ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ

0
33

ಬಹುತೇಕರಿಗೆ ನೆನಪಿದೆ. ತೊಂಬತ್ತರ ದಶಕದ ಮಧ್ಯಭಾಗದಲ್ಲಿ, ಅಂದರೆ 1995ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರಂಗೀಲಾ’ ಚಿತ್ರ ಹೊರಬಂತು. 90ರ ದಶಕದ ಹಿಂದಿ ಚಿತ್ರರಂಗದ ಅಷ್ಟೇನು ಆಪ್ತವಲ್ಲದ ಸಿನಿ ಸಂಗೀತಕ್ಕೆ ಹೊಸ ಹುರುಪು ಬಂದಿತ್ತು. ಮೂವತ್ತು ವರ್ಷದ ಎ ಆರ್ ರೆಹಮಾನ್ ಸಿನಿ ಸಂಗೀತದ ಹೊಸ ರುಚಿಯನ್ನು ಉಣಿಸಿದರು. ಅಷ್ಟು ಹೊತ್ತಿಗೆ ದಕ್ಷಿಣ ಭಾರತದಲ್ಲಿ ಹದಿನೆಂಟು ಚಿತ್ರಗಳಿಗೆ ಸಂಗೀತ ನೀಡಿ ತಮ್ಮ ಛಾಪು ಒತ್ತಿದ್ದರು.

ದಕ್ಷಿಣದವರೇ ಆದ ವರ್ಮಾ ರೆಹಮಾನ್‍ರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು, ಬಾಲಿವುಡ್ ಸಿನಿ ಸಂಗೀತದ ಸ್ವರೂಪವನ್ನೇ ಬದಲಿಸಿತು.

ಅದು ಪಂಜಾಬಿ ಹಿನ್ನೆಲೆಯ ‘ರಂಗ್‍ದೇ ಬಸಂತಿ’ ಇರಲಿ, ಸೂಫಿ ಸಂಗೀತ ಅನುಭವ ನೀಡುವ ‘ಜೋಧಾ ಅಕ್ಬರ್’ ಇರಲಿ, ಪಾಶ್ಚಾತ್ಯ ಸ್ಪರ್ಶವಿರುವ ‘ಯುವ್‍ರಾಜ್’ ಇರಲಿ, ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು. ಅಂತಹ ವೈವಿಧ್ಯಮಯವಾದ ಸಂಗೀತ ನೀಡಿದ ಪ್ರತಿಭಾವಂತ ರೆಹಮಾನ್.

ಯಾಕೆ ಇಷ್ಟೆಲ್ಲಾ ನೆನಪಿಸಿಕೊಳ್ಳಬೇಕಾಯಿತು ಎಂದರೆ, ಯಾವ ಜನ ಈತನನ್ನು ಕೊಂಡಾಡಿದ್ದರೊ, ಅವರೇ ಗುಂಪುಗಾರಿಕೆ, ಸ್ವಜನಪಕ್ಷಪಾತ ಮಾಡುವ ಮೂಲಕ ತಮ್ಮನ್ನು ಅವಕಾಶಗಳಿಂದ ದೂರ ಮಾಡುತ್ತಿದ್ದಾರೆ ಎಂದು ಈಗ ಸ್ವತಃ ರೆಹಮಾನ್ ಹೇಳಿದ್ದಾರೆ. ಅವರು ‘ಗ್ಯಾಂಗ್’ ಎನ್ನುವ ಪದವನ್ನು ಬಳಸಿದ್ದಾರೆ. ಅಂದರೆ ಒಂದು ಗುಂಪು ವ್ಯವಸ್ಥಿತವಾಗಿ ಯಾರನ್ನು ಬೆಳೆಸಬೇಕು, ಯಾರನ್ನು ತುಳಿಯಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂಬುದನ್ನು ಸೂಚಿಸಿದ್ದಾರೆ.

ನಿಜ, ಯಾವುದೇ ಸೃಜನಶೀಲ ವ್ಯಕ್ತಿಯ ಸೃಜನಶಕ್ತಿ ಒಂದು ಕಾಲದ ನಂತರ ಆಕರ್ಷಣೆ ಕಳೆದುಕೊಳ್ಳುತ್ತದೆ. ಆದರೆ ರೆಹಮಾನ್ ಇತರೆ ಭಾಷೆಯ ಸಿನಿಮಾಗಳಿಗೆ ನೀಡುವ ಸಂಗೀತದಲ್ಲಿ ಇನ್ನೂ ಅದೇ ಮೋಡಿ ಉಳಿದಿದೆ. ಆದರೂ ಹಿಂದಿ ಚಿತ್ರರಂಗ ಅವರನ್ನು ದೂರವಿಟ್ಟಿದ್ದು ಏಕೆ?

ರೆಹಮಾನ್ ಸಾರ್ವಜನಿಕವಾಗಿ ಬಾಲಿವುಡ್‍ನ ಪಕ್ಷಪಾತವನ್ನು, ಗುಂಪುಗಾರಿಕೆಯ ಬಗ್ಗೆ ತಮ್ಮ ಅಸಮಾಧಾನ, ಬೇಸರವನ್ನು ಹೊರಹಾಕುವುದಕ್ಕೂ ಎರಡು ದಿನಗಳ ಮೊದಲು ಹಿಂದಿನ ಪ್ರಸಿದ್ಧ ನಿರ್ದೇಶಕರುಗಳಾದ ಅನುಭವ ಸಿನ್ಹಾ, ಹನ್ಸಲ್ ಮೆಹ್ತಾ ಮತ್ತು ಸುಧೀರ್ ಶರ್ಮಾ, ಇನ್ನು ಬಾಲಿವುಡ್‍ನಿಂದ ಹೊರನಡೆಯುವುದಾಗಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದು ಬಾಲಿವುಡ್ ಪಾಲಿಗೆ ಒಂದು ಆಘಾತ!

ತೊಂಬತ್ತರ ದಶಕದಲ್ಲಿ ಎರಡನೆಯ ದರ್ಜೆಯ ಸಿನಿಮಾಗಳೇ ಸದ್ದು ಮಾಡುತ್ತಿದ್ದಾಗ, ಹೊಸ ಅಲೆಯ ಸಿನಿಮಾ ಮತ್ತು ಸಂಗೀತ ಎರಡೂ ನಿಧಾನವಾಗಿ ತನ್ನ ಛಾಪು ಒತ್ತಿತು. ಇದು 2000ದಲ್ಲೂ ಮುಂದುವರೆದು ಹಿಂದಿ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆದವು.

ಖಾನ್, ಕಪೂರ್ ಸೇರಿದಂತೆ ಕೆಲವೇ ಕುಟುಂಬಗಳು ಹಿಂದಿ ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದವು. ಆದರೆ ಕಾಲ ಸರಿದಂತೆ ಯಾವುದೇ ನಟನೆಯ ಹಿನ್ನೆಲೆಯಿಲ್ಲದ, ಸಿನಿಮಾ ಕುಟುಂಬದವರಲ್ಲದ ಪ್ರತಿಭೆಗಳು ನಟನೆ, ನಿರ್ದೇಶನ, ಸಂಗೀತ ನಿರ್ದೇಶನದ ಕನಸುಗಳನ್ನು ಹೊತ್ತು ಬಾಲಿವುಡ್ ಅಂಗಳಕ್ಕೆ ಬಂದರು. ವರ್ಷಗಟ್ಟಲೆ ಕಷ್ಟಪಟ್ಟು ತಮ್ಮದೇ ಆದ ವರ್ಚಸ್ಸು ರೂಪಿಸಿಕೊಳ್ಳಲು ಶ್ರಮಿಸಿದರು.

ಈ ಲೇಖನ ಬರೆಯುವ ಹೊತ್ತಿಗೆ ‘ಗ್ಯಾಂಗ್’ವೊಂದರ ಸ್ವಜನ ಪಕ್ಷಪಾತ ಅವರ ವೃತ್ತಿಜೀವನಕ್ಕೆ ಎಷ್ಟು ತೊಂದರೆ ಕೊಟ್ಟಿತು ಎಂಬುದನ್ನು ನಟ ರಣವೀರ್ ಶೊರೆ ವಿವರಿಸಿದ್ದಾರೆ. ಮಹೇಶ್ ಕುಟುಂಬದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ಶೋರೆ, ತಮ್ಮ ವಿರುದ್ಧ ಹರಡಲಾದ ಗಾಳಿಸುದ್ದಿ, ಸುಳ್ಳುಗಳಿಂದ ಮುಕ್ತವಾಗಿ ನಟನಾಗಿ ಬೆಳೆಯುವುದಕ್ಕೆ ಉಂಟಾದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಮತ್ತೊಬ್ಬ ನಟ ಆಯುಷ್‌ಮಾನ್ ಖೊರನಾ, ಬಾಲಿವುಡ್‍ನಲ್ಲಿ ಸ್ವಜನ ಪಕ್ಷಪಾತವಿಲ್ಲದೇ ಹೋಗಿದ್ದರೆ ಐದು ವರ್ಷದ ಮೊದಲೇ ನಾನು ನಾಯಕ ನಟನಾಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ನಟ ಸುಶಾಂತ್ ರಾಜಪೂತ್ ಸಾವು ಹಲವರನ್ನು ಕಂಗೆಡಿಸಿದೆ. ಸಾಮಾನ್ಯ ಕುಟುಂಬದಿಂದ ಬಂದ ಸುಶಾಂತ್ ಸಿಂಗ್ ಒಳ್ಳೆಯ ನಟನಾಗಿ ಬೆಳೆಯುವುದನ್ನು ಸಹಿಸಿದ ಬಾಲಿವುಡ್‍ನ ಕೆಲವು ಹಿರಿಯರು ಆತನಿಗೆ ಅವಕಾಶ ಕೊಡದೇ ಇದ್ದ ಸುದ್ದಿಗಳು ನಿಧಾನವಾಗಿ ಹೊರಗೆ ಬರಲಾರಂಭಿಸಿದ ಕೂಡಲೇ ಅನೇಕರು ಬಾಲಿವುಡ್‍ನ ಒಳಗಿನ ಹೊಲಸನ್ನು ಬಿಚ್ಚಿಡಲಾರಂಭಿಸಿದ್ದಾರೆ.

ಈ ಬಾಲಿವುಡ್ ಒಂದು ಕಾಲದಲ್ಲಿ ಹಾಜಿ ಮಸ್ತಾನ್, ದಾವೂದ್ ಇಬ್ರಾಹಿಂ ಹಿಡಿತದಲ್ಲಿತ್ತು. ಅನಿಲ್ ಕಪೂರ್, ಸಲ್ಮಾನ್ ಖಾನ್, ಸುನಿಲ್ ದತ್, ಮಂದಾಕಿನಿ ಹೀಗೆ ಎಷ್ಟೊಂದು ನಟನಟಿಯರು ಭೂಗತ ದೊರೆಗಳ ಸಂಪರ್ಕದಲ್ಲಿ ಇದ್ದದ್ದು, ಸಿನಿಮಾ ನಿರ್ಮಾಣ, ನಟ-ನಟಿಯರ ಆಯ್ಕೆ ಎಲ್ಲದರಲ್ಲೂ ಈ ಭೂಗತ ಪಾತಕಿಗಳ ಕೈವಾಡ ಇದ್ದ ವಿಷಯಗಳೆಲ್ಲವೂ ತಿಳಿದದ್ದೆ. ಆದರೆ ಬಾಲಿವುಡ್‍ನ ಬೆರಳೆಣಿಕೆಯ ಚಿತ್ರ ನಿರ್ಮಾಣ ಸಂಸ್ಥೆಗಳು ಬಲಿಷ್ಠವಾದ ಮೇಲೆ, ಅವು ಬಾಲಿವುಡ್‍ನ ಪಾರುಪತ್ಯ ನಡೆಸುತ್ತಿವೆ ಎಂಬ ದೂರುಗಳು ಈಗ ಬಯಲಾಗುತ್ತಿವೆ.

ಧರ್ಮ ಪ್ರೊಡಕ್ಷನ್ಸ್‌ನ ಕರಣ್ ಜೋಹರ್ ಈಗ ನೆಪೊಟಿಸಂ ಆರೋಪಕ್ಕೆ ತೀವ್ರವಾಗಿ ಗುರಿಯಾಗಿರುವ ನಿರ್ಮಾಪಕ. ಸೂಪರ್ ಸ್ಟಾರ್ ಗಳನ್ನೇ ತಾರಾಗಣಕ್ಕೆ ಬಳಸಿ ಕೆಟ್ಟ ಸಿನಿಮಾಗಳನ್ನು ನಿರ್ಮಿಸಿಯೂ ಮಾರುಕಟ್ಟೆಯಲ್ಲಿ ಬದುಕುಳಿಯುವ ಯಶ್ ರಾಜ್ ಫಿಲ್ಮ್ಸ್ ವಿರುದ್ಧ ಅಂತಹ ದೂರುಗಳಿವೆ.

ಪ್ರೊಡಕ್ಷನ್ ಹೌಸ್‍ಗಳಷ್ಟೇ ಅಲ್ಲ, ಚಿತ್ರರಂಗದ ಹಿರಿತಲೆಗಳು ಕೂಡ ಉತ್ಸಾಹಿಗಳನ್ನು ಹತ್ತಿಕ್ಕಿದ್ದಾರೆ. ಮಹೇಶ್ ಭಟ್‍ರಂತಹ ನಿರ್ದೇಶಕರ ಮೇಲೆ ಇಂತಹ ಆರೋಪಗಳಿವೆ.

ಗುಜರಾತ್‍ನ ಗೋಧ್ರಾ ಪ್ರಕರಣದ ನಂತರ ರಾಜಕೀಯದ ಪ್ರಭಾವವೂ ತೀವ್ರವಾಗಿದ್ದು, ಚಿತ್ರರಂಗದ ಅನೇಕ ನಟ, ನಿರ್ದೇಶಕರಿಗೆ ತಮ್ಮ ವೃತ್ತಿ ಮುಂದುವರೆಸುವ ಸವಾಲು ಕೂಡ ಕಾಡಿದೆ. ಸದ್ಯ ಬಾಲಿವುಡ್‍ಗೆ ಗುಡ್ ಬೈ ಹೇಳಿದ ಮೂವರು ನಿರ್ದೇಶಕರು, ಭಯೋತ್ಪಾದನೆ, ಜಾತಿ ವ್ಯವಸ್ಥೆ, ಭ್ರಷ್ಟ ರಾಜಕಾರಣ, ಕೋಮು ರಾಜಕಾರಣಗಳನ್ನು ಬಲವಾಗಿ ಖಂಡಿಸಿ ಚಿತ್ರಗಳನ್ನು ನಿರ್ಮಿಸಿದ್ದವರು.

ಕಾಲಕಾಲಕ್ಕೆ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಎಲ್ಲ ರೀತಿಯ ಪಟ್ಟುಗಳನ್ನು ಹಾಕುತ್ತಾ ಬಂದ ಹಿಂದಿ ಚಿತ್ರರಂಗದ ಕೆಲವು ಪ್ರಭಾವಿಗಳು ನಿಧಾನವಾಗಿ ಕಥೆ, ಪ್ರತಿಭೆ, ಸೃಜನಶೀಲತೆಗೆ ಒತ್ತುಕೊಡದೆ, ಅಸ್ತಿತ್ವ, ಹಿತಾಸಕ್ತಿಗಳಿಗೆ ಒತ್ತುನೀಡುತ್ತಾ, ಪ್ರತಿಭಾವಂತರನ್ನು ಮತ್ತು ಚಿತ್ರ ನಿರ್ಮಾಣದ ನೈಜ ಸೃಜನಶೀಲ ಕ್ರಿಯೆಯನ್ನು ಕೊಲ್ಲಲಾರಂಭಿಸಿವೆ.

ಎಸ್ ಕುಮಾರ್


ಇದನ್ನು ಓದಿ: ಕರ್ನಾಟಕದ ಕರಿ ಚಿರತೆ; ಜಂಗಲ್ ಬುಕ್‌‌ ಸಿನಿಮಾದ ’ಬಘೀರಾ’ ಎಂದ ನೆಟ್ಟಿಗರು..!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here