ನಟಿ ಸ್ವರ ಭಾಸ್ಕರ್ ವಿರುದ್ಧ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸಲು ಅನುಮತಿ ನೀಡಬೇಕೆಂಬ ಅರ್ಜಿಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರು ಸಹ ತಿರಸ್ಕರಿಸಿದ್ದಾರೆ. ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಟೀಕಿಸುವ ಮತ್ತು ಸರ್ಕಾರವನ್ನು ಖಂಡಿಸುವ ಹೇಳಿಕೆ ನೀಡಿದ್ದಕ್ಕಾಗಿ ಸ್ವರ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಈ ಹಿಂದೆಯೂ, ನಟಿ ಸ್ವರ ಭಾಸ್ಕರ್ ವಿರುದ್ಧ ವಿಚಾರಣೆ ಪ್ರಾರಂಭಿಸಲು ಅನುಮತಿ ಕೋರಿ ಸಲ್ಲಿಸಿದ್ದ ವಿಚಾರಣೆ ಅರ್ಜಿಯನ್ನು ಅಟಾರ್ನಿ ಜನರಲ್ ಆಫ್ ಇಂಡಿಯಾ (ಎಜಿ) ಕೆ.ಕೆ.ವೇಣುಗೋಪಾಲ್ ತಿರಸ್ಕರಿಸಿದ್ದರು.
2020ರ ಫೆಬ್ರವರಿಯಲ್ಲಿ ಮುಂಬೈನಲ್ಲಿ ನಡೆದ “ಕೋಮುವಾದದ ವಿರುದ್ಧ ಕಲಾವಿದರು” ಎಂಬ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸ್ವರ “ನ್ಯಾಯಾಲಯಗಳು ಸಂವಿಧಾನವನ್ನು ನಂಬುತ್ತವೆಯೇ ಎಂದು ಖಚಿತವಾಗಿಲ್ಲ” ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿಯ ಪ್ರಕಾರ, ಸ್ವರ ಭಾಸ್ಕರ್, “ಬಾಬರಿ ಮಸೀದಿ ನೆಲಸಮ ಮಾಡುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಹೇಳುವ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ ಮತ್ತು ಅದೇ ತೀರ್ಪಿನಲ್ಲಿ ಮಸೀದಿಯನ್ನು ಉರುಳಿಸಿದ ಜನರಿಗೆ ಬಹುಮಾನ ನೀಡಲಾಗುತ್ತದೆ” ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ.
ನವೆಂಬರ್ 2019 ರ ತೀರ್ಪಿನಲ್ಲಿ ಬಾಬರಿ ಮಸೀದಿಯನ್ನು ಉರುಳಿಸಿದ್ದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹಾಗಾಗಿ, ಮಸೀದಿಯನ್ನು ಉರುಳಿಸಿದ ದುಷ್ಕರ್ಮಿಗಳಿಗೆ ಬಹುಮಾನ ನೀಡಿದೆ ಎಂಬ ಭಾಸ್ಕರ್ ಅವರ ಹೇಳಿಕೆ ವಾಸ್ತವಿಕ ಹೇಳಿಕೆಯಂತೆ ಕಾಣುತ್ತದೆ ಎಂದು ವೇಣುಗೋಪಾಲ್ ತಮ್ಮ ಅರ್ಜಿದಾರೆ ಉಷಾ ಶೆಟ್ಟಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಈ ಹೇಳಿಕೆಯು ಸುಪ್ರೀಂ ಕೋರ್ಟಿನ ತೀರ್ಪನ್ನು ಸೂಚಿಸುತ್ತದೆ. ಹಾಗಾಗಿ ಇದು ಆ ಸಂಸ್ಥೆಯ ಮೇಲಿನ ಆಕ್ರಮಣವಲ್ಲ. ಇದು ಸುಪ್ರೀಂ ಕೋರ್ಟ್‌ನ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಅಥವಾ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ನಿಂದಿಸುವ, ಕಡಿಮೆ ಮಾಡುವ ಯಾವುದನ್ನೂ ಹೇಳುವುದಿಲ್ಲ. ನನ್ನ ಅಭಿಪ್ರಾಯದಲ್ಲಿ, ಈ ಹೇಳಿಕೆಯು ನ್ಯಾಯಾಂಗ ನಿಂದನೆಯನ್ನು ಹೊಂದಿಲ್ಲ ಎಂದು ವೇಣುಗೋಪಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದರು.
Also Read: Swara Bhasker helps migrant workers reach home
ಈಗ ಮತ್ತೋರ್ವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಇದೇ ಕಾರಣವನ್ನು ನೀಡಿ, ಸ್ವರ ಭಾಸ್ಕರ್ ವಿರುದ್ಧ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ನ್ಯಾಯಾಲಯಗಳ ನಿಂದನೆ ಕಾಯ್ದೆಯ ಸೆಕ್ಷನ್ 15 ಮತ್ತು ಸುಪ್ರೀಂ ಕೋರ್ಟ್‌ನ ಅವಹೇಳನಕ್ಕಾಗಿ ಕ್ರಮಗಳನ್ನು ನಿಯಂತ್ರಿಸುವ ನಿಯಮ 3 ರ ಪ್ರಕಾರ, ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ಕ್ರಿಮಿನಲ್ ತಿರಸ್ಕಾರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸುವ ಮೊದಲು ಎಜಿ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ ಪಡೆಯುವ ಅಗತ್ಯವಿದೆ.
ಮಾಜಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ನೀಡಿದ ಅಯೋಧ್ಯೆ ವಿವಾದದಲ್ಲಿ ನವೆಂಬರ್ 9 ರ ಸುಪ್ರೀಂ ಕೋರ್ಟ್ ನೀಡಿದ ತೀರ್ಪು 2.77 ಎಕರೆ ವಿವಾದಿತ ಸ್ಥಳವನ್ನು ರಾಮ್ ಲಲ್ಲಾ ವಿರಾಜ್ಮಾನ್ ಅವರಿಗೆ ನೀಡಿತ್ತು. ಹೊಸ ಮಸೀದಿ ನಿರ್ಮಾಣಕ್ಕಾಗಿ ಪರ್ಯಾಯ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಮುಸ್ಲಿಮರಿಗೆ ನೀಡಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ಆದೇಶಿಸಿತ್ತು.
ವಿವಾದಾತ್ಮಕ ಸ್ಥಳದಲ್ಲಿ ಮಸೀದಿಯ ಅಸ್ತಿತ್ವವನ್ನು ಉನ್ನತ ನ್ಯಾಯಾಲಯವು ಖಾತ್ರಿಪಡಿಸಿ ಒಪ್ಪಿಕೊಂಡಿತ್ತು. 1949 ರಲ್ಲಿ ಮಸೀದಿಯೊಳಗೆ ವಿಗ್ರಹಗಳನ್ನು ಇಟ್ಟು, 1992 ರಲ್ಲಿ ಮಸೀದಿಯ ಧ್ವಂಸವು ಕಾನೂನುಬಾಹಿರ ಕೃತ್ಯ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿತ್ತು.
ಇದನ್ನೂ ಓದಿ: ಸೋನು ಸೂದ್ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್


