೆ ಅವರಿಗೆ ಅನುಮೋದಕರಾಗಿಯೂ ಶಾಸಕರ ಬೆಂಬಲ ಸಿಗುವ ಸಾಧ್ಯತೆಗಳಿಲ್ಲ. ಅಷ್ಟೇ ಅಲ್ಲದೇ ಬಿಜೆಪಿಯ ಆಶ್ಚರ್ಯಕರ ಅಭ್ಯರ್ಥಿಗಳಿಗೆ ಎದುರಾಡುವ ಕೆಲಸವನ್ನು ಈಗಂತೂ ಕತ್ತಿ, ಕೋರೆಗಳು ಮಾಡುವುದಿಲ್ಲ. ಮಾಡುವ ಪರಿಸ್ಥಿತಿಯೂ ಇಲ್ಲ. ಆದರೆ, ಮುಂದಿನ ದಿನಗಳಲ್ಲೂ ಇವೆಲ್ಲಾ ಹೀಗೆಯೇ ಉಳಿಯುತ್ತದೆಯೇ ಎಂಬ ಪ್ರಶ್ನೆ ಉಳಿದೇ ಇರುತ್ತದೆ. ಸಚಿವ ಸಂಪುಟ ಪುನರ್‍ರಚನೆಗಾಗಿ ಕಾದು ಕುಳಿತರೂ ಪ್ರಯೋಜನವಿಲ್ಲವೆಂಬುದು ಅವರಿಗೂ ಗೊತ್ತಿದೆ. ಈ ಬೇಗುದಿಯ ಮುಂದಿನ ಪರಿಣಾಮಗಳನ್ನಂತೂ ಕಾದು ನೋಡಬೇಕಿದೆ.


ಇದನ್ನಿ ಓದಿ: LKG ಯಿಂದ 7 ನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ ರದ್ದು: ಸಚಿವ ಸಂಪುಟ ತೀರ್ಮಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...