Homeಅಂಕಣಗಳುಕನ್ನಡಚಿಂತನೆ ಕಡೆದ ಕನ್ನಡತನದ ನಿರ್ದೇಶಕ ತತ್ವಗಳು

ಕನ್ನಡಚಿಂತನೆ ಕಡೆದ ಕನ್ನಡತನದ ನಿರ್ದೇಶಕ ತತ್ವಗಳು

- Advertisement -
ಡಾ. ಸರ್ಜಾಶಂಕರ ಹರಳಿಮಠ
(ಲೇಖಕರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆಯಲ್ಲಿ ಸಹ ಸಂಶೋಧಕರು) |
ದಿನದಿನಕ್ಕೂ ಮುಚ್ಚುತ್ತಿರುವ ಕನ್ನಡ ಮಾಧ್ಯಮದ ಶಾಲೆಗಳು, ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಬಿಗಿಯಾಗುತ್ತಿರುವ ಇಂಗ್ಲಿಶಿನ ಹಿಡಿತ ಇತ್ಯಾದಿ ಕಣ್ಣೆದುರಿನ ಸಂಗತಿಗಳು ಕನ್ನಡವು ಕಣ್ಮರೆಯಾಗುವ ಆತಂಕವನ್ನು ಹುಟ್ಟಿಸುವುದು ಅಚ್ಚರಿಯ ಸಂಗತಿಯಲ್ಲ. ಇದರೊಂದಿಗೆ ಕನ್ನಡದ ಬಳಕೆ ಕಡಿಮೆಯಾಗುತ್ತಾ ಹೋಗುತ್ತಿದೆ.  ಕನ್ನಡದ ಜಾಗವನ್ನು ಇಂಗ್ಲಿಶ್  ಆಕ್ರಮಿಸಿಕೊಳ್ಳುತ್ತಿದೆ.  ನಾವು ಬಳಸುತ್ತಿರುವ ಕನ್ನಡ  ಕೂಡಾ ಶುದ್ದವಾಗಿಲ್ಲ. ಈ ಕಾರಣಗಳಿಂದ ಕನ್ನಡ ಕಣ್ಮರೆಯಾಗಬಹುದು ಎನ್ನುವ ಸಂಗತಿಗಳು ಆತಂಕವನ್ನು ಹೆಚ್ಚಿಸಿವೆ.
ಶತಮಾನದುದ್ದ ಹರಿದ ಕನ್ನಡ ಚಿಂತನೆ ಈ ಎಲ್ಲಾ ಸಂಗತಿಗಳನ್ನು ಕೂಲಂಕುಷವಾಗಿ ಅವಲೋಕಿಸಿದೆ. ಕನ್ನಡ ಕಣ್ಮರೆಯಾಗುವ ಸಂಭವವನ್ನು ಅಲ್ಲಗೆಳೆದರೂ ಕÀನ್ನಡ ಭಾಷೆಯನ್ನು ಅವನತಿಯತ್ತ ದೂಡುವ ಸಂಗತಿಗಳ ಕುರಿತು ಕಡು ಎಚ್ಚರದಿಂದ ಚಿಂತಿಸಿದೆ. ಕೆ.ವಿ ನಾರಾಯಣ ಅವರು ವಿಶ್ಲೇಷಿಸುವಂತೆ ಭಾಷಾನಾಶವೆಂದರೆ ಒಂದು ಭಾಷೆಯನ್ನು ಬಳಸುವ ಜನಸಮುದಾಯ ತನ್ನ ಭಾಷೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು. ಇನ್ನೊಂದು ಭಾಷೆಯ ಮಡಿಲನ್ನು ಸೇರಿ ಆ ಭಾಷೆಯ ಭಾಷಿಕರಾಗುವುದು. ಇದು ಉಂಟಾಗುವುದು ಯಾವಾಗ ಎಂದರೆ, ಒಂದು: ಭಾಷೆಯನ್ನಾಡುವ ಜನರು ಸಂಖ್ಯೆಯಲ್ಲಿ  ಕಡಿಮೆಯಾಗುತ್ತ ಕೊನೆಗೆ ಒಬ್ಬಿಬ್ಬರು ಉಳಿದು ಆನಂತರ ಅವರು ಮಾಯವಾಗಿ ಬಿಡುವುದು. ಎರಡು: ಒಂದು ಭಾಷಾ ಸಮುದಾಯ ಸಾಮಾಜಿಕ ಒತ್ತಡಗಳಿಂದಾಗಿ ತನ್ನ ಭಾಷೆಯನ್ನು ಬಿಟ್ಟುಕೊಟ್ಟು ಇನ್ನೊಂದು ಅಧಿಕಾರದ ಭಾಷೆಯನ್ನು ಬಳಸಲು ತೊಡಗುವುದು. ಮೂರು: ಒಂದು ಭಾಷೆಯನ್ನಾಡುವ ಜನರು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯದೆ ಇನ್ನೊಂದು ಭಾಷಾ ಸಮುದಾಯದೊಡನೆ  ವ್ಯವಹರಿಸಬೇಕಾಗಿ ಬಂದಾಗ ನಡೆಯುವ ವಿದ್ಯಮಾನಗಳಿಂದ ಪಿಜಿನ್ ಎಂಬ ಭಾಷಾ ಪ್ರಭೇದ ಹುಟ್ಟಿಕೊಳ್ಳುವುದು. ಈ ಮೇಲಿನ ಮೂರು ಸಂದರ್ಭಗಳಲ್ಲಿ ಯಾವುದು ಈಗ ಒದಗಿಬಂದಿದೆ ಎಂಬುದನ್ನು ಗಮನಿಸಿದರೆ ಅಂತಹ ಯಾವುದೇ ಸಂದರ್ಭಗಳು ಇಲ್ಲಿ ಒದಗಿವೆ ಎನ್ನಿಸುವುದಿಲ್ಲ.  ಕಳೆದು ಹೋಗುತ್ತಿರುವ ಭಾಷೆಗಳು ಸಾಮಾನ್ಯವಾಗಿ ಅನ್ಯಭಾಷೆ ಸಂಸರ್ಗವಿಲ್ಲದ ಬದುಕುತ್ತ್ತಿರುವ ಆದಿವಾಸಿಗಳ ಭಾಷೆಗಳು. ಆದರೆ ಕನ್ನಡ ಹೀಗೆ ಅನ್ಯಭಾಷೆ ಸಂಸರ್ಗವಿಲ್ಲದ ಭಾಷೆಯಲ್ಲ. ಇದೊಂದು ಪೌರ ಸಮಾಜದ ಭಾಷೆ. ಆದ್ದರಿಂದ ಈ ಕಾರಣದಿಂದಲೂ ಕನ್ನಡವು ನಾಶವಾಗುವ ಭಾಷೆ ಎನ್ನುವಂತಿಲ್ಲ.
ಕನ್ನಡ ಚಿಂತನೆ ಕನ್ನಡದ ಬಗ್ಗೆ ವ್ಯಕ್ತಪಡಿಸಿರುವ ಭರವಸೆಯನ್ನು ಈ ಕುರಿತು ನಡೆದ ಸಮೀಕ್ಷೆಗಳೂ ಕೂಡ ದೃಢಪಡಿಸಿವೆ. ಯುನೆಸ್ಕೋವು ಸಿದ್ಧಪಡಿಸಿದ ಭಾಷೆಗಳ ಜಾಗತಿಕ ಭೂಪಟವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, 101 ಭಾಷೆಗಳನ್ನು ಅತೀವ ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ  71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ  ಭಾಷೆಗಳೆಂದೂ ಗುರುತಿಸಿದೆ. ಈವರೆಗೆ ಜಗತ್ತಿನಲ್ಲಿ ನಡೆದಿರುವ ಅತ್ಯಂತ ದೊಡ್ಡ ಭಾಷಾ ಸಮೀಕ್ಷೆ ‘ಪೀಪಲ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ’ದ ಸಮೀಕ್ಷೆಯನ್ನು ಆಧರಿಸಿ ‘ಭಾರತದ 400 ಭಾಷೆಗಳು ಮುಂದಿನ 50 ವರ್ಷಗಳಲ್ಲಿ ನಶಿಸಿ ಹೋಗುವ ಅಪಾಯ ಎದುರಿಸುತ್ತಿದೆ’ ಎಂದು ಭಾಷಾಶಾಸ್ತ್ರಜ್ಞ ಗಣೇಶ್ ಎನ್.ದೇವಿ ಹೇಳಿದ್ದಾರೆ. ಈ ಎರಡೂ ಸಮೀಕ್ಷೆಗಳಲ್ಲಿ ಕನ್ನಡವನ್ನು ನಶಿಸಿ ಹೋಗುವ ಅಪಾಯದಲ್ಲಿರುವ ಭಾಷೆಯೆಂದು ಗುರುತಿಸಿಲ್ಲ. ಎರಡನೇ ಸಮೀಕ್ಷೆಯಲ್ಲಂತೂ ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ತಮಿಳು, ಪಂಜಾಬಿ ಮತ್ತು ಮಲಯಾಳದಂತಹ ಭಾಷೆಗಳಿಗೆ ಇಂಗ್ಲಿಶಿನಿಂದ ಅಪಾಯವಿದೆ ಎಂಬುದು ಭ್ರಮೆ. ಇವುಗಳನ್ನು ಜಗತ್ತಿನ ಅತ್ಯಂತ ದೊಡ್ಡ, ಪ್ರಬಲ ಮತ್ತು ಪ್ರಮುಖ 30 ಭಾಷೆಗಳೆಂದು ಪರಿಗಣಿಸಲಾಗಿದೆ. ಇವುಗಳಿಗೆ 1000 ವರ್ಷಗಳಿಗಿಂತಲೂ ದೀರ್ಘಾವಧಿಯ ಇತಿಹಾಸವಿದೆ. ಈ ಭಾಷೆಗಳನ್ನು ಮಾತನಾಡುವ ಜನರ ಸಂಖ್ಯೆ ತಲಾ 2 ಕೋಟಿಗಿಂತಲೂ ಹೆಚ್ಚು. ಈ ಭಾಷೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ರಚನೆಯಾಗಿದೆ. ಸಾವಿರಾರು ಕೋಟಿ ಬಂಡವಾಳದ ಸಿನೆಮಾ ಮತ್ತು ಕಿರುತೆರೆ ಉದ್ಯಮಗಳು, ಪತ್ರಿಕೆ ಮತ್ತು ಟಿ.ವಿ ಮಾಧ್ಯಮಗಳು ಇವೆ. ಭಾಷೆಯಿಂದ ಜೀವನೋಪಾಯಕ್ಕೆ ಕೊಡುಗೆ ಇರುವವರೆಗೂ ಆ ಭಾಷೆಗಳಿಗೆ ಅಪಾಯವಿರುವುದಿಲ್ಲ ಎಂಬ ಭರವಸೆ ವ್ಯಕ್ತವಾಗಿದೆ. ಎತ್ನೋಲಾಗ್ ಮತ್ತು ಟೆರ್ರಾ ಲಿಂಗ್ವಾ ಮತ್ತು ಲಿಂಗ್ವಿಸ್ಫಿಯರ್ ಸ್ವಾಯತ್ತ ವೇದಿಕೆಗಳು ಕೂಡ ಅಳಿವಿನ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡವನ್ನು ಸೇರಿಸಿಲ್ಲ.
ಜಗತ್ತಿನ ಭಾಷೆಗಳನ್ನು ಅಧ್ಯಯನ ಮಾಡಿದಾಗ ಒಂದು ವಿಶಿಷ್ಟ ಸಂಗತಿ ನಮ್ಮ ಗಮನಕ್ಕೆ ಬರುತ್ತದೆ. ಮೊದಲ ಸಹಸ್ರಮಾನದ ಸಂದರ್ಭದಲ್ಲೂ ಜನಭಾಷೆಯಾಗಿದ್ದು ಬರವಣಿಗೆಯ ಪರಂಪರೆಯನ್ನು ಹೊಂದಿದ್ದು, ಮೂರನೆಯ ಸಹಸ್ರಮಾನದಲ್ಲೂ ಅದೇ ಮನ್ನಣೆಯನ್ನು ಕಾಯ್ದುಕೊಂಡು ಬಂದಿರುವ ಭಾಷೆಗಳ ಸಂಖ್ಯೆ ಹೆಚ್ಚಾಗಿಲ್ಲ. ಅವು ಇಡೀ ಜಗತ್ತಿನಲ್ಲಿ ಎಂಟೋ ಹತ್ತೋ ಇರಬಹುದು. ಅವುಗಳಲ್ಲಿ ಕನ್ನಡವೂ ಒಂದು. ಹೀಗಿದ್ದರೂ ಕನ್ನಡ ನಿರಾತಂಕವಾಗಿ ಇರುವಂತಿಲ್ಲ. ಏಕೆಂದರೆ ಕನ್ನಡ ಬೇರೆ ಬೇರೆ ಸ್ವರೂಪಗಳಲ್ಲಿ ಆತಂಕವನ್ನು ಎದುರಿಸುತ್ತಿದೆ. ಕನ್ನಡ ಓದುಗವಲಯದಲ್ಲಿ ಇಂಗ್ಲಿಶ್ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುತ್ತಿರುವುದು,  ಕಣ್ಣಿನ ನೆಲೆಯಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದು ಅಂತಹ ಎರಡು ಆತಂಕಗಳು. ಬರವಣಿಗೆಗೆ ಕನ್ನಡ ಅಗತ್ಯ ಎನ್ನುವ ಪ್ರಸಂಗಗಳು ಕಡಿಮೆಯಾಗುತ್ತಿವೆ. ಓದುವವರು ಕೂಡಾ ನಿರ್ದಿಷ್ಟ ಪ್ರಮಾಣದಲ್ಲಿ ಕನ್ನಡದಿಂದ ದೂರವಾಗುತ್ತಿದ್ದಾರೆ. ಕಲಿತ ಜನರು ಪರಿಸರದಲ್ಲಿ ದ್ವಿಭಾಷಿಕರಾಗಿರುವ ಪ್ರಸಂಗ ಹೆಚ್ಚಿದೆ.  ಎಷ್ಟೋ ಭಾಷೆಗಳ ಚರಿತ್ರೆಯನ್ನು ಗಮನಿಸಿದರೆ  ಆ ಭಾಷೆಗಳು ಕಿವಿಯ ಭಾಷೆಗಳಾಗಿ ಯಾವ ಆತಂಕವು ಇಲ್ಲದೇ ಉಳಿದುಕೊಂಡಿರುವುದನ್ನು ನೋಡುತ್ತೇವೆ. ಆದರೆ ಭಾಷೆ ಕಣ್ಣಿನ ನೆಲೆಯಲ್ಲಿ ಉಳಿದುಕೊಳ್ಳಬೇಕು. ಕಣ್ಣಿನ ನೆಲೆಯಲ್ಲಿ ಬರಹ ನೋಡುತ್ತದೆ. ಕನ್ನಡ ಈ ಅಪಾಯವನ್ನು ಎದುರಿಸುತ್ತಿರುವಂತೆ ತೋರುತ್ತದೆ ಎಂದು ಕೆ.ವಿ ನಾರಾಯಣ ಅವರು ಅಭಿಪ್ರಾಯ ಪಡುತ್ತಾರೆ.
ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಿ ಭಾಷೆಗಳಿಗೆ ಬೆದರಿಕೆ ಎದುರಾಗಿರುವುದು ವಸಾಹತುಭಾಷೆಯಾದ ಇಂಗ್ಲಿಶಿನಿಂದ.  ಹಾಗೆ ನೋಡಿದರೆ ಭಾಷಿಕವಾಗಿ ಬೇರೆಲ್ಲ ಭಾಷೆಗಳಿಗಿಲ್ಲದ ವಿಶಿಷ್ಟವಾದ ತನ್ನದೇ ಆದ ಶಕ್ತಿಯೇನೂ ಇಂಗ್ಲಿಶಿಗೆ ಇಲ್ಲ. ಬಳಸುವವರ ಕೈಯಲ್ಲಿ ಅದು ದೈತ್ಯಶಕ್ತಿಯಂತೆ ತೋರುತ್ತಿದೆ ಅಷ್ಟೆ. ಸಮಸ್ಯೆಯಿರುವುದು ಇಂಗ್ಲಿಶಿನದಲ್ಲ. ಅದರ ಹಿಂದಿರುವ ಜಾಗತಿಕ ಬಂಡವಾಳವಾದದ್ದು ಮತ್ತು ಅದಕ್ಕೆ ಜತೆಗೂಡಿರುವ ಮತೀಯವಾದದ್ದು. ಇಂತಹ ‘ಜಾಗತಿಕ ಬಂಡವಾಳವಾದವೂ, ಪ್ರಭುತ್ವಗಳೂ, ಮತೀಯವಾದವೂ ವಿಚಿತ್ರವಾಗಿ ಏಕೀಭವಿಸಿರುವ ಈ ಕಾಲದಲ್ಲಿ, ಕನ್ನಡದ ಕಷ್ಟವು ಭಾರತದ ಎಲ್ಲ ಜನಭಾಷೆಗಳ ಕಷ್ಟವೂ ಆಗಿರುವಂತಿದೆ. ನಿಜವಾಗಿಯೂ ಸಮಸ್ಯೆಯ ಮೂಲ ಎಲ್ಲಿದೆ? ದೇಶೀಯವಾದ ಭಾಷೆ ಮತ್ತು ವೃತ್ತಿಕುಶಲತೆಗಳನ್ನು ನಾಶ ಮಾಡುವ ಆರ್ಥಿಕ ನೀತಿಯನ್ನು ಮನೆಯೊಳಗೆ ಬಿಟ್ಟುಕೊಂಡು, ಅವುಗಳ ಪರಿಣಾಮ ಮಾತ್ರ ಬೇರೆಯಾಗಿರಬೇಕು ಎಂದು ಅಪೇಕ್ಷಿಸುತ್ತಿರುವುದರಲ್ಲಿಯೋ? ಜನಭಾಷೆಗಳು ಸಾರ್ವಜನಿಕ ಜೀವನದ ಹಲವು ವಲಯಗಳಲ್ಲಿ ಬಳಕೆಗೊಳ್ಳುವಂತಹ ಹೊಸ ಹಾದಿಗಳನ್ನು ಹುಡುಕಲು ಅಸಮರ್ಥವಾಗಿರುವುದರಲ್ಲಿಯೋ?’ ಎಂಬ ರಹಮತ್ ತರೀಕೆರೆ ಅವರ ಪ್ರಶ್ನೆಯೇ ಉತ್ತರಗಳನ್ನು ಹೊಳೆಯಿಸುತ್ತಿದೆ.
ಬಂಡವಾಳವಾದದೊಂದಿಗೆ ಜತೆಗೂಡಿರುವ, ಭಾಷೆಗೂ ತಗುಲಿರುವ ಮತೀಯವಾದದ ಹಿಂದಿನ ತರ್ಕವನ್ನು ಸರಿಯಾಗಿ ಗ್ರಹಿಸುವುದು ಅಗತ್ಯವಾಗಿದೆ. ಅಧಿಕಾರ ಲೋಕದಲ್ಲಿ ಒಡೆದಾಳುವುದು ಫಿತೂರಿ ಆಕ್ರಮಣ ರಾಜಿ ಸಾಮಾನ್ಯ ಸಂಗತಿಗಳು. ಈ ಸಂಗತಿಗಳನ್ನು ಆರ್ಥಿಕವಾಗಿ ರಾಜಕೀಯವಾಗಿ ಅರ್ಥೈಸಿದರೆ ಕಾಣುವ ನಿಜವೇ ಬೇರೆ. ರಾಜಕೀಯ ವಿಸ್ತರಣೆಗಾಗಿ ಹಾಗೂ ಸಂಪತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ, ಪ್ರಭುತ್ವಗಳು ಉದ್ದಕ್ಕೂ ಸಂಘರ್ಷ ಮಾಡಿವೆ. ಇದು ನಿಮ್ಮ ಸಂಘರ್ಷವೆಂದು ಜನರನ್ನು ನಂಬಿಸಿವೆ. ಇದೇ ನಂಬಿಕೆಯನ್ನು ತಂದು ಚರಿತ್ರೆಕಾರರು ನಮ್ಮ ಮೇಲೆ ಹೇರುತ್ತಿದ್ದಾರೆ.
ಬರಗೂರು ರಾಮಚಂದ್ರಪ್ಪ ಅವರು ವಿವರಿಸುವಂತೆ ಮೀರುವ ಕ್ರಿಯೆ ಕನ್ನಡ ಮನಸ್ಸಿನ ಬಹುಮುಖ್ಯ ಗುಣಲಕ್ಷಣವಾಗಿದೆ. ಮಲಿನತೆಯನ್ನು ಮೀರಿ ಮಾನವೀಯವಾಗುತ್ತ ಬಂದದ್ದು ಕನ್ನಡ ಮನಸ್ಸು, ಒಳಗಿರುವ ವಿವಿಧ ಶಕ್ತಿ ಸಂಘರ್ಷಗಳ ನಡುವೆ, ವಿವೇಕ ಮತ್ತು ಔಚಿತ್ಯದ ಅಂಶಗಳನ್ನು ತನ್ನದಾಗಿಸಿಕೊಳ್ಳುತ್ತ, ಜೀವವಿರೋಧಿ ನಿಲುವುಗಳನ್ನು ನಿರಾಕರಿಸುತ್ತ ಜೀವಪರ ಧಾರೆಯನ್ನು ಸ್ವೀಕರಿಸುತ್ತ ವಿಕಾಸಗೊಂಡದ್ದು ಕನ್ನಡ ಮನಸ್ಸು. ಹೀಗಿರುವಾಗಲೂ ಯಾರಿಗಾದರೂ ತಮ್ಮ ಮಾತೃಭಾಷೆಯಲ್ಲಿ ಗುರುತಿಸಿಕೊಳ್ಳಲು ಹಿಂಜರಿವ ಸ್ಥಿತಿ ಯಾಕಾಗಿ ಬರುತ್ತದೆ? ಯುವ ತಲೆಮಾರಿನ ಒಂದು ವರ್ಗ ಯಾಕೆ ಕನ್ನಡವನ್ನು ತಮ್ಮ ಐಡೆಂಟಿಟಿಯಾಗಿ ಬಳಸಲು ಹಿಂಜರಿಯುತ್ತಿದ್ದಾರೆ? ಈ ಯುವ ತಲೆಮಾರು ಯಾವುದು? ಕನ್ನಡದೊಂದಿಗೆ ಬಂದ ಸಾಮಾಜಿಕ ಕ್ರೌರ್ಯಗಳಿಗೆ ತುತ್ತಾದ ದಲಿತರೇ? ಕನ್ನಡವನ್ನು ಹಿಂದೂಧರ್ಮದ ಮತೀಯ ಚೌಕಟ್ಟಿನೊಳಗೆ ಸೇರಿಸುವ ಪ್ರಯತ್ನಗಳಿಂದ ಕಂಗೆಟ್ಟ ಅಲ್ಪಸಂಖ್ಯಾತ ಸಮುದಾಯದವರೇ? ಕನ್ನಡದ ಯಜಮಾನ್ಯದಿಂದ ಬೇಸತ್ತ ತುಳು, ಲಂಬಾಣಿಯಂತಹ ಕರ್ನಾಟಕದ ಇತರ ಭಾಷಿಕರೇ? ಇಂಗ್ಲಿಶಿನಿಂದ ಆಧುನಿಕ ಸೌಕರ್ಯಗಳನ್ನು ಪಡೆದ ಮೇಲ್ಜಾತಿಯವರೇ? ಇವರನ್ನೆಲ್ಲ ಕನ್ನಡದ ಮಡಿಲಿಗೆ ಮರಳಿ ತರುವ ಪ್ರಯತ್ನ ಹೇಗೆ? ಕನ್ನಡದ ಪ್ರಾಚೀನತೆ, ವೈಭವ ಸಾರುವ ಉತ್ಸವಗಳು, ಪ್ರಚಾರಗಳು ಈ ಸಮಸ್ಯೆಗೆ ಪರಿಹಾರವಲ್ಲ. ಆರೋಗ್ಯಕರ ಸಂಗತಿಯೆಂದರೆ ಕರ್ನಾಟಕದಲ್ಲಿ ಹುಸಿ ವೈಭವ ಮತ್ತು ವಾಸ್ತವಗಳ ನಡುವೆ ಅರ್ಥಪೂರ್ಣ ಮುಖಾಮುಖಿ ನಡೆಯುತ್ತಿರುತ್ತದೆ. ಇಂತಹ ಮುಖಾಮುಖಿಗಳು ನಿರಂತರವಾಗಬೇಕು. ಕನ್ನಡವನ್ನು ಮಾತನಾಡುವವರು ಜೀವಂತ ಮನುಷ್ಯರೇ ಎಂದು ಭಾವಿಸಿ ಅವರು ಕನ್ನಡದಿಂದ ದೂರ ಹೋಗುತ್ತಿರುವುದಕ್ಕೆ ಕಾರಣಗಳನ್ನು ಅರಿತು ಅದಕ್ಕೆ ಸ್ಪಂದಿಸುವುದೇ ಸರಳ ಮತ್ತು ಶಾಶ್ವತ ಪರಿಹಾರ. ಭಾಷೆಯಾಡುವ ಜನರ ಬದುಕು ಸಹನೀಯವಾಗದೆ ಕೇವಲ ಆ ಭಾಷೆಗೆ ಭವಿಷ್ಯವಿಲ್ಲ.  ಕನ್ನಡವೂ ಇದಕ್ಕೆ ಹೊರತಲ್ಲ.
ಸ್ವಸ್ಥ ಸಮಾಜ ಮತ್ತು ಭಾಷೆಯನ್ನು ಅಭಿನ್ನವಾಗಿ ಗ್ರಹಿಸಿರುವ ಕನ್ನಡ ಚಿಂತನೆ ಸೂಚಿಸುತ್ತಿರುವ  ಕನ್ನಡತನದ ಐದು ನಿರ್ದೇಶಕ ತತ್ವಗಳನ್ನು ಇಲ್ಲಿ ಗುರುತಿಸಲಾಗಿದೆ. ಅವುಗಳೆಂದರೆ: ಪ್ರಜಾಪ್ರಭುತ್ವಕ್ಕೆ ಸಂವಾದಿ, ಸಮುದಾಯ ಪ್ರಜ್ಞೆ, ಬುದ್ಧಿಪ್ರಧಾನ, ಜಂಗಮರೂಪಿ ಮತ್ತು ದೇಶಿಯತೆ.
ಕನ್ನಡತನದ  ಮೇಲ್ಕಂಡ ಐದು ನಿರ್ದೇಶಕ ತತ್ವಗಳನ್ನು ಈ ಮುಂದೆ ವಿವರಿಸಲಾಗಿದೆ.
1. ಪ್ರಜಾಪ್ರಭುತ್ವಕ್ಕೆ ಸಂವಾದಿ : ಪ್ರಜಾಪ್ರಭುತ್ವಕ್ಕೆ ಸಂವಾದಿಯಾಗಿ ಕನ್ನಡ ಭಾಷೆ ಎಂಬುದನ್ನು ಗ್ರಹಿಸಬೇಕು. ಪ್ರಜಾಪ್ರಭುತ್ವಕ್ಕೆ ಎರವಾದ ಸಂಗತಿಗಳು ಘಟಿಸುತ್ತಿರುವಾಗ ಪ್ರಜಾಪ್ರಭುತ್ವ ನಶಿಸುತ್ತಿರುವದರ ಬಗ್ಗೆ ಚಕಾರ ಎತ್ತದೆ ಕೇವಲ ಭಾಷಾ ಕೇಂದ್ರಿತವಾಗಿ ಚಿಂತಿಸಿದರೆ ಅದು ಆತ್ಯಂತಿಕವಾಗಿ ಕನ್ನಡ ಭಾಷೆಯ ಹಿತವನ್ನೂ ಕಾಯಲಾರದು ಎಂಬ ಕೆ.ವಿ ಸುಬ್ಬಣ್ಣನವರು ಅಭಿಪ್ರಾಯಕ್ಕೆ  ಕನ್ನಡಜನಗಳ ಪಾಲಿಗೆ ಪ್ರಜಾಪ್ರಭುತ್ವವನ್ನು ಯಶಸ್ವಿಯಾಗಿ ಮಾಡಬಲ್ಲ ಭಾಷೆ ಕನ್ನಡವೊಂದೇ ಎಂದು ಶಿವರಾಮ ಕಾರಂತರು ಸಹಮತ ವ್ಯಕ್ತಪಡಿಸಿದ್ದಾರೆ.
2. ಸಮುದಾಯ ಪ್ರಜ್ಞೆ : ಕನ್ನಡ ಸಮಾಜ ಅನ್ನೋದು ಹಲವಾರು ಉಪಸಂಸ್ಕøತಿಗಳ ಸಡಿಲವಾದ ಒಂದು ಒಕ್ಕೂಟ.  ನಾವು ಕರ್ನಾಟಕ ಅಂತ ನಿಜವಾಗಲೂ ಕರೆಯಬೇಕಾಗಿರುವುದು ಇಂತಹ ಹಲವಾರು ಚಿಕ್ಕ ಚಿಕ್ಕ ಸಮುದಾಯಗಳ ಒಕ್ಕೂಟಕ್ಕೆ. ಉದಾಹರಣೆಗೆ ಕರಾವಳಿ ಕನ್ನಡ ಸಮುದಾಯ,  ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯ. ಈ ಯಾವುದೇ ಒಂದು ಭಾಗಕ್ಕೆ, ಸಮುದಾಯಕ್ಕೆ ಅಪಾಯ ಬಂದ್ರೆ ಅದು ಕನ್ನಡಕ್ಕೆ ಆಗಿರೋ ಅಪಾಯ ಅಂತ ಗಮನಿಸಬೇಕು. ಕನ್ನಡದ ಕಾಡುಗಳ ಬಗ್ಗೆ, ಕನ್ನಡದ ನದಿಗಳ ಬಗ್ಗೆ, ಕನ್ನಡದ ರೈತರ ಬಗ್ಗೆ ಯೋಚನೆ ಮಾಡದಿರುವ ಹೋರಾಟ ಕನ್ನಡದ ಹೋರಾಟ ಅಲ್ಲ. ಕನ್ನಡದ ಪ್ರಶ್ನೆಗಳು, ಕನ್ನಡ ಸಮಾಜದ ಪ್ರಶ್ನೆಗಳು ಅಂದ್ರೆ ಕನ್ನಡ ಸಮುದಾಯದ ಪ್ರಶ್ನೆಗಳು. ಕನ್ನಡವನ್ನು ಸಾವಿರಾರು ವರ್ಷ ಕಾಪಾಡಿಕೊಂಡು ಬಂದಂತಹ ಶ್ರಮವರ್ಗದ ಪ್ರಶ್ನೆಗಳೇ ಕನ್ನಡದ ಪ್ರಶ್ನೆಗಳು ಎನ್ನುವ ರಾಜೇಂದ್ರ ಚೆನ್ನಿ ಅವರ ಚಿಂತನೆ ಕನ್ನಡದ ಪರವಾಗಿ ಇರುವುದು ಎಂದರೆ ವಚನಕಾರರು ಚಿಂತಿಸಿದಂತೆ ಸ್ಥಳೀಯ ಸಮುದಾಯದ ಆಶೋತ್ತರಗಳ  ಪರವಾಗಿ ಇರುವುದು ಎಂಬ ರಹಮತ್ ಅವರ ಕಾಣ್ಕೆಯಲ್ಲಿ ಹರಳುಗಟ್ಟಿದೆ.
3. ಬುದ್ಧಿಪ್ರಧಾನ : ‘ಭಾವಪ್ರಧಾನ’ ಆಂಶಗಳತ್ತಲೇ ಕನ್ನಡತನದ ಒತ್ತು ಬಿದ್ದಿರುವುದು ಕನ್ನಡ, ಕರ್ನಾಟಕದ ಆರೋಗ್ಯಕರ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ‘ಭಾವಪ್ರಧಾನ’ ಅಂಶಗಳಿಗಿಂತ ‘ಬುದ್ಧಿಪ್ರಧಾನ’À ವೈಚಾರಿಕತೆ ಭಾಷೆಯನ್ನು ಆರೋಗ್ಯಕರವಾಗಿ ಬೆಳೆಸುತ್ತದೆ. ಈ ಕುರಿತ ಚಿಂತನೆಗಳು  ಗೋವಿಂದ ಪೈ, ಶಿವರಾಮ ಕಾರಂತ ಮತ್ತು  ಗೌರೀಶ ಕಾಯ್ಕಿಣಿ ಅವರಲ್ಲಿ  ದಟ್ಟವಾಗಿವೆ.
4. ಜಂಗಮ ಸ್ವರೂಪಿ : ವಸಾಹತುಶಾಹಿ ಕಥನಗಳು ಮತ್ತು ಗತಕಾಲವನ್ನೇ ವಿಜೃಂಭಿಸುವ ಪುನರುತ್ಥಾನವಾದಿ ಕಥನಗಳಿಗೆ ಬದಲಾಗದೇ ಇರುವ ಜಡ, ನಿಶ್ಚಲ ಚಿತ್ರಗಳೇ ಬೇಕು. ಯಾವುದೋ ಕಾಲದಲ್ಲೋ, ದೇಶದಲ್ಲೋ ಸ್ಥಗಿತವಾಗಿರೋದನ್ನು ಅದು ಒಪ್ಪಿಕೊಳ್ಳುತ್ತದೆ. ಕನ್ನಡದ ಅತ್ಯುತ್ತಮ ಸೃಷ್ಠಿಶೀಲ ಮನಸ್ಸುಗಳು ಈ ಬಗೆಯ ನಿಶ್ಚಲಸ್ವರೂಪಿ ಕಥನಗಳನ್ನು ಒಪ್ಪಿಕೊಳ್ಳುವುದಿಲ್ಲ. ಕನ್ನಡ ಅಸ್ಮಿತೆ ಎನ್ನುವುದು ಜಂಗಮ ಸ್ವರೂಪಿ. ನಾಡಿಗೆ ಒಂದು ಅಸ್ಮಿತೆ  ಕೊಡುವ ಸಂದರ್ಭದಲ್ಲಿ ಬಹಳ ನಿರ್ದಿಷ್ಟವಾಗಿ ಅದನ್ನು ಒಂದು ರಾಜಕೀಯ ಸ್ಥಿತಿಯಾಗಿ ನೋಡಿದರೆ ಅಪಾಯವಿದೆ. ಆ ಕನ್ನಡದ ಗುರುತು ಎನ್ನುವ ಕಲ್ಪನೆ ಆಕ್ರಮಣಶೀಲವಾಗಬಹುದು. ಅದು ಅನ್ಯರನ್ನು ಬಹಳ ಅಸಹನೆಯಿಂದ ಕಾಣಬಹುದು. ‘ನಾವು ಎದುರಿಗೆ ಕಾಣುವುದು ಇದೇ ಕನ್ನಡ, ಇದೇ ಕರ್ನಾಟಕ, ಇದು ಹೀಗೆ, ಇದೇ ಕನ್ನಡ’ ಎಂದು ವಾದ ಮಾಡುವುದಕ್ಕೆ ಶುರುಮಾಡಿದರೆ ನಮ್ಮ ಗುರುತಿನ ಹುಡುಕಾಟದಲ್ಲಿ ಅದು ಇತರರ ಮೇಲೆ ಅಸಹನೆಯನ್ನು ತೋರಬಹುದು. ಆದ್ದರಿಂದ ಕನ್ನಡ ಅನ್ನೋದು ಇನ್ನೂ ಆಗಿಲ್ಲದಂತಹ ಸ್ಥಿತಿ, ಕನ್ನಡ ನಾಡು ಅಂದ್ರೆ ನಾವು ಯಾವಾಗಲೂ ಕನಸು ಕಾಣೋ ಸ್ಥಿತಿ. ಕನ್ನಡ ಭಾಷಿಕರು ಮೆಟ್ಟುವ ನೆಲವೇ ಕರ್ನಾಟಕ, ‘ಕನ್ನಡ ಕಾವ್ಯಗಳನ್ನೋದುವಾತನು ಅಮೆರಿಕೆಯಲ್ಲಿದ್ದರೂ ಅದು ಕರ್ನಾಟಕವೇ. ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಕಾವೇರಿಯೆ. ಮೂಲತಃ ಕನ್ನಡವು ಪರಿಭಾವಿಸುವ ಒಂದು ಕ್ರಿಯೆ. ಈ ಚಿಂತನೆಗಳು ಕುವೆಂಪು ಅವರಿಂದ ರಾಜೇಂದ್ರ ಚೆನ್ನಿ ತನಕ ನೂರಾರು ಚಿಂತಕರಲ್ಲಿ ಮತ್ತೆ ಮತ್ತೆ ಒಡಮೂಡಿದೆ.
5. ದೇಶಿಯತೆ ಪರ : ಕನ್ನಡ ಅಸ್ಮಿತೆ ಎಲ್ಲಿಲ್ಲಿ ಕನ್ನಡ ಎನ್ನುವ ‘ಭಾಷೆ’ಗೆ ಸೀಮಿತವಾಗಿದೆಯೋ ಅಲ್ಲೆಲ್ಲ ಅದು ಭಾಷೆ ಕುರಿತ ಭಾವನಾತ್ಮಕ ಸಂಗತಿಯಾಗುತ್ತಾ ಹುಸಿ-ನಿಜದ ಕಲಸುಮೇಲೋರಗದ ವೈಭವದ ಗತದ ನೆನಕೆಯಲ್ಲಿ ವಾಸ್ತವದ ಸ್ಥಿತಿಗೆ ಸ್ವಮರುಕ ಪಡುವುದಕ್ಕೆ ಸೀಮಿತವಾಗುತ್ತದೆ. ಅದು ಕರ್ನಾಟಕ ಎಂಬ ಜೀವಂತ ಅಸ್ಮಿತೆಗೆ ಜಿಗಿತ ಕಂಡಾಗ ತನ್ನ ಮಿತಿಗಳನ್ನು ಮೀರುವ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಕನ್ನಡ ಅಸ್ಮಿತೆಯ ಜೀವಂತಿಕೆ ಸಾಕಾರವಾಗುವುದು ಮತ್ತು ವಿಕಾಸ ಪಡೆಯುವುದು ಕರ್ನಾಟಕ ಅಸ್ಮಿತೆಯ ಜತೆ ಜತೆಯಲ್ಲಿಯೇ. ಕನ್ನಡ ಅಸ್ಮಿತೆ ‘ಭಾಷೆಗೆ’ ಸೀಮಿತವಾದಂತೆಲ್ಲ ಭಾಷೆಯಾಗಿಯೂ ಅದು ಹಿನ್ನಡೆಯನ್ನು ಅನುಭವಿಸುತ್ತದೆ.  ಒಂದು ನಾಡಿನ ಜನರ ಸಾಮಾಜಿಕ ಆರ್ಥಿಕ ಬದುಕು ನೆಟ್ಟಗಾಗದೆ ಆ ನಾಡಿನ ಸಂಸ್ಕøತಿಯ ಚರ್ಚೆಗೆ ಏನೂ ಅರ್ಥವಿಲ್ಲ. ಕನ್ನಡ ಅಸ್ಮಿತೆ ಎಂದರೆ ಈ ನಾಡಿನಲ್ಲಿ ಬದುಕುತ್ತಿರುವ ಎಲ್ಲ ಜನಸಮುದಾಯಗಳ ಚಿಂತನೆ ಮತ್ತು ನಡಾವಳಿಗಳ ರೀತಿ. ರಹಮತ್ ತರೀಕೆರೆ ಅವರ ಪ್ರಕಾರ ಕನ್ನಡದ ಪರವಾಗಿ ಇರುವುದು ಎಂದರೆ ವಚನಕಾರರು ಚಿಂತಿಸಿದಂತೆ ದೇಶೀಯತೆಯ ಪರವಾಗಿ ಇರುವುದು.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....