ಹೊಸ ಶಿಕ್ಷಣ ನೀತಿಯಾದ NEP ಯು ‘ಏನು ಯೋಚಿಸಬೇಕು’ ಎಂಬುದರಿಂದ ‘ಹೇಗೆ ಯೋಚಿಸಬೇಕು’ ಎಂಬುದರ ಕಡೆಗೆ ಹೆಚ್ಚು ಒತ್ತು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ಅವರು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದಲ್ಲಿನ ಪರಿವರ್ತನಾ ಸುಧಾರಣೆಗಳ ಕುರಿತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನಾ ಭಾಷಣ ಮಾಡಿದರು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಶಿಕ್ಷಣ ಸಚಿವಾಲಯವು ಈ ಸಮಾವೇಶವನ್ನು ಆಯೋಜಿಸಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಸಮಾವೇಶಕ್ಕೆ ಸೇರಿದರು.
ಹೊಸ ಶಿಕ್ಷಣ ನೀತಿಯ ವಿವಿಧ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಎಲ್ಲರು ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!
ಪ್ರಧಾನಿ ಮೋದಿ ತಮ್ಮ ಉದ್ಘಾಟನಾ ಭಾಷಣದಲ್ಲಿ, “ಇಂದು ಹೊಸ ಶಿಕ್ಷಣ ನೀತಿಯನ್ನು ದೇಶಾದ್ಯಂತ ವ್ಯಾಪಕವಾಗಿ ಚರ್ಚಿಸಲಾಗಿದೆ. ವಿವಿಧ ಕ್ಷೇತ್ರಗಳ ಜನರು, ಸಿದ್ಧಾಂತಗಳು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿವೆ ಮತ್ತು ನೀತಿಯನ್ನು ಪರಿಶೀಲಿಸುತ್ತಿವೆ. ಇದು ಆರೋಗ್ಯಕರ ಚರ್ಚೆಯಾಗಿದ್ದು ಅದು ದೇಶದ ಶಿಕ್ಷಣ ವ್ಯವಸ್ಥೆಗೆ ಪ್ರಯೋಜನವನ್ನು ನೀಡುತ್ತದೆ. ಲಕ್ಷಾಂತರ ಸಲಹೆಗಳೊಂದಿಗೆ ದೀರ್ಘವಾದ ಬುದ್ದಿಮತ್ತೆ ಅಧಿವೇಶನದ ನಂತರ ಮತ್ತು 3-4 ವರ್ಷಗಳ ವ್ಯಾಪಕ ಚರ್ಚೆಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಮೋದಿಸಲಾಗಿದೆ” ಎಂದು ಹೇಳಿದರು.
“ರಾಷ್ಟ್ರೀಯ ಶಿಕ್ಷಣ ನೀತಿ ಬಿಡುಗಡೆಯಾದ ನಂತರ, ದೇಶದ ಯಾವುದೇ ವಿಭಾಗವು ನೀತಿಯನ್ನು ಪಕ್ಷಪಾತ ಎಂದು ಹೇಳಲಿಲ್ಲ. ಇದು ಸಂತೋಷದ ವಿಷಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಸುಧಾರಣೆಯ ಅನುಷ್ಠಾನಕ್ಕೆ ಈಗ ಎಲ್ಲರ ದೃಷ್ಟಿ ಇದೆ” ಎಂದು ಪ್ರಧಾನಿ ಹೇಳಿದರು. ಈ ನೀತಿಯ ಉದ್ದೇಶವು ಪ್ರಸ್ತುತ ಮತ್ತು ಮುಂದಿನ ಪೀಳಿಗೆಗಳನ್ನು ಭವಿಷ್ಯದಲ್ಲಿ ಸಿದ್ಧವಾಗಿಡುವುದು ಎಂದರು.
“ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಕಲಿಸಿದಾಗ ವಿಷಯವನ್ನು ಹೆಚ್ಚು ಅರ್ಥ ಮಾಡಿಕೊಳ್ಳುತ್ತಾರೆ. ಆದುದರಿಂದ ಐದನೇ ತರಗತಿ ತನಕ ಮಾತೃಭಾಷೆಯ ಶಿಕ್ಷಣ ಬಹಳಷ್ಟು ಸಹಕಾರಿಯಾಗಲಿದೆ. ಒಮ್ಮೆ ಒಂದು ವಿಷಯ ವಿದ್ಯಾರ್ಥಿಗಳಿಗೆ ಮನದಟ್ಟು ಆದರೆ ನಂತರ ಅವರ ಭವಿಷ್ಯ ಭದ್ರವಾಗುತ್ತದೆ,” ಎಂದು ಪ್ರಧಾನಿ ವಿವರಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್, ಕೇಂದ್ರ ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ, ಎನ್‌ಇಪಿ ಕರಡು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಪ್ರಖ್ಯಾತ ಶಿಕ್ಷಣ ತಜ್ಞರು ಹಾಗೂ ವಿಜ್ಞಾನಿಗಳು ಸೇರಿದಂತೆ ಹಲವಾರು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಓದಿ: ನೂತನ ಶಿಕ್ಷಣ ನೀತಿಗೆ ಭಾರೀ ವಿರೋಧ : TNRejectsNEP ಹ್ಯಾಷ್‌ಟ್ಯಾಗ್ ಟ್ರೆಂಡ್


