Homeನ್ಯಾಯ ಪಥಅರೆಕ್ರಾಂತಿಕಾರಿ ಪೂಜಾರಿ ಈಗೇನು ಮಾಡ್ತವ್ರೆ?

ಅರೆಕ್ರಾಂತಿಕಾರಿ ಪೂಜಾರಿ ಈಗೇನು ಮಾಡ್ತವ್ರೆ?

- Advertisement -
- Advertisement -

ಶುದ್ಧೋಧನ |
ಕಾಂಗ್ರೆಸಿನ ಹಳೆ ತಲೆಯಾಳು ಬಿ.ಜನಾರ್ಧನ ಪೂಜಾರಿ ಎಂದರೇನೇ ಏನೋ ಒಂಥರಾ ವಿಭಿನ್ನ-ವಿಶೇಷ-ವಿಚಿತ್ರ! ಮಾತು ನೇರಾನೇರ; ನಡೆ ನಿಷ್ಠೂರ; ಕಠೋರ ಪಕ್ಷ ನಿಷ್ಠ; ಬಡವರ ಬಗ್ಗೆ ಬಗ್ಗದ ಬದ್ಧತೆ. ಇದು ಬ್ರ್ಯಾಂಡ್ ಪೂಜಾರಿ ಎಂಬ ಕಾಲವೊಂದಿತ್ತು. ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದು, ಅಷ್ಟೇ ಬಾರಿ ಸೋತಿರುವ ಪುಜಾರಿ ದೇಶದಾದ್ಯಂತ ಸಾಲ ಮೇಳದ ಪೂಜಾರಿ ಎಂತಲೇ ಹೆಸರುವಾಸಿ. ಕಾಂಗ್ರೆಸ್‍ನ ಅಂದಿನ ಅಧಿನಾಯಕರಾದ ಇಂದಿರಾ, ರಾಜೀವ್, ನರಸಿಂಹರಾವ್‍ರಂಥವರಿಗೆ ನಿಯತ್ತಿನಿಂದ ಕೆಲಸ ಮಾಡಿ ರಿಸ್ಕ್ ಎದುರಿಸಿದ್ದರು. ಎರಡೆರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪೂಜಾರಿ ಬೆಳಗಿನ ಜಾವ 2-3 ಗಂಟೆ ತನಕ ಪಾರ್ಟಿ ಆಫೀಸಿನಲ್ಲಿ ಕುಂತು ದುಡಿದು ಸುದ್ದಿಯಾಗಿದ್ದರು.
ಇಂಥ ಜನಪರ ಜನಾರ್ಧನ ಪೂಜಾರಿಗೀಗ ಬರೋಬ್ಬರಿ ಎಂಬತ್ತೊಂದರ ಹರಯ!! ಹಾಗಾಗಿಯೇ ಇರಬೇಕು; ನೀತಿ-ನಿಲುವಿನಲ್ಲೂ ಎಡಬಿಡಂಗಿತನ ಶುರುವಾಗಿದೆ. ಅವರ ಮಾತು-ಕತೆ ನೋಡಿದರೆ ಹಿಂದಿನ ಪೂಜಾರಿ ಅದೆಲ್ಲೋ ಕಳೆದು ಹೋಗಿದ್ದಾರೆಂದು ಅನ್ನಿಸದೇ ಇರದು. ಇವರು ರಾಜಕಾರಣಿಯೇ, ಸಮಾಜ ಸುಧಾರಕರೋ, ಗುಡಿ ಕಟ್ಟುವ ಧರ್ಮಾತ್ಮನೋ ಎಂಬ ಗೊಂದಲ. ಸ್ವಪಕ್ಷ ಕಾಂಗ್ರೆಸ್‍ನ್ನು ನಡುಬೀದಿಯಲ್ಲಿ ನಿಂತು ಹೀಯಾಳಿಸಿ ಡ್ಯಾಮೇಜು ಮಾಡುವ ಪೂಜಾರಿ ಆರೆಸೆಸ್‍ನ ಕಲ್ಲಡ್ಕ ಭಟ್ಟನ ಕಂಡಾಗೆಲ್ಲಾ ಅಲ್ಲೇ ಮುದ್ದಾಡುತ್ತಿದ್ದಾರೆ. ಪೂಜಾರಿಯ ಪೂರ್ವಾಶ್ರಮ ಸಂಘಪರಿವಾರ ಕಳೆದ ಮೂರ್ನಾಲ್ಕು ವರ್ಷದಿಂದ ಆತನ ಬಾಯಿಂದ ಹೊರಬರುತ್ತಿರುವ ಅಣಿ ಮುತ್ತು, ಮಾಡುವ ಭಾಷಣ, ಪ್ರದರ್ಶಿಸುವ ವಿಭೀಷಣ, ಕೊಡುವ ಹೇಳಿಕೆ, ವೇದಿಕೆಯಲ್ಲಿ ಹಳೆ ಶಿಷ್ಯ ರಮಾನಾಥ ರೈ ತನಗೆ ಅವಾಚ್ಯ ಶಬ್ದದಿಂದ ಬೈದನೆಂದು ಗೊಳೋ ಎಂದು ಅಳುವುದೆಲ್ಲ ಬಿಜೆಪಿ ಪರಿವಾರಕ್ಕೆ ಭರ್ತಿ ಅನುಕೂಲ ಮಾಡಿಕೊಡುತ್ತಿದೆ.
ಪೂಜಾರಿಯಂಥ ಸೋಕಾಲ್ಡ್ ಸೆಕ್ಯುಲರ್ ಹಿರಿಯ ಕಾಂಗ್ರೆಸಿಗನೇ ಸಿದ್ದು ಸಿಎಂ ಆಗಿದ್ದಾಗ ಟೀಕಿಸಿದ್ದು ಒಂದೆರಡು ಬಾರಿಯಲ್ಲ. ಬಿಜೆಪಿಯ ವೋಟ್‍ಬ್ಯಾಂಕ್ ಕಾರ್ಯಸೂಚಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಪೂಜಾರಿ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ವಿಚಾರವಾದಿ ಕೆ.ಎಸ್.ಭಗವಾನ್‍ರಂಥವರ ಮೇಲೆ ಮುರಕೊಂಡು ಬೀಳುವ ಪೂಜಾರಿ ಮರುಕ್ಷಣವೇ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹೆಂಗಸರು ಹೋಗಿ ಬರಲು ಕೇರಳ ಸಿಎಂ ಪಿಣರಾಯಿ ವಿಜಯನ್ ಕಟ್ಟುನಿಟ್ಟಿನ ವ್ಯವಸ್ಥೆ ಕಲ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅಸಂಬದ್ಧವಾಡುತ್ತಾರೆ. ಒಮ್ಮೆ ಮನುವಾದಿಯಂತೆ ಇನ್ನೊಮ್ಮೆ ಮನುಷ್ಯತ್ವವಾದಿಯಂತೆ ಪೋಸು ಕೊಡುತ್ತಿರೋದು ಕಂಡು ಪೂಜಾರಿಯವರಿಗೆ ವಯೋಸಹಜ ಅರಳುಮರಳು ಶುರುವಾಗಿದೆಯಾ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ತನ್ನ “ಸಾಲ ಮೇಳದ ಸಂಗ್ರಾಮ” ಆತ್ಮಕತೆಯಲ್ಲಿ ಇಂದಿರಾಗಾಂಧಿಗೆ “ಬಂ” ಹೊಡೆಯಲು ಹೋಗಿದ್ದನ್ನು ತಾನು ಕಂಡಿದ್ದೇನೆಂದು ಜನ ನಂಬಲು ಅಸಾಧ್ಯವಾದದ್ದನ್ನೆಲ್ಲ ಬರೆದುಕೊಂಡಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಮುತ್ಸದ್ಧಿ ನಾಯಕ ಎನಿಸಿದ್ದ ಪೂಜಾರಿಯವರ ಮಾತಿಗಷ್ಟೇ ಅಲ್ಲ, ಮನಸ್ಸು-ಮೆದುಳಿಗೂ ತೂಕ ತಪ್ಪಿಹೋಗಿದೆ ಎನಿಸುತ್ತದೆ.
ತಮ್ಮ ಈ ಹುಚ್ಚಾಟಗಳಿಂದ ಪೂಜಾರಿ ಇತ್ತೀಚಿನ ವರ್ಷದಲ್ಲಿ ಚೆಡ್ಡಿ, ಭಜರಂಗಿಗಳ ಡಾರ್ಲಿಂಗ್ ಆಗಿಹೋಗಿದ್ದಾರೆ. ಮಂಗಳೂರಿನ ಕುದ್ರೋಳಿಯಲ್ಲಿ ಗೋಕರ್ಣನಾಥ ದೇವಾಲಯ ಕಟ್ಟಿರುವ ಪೂಜಾರಿ ಪ್ರತಿವರ್ಷ ನವರಾತ್ರಿಯಲ್ಲಿ ಭರ್ಜರಿ ದಸರಾ ಉತ್ಸವ ಮಾಡುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಒಮ್ಮೆ ಗಂಡನ ಕಳಕೊಂಡ ಹೆಂಗಸರಿಗೆ ತನ್ನ ದೇಗುಲಕ್ಕೆ ಕರೆದು ಕುಂಕುಮ-ಹೂವು ಕೊಡಿಸಿದ್ದ, ಹೆಂಗಸರಿಂದ ದೇವಸ್ಥಾನದ ಪೂಜೆ ಮಾಡಿಸಿದ್ದ ಕ್ರಾಂತಿಕಾರಿ ಪೂಜಾರಿ ಆನಂತರ ಭ್ರಾಂತಿಗೀಡಾಗಿದ್ದು ವಿಚಿತ್ರವಾದರೂ ಸತ್ಯ. ಕರಾವಳಿಯಲ್ಲಿ ಈ ದೊಡ್ಡ ನಾಯಕ ನೆಲೆ-ಬೆಲೆ ಕಳಕೊಂಡು ಅದ್ಯಾವುದೋ ಕಾಲವಾಗಿ ಹೋಗಿದೆ. ಎಸ್ಸೆಸ್ಸೆಲ್ಸಿಯೂ ಪಾಸಾಗದ, ಗ್ರಾಮ ಪಂಚಾಯ್ತಿ ಮೆಂಬರಿಕೆಗೂ ಲಾಯಕ್ಕಿಲ್ಲದ ನಳೀನ್‍ಕುಮಾರ್ ಕುಟೀಲ್ ಎಂಬ ಬೆಂಕಿ ಬ್ರ್ಯಾಂಡಿನ ಚೆಡ್ಡಿ ಎದುರು ಪೂಜಾರಿ ಒಂದೂವರೆ ಲಕ್ಷ ಮತದಂತರದಿಂದ ಲಗಾಟಿ ಹೊಡೆಯುತ್ತಾರೆಂದರೆ ಆತ ಅದ್ಯಾವ ಪರಿ ಕಾಂಗೆಸ್‍ಗೆ ಹಾನಿ ಮಾಡಿರಬಹುದೆಂದು ಊಹಿಸಿ!
ಮಾಜಿ ಮಂತ್ರಿ ರಮಾನಾಥ ರೈ, ವಿನಯಕುಮಾರ್ ಸೊರಕೆ, ಹಾಲಿ ಮಂತ್ರಿ ಯು.ಟಿ.ಖಾದರ್, ಎಮ್ಮೆಲ್ಸಿ ಕಂ ಡಿಸಿಸಿ ಅಧ್ಯಕ್ಷ ಹರೀಶ್ ಪೂಜಾರಿ, ಕಳ್ಳಿಗೆ ತಾರಾನಾಥ ಶೆಟ್ಟಿ….. ವಗೈರೆಗಳು ಪೂಜಾರಿ ಗರಡಿಯಲ್ಲಿ ಪಳಗಿದ ಪರಾಕ್ರಮಿಗಳು. ಆದರೆ ಇವತ್ತು ಇವರ್ಯಾರೂ ಗುರುವಿನ ಹತ್ತಿರವೂ ಸುಳಿಯುತ್ತಿಲ್ಲ. ದೂರದಿಂದ ಕಂಡರೆ ತಲೆ ತಪ್ಪಿಸಿಕೊಂಡುಬಿಡುತ್ತಾರೆ.
ಕಾಂಗ್ರೆಸ್ ಹಣಿಯಲು ಬಿಜೆಪಿಗಳ ಪೂಜಾರಿಯನ್ನು ಅಸ್ತ್ರ ಮಾಡಿಕೊಂಡು ಬೇಕಷ್ಟು ಫಾಯ್ದೆ ಎತ್ತಿದರು; ಯಾವಾಗ ಸಾಲಮೇಳದ ಸಂಗ್ರಾಮ ಹೂರಣ ಹೊರಬಂತೋ ಆಗ ಕೈ ಕೊಟ್ಟು ಓಡಿದರು.
ಆ ಆತ್ಮಕತೆಯಲ್ಲಿ ಪೂಜಾರಿ ಆರೆಸೆಸ್‍ನ ಅಪಪ್ರಚಾರದ ಹಸೀ ಸುಳ್ಳುಗಳು ತನ್ನನ್ನು ಇಲೆಕ್ಷನ್‍ನಲ್ಲಿ ಸೋಲಿಸಿತೆಂದು ಬರೆದದ್ದು ಚಡ್ಡಿ ನವಾಬರ ಕಣ್ಣು ಕೆಂಪು ಮಾಡಿಸಿತ್ತು. ಆದರೆ ಇವತ್ತು ಕರಾವಳಿಯಲ್ಲಿ ಕಾಂಗ್ರೆಸ್ ಆವಸಾನ ಕಂಡಿದ್ದರೆ ಅದು ಕೋಮು ಪಿತೂರಿಯ ಹಿಕಮತ್ತಿಗಿಂತ ಹೆಚ್ಚಾಗಿ ಜನಾರ್ಧನ ಪೂಜಾರಿ, ವೀರಪ್ಪ ಮೋಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್ ಎಂಬ ಕಾಂಗ್ರೆಸ್ ನಾಯಕತ್ರಯರ ಒಣ ಪ್ರತಿಷ್ಠೆಯ ಕಿತ್ತಾಟದಿಂದ ಎಂಬುದು ಮಾತ್ರ ಸತ್ಯ.
ಈ ಸೆಟ್‍ದೋಸೆ ಧುರೀಣರಲ್ಲಿ ಹೆಚ್ಚು ಜನಪ್ರಿಯತೆಯಿದ್ದಿದ್ದು ಜನಾರ್ಧನ ಪೂಜಾರಿಗೆ ಆಗಿತ್ತು. ಆತ ಧ್ವನಿಯಿಲ್ಲದವರೊಂದಿಗೆ ಸಲೀಸಾಗಿ ಬೆರೆಯುತ್ತ ಒಣ ಮೀನು ತಿಂದು ಕೊಚ್ಚಿಲಕ್ಕಿ ಗಂಜಿ ಉಣ್ಣುವ ಸರಳ ಮನುಷ್ಯನಾಗಿದ್ದರು. ಈ ಪೂಜಾರಿಗೆ ರಾಜಕಾರಣಿ ದೀಕ್ಷೆ ಕೊಟ್ಟಿದ್ದು ಮಾಜಿ ಸಿಎಂ ವೀರಪ್ಪ ಮೊಯ್ಲಿ. ಅಂದು ಮಂಗಳೂರು ಸಂಸದನಾಗಿದ್ದ ಕೆ.ಕೆ.ಶೆಟ್ಟಿಗೂ ಮೊಯ್ಲಿಗೂ ಆಗಿಬರುತ್ತಿರಲಿಲ್ಲ. ಹೀಗಾಗಿ ಜಿಲ್ಲೆಯ ಬಹುಸಂಖ್ಯಾತ ಜಾತಿಯ(ಬಿಲ್ಲವ) ಪೂಜಾರಿಯನ್ನು ಎಂಪಿ ಕ್ಯಾಂಡಿಡೇಟು ಮಾಡಲು ಮೊಯ್ಲಿ ಯಶಸ್ವಿ ಮಸಲತ್ತು ಮಾಡಿದರು. ಆ ಬಳಿಕ ದಿಲ್ಲಿ ದರ್ಬಾರಿನಂತೆ ಪಗಡೆ ಉರುಳಿಸಿ ಚಂದ ನೋಡಿದರು. ನಿತ್ಯ ತ್ರಿಕೋನ ಜಗಳ-ಕದನ ನಡೆಯಿತು. ಮೊಯ್ಲಿ ಸಿಎಂ ಆದಾಗ ಉಪಾಯವಾಗಿ ಪೂಜಾರಿ ಬಾಲ ಕಟ್ ಮಾಡಿದರು. ಅತ್ತ ಪೂಜಾರಿ ಲೋಕಸಭೆ ಇಲೆಕ್ಷನ್‍ಗಳಲ್ಲಿ ಸೋಲಲು, ಇತ್ತ ಮೊಯ್ಲಿ ಒಮ್ಮೆ ಚಿಕ್ಕಮಗಳೂರಿನಿಂದ ಇನ್ನೊಮ್ಮೆ ಮಂಗಳೂರಿಂದ ಸೋಲಲು ಇವರಿಬ್ಬರ ಕಾಲೆಳೆದಾಟಗಳೇ ಕಾರಣ. ಈಗ ಅದೇ ಪೂಜಾರಿ ತಾನೇ ಮುಂಬರುವ ಎಂಪಿ ಇಲೆಕ್ಷನ್‍ನಲ್ಲಿ ಕಾಂಗ್ರೆಸ್ ಕ್ಯಾಂಡಿಟೇಟ್ ಅಂತಿದ್ದಾರೆ.
ಆದರೆ ಟಿಕೆಟ್ ತರುವ ಅಥವಾ ಅಖಾಡಕ್ಕೆ ಇಳಿಯುವ ಉತ್ಸಾಹ-ಚೈತನ್ಯ ಈಚೆಗಷ್ಟೇ ಆಸ್ಪತ್ರೆಯಲ್ಲಿ ದಾಖಲಾಗಿ ಹೊರಬಂದಿರುವ ವಯೋವೃದ್ಧ ಪೂಜಾರಿಗಿಲ್ಲ. ಪಾರ್ಟಿಯವರನ್ನೇ ಬಾಯಿಗೆ ಬಂದಂತೆ ಟೀಕಿಸಿದ್ದ ಪೂಜಾರಿಗೆ ಹೈಕಮಾಂಡ್ ಮತ್ತೆ ಛಾನ್ಸ್ ಕೊಡುವುದೂ ಕಷ್ಟವೇ. ಹಾಗಿದ್ದರೆ ಪೂಜಾರಿ ತಾನು ದಿಲ್ಲಿಯಲ್ಲಿ ಪ್ರಯತ್ನ ಮಾಡಿ ಟಿಕೆಟ್ ತರುತ್ತೇನೆಂದು ಹೇಳಿದ್ದಾದರೂ ಯಾಕೆ? ಉತ್ತರ ತುಂಬ ಸರಳ. ಕಾಂಗ್ರೆಸ್‍ನಿಂದ ಸ್ಪರ್ಧಿಸುವ ತಯಾರಿಯಲ್ಲಿ ತೊಡಗಿರುವ ಮೊಯ್ಲಿ ಬಣದ ರಮಾನಾಥ ರೈಗೆ ಟಿಕೆಟ್ ತಪ್ಪಿಸುವ ಹುನ್ನಾರವಷ್ಟೇ. ಪೂಜಾರಿ ಸ್ವಜಾತಿ ಬಂಧು ವಿನಯ್‍ಕುಮಾರ್ ಸೊರಕೆ ಪರವಿದ್ದಾರೆ. ಈ ಸೊರಕೆ ಒಂದು ಬಾರಿ ಉಡುಪಿಯಿಂದ ಎಂಪಿಯಾಗಿದ್ದರು. ಮರು ಬಾರಿ ಮಣ್ಣು ಮುಕ್ಕಿದರು. ಕ್ಷೇತ್ರ ಮರುವಿಂಗಡಣೆ ನಂತರ ಉಡುಪಿಗೆ ಚಿಕ್ಕಮಗಳೂರು ಸೇರಿಸಲಾಗಿದೆ. ಹೊಸ ಕ್ಷೇತ್ರದಲ್ಲಿ ಸೊರಕೆಗೆ ಕಿಮ್ಮತ್ತಿಲ್ಲ. ಹಾಗಾಗಿ ಆತ ತನ್ನ ತಾವರೂರು ಪುತ್ತೂರು ಒಳಗೊಂಡಿರುವ ಮಂಗಳೂರು ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಅಲ್ಲಿ ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಂಟರು ಹೆಚ್ಚಿದ್ದಾರೆ. ಒಳಗೊಳಗೇ ರಾಜಿಯಾಗಿರುವ ರೈ-ಸೊರಕೆ ಕ್ಷೇತ್ರ ಅದಲು-ಬದಲು ಮಾಡಿಕೊಳ್ಳುವ ಪ್ಲಾನ್ ಹಾಕಿದ್ದಾರೆ. ಬಿಲ್ಲವರ ನಾಯಕಾಗ್ರೇಸ ಪೂಜಾರಿಯನ್ನು ಎದುರು ಹಾಕಿಕೊಂಡಿರುವ ರೈಗೆ ಆ ಜಾತಿಯ ಮತ ಬೀಳೋದು ಅನುಮಾನ. ಮಂತ್ರಿಯಾಗಿದ್ದಾಗ ಮುಳ್ಳಾಟ ಮಾಡುತ್ತಿದ್ದ ರೈ ಬಗ್ಗೆ ಸ್ಥಳೀಯ ಕಾಂಗ್ರೆಸಿಗರಿಗೂ ಬೇಸರವಿದೆ.
ಇದೆಲ್ಲ ಲೆಕ್ಕಚಾರ ತೆಗೆದಿರುವ ರೈ ನಿಧಾನವಾಗಿ ಉಡುಪಿಯತ್ತ ವಲಸೆ ಆರಂಭಿಸಿದ್ದಾರೆ. ಸೊರಕೆಗೋ ಉಡುಪಿಗಿಂತ ಮಂಗಳೂರು ಸುರಕ್ಷಿತ ನಿಜ. ಆದರೆ ಸಂಘ ಪರಿವಾರದ ಕೋಮು ಕೆನ್ನೀರಿನಿಂದ ತಲೆ ತೊಳೆಸಿಕೊಂಡಿರುವ ಬಿಲ್ಲವರ ಸೆಳೆಯುವುದು ಸೊರಕೆಗೆ ಅಷ್ಟು ಸುಲಭವಿಲ್ಲ ಎಂದು ಕಾಂಗ್ರೆಸಿಗರೇ ವಿಶ್ಲೇಷಿಸುತ್ತಿದ್ದಾರೆ. ಎರಡು ದಶಕಗಳಿಂದ ಬಿಜೆಪಿ ವಶದಲ್ಲಿರುವ ಮಂಗಳೂರು ಕ್ಷೇತ್ರ ಗೆಲ್ಲಲೇಬೇಕೆಂಬ ಪ್ರಾಮಾಣಿಕ ಇಚ್ಛೆ ಕಾಂಗ್ರೆಸ್ ಕಿಂಗ್‍ಗಳಿಗೆ ಇದ್ದರೆ, ಹಿಂದೂಗಳಿಗೂ ಸಹ್ಯ ಮುಖವಾದ ಮಂತ್ರಿ ಯು.ಟಿ.ಖಾದರ್ ಅಥವಾ ಜೈನ್ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು.
ಜೈನ್ ಕ್ಯಾಂಡಿಡೇಟ್ ಧರ್ಮಸ್ಥಳದಲ್ಲಿ ಕುಳಿತು ಆಶೀರ್ವಾದ ಪಡೆದರೆ ಗೆಲುವು ಸುಲಭ. ಧರ್ಮಸ್ಥಳದ ಜೈನ್ ದೇವಧೂತನಿಗೆ ಆರೆಸೆಸ್ ಅಂದರೆ ಅಷ್ಟಕಷ್ಟೇ. ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸಲ್ಲಿ ಆರೋಪ ತನ್ನ ವಂಶಸ್ಥರ ಮೇಲೆ ಬಂದಾಗ ಚೆಡ್ಡಿಗಳು ನೆರವಿಗೆ ಬರದೇ ಷಡ್ಯಂತ್ರ ಮಾಡಿದ್ದರೆಂಬ ಆಕ್ರೋಶ ದೇವಧೂತನಿಗಿದೆ! ಈ ಧರ್ಮಕಾರಣ ಬಳಸಿಕೊಳ್ಳುವ ಜಾಣ್ಮೆ ಕಾಂಗ್ರೆಸ್ ದೊರೆಗಳಿಗಿದೆಯಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...