ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಾಯರ ಜೀವನ-ಪವಾಡಗಳ ಕುರಿತ ಸಿನಿಮಾಗಳು ತಯಾರಾಗಿವೆ. ಖ್ಯಾತನಾಮ ಸಿನಿಮಾ ತಾರೆಯರು ಹಾಗೂ ತಂತ್ರಜ್ಞರು ಈ ಮೂಲಕ ರಾಯರಿಗೆ ಭಕ್ತಿ ಅರ್ಪಿಸಿದ್ದಾರೆ. ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತೆರೆಯ ಮೇಲೆ ರಾಯರ ಕತೆ ಹಾಗೂ ಪಾತ್ರಗಳ ಕುರಿತ ಲೇಖನವಿದು.
ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ರಾಯರ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತೆರೆಯ ಮೇಲೆ ರಾಯರ ಜೀವನಗಾಥೆ, ಪವಾಡಗಳು ಅನಾವರಣಗೊಂಡಿವೆ. ಸಾಮಾಜಿಕ, ಕೌಟುಂಬಿಕ ಚಿತ್ರಗಳಲ್ಲೂ ರಾಯರ ಭಕ್ತಿಗೀತೆಗಳು ಜನಪ್ರಿಯವಾಗಿವೆ. ಜಾತಿ, ಮತ, ಧರ್ಮಗಳನ್ನು ಮೀರಿದ ರಾಯರ ಪ್ರಭಾವಳಿಯೇ ಇದಕ್ಕೆ ಕಾರಣವಾಗಿರಬಹುದು.

ಕನ್ನಡ ಚಿತ್ರರಂಗದ ಚಟುವಟಿಕೆಗಳು ಚೆನ್ನೈನಲ್ಲಿ ನಡೆಯುತ್ತಿದ್ದ ದಿನಗಳಲ್ಲೇ ರಾಯರ ಆರಾಧನೆ ಆರಂಭವಾಗಿತ್ತು. ಹಿರಿಯ ತಂತ್ರಜ್ಞರಾದ ಬಿ. ಆರ್. ಪಂತುಲು, ಸಿಂಗ್ ಠಾಕೂರ್ ಚಿತ್ರ ನಿರ್ಮಾಣಕ್ಕೆ ಮುನ್ನ ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಬಿಡುಗಡೆ ಮಾಡುವ ಮುನ್ನ ಇವರು ತಮ್ಮ ಚಿತ್ರದ ಪ್ರಥಮ ಪ್ರತಿಯನ್ನು ಬೃಂದಾವನದಲ್ಲಿಟ್ಟು ಪೂಜಿಸುತ್ತಿದ್ದರಂತೆ.
ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್, ತಮಿಳು ಸ್ಟಾರ್ ರಜನೀಕಾಂತ್, ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ, ದ್ವಾರಕೀಶ್, ನಟ ಶಿವರಾಂ ಹಾಗೂ ಇವರ ಸಮಕಾಲೀನರೇನಕರು ಶುಭ ಕಾರ್ಯಕ್ಕೆ ಮುನ್ನ ರಾಯರ ಅನುಗ್ರಹ ಪಡೆಯುವುದು ಕಡ್ಡಾಯವಾಗಿತ್ತು.

ರಾಯರ ಪಾತ್ರದಲ್ಲಿ ರಾಜ್
ಚಿತ್ರ ನಿರ್ಮಾಪಕರಲ್ಲಿದ್ದ ರಾಯರೆಡೆಗಿನ ಭಕ್ತಿ – ಭಾವ ತೆರೆ ಮೇಲೆ ಮೂಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಸಿಂಗ್ ಠಾಕೂರ್ `ಮಂತ್ರಾಲಯ ಮಹಾತ್ಮೆ’ (1966) ನಿರ್ದೇಶಿಸಿದರು. ಡಾ. ರಾಜ್ ರಾಯರ ಪಾತ್ರಕ್ಕೆ ಜೀವ ತುಂಬಿದ್ದರು. ಚಿತ್ರದಲ್ಲಿ ರಾಯರೇ ರಚಿಸಿದ್ದ `ಇಂದು ಎನಗೆ ಗೋವಿಂದ…’ ಗೀತೆ ಬಳಕೆಯಾಗಿತ್ತು. 1980ರಲ್ಲಿ ಹುಣಸೂರು ಕೃಷ್ಣಮೂರ್ತಿ `ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ’ ನಿರ್ದೇಶಿಸಿದ್ದರು.

ಸರಿಸುಮಾರು ಇದೇ ಸಮಯದಲ್ಲಿ `ರಾಘವೇಂದ್ರ ವೈಭವ’ ಚಿತ್ರವೂ ತಯಾರಾಗಿತ್ತು. ಈ ಸಿನಿಮಾದಲ್ಲಿ ನಟ ಶ್ರೀನಾಥ್ ರಾಯರ ಪಾತ್ರದಲ್ಲಿ ನಟಿಸಿದ್ದರು. ಮುಂದೆ 2011ರಲ್ಲಿ `ಶ್ರೀ ರಾಘವೇಂದ್ರ ಸ್ವಾಮಿ’ ಕನ್ನಡ ಚಿತ್ರ ತೆರೆಕಂಡಿತ್ತು. ಕೃಷ್ಣಚಂದ್ರ ನಿರ್ದೇಶನದಲ್ಲಿ ತಯಾರಾದ ಚಿತ್ರದ ಶಿರ್ಷಿಕೆ ಪಾತ್ರವನ್ನು ರವೀಂದ್ರ ಗೋಪಾಲ ನಿರ್ವಹಿಸಿದ್ದರು.

ರಜನೀ ಸಿನಿಮಾ
ತಮಿಳು ಚಿತ್ರರಂಗದ ಜನಪ್ರಿಯ ನಟ ರಜನೀಕಾಂತ್ ರಾಯರ ಪರಮ ಭಕ್ತ. 1985 ರಲ್ಲಿ ಅವರು ಶಿರ್ಷಿಕೆ ಪಾತ್ರದಲ್ಲಿ ನಟಿಸಿದ್ದ `ಶ್ರೀ ರಾಘವೇಂದ್ರ’ ತಮಿಳು ಚಿತ್ರ ಮೂಡಿಬಂದಿತ್ತು. ರಜನಿಗೆ ಇದು ವೃತ್ತಿ ಜೀವನದ 100 ನೇ ಸಿನಿಮಾ. ಎಸ್. ಪಿ. ಮುತ್ತುರಾಮನ್ ನಿರ್ದೇಶನದಲ್ಲಿ ತಯಾರಾದ ಚಿತ್ರ `ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಹಾತ್ಯಂ’ ಶಿರ್ಷಿಕೆಯಡಿ ತೆಲುಗಿಗೂ ಡಬ್ ಆಗಿತ್ತು. ತಾವು ರಾಯರ ಪಾತ್ರದಲ್ಲಿ ನಟಿಸಲು ಡಾ. ರಾಜ್ ಪ್ರೇರಣೆ ಎಂದು ಹಿಂದೊಮ್ಮೆ ರಜನಿ ಹೇಳಿಕೊಂಡಿದ್ದರು.
ಬಿಡೆನು ನಿನ್ನ ಪಾದ…
ಭಕ್ತಿಪ್ರಧಾನ ಚಿತ್ರಗಳ ಹೊರತಾಗಿ ಇತರೆ ಪ್ರಯೋಗಗಳಲ್ಲೂ ರಾಯರ ಗೀತೆಗಳನ್ನು ನಾವು ನೋಡಬಹುದು. ಡಾ.ರಾಜ್‌ರ `ಪೂಜಿಸಲೆಂದೇ ಹೂಗಳ ತಂದೆ…’ (ಎರಡು ಕನಸು), `ಹಾಲಲ್ಲಾದರು ಹಾಕು…’ (ದೇವತಾ ಮನುಷ್ಯ) ಹಾಡುಗಳು ಜನಪ್ರಿಯವಾಗಿವೆ. ಸಂಕಷ್ಟದಲ್ಲಿ ರಾಯರನ್ನು ನೆನೆಯುವ `ಬಿಡೆನು ನಿನ್ನ ಪಾದ…’ (ನಾ ನಿನ್ನ ಬಿಡಲಾರೆ), `ದಾರಿ ಕಾಣದಾಗಿದೆ ರಾಘವೇಂದ್ರನೆ…’ (ದೀಪ) ಮತ್ತೆರಡು ಶ್ರೇಷ್ಠ ಉದಾಹರಣೆ. `ಭಾಗ್ಯವಂತ’ ಚಿತ್ರದ `ಗುರುವಾರ ಬಂತಮ್ಮ…’ ಸೇರಿದಂತೆ ಹಲವು ರಾಯರ ಭಕ್ತಿಗೀತೆಗಳು ರಚಿಸಲ್ಪಿಟ್ಟಿವೆ.

ಕಿರುತೆರೆಯಲ್ಲಿ…
ಕನ್ನಡ ಕಿರುತೆರೆಯಲ್ಲಿ ಮೂಡಿಬಂದ `ಶ್ರೀ ಗುರುರಾಘವೇಂದ್ರ ವೈಭವ’ ಸೀರಿಯಲ್ ಜನಮನ್ನಣೆಗೆ ಪಾತ್ರವಾಗಿತ್ತು. ಯುವನಟ ಪರೀಕ್ಷಿತ್ ಶಿರ್ಷಿಕೆ ಪಾತ್ರದಲ್ಲಿ ಅಭಿನಯಿಸಿದ್ದರು. ಸುವರ್ಣ ವಾಹಿನಿಯಲ್ಲಿ ನಿರ್ದೇಶಕ ಬ.ಲ.ಸುರೇಶ್ 565 ಸಂಚಿಕೆಗಳಲ್ಲಿ ಸಮಗ್ರವಾಗಿ ರಾಯರ ಕಥೆ, ಇತಿಹಾಸ ಕಟ್ಟಿಕೊಟ್ಟಿದ್ದರು. `ಕಲಿಯುಗದ ಕಲ್ಪತರು’, `ರಾಘವೇಂದ್ರ ವಿಜಯ’, `ಸಮಕಾಲೀನ ಇತಿಹಾಸ’ ಗ್ರಂಥಗಳನ್ನು ಆಧರಿಸಿ ಧಾರಾವಾಹಿಗೆ ಕಥೆ ಹೆಣೆಯಲಾಗಿತ್ತು.
ಈ ಟೀವಿ ವಾಹಿನಿಯಲ್ಲಿ `ಶ್ರೀ ರಾಘವೇಂದ್ರ ಮಹಿಮೆ’ ಶಿರ್ಷಿಕೆಯಡಿ ರಾಯರ ಕಥೆ ಮೂಡಿಬಂದಿತ್ತು. ಚಿತ್ರನಟ, ನೃತ್ಯ ತಾರೆ ಶ್ರೀಧರ್ ರಾಯರ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿಯೂ ರಾಯರ ಕಥೆಗಳು ಮೂಡಿಬಂದಿವೆ.
ಬರಹ: ಶಶಿಧರ ಚಿತ್ರದುರ್ಗ
ಫೋಟೋಗಳು: ಡಿ.ಸಿ.ನಾಗೇಶ್
ಓದಿ: ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ


