ಲಡಾಖ್ ಹಾಗೂ ಜಮ್ಮುಕಾಶ್ಮೀರ ಎಲ್ಲಿಯವರೆಗೆ ಕೇಂದ್ರಾಡಳಿತವಾಗಿರುತ್ತದೋ ಅಲ್ಲಿಯವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಘೋಷಿಸಿದ್ದಾರೆ.
2019 ರ ಆಗಸ್ಟ್ 5 ರಂದು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವ ಅವರ ಪಕ್ಷ, ಕೇಂದ್ರ ನಡೆಯನ್ನು ಮುಂದಕ್ಕೂ ವಿರೋಧಿಸುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
ಆಗಸ್ಟ್ 5 ಕ್ಕಿಂತಲೂ ಮೊದಲು ಆಗಿನ ಜಮ್ಮುಕಾಶ್ಮಿರದ ರಾಜ್ಯಪಾಲ ಸತ್ಪಾಲ್ ಮಲಿಕ್ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದೆ. ಆದರೆ ಆಗ ಕಾಶ್ಮೀರದ 370 ವಿಧಿಯ ಬಗ್ಗೆ ಚರ್ಚಿಸಿರಲಿಲ್ಲ. ನಂತರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಾಏಕಿಯಾಗಿ ವಿಶೇಷ ಸ್ಥಾನಮಾನ ರದ್ದತಿ ಮಾಡಲಾಯ್ತು. ಈಗ ಮುಂಬರುವ ವಿಧಾನಸಭಾ ಚುನಾವಣೆಗೆ ಹೆಚ್ಚುವರಿ ಸೈನಿಕರನ್ನು ಶ್ರೀನಗರಕ್ಕೆ ಕಳುಹಿಸಲಾಗುತ್ತಿದೆ ಎಂದು ಒಮರ್ ಅಬ್ದುಲ್ಲ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ ಸಮರ್ಥನೆಯನ್ನು ಲೇಖನದಲ್ಲಿ ಖಂಡಿಸಿರುವ ಮಾಜಿ ಮುಖ್ಯಮಂತ್ರಿ, ಒಂದು ವರ್ಷದ ನಂತರ ಆ ಸಮರ್ಥನೆಗಳೆಲ್ಲ ಸುಳ್ಳಾಗಿವೆ ಎಂದು ಹೇಳುವ ಮೂಲಕ ಗಮನಸೆಳೆದಿದ್ದಾರೆ. ಅವರು ಹೆಸರಿಸಿರುವ ಕೆಲ ಉದಾಹರಣೆಗಳು ಕೆಳಗಿನಂತಿವೆ.
1. ಆರ್ಟಿಕಲ್ 370 ಉಗ್ರಗಾಮಿತ್ವಕ್ಕೆ ಉತ್ತೇಜನ ನೀಡಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಅದು ರದ್ದಾದ ಒಂದು ವರ್ಷದ ನಂತರ ಜಮ್ಮುಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆಯಲ್ಲ?
2. ಆರ್ಟಿಕಲ್ 370, ಜನರನ್ನು ಬಡತನದಲ್ಲಿರಿಸಿತ್ತು ಎಂದು ಆರೋಪಿಸಲಾಗಿತ್ತು. ಆದರೆ ಒಂದು ವರ್ಷದ ನಂತರವೂ ಇಲ್ಲಿನ ಜನರಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
3. 370 ನೇ ವಿಧಿ ರದ್ದತಿಯಿಂದ ರಾಜ್ಯದಲ್ಲಿ ಹೂಡಿಕೆ ಹೆಚ್ಚಾಗಲಿದೆ ಎನ್ನಲಾಗಿತ್ತು. ಆದರೆ ಭದ್ರತೆ ಮತ್ತು ಮಿಲಿಟರೀಕರಣದಿಂದಾಗಿ ಕಳೆದ ಒಂದು ವರ್ಷದಲ್ಲಿ ಯಾವುದೇ ಹೂಡಿಕೆಯಾಗಿಲ್ಲ.
4. 370 ನೇ ವಿಧಿಯಿಂದಾಗಿ ಜಮ್ಮುಕಾಶ್ಮೀರ ಹಿಂದುಳಿದಿದೆ ಎಂದು ಹೇಳಲಾಗುತ್ತಿತ್ತು. ಆದರೆ ಹಲವಾರು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯವು ‘ಅಭಿವೃದ್ಧಿ ಹೊಂದಿದ’ ಗುಜರಾತ್ ರಾಜ್ಯಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
ಒಮರ್ ಅಬ್ದುಲ್ಲಾ ಕೇಂದ್ರಾಡಳಿತ ಪ್ರದೇಶಗಳ ರಚನೆಯನ್ನು ಪ್ರಶ್ನಿಸಿದ್ದಾರೆ. ಒಂದು ರಾಜ್ಯವನ್ನು ಕೇಂದ್ರಾಡಳಿತವನ್ನಾಗಿ ಮಾಡಿದ್ದು ಇದುವೆ ಮೊದಲು ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಮೇಲೆ ತಮ್ಮ ಪಕ್ಷಕ್ಕೆ ನಂಬಿಕೆಯಿದೆ ಎಂದು ಪುನರುಚ್ಚರಿಸಿದ ಅವರು ಸುಪ್ರೀಂ ಕೋರ್ಟ್‌ನಲ್ಲಿ 370 ನೇ ವಿಧಿಯನ್ನು ಹಿಂಪಡೆಯುವುದು ಹಾಗೂ ಅಕ್ರಮವಾಗಿ ಬಂಧನದಲ್ಲಿರುವ ಜಮ್ಮುಕಾಶ್ಮೀರದಲ್ಲಿನ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲು ಅಹಿಂಸಾತ್ಮಕ ಮಾರ್ಗದ ಹೋರಾಟಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
“ಕೇಂದ್ರ ಸರ್ಕಾರವು ಜಮ್ಮಕಾಶ್ಮೀರಕ್ಕೆ ಮಾಡಿದ ಅನ್ಯಾಯಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಒಪ್ಪುವುದಿಲ್ಲ” ಎಂದು ಅವರು ತಮ್ಮ ಲೇಖನದಲ್ಲಿ ದೃಡಪಡಿಸಿದಿದ್ದಾರೆ.
ಇದನ್ನೂ ಓದಿ: ಒಮರ್ ಅಬ್ದುಲ್ಲಾ ಬಂಧನದ ವಿರುದ್ದ ಅರ್ಜಿ : ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಶಾಂತನಗೌಡರ್


