ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕೋಯಿಕೋಡ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತವು ಮುಂದೆ ಪಾಟ್ನಾ, ಜಮ್ಮು ವಿಮಾನ ನಿಲ್ದಾಣಗಳಲ್ಲಿಯೂ ಸಂಭವಿಸಬಹುದು ಎಂದು ವಾಯು ಸುರಕ್ಷತಾ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯವು ರಚಿಸಿದ ಸುರಕ್ಷತಾ ಸಲಹಾ ಸಮಿತಿಯ ಸದಸ್ಯರಾಗಿರುವ ರಂಗನಾಥನ್, ಕೋಯಿಕೋಡ್ ವಿಮಾನ ನಿಲ್ದಾಣವು ಇಳಿಯಲು ಸುರಕ್ಷಿತವಲ್ಲ ಎಂದು ಸುಮಾರು ಒಂಬತ್ತು ವರ್ಷಗಳ ಹಿಂದೆ ವರದಿಯನ್ನು ಸಲ್ಲಿಸಿ ಎಚ್ಚರಿಸಿದ್ದೆ ಎಂದಿದ್ದಾರೆ.
“ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿದೆ. ನನ್ನ ಅಭಿಪ್ರಾಯದಲ್ಲಿ, ಇದು ಅಪಘಾತವಲ್ಲ, ಭೀಕರ ಕೊಲೆ” ಎಂದು ರಂಗನಾಥನ್ ಹೇಳಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ್ದರೆ ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದಿದ್ದಾರೆ.
ಕೋಯಿಕೋಡ್ ವಿಮಾನ ನಿಲ್ದಾಣದ ಟೇಬಲ್-ಟಾಪ್ ರನ್ವೇಗಳು ಬಹಳ ಕಡಿಮೆ ಜಾಗವನ್ನು ಹೊಂದಿವೆ. ಹಾಗಾಗಿ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಹೇಗಿರಬೇಕು ಎಂದು ರಂಗನಾಥನ್ ವಿವರಿಸಿದ್ದಾರೆ.
“ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ರನ್ ವೇ ಕೊನೆಯಲ್ಲಿ ಸುಮಾರು 70 ಮೀಟರ್ ಕುಸಿತ ಕಂಡುಬಂದಿದೆ. ಮಂಗಳೂರಿನಲ್ಲಿ ಇದು ಸುಮಾರು 100 ಮೀಟರ್ ಇದೆ. ಇದರಿಂದ ವಿಮಾನ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
“ನೀವು ಪಾಟ್ನಾ ಅಥವಾ ಜಮ್ಮು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಇದೇ ರೀತಿಯ ದೊಡ್ಡ ಅಪಘಾತವನ್ನು ನಿರೀಕ್ಷಿಸಬಹುದು. ಇವೆರಡೂ ಅಪಾಯಕಾರಿ ವಾಯುನೆಲೆಗಳು. ವಿಮಾನ ನಿಲ್ದಾಣದಲ್ಲಿ ಕನಿಷ್ಠ ರನ್‌ವೇ ಎಂಡ್ ಸೇಫ್ಟಿ ಏರಿಯಾ(ರೇಸಾ) ಕೂಡಾ ಇಲ್ಲ ಎಂದು ಅವರು ಹೇಳಿದರು. ಜೊತೆಗೆ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿಲ್ಲ” ಎಂದು ಅವರು ಹೇಳಿದ್ದಾರೆ.
ರನ್ವೇ ಸ್ಟ್ರಿಪ್ ಐಸಿಎಒ ಅನೆಕ್ಸ್ 14 ರಲ್ಲಿ ನಿಗದಿಪಡಿಸಿದ ಕನಿಷ್ಠ ಅಗಲದ ಅರ್ಧದಷ್ಟಿದೆ. ಕಳೆದ ಹಲವು ವರ್ಷಗಳಿಂದ ತಪಾಸಣೆ ಮತ್ತು ಸುರಕ್ಷತಾ ಮೌಲ್ಯಮಾಪನಗಳನ್ನು ನಡೆಸುತ್ತಿರುವ ಡಿಜಿಸಿಎ ತಂಡಕ್ಕೆ ಈ ಸಂಗತಿ ತಿಳಿದಿತ್ತು. ಆದರೂ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಒಳಗೊಂಡಿರುವ ಅಪಾಯವನ್ನು ಅವರು ಪರಿಗಣಿಸಿದ್ದಾರೆಯೇ? ಡಿಜಿಸಿಎ ಅಥವಾ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆಯ ನಿರ್ಬಂಧಗಳನ್ನು ಅಥವಾ ವಿಶೇಷ ಕಾರ್ಯವಿಧಾನಗಳನ್ನು ರೂಪಿಸಿವೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಐಎಕ್ಸ್ 1344 ರನ್‌ವೇಯನ್ನು ಓವರ್‌ಶಾಟ್ ಮಾಡಿ ಕಣಿವೆಯಲ್ಲಿ ಬಿದ್ದು ಶುಕ್ರವಾರ ಸಂಜೆ ಮುರಿದು ಬಿದ್ದಿದ್ದರಿಂದ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.
ಈ ವಿಮಾನವು ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ದುಬೈನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಕರೆತರುತ್ತಿತ್ತು.
ಇದನ್ನೂ ಓದಿ: ಕೊಯಿಕೋಡ್ ವಿಮಾನ ನಿಲ್ದಾಣದಲ್ಲಿ ವಿಮಾನ ಅಫಘಾತ


