Homeಮುಖಪುಟಒಮರ್ ಅಬ್ದುಲ್ಲಾ ಬಂಧನದ ವಿರುದ್ದ ಅರ್ಜಿ : ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಶಾಂತನಗೌಡರ್

ಒಮರ್ ಅಬ್ದುಲ್ಲಾ ಬಂಧನದ ವಿರುದ್ದ ಅರ್ಜಿ : ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಶಾಂತನಗೌಡರ್

- Advertisement -
- Advertisement -

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ಸಾರ್ವಜನಿಕ ಸುರಕ್ಷ ಕಾಯ್ದೆಯಡಿ ಆರೋಪಿಸಿ ಬಂಧನ ಮುಂದುವರಿಸಿರುವುದನ್ನು ಪ್ರಶ್ನಿಸಿ ಅಬ್ದುಲ್ಲ ಸಹೋದರಿ ಸಾರ ಪೈಲಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಶಾಂತನಗೌಡರ್ ಹಿಂದೆ ಸರಿದಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಸಮಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಮತ್ತು ಇತರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿತ್ತು. ಆರು ತಿಂಗಳ ನಂತರ ಬಿಡುಗಡೆ ಮಾಡಿದ ಸ್ವಲ್ಪ ಸಮಯದಲ್ಲಿಯೇ ಕಳೆದ ಗುರುವಾರ ಕಣಿವೆ ರಾಜ್ಯದ ನಾಯಕರ ಮೇಲೆ ರಾಷ್ಟ್ರೀಯ ಸುರಕ್ಷ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.

ಸಾರ್ವಜನಿಕ ಸುರಕ್ಷ ಕಾಯ್ದೆಯಡಿ ಈ ನಾಯಕರ ಮೇಲೆ ಆರೋಪ ಹೊರಿಸುತ್ತಿದ್ದಂತೆಯೇ ಒಮರ್ ಅಬ್ದುಲ್ಲಾ ಸಹೋದರಿ ಸಾರಾ ಪೈಲಟ್ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದರು. 370ನೇ ವಿಧಿ ರದ್ದುಪಡಿಸಿದ ಮೇಲೆ ಬಂಧನಕ್ಕೊಳಗಾದವರ ಅವಧಿ ಪೂರ್ಣಗೊಳ್ಳುತ್ತಿರುವ ನಡುವೆಯೇ ಸಾರ್ವಜನಿಕ ಸುರಕ್ಷ ಕಾಯ್ದೆಯಡಿ ಆರೋಪ ಹೊರಿಸಿರುವುದನ್ನು ತ್ರಿಸದಸ್ಯ ಪೀಠದ ಮುಂದೆ ಪ್ರಶ್ನಿಸಲಾಗಿತ್ತು.

ಸಾರ ಪೈಲಟ್ ಅರ್ಜಿ ಗುರುವಾರ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಶಾಂತನಗೌಡರ್ ಮತ್ತು ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ವಿಚಾರಣೆಗೆ ಬರುವ ಮೊದಲೇ ನ್ಯಾಯಮೂರ್ತಿ ಶಾಂತನೌಡರ್ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.

ಈ ಪ್ರಕರಣದ ವಿಚಾರಣೆಯಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಶಾಂತನಗೌಡರ್ ಹೇಳಿದ್ದಾರೆ. ಆದರೆ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ದಿ ವೈರ್ ವರದಿ ಮಾಡಿದೆ. ಗುರುವಾರ ‌ಈ ಪ್ರಕರಣ ವಿಚಾರಣೆಗೆ ಬರಲಿದೆ ಎಂದು ಪೀಠ ಹೇಳಿದೆ.

ಪೈಲಟ್ ಅರ್ಜಿಯಲ್ಲಿ ಒಮರ್ ಅಬ್ದುಲ್ಲಾ ಬಂಧನ ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಹೇಳಲಾಗಿದೆ. ಅಬ್ದುಲ್ಲಾ ವಿರುದ್ದ ಸಾರ್ವಜನಿಕ ಸುರಕ್ಷ ಕಾಯ್ದೆಯಡಿ ಆರೋಪ ಹೊರಿಸಿರುವುದು ನಿಸ್ಸಂಶಯವಾಗಿ ತಪ್ಪು ಮತ್ತು ಹಾಸ್ಯಾಸ್ಪದ ಸಂಗತಿ ಎಂದು ತಿಳಿಸಲಾಗಿದೆ.

ಯಾವುದೇ ವಸ್ತುನಿಷ್ಟ ಗುರುತರ ಆರೋಪಗಳಿಲ್ಲದೇ ಬಂಧಿಸಿರುವುದು ಅಸ್ಪಷ್ಟ ಮತ್ತು ಅಪ್ರಸ್ತುತ ಎಂದು ಅರ್ಜಿಯಲ್ಲಿ ತಿಳಿಸಿದ್ದು, ಸಂವಿಧಾನದ Article 14, 21, 22ರಡಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಇದೇ ವೇಳೆ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಕೂಡ ತಮ್ಮ ಮೇಲೆ ಸಾರ್ವಜನಿಕ ಸುರಕ್ಷ ಕಾಯ್ದೆಯಡಿ ಆರೋಪಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎಂದು ದಿ ವೈರ್ ವರದಿ ಪ್ರಕಟಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read