Homeಮುಖಪುಟಅಧಿಕಾರಕ್ಕೆ ಸತ್ಯ ಹೇಳುವ ಪತ್ರಕರ್ತರನ್ನು ತುಳಿಯುತ್ತಿರುವ ಪ್ರಭುತ್ವಗಳು

ಅಧಿಕಾರಕ್ಕೆ ಸತ್ಯ ಹೇಳುವ ಪತ್ರಕರ್ತರನ್ನು ತುಳಿಯುತ್ತಿರುವ ಪ್ರಭುತ್ವಗಳು

ಗಟ್ಟಿಯಾದ ತನಿಖಾ ಪತ್ರಿಕಾವೃತ್ತಿಯನ್ನೇ ನಕಲಿ ಎಂದು ಬಿಂಬಿಸುವ ರೀತಿಯಲ್ಲಿ ಕಾರ್ಪೋರೇಟ್ ಮಾಧ್ಯಮವು ವಾಸ್ತವವನ್ನು ತಿರುಚಿ, ನಕಲಿ ಸುದ್ದಿಗಳನ್ನೇ ನಿಜ ಎಂದು ಮಾರಾಟ ಮಾಡುತ್ತಿದೆ.

- Advertisement -
- Advertisement -

ಜಗತ್ತಿನ ಹಲವಾರು ದೇಶಗಳಲ್ಲಿ ಪತ್ರಕರ್ತರು ಕರಾಳ ಮತ್ತು ಕ್ರೂರ ನಿಯಂತ್ರಣಗಳಿಗೆ ಒಳಪಡುತ್ತಿರುವಂತೆ, ಸಾಮಾನ್ಯ ಜನರು ನಿಜವಾದ ಸುದ್ದಿ ಮತ್ತು ನಕಲಿ ಸುದ್ದಿಗಳ ನಡುವಿನ ವ್ಯತ್ಯಾಸ ತಿಳಿಯಲು ಹೆಚ್ಚುಹೆಚ್ಚಾಗಿ ಒದ್ದಾಡುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ವಿಶೇಷವಾಗಿ ಸೈದ್ಧಾಂತಿಕ ಸಂಘರ್ಷ ಮತ್ತು ಯುದ್ಧದ ಸಮಯದಲ್ಲಿ ಪತ್ರಕರ್ತರನ್ನು “ಸಮ್ಮತಿಯ ಉತ್ಪಾದನೆ”ಯತ್ತ (Manufacturing consent) ತಳ್ಳಲಾಗುತ್ತಿದೆ. ಅಮೆರಿಕಾದ ಯುದ್ಧಗಳನ್ನು ಮತ್ತು ವಿಯೆಟ್ನಾಂ, ಚಿಲಿ, ನಿಕರಾಗುವಾ, ಇಂಡೋನೇಷ್ಯ ಮತ್ತು ಅನೇಕ ದೇಶಗಳಲ್ಲಿ ನಡೆದ ಅಧಿಕಾರ ಬದಲಾವಣೆಗಳನ್ನು- ಪೆಡಂಭೂತದಂತೆ ಚಿತ್ರಿಸಲಾದ ‘ಶತ್ರುಗಳ’ ವಿರೋಧದ ಹೆಸರಿನಲ್ಲಿ- ಸಮರ್ಥಿಸಿ ಪ್ರೊಪಾಗಾಂಡಾ ಮಾಡುವಂತೆ ಪತ್ರಕರ್ತರನ್ನು ಒತ್ತಡಕ್ಕೆ ಸಿಲುಕಿಸಲಾಗುತ್ತಿದೆ.

photo courtesy: Pinterest

ನಾವು ಈಗ ‘ಸತ್ಯೋತ್ತರ’ (ಪೋಸ್ಟ್ ಟ್ರೂತ್) ಕಾಲದಲ್ಲ್ಲಿ ಬದುಕುತ್ತಿದ್ದೇವೆ ಎಂದು ಪದೇಪದೇ ನಮಗೆ ಹೇಳಲಾಗುತ್ತಿದೆ. ಆದರೂ ವಾಸ್ತವವೆಂದರೆ, ಗಟ್ಟಿಯಾದ ತನಿಖಾ ಪತ್ರಿಕಾವೃತ್ತಿಯನ್ನೇ ನಕಲಿ ಎಂದು ಬಿಂಬಿಸುವ ರೀತಿಯಲ್ಲಿ ಕಾರ್ಪೋರೇಟ್ ಮಾಧ್ಯಮವು ವಾಸ್ತವವನ್ನು ತಿರುಚಿ, ನಕಲಿ ಸುದ್ದಿಗಳನ್ನೇ ನಿಜ ಎಂದು ಮಾರಾಟ ಮಾಡುತ್ತಿದೆ. ವಾಸ್ತವದ ವಿವಿಧ ಸಾಮಾಜಿಕ ಕಲ್ಪನೆಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ಅವುಗಳನ್ನು ಹೇಗೆ ಸಂರಕ್ಷಿಸಿಕೊಂಡು ಬರಲಾಗುತ್ತದೆ ಎಂಬುದರಲ್ಲಿ ಆಸಕ್ತಿ ಹೊಂದಿರುವ ಒಬ್ಬ ಮಾನವಶಾಸ್ತ್ರಜ್ಞನಾಗಿ ನಾನು ಸಮಕಾಲೀನ ದೃಷ್ಟಿಯಿಂದ ಒಂದು ಕಿರುಚಿತ್ರಣ ನೀಡುತ್ತೇನೆ.

1945ರಲ್ಲಿ ಎರಡನೇ ವಿಶ್ವಯುದ್ಧದ ಕೊನೆಯ ದಿನಗಳಲ್ಲಿ ಆರಂಭವಾದದ್ದು: ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್ ಹಾಕಲಾಗಿದೆ; ಜಪಾನ್ ಈಗಷ್ಟೇ ಶರಣಾಗಿದೆ; ಅಲ್ಲಿ ಭಯಾನಕ ವಿಕಿರಣದ ಕಾಯಿಲೆಗಳ ಸುದ್ದಿಯನ್ನು ಹೊರತರಲು ಯತ್ನಿಸುತ್ತಿರುವ ಕೆಲವೇ ಕೈಬೆರಳೆಣಿಕೆಯ ಪತ್ರಕರ್ತರ ಬಗ್ಗೆ ಕೆಟ್ಟದಾಗಿ ಬರೆದು ಚಿತ್ರಿಸಲಾಗುತ್ತದೆ. ಹೇಗೆಂದರೆ, ‘ಹಿರೋಶಿಮಾ ಅವಶೇಷದಲ್ಲಿ ರೇಡಿಯೋಆಕ್ಟಿವ್ ವಿಕಿರಣವಿಲ್ಲ’ ಎಂದು ಸೆಪ್ಟೆಂಬರ್ 13ರ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಮುಖ್ಯಶೀರ್ಷಿಕೆ ಚೀರುತ್ತದೆ. ಇದು, ವಿಕಿರಣದ ಭಯಾನಕತೆಯ ಕುರಿತು ಲೆಸ್ಲಿ ನಕಶಿಮ (ಅದೇ ಪತ್ರಿಕೆ, 31, ಆಗಸ್ಟ್) ಮತ್ತು ಡೈಲಿ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ ಆಸ್ಟ್ರೇಲಿಯಾದ ಪ್ರಸಿದ್ಧ ಪತ್ರಕರ್ತ ವಿಲ್ಫ್ರೆಡ್ ಬರ್ಷೆ (Wilfred Burchett) ಸೆಪ್ಟೆಂಬರ್ 5ರಂದು ಬರೆದ ಲೇಖನಗಳಿಗೆ ಪ್ರತಿಕ್ರಿಯೆಯಾಗಿತ್ತು.

ತಮ್ಮ ಅಪಾರ ಆಕ್ರೋಶದ ಹೊರತಾಗಿಯೂ ಜಪಾನಿನ ಪೊಲೀಸರು ಬರ್ಷೆ ಅವರ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟರು. ಬರ್ಷೆ ಸತ್ಯವನ್ನು ಹೊರಗೆ ತರುವ ಉದ್ದೇಶ ಹೊಂದಿದ್ದಾರೆ ಎಂದು ಅವರು ಅರ್ಥ ಮಾಡಿಕೊಂಡಿದ್ದರು. ಆದರೆ ಒಂದು ಆಸ್ಪತ್ರೆಯಲ್ಲಿ ವಿಕಿರಣದ ರೋಗಿಗಳು, ಅವರ ಕುಟುಂಬಸ್ಥರು, ವೈದ್ಯರು- ಎಲ್ಲರೂ ಸಾಯುವುದು ಶತಸಿದ್ಧವಾಗಿದ್ದಾಗ ಒಬ್ಬ ವೈದ್ಯರು ಕೊನೆಗೂ ಬರ್ಷೆಯವರಿಗೆ ಹೇಳಿದ್ದು ಹೀಗೆ:

photo courtesy: The Australian

“ನಾನು ಇನ್ನು ಮುಂದೆ ನಿಮ್ಮ ಸುರಕ್ಷೆಯ ಭರವಸೆ ನೀಡಲಾರೆ. ಈ ಜನರೆಲ್ಲಾ ಸಾಯುವುದು ಸಿದ್ಧ. ನಾನು ಕೂಡಾ ಸಾಯಲಿದ್ದೇನೆ. ನಾನು ಅಮೆರಿಕದಲ್ಲಿ ತರಬೇತಿ ಹೊಂದಿದವನು. ನಾನು ಪಾಶ್ಚಾತ್ಯ ನಾಗರಿಕತೆಯಲ್ಲಿ ನಂಬಿಕೆ ಹೊಂದಿದ್ದವನು. ನಾನೊಬ್ಬ ಕ್ರೈಸ್ತ. ಆದರೆ, ಇಲ್ಲಿ ಮಾಡಿರುವಂತದ್ದನ್ನು ನೀವು ಕ್ರೈಸ್ತರು ಹೇಗಾದರೂ ಮಾಡಬಲ್ಲಿರಿ? ಕನಿಷ್ಟ ನಿಮ್ಮ ಕೆಲವು ವಿಜ್ಞಾನಿಗಳನ್ನಾದರೂ ಇಲ್ಲಿಗೆ ಕಳುಹಿಸಿ…”

ಆದರೆ, ಅಣು ಬಾಂಬ್ ತಯಾರಿಸಿದ ಮ್ಯಾನ್‍ಹಟ್ಟನ್ ಪ್ರೊಜೆಕ್ಟ್‌ನ ಭಾಗವಾಗಿದ್ದ ಒಪ್ಪೆನ್‍ಹೈಮರ್‍ನಂತಹ ವಿಜ್ಞಾನಿಗಳು ಆಗಲೇ ಅಮೆರಿಕಾದ ಸುಳ್ಳು ಮಾಹಿತಿ ಅಭಿಯಾನಕ್ಕೆ ನೆರವಾಗುತ್ತಿದ್ದರು. ಸ್ವಲ್ಪ ಸಮಯದ ನಂತರ ಜಾನ್ ಹರ್ಸೇ ತನ್ನ ಧ್ವನಿ ಎತ್ತಿದರು. ಅವರು ಅಣು ಬಾಂಬ್ ದಾಳಿಯಿಂದ ಬದುಕಿ ಉಳಿದವರ ಅನುಭವಗಳ ಮಾನವಶಾಸ್ತ್ರೀಯ ಕಥನಗಳನ್ನು ವಿವರವಾಗಿ ಬರೆದರು. ಆದರೆ, ಈ ನೈಜ ಪತ್ರಕರ್ತರನ್ನು ಅಮೆರಿಕಾ ನಿಯಂತ್ರಿಸುತ್ತಿದ್ದ ಮಾಧ್ಯಮಗಳಲ್ಲಿ ಕೆಟ್ಟದಾಗಿ ಚಿತ್ರಿಸಿ ನಿಂದಿಸಲಾಯಿತು. ಅಧಿಕೃತ ಸುಳ್ಳುಗಾರಿಕೆ ಆರಂಭವಾದಾಗ- ವಿಕಿರಣ ಕಾಯಿಲೆ ಇಲ್ಲವೇ ಇಲ್ಲ ಎಂದು ಒತ್ತಿಒತ್ತಿ ಹೇಳಲಾಯಿತು.

ಸಮಾಜಶಾಸ್ತ್ರಜ್ಞ ಜೆಪಿಎಸ್ ಒಬೆರೋಯ್ ಹೇಳಿರುವಂತೆ ಹಿರೋಶಿಮಾ ಮತ್ತು ನಾಗಸಾಕಿಯ ಮೇಲಿನ ಬಾಂಬ್ ದಾಳಿಯು ‘ವೈಜ್ಞಾನಿಕ ಪ್ರಯೋಗ’ದ ದೃಷ್ಟಿಯಿಂದ ‘ಆಧುನಿಕತೆಯ ಅಂತ್ಯ’ವನ್ನು ಪ್ರತಿನಿಧಿಸುತ್ತದೆ ಮತ್ತು ಅದರ ಜವಾಬ್ದಾರಿಯನ್ನು ಹೊರಲು ಯಾರೂ ಸಿದ್ಧರಿಲ್ಲ ಅಂದಿದ್ದರು.

ಭಾರತದಲ್ಲಿ ಹತ್ಯೆಗೀಡಾದ ಪತ್ರಕರ್ತರಲ್ಲಿ ಗೌರಿ ಲಂಕೇಶ್ ಜೊತೆಗೆ ಇನ್ನು ಹಲವರು ಇದ್ದಾರೆ. ಜಾಖರ್ಂಡ್‍ನಲ್ಲಿ ಡಿಸೆಂಬರ್ 2018ರಲ್ಲಿ ಕೊಲೆಯಾದ ಅಮಿತ್ ಟೋಪ್ನೋ ಅವರ ಪ್ರಕರಣ ಇಲ್ಲಿಯವರೆಗೂ ಬಗೆಹರಿದಿಲ್ಲ. ಈ ಆದಿವಾಸಿ ಪತ್ರಕರ್ತ ಪಾತಾಳ್‍ಗಡಿ ಚಳವಳಿಯ ಬಗ್ಗೆ ಬರೆಯುತ್ತಿದ್ದರು. 1990-2019ರಲ್ಲಿ ಕಾಶ್ಮೀರದಲ್ಲಿ ಹತ್ಯೆಯಾದ ಕನಿಷ್ಟ 19 ಪತ್ರಕರ್ತರು ಇದ್ದಾರೆ. ಆಗಸ್ಟ್ 2018 ಅಸೀಫ್ ಸುಲ್ತಾನ್ ವಿರುದ್ಧ ಆರೋಪಿಸಿದ ಪ್ರಕರಣ ಸೇರಿದಂತೆ ಹಲವಾರು ಪತ್ರಕರ್ತರ ವಿರುದ್ಧ ಕಪೋಲಕಲ್ಪಿತ ಪ್ರಕರಣಗಳಿವೆ. ಕಾಶ್ಮೀರಿ ಪತ್ರಕರ್ತರನ್ನು ಬೆದರಿಸಿದ ಹಲವಾರು ಇತ್ತೀಚಿನ ಪ್ರಕರಣಗಳಿವೆ. ಇದು ವಾಸ್ತವಾಂಶಗಳನ್ನು ಬಯಲುಗೊಳಿಸಿ, ತಮಗೆ ಇರಿಸುಮುರುಸು ಉಂಟುಮಾಡುವ ವರದಿಗಳಿಗೆ “ಸುಳ್ಳು ಸುದ್ದಿ” ಎಂಬ ಹಣೆಪಟ್ಟಿ ಹಚ್ಚಿ, ಕಾಶ್ಮೀರದ ಸುದ್ದಿ ಹೇಗೆ ಬಿತ್ತರವಾಗಬೇಕು ಎಂದು ನಿಯಂತ್ರಿಸುವ ಸರಕಾರದ ವಕ್ತಾರರ ಪ್ರಯತ್ನಕ್ಕೆ ಇದು ಸಾಕ್ಷಿಯಾಗಿದೆ.

ಅದೇ ರೀತಿಯಲ್ಲಿ, ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ಪತ್ರಕರ್ತರ ಮೇಲೆ ಕೆಲದಿನಗಳ ಹಿಂದೆ (ಆಗಸ್ಟ್ 11) ದಾಳಿ ನಡೆಸಲಾಯಿತು. 130ಕ್ಕೂ ಹೆಚ್ಚು ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನಕಾರನ್ನು ಜೈಲಿಗೆ ಹಾಕಲಾಗಿದ್ದು, ಇದು ಮಹಾರಾಷ್ಟ್ರದ ಭೀಮಾ ಕೋರೆಗಾಂವ್/ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ನಡೆದಂತೆ ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳು ಎಂದು ಅನೇಕರು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ, ಫೇಸ್‍ಬುಕ್ ಸಂಸ್ಥೆಯ ‘ದ್ವೇಷ ಭಾಷಣ’ದ ವ್ಯಾಖ್ಯೆಯನ್ನು ಹಿಂದುತ್ವ ಶಕ್ತಿಗಳ ಪರವಾಗಿ ತಿರುಚಲಾಗಿದೆ ಎಂಬುದಕ್ಕೆ ಸಾಕ್ಷ್ಯಗಳಿದ್ದರೂ, ಆಗಸ್ಟ್ 16ರಂದು ಅವೇಶ್ ತಿವಾರಿ ಅವರ ವಿರುದ್ಧ ಫೇಸ್‍ಬುಕ್ ಇಂಡಿಯಾದ ನೀತಿ ನಿರ್ದೇಶಕಿ ಅಂಖಿ ದಾಸ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದು ವರದಿಯಾಗಿದೆ.

ಅವೇಶ್ ತಿವಾರಿ photo courtesy: Sakshi Post

1992ರಿಂದ ಭಾರತದಲ್ಲಿ 51 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ‘ದಿ ಇಂಟನ್ರ್ಯಾಷನಲ್ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್’ ಪಟ್ಟಿ ಮಾಡಿದೆ. ಇದೇ ಹೊತ್ತಿಗೆ ಪಾಕಿಸ್ತಾನದಲ್ಲಿ 61 ಮಂದಿಯನ್ನು ಹತ್ಯೆ ಮಾಡಲಾಗಿದೆ. ಇನ್ನೊಂದು ಮೂಲದ ಪ್ರಕಾರ 2013-19ರಲ್ಲಿ 33 ಪತ್ರಕರ್ತರನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಜುಲೈ 2020ರಲ್ಲಿ ಬಲೂಚಿಸ್ತಾನದಲ್ಲಿ ಕೊಲೆಯಾದ ಅನ್ವರ್ ಖೇತ್ರಾನ್ ಇದ್ದಾರೆ. ಅನ್ವರ್ ಬಯಲು ಮಾಡಿದ ಭ್ರಷ್ಟಾಚಾರದ ಆರೋಪಿ ಮಂತ್ರಿಯೊಬ್ಬನ ಮೇಲೆ ಸಂಶಯ ಮೂಡಿದೆ. ಅನ್ವರ್ ಕೊಲೆಯ ಮೂರು ದಿನ ಬಳಿಕ ಅವರ ಹುಟ್ಟೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 1,000ಕ್ಕೂ ಹೆಚ್ಚು ಜನರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಸ್ತುತ ಚೀನಾ, ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ದೇಶಗಳು ಪತ್ರಕರ್ತರ ಬಂಧನ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಅತ್ಯಂತ ಕೆಟ್ಟ ಅವಸ್ಥೆಯಿರುವ ದೇಶಗಳೆಂದು ಪರಿಗಣಿಸಲಾಗಿದೆ. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳಲ್ಲಿ ಭಾರತವು (142) ಪಾಕಿಸ್ತಾನ (145) ಮತ್ತು ಟರ್ಕಿಗಿಂತ (154) ಸ್ವಲ್ಪವೇ ಮೇಲಿದೆ. ಹಂಗೆರಿಯಲ್ಲೂ ಪತ್ರಿಕಾ ರಂಗದ ಸ್ವಾತಂತ್ರ್ಯದ ಮೇಲಿನ ಹೊಸ ದಮನದ ವಿರುದ್ಧ ಪತ್ರಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಟರ್ಕಿಯಲ್ಲಿ ಸಾಮಾಜಿಕ ಮಾಧ್ಯಮ ಹೊಸ ಮಸೂದೆಯು ಸ್ವತಂತ್ರ ಪತ್ರಿಕಾ ವೃತ್ತಿಯನ್ನು ಗುರಿಯಾಗಿಸಿದೆ. ವಿಶೇಷವಾಗಿ ಲಿಬಿಯಾದಲ್ಲಿ ಟರ್ಕಿಯ ಗುಪ್ತಚರ ಏಜೆಂಟ್ ಒಬ್ಬನ ಸಾವಿನ ಕುರಿತ ವರದಿಯನ್ನು ದಮನಿಸಲಾಗಿದೆ. ಅದೇ ರೀತಿಯಲ್ಲಿ ಟರ್ಕಿಯು ಉತ್ತರ ಸಿರಿಯಾವನ್ನು ಆಕ್ರಮಿಸಿ ನಡೆಸುತ್ತಿರುವ ಅತಿರೇಕದ ದೌರ್ಜನ್ಯಗಳ ವರದಿಗಳನ್ನೂ ದಮನಿಸಲಾಗುತ್ತಿದೆ. ಸಿರಿಯಾದಲ್ಲಿ ಟರ್ಕಿಯ ಯುದ್ಧವನ್ನು ವಿರೋಧಿಸಿದ ಪತ್ರಕರ್ತರೂ ಸೇರಿದಂತೆ ನೂರಾರು ಮಂದಿಯನ್ನು ಬಂಧಿಸಲಾಗಿದೆ.

ಜೈಲಿನಲ್ಲಿರುವ ಕುರ್ದಿಶ್ ಪಕ್ಷ ಪಿಕೆಕೆ ನಾಯಕ ಅಬ್ದುಲ್ಲಾ ಒಕಲನ್ ವರ್ಷಗಳಿಂದ ಮುಂದಿಡುತ್ತಾ ಬಂದಿರುವ ಶಾಂತಿ ಸೂತ್ರಗಳನ್ನು ಟರ್ಕಿ ಮಾತ್ರವಲ್ಲ, ಜಾಗತಿಕ ಮಾಧ್ಯಮಗಳೂ ಕಡೆಗಣಿಸುತ್ತಾ ಬಂದಿದೆ. ಕುರ್ದಿಶ್ ಪತ್ರಕರ್ತರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಬೆದರಿಕೆ ಒಡ್ಡಲಾಗುತ್ತಿದೆ. ಮತ್ತು ಎಲ್ಲ ಅನುಸರಿಸುವ ಮಾರ್ಗದ ವಿನ್ಯಾಸದಂತೆಯೇ ಕುರ್ದಿಶ್ ಮತ್ತು ಇತರ ಸ್ವತಂತ್ರ ಪತ್ರಕರ್ತರನ್ನು ಇನ್ನೂ ಕ್ರೂರವಾಗಿ ದಮನಿಸಲಾಗುತ್ತಿದೆ. ಅಂತರರಾಷ್ಟ್ರೀಯ ಶಾಂತಿ ನಿಯೋಗದ ಭಾಗವಾಗಿ ನಾನು ಫೆಬ್ರವರಿ ತಿಂಗಳಲ್ಲಿ ಟರ್ಕಿಗೆ ಭೇಟಿ ನೀಡಿದ್ದಾಗ, ಕುರ್ದಿಶ್ ಪರಿಸ್ಥಿತಿಯ ಬಗ್ಗೆ ಬರೆದಿದ್ದೇನೆ.

ಮಾರ್ಚ್ 2018ರಲ್ಲಿ ಟರ್ಕಿ ಸೇನೆಯು ಸಿರಿಯಾದ ಆಫ್ರಿನ್ ಮೇಲೆ ನಡೆಸಿದ ಆಕ್ರಮಣ ಮತ್ತು ಆಗಿನಿಂದ ನಡೆಸುತ್ತಿರುವ ಅತಿರೇಕಗಳ ಕುರಿತು ಜಾಗತಿಕ ಮಾಧ್ಯಮವು ಆಘಾತಕಾರಿ ಮೌನ ವಹಿಸಿದೆ. ಟರ್ಕಿಯು ಐಸಿಸ್ ಮತ್ತಿತರ ತೀವ್ರಗಾಮಿಗಳಿಗೆ ಹೆಚ್ಚಿನ ಮುಚ್ಚುಮರೆ ಇಲ್ಲದೆಯೇ ಮಿಲಿಟರಿ ನೆರವು ನೀಡುತ್ತಿರುವುದು ಮತ್ತೆಮತ್ತೆ ಬಯಲಾದುದರ ಹೊರತಾಗಿಯೂ ಈ ಮೌನ ಮನೆಮಾಡಿದೆ.

ಅಂಖಿದಾಸ್. photo courtesy: The Financial Express

ಅದಕ್ಕೆ ತದ್ವಿರುದ್ಧವಾಗಿ, ಅಸ್ಸಾದ್ ಅವರ ಸಿರಿಯನ್ ಪಡೆಗಳು ಜಾಗತಿಕ ಮಾಧ್ಯಮದಲ್ಲಿ ನಿರಂತರ ದಾಳಿಗೆ ಒಳಗಾಗುತ್ತಿವೆ. ಸಿರಿಯಾದ ‘ವೈಟ್ ಹೆಲ್ಮೆಟ್’ (ಎಸ್‍ಡಬ್ಲ್ಯೂಎಚ್) ಸಂಘಟನೆ ತೀವ್ರಗಾಮಿಗಳ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಪ್ರೊಪೋಗಾಂಡ ಉತ್ಪಾದನೆಯಲ್ಲಿ ನಿರಂತರ ಪಾತ್ರ ವಹಿಸಿದೆ. ಈ ಸಂಘಟನೆಯ ವಿರುದ್ಧ ಎಲ್ಲಾ ಟೀಕೆಗಳನ್ನು ಸಂಚು ಎಂದು ತಳ್ಳಿಹಾಕುತ್ತಿರುವ ವೀಕಿಪೀಡಿಯಾ ಪ್ರಕಾರವೂ ಈ ಸಂಘಟನೆ ಯುಕೆ ಮತ್ತು ಯುಎಸ್‍ಎಯಿಂದ ಕೋಟ್ಯಂತರ ಡಾಲರ್ ನೆರವು ಪಡೆದಿದೆ. ಇದನ್ನು ಬಯಲುಗೊಳಿಸಿದ ಪತ್ರಕರ್ತರಲ್ಲಿ ವನೆಸ್ಸಾ ಬೀಲೆಯಿಸ್ ಒಬ್ಬರಾಗಿದ್ದಾರೆ. ಇದೇ ರೀತಿಯಲ್ಲಿ ‘ದಿ ಗಾರ್ಡಿಯನ್’ ಪತ್ರಿಕೆ ಕೂಡಾ 2017ರಲ್ಲಿ ವೈಟ್ ಹೆಲ್ಮೆಟ್ ವಿರುದ್ಧ ಟೀಕೆಗಳನ್ನು ತಳ್ಳಿಹಾಕಿತ್ತು ಮತ್ತು ಪ್ರತಿಕ್ರಿಯೆಯಾಗಿ ಬಂದಿದ್ದ, ತೀವ್ರಗಾಮಿಗಳ ಜೊತೆ ಅದರ ಸಂಪರ್ಕವನ್ನು ಒತ್ತಿಹೇಳುವ ಅನೇಕ ಲೇಖನಗಳನ್ನು ತಿರಸ್ಕರಿಸಿತ್ತು.

ಜೂಲಿಯನ್ ಅಸಾಂಜ್ ಅವರ ವೀಕಿಲೀಕ್ಸ್‍ನ ಮಾಹಿತಿಯನ್ನು ಮೊದಲು ಪಡೆದ ಪತ್ರಿಕೆಗಳಲ್ಲಿ ‘ದಿ ಗಾರ್ಡಿಯನ್’ ಕೂಡ ಒಂದಾಗಿತ್ತು. ಅದು ಯುಕೆಯ ಗುಪ್ತಚರ ಸಂಸ್ಥೆಗಳ ಕೇಳಿಕೆಯಂತೆ ಈ ಮಾಹಿತಿಯನ್ನು ಜೂನ್ 2013ರಲ್ಲಿ ನಾಶಪಡಿಸಿತ್ತು. ಮಾತ್ರವಲ್ಲ ಅದು ಎಂಐ5 ಮತ್ತು ಎಂಐ6 (ಯುಕೆಯ ಗುಪ್ತಚರ ಸಂಸ್ಥೆಗಳು) ಮುಖ್ಯಸ್ಥರ ಸಾರ್ವಜನಿಕ ಸಂದರ್ಶನಗಳನ್ನು 2016-17ರಲ್ಲಿ ಆಯೋಜಿಸಿತ್ತು. ಯುದ್ಧಗಳನ್ನು ಪ್ರಚೋದಿಸುವುದರಲ್ಲಿ ಯುಕೆಯ ಪಾತ್ರದ ನಿರಂತರ ಟೀಕಾಕಾರರಾದ ಮಾರ್ಕ್ ಕರ್ಟಿಸ್ ಅವರು ಇದನ್ನು ಬಹಿರಂಗಪಡಿಸಿದವರಲ್ಲಿ ಒಬ್ಬರು. ಕಾರ್ಪೊರೇಟ್ ಮಾಧ್ಯಮಗಳು ಎಲ್ಲೆಲ್ಲೂ ಹೆಚ್ಚುತ್ತಿರುವ ಗುಪ್ತಚರ ಸಂಸ್ಥೆಗಳ ನಿಯಂತ್ರಣಕ್ಕೆ ಎಷ್ಟರ ಮಟ್ಟಿಗೆ ಬಂದಿವೆ?

2008ರಷ್ಟು ಹಿಂದೆಯೇ ಯುಕೆಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮದ ರಾಜಿಯು ಪ್ರಮುಖ ವಿಷಯವಾಗಿತ್ತು. ಸರಕಾರಗಳ ಅಧಿಕಾರ ದುರುಪಯೋಗಕ್ಕೆ ಒಂದು ಸಾರ್ವಜನಿಕ ತಡೆಗೋಡೆಯಾಗಿ ಸ್ವತಂತ್ರವಾಗಿ ಕಾರ್ಯಾಚರಿಸಲು ಪತ್ರಕರ್ತರಿಗೆ ಸಾಧ್ಯವಾಗದಿದ್ದಲ್ಲಿ, ಸಾರ್ವಜನಿಕರು ಸುಳ್ಳು ಸುದ್ದಿ ಯಾವುದು, ನಿಜ ಸುದ್ದಿ ಯಾವುದು ಎಂದು ಹೇಳುವುದಾದರೂ ಹೇಗೆ?

ಬ್ರಿಟಿಷ್ ನ್ಯಾಯಾಲಯಗಳಲ್ಲಿ ಜೂಲಿಯನ್ ಅಸಾಂಜ್ ಅವರನ್ನು ಗುರಿ ಮಾಡಿದ ರೀತಿಯು ಸಾಮಾನ್ಯ ಪ್ರಜಾಪ್ರಭುತ್ವದ ಮಿತಿಯನ್ನು ಮೀರಿದ್ದು, ಎಲ್ಲೆಲ್ಲೂ ಮಾಧ್ಯಮ ಸ್ವಾತಂತ್ರ್ಯದ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ. ಮುಖ್ಯವಾಹಿನಿಯ ಪತ್ರಕರ್ತರು ಅಸಾಂಜ್ ಅವರ ಹೆಸರು ಕೆಡಿಸುವ ಕಾಯಕದಲ್ಲಿ ಸೇರಿಕೊಂಡಿದ್ದರೆ, ಅನೇಕ ಸ್ವತಂತ್ರ ಪತ್ರಕರ್ತರಿಗೆ ಅಸಾಂಜ್ ಪ್ರಕರಣವು ಅಧಿಕಾರದ ಜೊತೆ ಸತ್ಯವನ್ನು ಮಾತನಾಡುವ ನಮ್ಮ ಹಕ್ಕಿನ ಅವಗಣನೆಯನ್ನು ಪ್ರತಿನಿಧಿಸುತ್ತದೆ.

ಫೀಲಿಕ್ಸ್ ಪ್ಯಾಡಲ್: ಆಕ್ಸ್‌ಫರ್ಡ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಹೊಂದಿದ ಖ್ಯಾತ ಮಾನವಶಾಸ್ತ್ರಜ್ಞರು. ತಮ್ಮ ಕೆಲಸ ಮತ್ತು ಸಂಶೋಧನೆಯನ್ನು ಅವರ ಮುತ್ತಾತ ಚಾರ್ಲ್ಸ್ ಡಾರ್ವಿನ್ ಅವರ ಸಂಶೋಧನೆ, ಕೆಲಸಗಳಿಗೆ ಬೆಸಯುತ್ತಾರೆ. ಭಾರತದ ಆದಿವಾಸಿಗಳ ಬಗ್ಗೆ ಅಧ್ಯಯನ ಮಾಡಿರುವ ಫೀಲಿಕ್ಸ್ ‘ಔಟ್ ಆಫ್ ದ ಅರ್ತ್’ ಪುಸ್ತಕದ ಲೇಖಕರಲ್ಲಿ ಒಬ್ಬರು. ಗ್ರಾಮೀಣ ನಿರ್ವಹಣೆಯ ಬಗ್ಗೆ ಪ್ರಾಧ್ಯಾಪಕರಾಗಿಯೂ ಕೆಲಸ ನರ್ವಹಿಸಿದ್ದಾರೆ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನು ಓದಿ: ಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ನಿವೃತ್ತ ಐಎಎಸ್ ಅಧಿಕಾರಿಗಳ ಬಹಿರಂಗ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...