ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ (NEP) ಕರಡನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿರುವ ಹಿನ್ನೆಲೆಯಲ್ಲಿ ಅದಕ್ಕೆ ಭಾರೀ ವಿರೋಧ ಕಂಡುಬಂದಿದೆ. NEP ಯನ್ನು ತಮಿಳುನಾಡು ತಿರಸ್ಕರಿಸುತ್ತದೆ ಎಂಬ ಕರೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು ಟ್ವಿಟ್ಟರ್‌ನಲ್ಲಿ TNRejectsNEP ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಮೂವತ್ತು ಕೋಟಿ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಏಕೆ ಇಷ್ಟು ತುರ್ತು?  ಮೂರು ವರ್ಷದ ಮಗು ಮೂರು ಭಾಷೆಗಳನ್ನು ಓದಬಹುದೇ? ದೇಶದ 1848 ಶಾಲೆಗಳು ಮುಚ್ಚಲ್ಪಡಲಿವೆ ಎಂಬುದಕ್ಕೆ ಉತ್ತರವೇನು? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.

ಮುಂದಿನ ಎರಡು ದಶಕಗಳ ಭಾರತದ ಶಿಕ್ಷಣದ ರೋಡ್‌ ಮ್ಯಾಪ್‌ ಆಗಲಿರುವ NEP ಯನ್ನು ಕೊರೊನಾ ಸಾಂಕ್ರಾಮಿಕದ ನಡುವೆ ತರಾತುರಿಯಲ್ಲಿ ಜಾರಿಗೊಳಿಸುತ್ತಿರುವ ಅನ್ಯಾಯ ಎಂದು ಹಲವರು ದೂರಿದ್ದಾರೆ.

ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಮುಕ್ತ ಅವಕಾಶ ನೀಡುವುದು. ಯುಜಿಸಿ (ಯುನಿವರ್ಸಿಟಿ ಗ್ರಾಂಟ್ ಕಮಿಷನ್) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಯನ್ನು ಕಿತ್ತುಹಾಕುವ ಹೊಸ ಶಿಕ್ಷಣ ನೀತಿ ನಮಗೆ ಬೇಡ ಎಂದು ಹಲವರು ಒತ್ತಾಯಿಸಿದ್ದಾರೆ.

ಹೊಸ ಶಿಕ್ಷಣ ನೀತಿಯಲ್ಲಿ 2035ರ ವೇಳೆಗೆ 50% ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗಬೇಕೆಂಬ ಗುರಿ ಹೊಂದಿದೆ. ಈ ಗುರಿಯನ್ನು ಈಗಾಗಲೇ ತಮಿಳುನಾಡಿ ಸಾಧಿಸಿಯಾಗಿದೆ. ನಿಮ್ಮ ಎನ್‌ಇಪಿ ನಮಗೆ ಬೇಡ ಎಂದು ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಶಿಕ್ಷಣವು ಮೂಲಭೂತ ಮಾನವ ಹಕ್ಕು. ಅದು ಮೇಲ್ವರ್ಗಕ್ಕೆ ಮಾತ್ರ ಇರಬಾರದು. ಈ ನೀತಿಯು ಜಾರಿಗೆ ಬಂದರೆ ಬಡ ಜನರಿಗೆ ಶಿಕ್ಷಣವನ್ನು ಕಠಿಣವಾಗಿಸುತ್ತಿದೆ, ನಮಗೆ ಅಂತಹ ನೀತಿ ಅಗತ್ಯವಿಲ್ಲ. ನಾವು ಶಿಕ್ಷಣದಲ್ಲಿ ಚೆನ್ನಾಗಿ ಪ್ರಗತಿ ಹೊಂದಿದ್ದೇವೆ, ಅನಗತ್ಯ ನೀತಿಯನ್ನು ಹೇರಬೇಡಿ, ನಮ್ಮಿಂದ ಕಲಿಯಿರಿ ಎಂದು ಅನ್ಬುಲಗು ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ತ್ರಿಭಾಷದ ಹೆಸರಿನಲ್ಲಿ ಹಿಂದಿ ಹೇರಿಕೆಯನ್ನು ಸಹ ಹಲವಾರು ಜನ ವಿರೋಧಿಸಿದ್ದಾರೆ. ಹಿಂದಿ ನಮ್ಮ ಮಾತೃಭಾಷೆಯಲ್ಲ, ರಾಷ್ಟ್ರಭಾಷೆಯಲ್ಲ, ಸಂಪರ್ಕಭಾಷೆಯೂ ಅಲ್ಲ, ಹೆಚ್ಚು ಜನರು ಮಾತನಾಡುವ ಭಾಷೆಯೂ ಅಲ್ಲ. ಹಾಗಾಗಿ ನಮಗೆ ಹಿಂದಿ ಬೇಡ, ತಮಿಳು ಮತ್ತು ಇಂಗ್ಲಿಷ್ ಸಾಕು ಎಂದು ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ #NEPisBrahmanism (ಎನ್‌ಇಪಿ ಎಂದರೆ ಬ್ರಾಹ್ಮಣ್ಯಕರಣ) ಎಂಬ ಹ್ಯಾಷ್‌ಟ್ಯಾಗ್ ಸಹ ಟ್ರೆಂಡ್ ಆಗಿದೆ. ಈಗಾಗಲೇ ಜಾತಿ ತಾರತಮ್ಯವನ್ನು ಎನ್‌ಇಪಿ ಹೆಚ್ಚು ಮಾಡುತ್ತದೆ. ಉನ್ನತ ಜಾತಿಗಳ ಹಿತ ಕಾಯಲು ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.


ಇದನ್ನೂ ಓದಿ: ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ: ಎಚ್‌ಡಿಕೆ

LEAVE A REPLY

Please enter your comment!
Please enter your name here